More

    ಜೂ.1ರಿಂದ ದ.ಕ.ಖಾಸಗಿ ಬಸ್ ಸಂಚಾರ

    ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಜೂ.1ರಿಂದ ರಸ್ತೆಗಿಳಿಸಲು ಬಸ್ ಮಾಲೀಕರ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಿಟಿ ಬಸ್ ಮಾಲೀಕರ ಸಂಘ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.
    ಮೇ 26ರಿಂದ ಬಸ್‌ಗಳನ್ನು ಓಡಿಸುವಂತೆ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನಾಲ್ಕು ದಿನಕ್ಕಾಗಿ ಇಡೀ ತಿಂಗಳ ತೆರಿಗೆ ಕಟ್ಟಬೇಕಾಗುತ್ತದೆ. ಈಗಾಗಲೇ ಬಸ್ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಜೂ.1ರಿಂದ ಬಸ್ ಓಡಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಉಡುಪಿಯಲ್ಲೂ ಸಿಟಿ ಬಸ್ ಸಂಚಾರಕ್ಕೆ ಚಿಂತನೆ: ಸಿಟಿ ಬಸ್‌ಗಳ ಸಂಚಾರ ಜೂ.1ರಿಂದ ಆರಂಭವಾಗಲಿದೆ. ಪ್ರಾರಂಭದಲ್ಲಿ 10 ಬಸ್‌ಗಳನ್ನು ರಸ್ತೆಗಿಳಿಸಲು ಚಿಂತನೆ ನಡೆಸಲಾಗಿದೆ ಎಂದು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕೆ. ಸುರೇಶ ನಾಯಕ್ ತಿಳಿಸಿದ್ದಾರೆ.
    ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಶೇ.12ರಷ್ಟು ಏರಿಕೆಯಾಗಲಿದ್ದು, ಖಾಸಗಿ ಬಸ್‌ಗಳಿಗೂ ಇದನ್ನು ವಿಸ್ತರಿಸಲು ಮನವಿ ಮಾಡಲಾಗಿದೆ. ಸರ್ಕಾರ ಇದಕ್ಕೆ ಸ್ಪಂದಿಸಿದರೆ ಹೆಚ್ಚು ಬಸ್‌ಗಳು ಓಡಾಟ ನಡೆಸಲಿವೆ. ಸದ್ಯ ಎಲ್ಲ ಮಾರ್ಗಗಳಲ್ಲಿ 15 ನಿಮಿಷಕ್ಕೊಮ್ಮೆ 2 ಬಸ್‌ಗಳು ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸ್ಪಂದನೆ ಗಮನಿಸಿ ಹೆಚ್ಚಿನ ಬಸ್‌ಗಳನ್ನು ಬಿಡಲಾಗುವುದು ಎಂದರು.
    ಈ ಹಿಂದೆ 2 ನಿಮಿಷಕ್ಕೊಂದು ಬಸ್‌ಗಳು ಸಂಚಾರ ನಡೆಸಿದ್ದು, ಉಡುಪಿ ಸಿಟಿ ಬಸ್ ರೂಟ್ ವ್ಯಾಪ್ತಿಯಲ್ಲಿ 90 ಬಸ್‌ಗಳಿವೆ. 300ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾ.25ರಿಂದ ಹಲವು ಬಸ್ ಮಾಲಕರು ಪರ್ಮಿಟ್‌ಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಸರಂಡರ್ ಮಾಡಿದ್ದರು. ಆದರೆ ಶೇ.10 ಬಸ್ ಪರ್ಮಿಟ್‌ಗಳನ್ನು ವಿವಿಧ ಕಾರಣಗಳಿಂದ ಸರಂಡರ್ ಮಾಡಲು ಆಗಿರಲಿಲ್ಲ. ಈಗ ಸರ್ಕಾರ ತೆರಿಗೆ ವಿನಾಯಿತಿ ನೀಡಿರುವುದರಿಂದ ಈ ಮಾಲಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

    ಜೂ.1ರಿಂದ 9 ಅಂತಾರಾಜ್ಯ ರೈಲು
    ಮಂಗಳೂರು: ಲಾಕ್‌ಡೌನ್ ಘೋಷಣೆ ಎರಡು ತಿಂಗಳ ಬಳಿಕ ಪ್ರಥಮ ಬಾರಿಗೆ ಒಂಬತ್ತು ಅಂತಾರಾಜ್ಯ ವಿಶೇಷ ರೈಲುಗಳು ಮಂಗಳೂರು ಸಹಿತ ಕರ್ನಾಟಕದ ವಿವಿಧ ಮಾರ್ಗಗಳಲ್ಲಿ ಜೂನ್ 1ರಿಂದ ಸಂಚರಿಸಲಿವೆ.
    ಈ ರೈಲುಗಳಲ್ಲಿ ಪ್ರಯಾಣಿಸುವವರು ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು. ಸಾಮಾನ್ಯ ದ್ವಿತೀಯ ದರ್ಜೆ ಆಸನ ಸಹಿತ ರೈಲಿನ ಟಿಕೆಟ್‌ಗಳು ಬುಕಿಂಗ್ ಮಾಡಿಕೊಳ್ಳುವವರಿಗೆ ಮಾತ್ರ ಲಭ್ಯ.
    ಮುಂಬೈ-ತಿರುವನಂತಪುರ ನೇತ್ರಾವತಿ ಎಕ್ಸ್‌ಪ್ರೆಸ್(ಮಂಗಳೂರು ವಯ-ನಂ.06345/06346), ಹಝ್ರತ್ ನಿಜಾಮುದ್ದೀನ್- ಎರ್ನಾಕುಳಂ ಮಂಗಳಾ ಲಕ್ಷದ್ವೀಪ ಡೈಲಿ ಎಕ್ಸ್‌ಪ್ರೆಸ್(ಮಂಗಳೂರು ವಯ 02618/ 02617), ಮುಂಬೈ ಸಿಎಸ್‌ಎಂಟಿ-ಗದಗ್ ಡೈಲಿ ಎಕ್ಸ್‌ಪ್ರೆಸ್(01139/ 40), ಮುಂಬೈ ಸಿಎಂಎಸ್‌ಟಿ- ಬೆಂಗಳೂರು ಉದ್ಯಾನ ಡೈಲಿ ಎಕ್ಸ್‌ಪ್ರೆಸ್ (01301/ 02), ದಾನಪುರ ಬೆಂಗಳೂರು ಸಂಗಮಿತ್ರ ಡೈಲಿ ಎಕ್ಸ್‌ಪ್ರೆಸ್ (002296/95), ನವದೆಹಲಿ-ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್(ವಾರದಲ್ಲಿ ಎರಡು ದಿನ 02629/02630), ಹೌರಾ-ಯಶವಂತಪುರ ಎಕ್ಸ್‌ಪ್ರೆಸ್(ವಾರದಲ್ಲಿ ಐದು ದಿನ 02245/46), ಬೆಂಗಳೂರು-ಹುಬ್ಬಳ್ಳಿ ಜನ ಶತಾಬ್ದಿ ಡೈಲಿ ಎಕ್ಸ್‌ಪ್ರೆಸ್(02079/ 02080)ಮತ್ತು ಯಶವಂತಪುರ-ಶಿವಮೊಗ್ಗ ಜನಶತಾಬ್ದಿ ಡೈಲಿ ಎಕ್ಸ್‌ಪ್ರೆಸ್(02089/020900) ಸಂಚರಿಸಲಿರುವ ರೈಲುಗಳು.
    ಬುಧವಾರ ಬುಕ್ಕಿಂಗ್ ಆರಂಭಗೊಂಡಿದ್ದು, ಪ್ರಯಾಣಿಕರು 30 ದಿನ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಪ್ರಯಾಣಿಕರು ಟಿಕೆಟ್ ಖಾತರಿಪಡಿಸಿಕೊಂಡ ಬಳಿಕವಷ್ಟೇ ರೈಲು ನಿಲ್ದಾಣ ಪ್ರವೇಶಿಸಬೇಕು. ರೈಲು ಹೊರಡುವ ಸಮಯದ 90 ನಿಮಿಷದ ಮುಂಚಿತವಾಗಿ ಪ್ರಯಾಣಿಕರು ನಿಲ್ದಾಣದಲ್ಲಿ ಹಾಜರಿರಬೇಕು ಎಂದು ಪ್ರಕಟಣೆ ತಿಳಿಸಿದೆ.

    ದೇಶೀಯ ವಿಮಾನ ಹಾರಾಟಕ್ಕೆ ಮಂಗಳೂರು ಏರ್‌ಪೋರ್ಟ್ ಸಜ್ಜು
    ಮಂಗಳೂರು: ನಿರ್ದಿಷ್ಟ ಮಾರ್ಗಸೂಚಿ ಪಾಲನೆ ಜತೆಗೆ ಮೇ 25ರಿಂದ ನಿಯಮಿತವಾಗಿ ದೇಶೀಯ ವಿಮಾನ ಹಾರಾಟಕ್ಕೆ ಕೇಂದ್ರ ವಿಮಾನ ಯಾನ ಸಚಿವಾಲಯ ಹಸಿರು ನಿಶಾನೆ ತೋರಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಂಡಿದೆ. ಅಂದು ಮುಂಬೈ ಮತ್ತು ಬೆಂಗಳೂರಿಗೆ ತಲಾ ಎರಡು ವಿಮಾನಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕರ ಕಚೇರಿ ಮೂಲ ತಿಳಿಸಿದೆ. ಲಾಕ್‌ಡೌನ್ ಘೋಷಣೆ ಬಳಿಕ ನಿಯಮಿತ ವಿಮಾನ ಹಾರಾಟ ಸ್ಥಗಿತಗೊಳಿಸಿತ್ತಾದರೂ, ವಿಮಾನ ನಿಲ್ದಾಣ ಯಾವುದೇ ಕ್ಷಣ ತುರ್ತು ವಿಮಾನ ಸೇವೆ ಒದಗಿಸಲು ಸಿದ್ಧವಾಗಿತ್ತು. ಕೆಲವು ತುರ್ತು ವಿಮಾನ ನಿರ್ವಹಣೆಯನ್ನು ಕೂಡ ನಡೆಸಿದೆ.

    ಕೆಎಸ್ಸಾರ್ಟಿಸಿ, ಖಾಸಗಿ ಬಸ್ ಸಂಚಾರ ಆರಂಭ
    ಕಾಸರಗೋಡು: ಕಾಸರಗೋಡಿನಲ್ಲಿ ಗುರುವಾರ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿವೆ.
    ಗುರುವಾರ 24 ಕೆಎಸ್ಸಾರ್ಟಿಸಿ ಬಸ್‌ಗಳು ವಿವಿಧ ರೂಟ್‌ಗಳಲ್ಲಿ ಸಂಚಾರ ನಡೆಸಿತು. ಕೆಲವೊಂದು ಖಾಸಗಿ ಬಸ್‌ಗಳೂ ರಸ್ತೆಗಿಳಿದಿತ್ತು. ಮಂಗಳೂರು, ಪುತ್ತೂರು, ಸುಳ್ಯ ತೆರಳುವ ಕೆಎಸ್ಸಾರ್ಟಿಸಿ ಬಸ್‌ಗಳು ಮಂಜೇಶ್ವರ, ಪೆರ್ಲ, ಮುಳ್ಳೇರಿಯವರೆಗೆ ಮಾತ್ರ ಸಂಚಾರ ನಡೆಸಿವೆ.
    ಮಂಜೇಶ್ವರಕ್ಕೆ 7, ಪೆರ್ಲಕ್ಕೆ 3, ಮುಳ್ಳೇರಿಯ 4, ಕಾಞಂಗಾಡು 6, ಚೆರ್ವತ್ತೂರು 3 ಹಾಗೂ ಪೊಯಿನಾಚಿಗೆ ಒಂದು ಬಸ್ ಸಂಚಾರ ನಡೆಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಬಸ್ ಸಂಚಾರ ಆರಂಭಿಸುವುದಾಗಿ ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಮಾಸ್ಕ್ ಧರಿಸಿ, ಸಾನಿಟೈಸರ್ ಅಳವಡಿಸಿದವರಿಗೆ ಮಾತ್ರ ಬಸ್ಸಿನಲ್ಲಿ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತಿದೆ. ಖಾಸಗಿ ಬಸ್ ನಿರ್ವಾಹಕರು ಪ್ರಯಾಣಿಕರಿಗೆ ಸ್ಯಾನಿಟೈಸರ್ ವಿತರಿಸಿದರು. ಸಾಮಾಜಿಕ ಅಂತರ ಪಾಲನೆ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಆಸನಗಳಲ್ಲಿ ನಿಗದಿತ ಅಂತರದಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts