More

    ಅಭಿವೃದ್ಧಿಯೊಂದಿಗೆ ಆರೋಗ್ಯಕ್ಕೂ ಆದ್ಯತೆ ನೀಡಿ

    ವಿಜಯವಾಣಿ ಸುದ್ದಿಜಾಲ ಹಳಿಯಾಳ

    ಕೋವಿಡ್-19 ನೆಪದಲ್ಲಿ ಅಧಿಕಾರಿಗಳು ಯಾವತ್ತೂ ಅಭಿವೃದ್ಧಿ ಕಾಮಗಾರಿಗಳನ್ನು ಮುಂದೂಡುವುದಾಗಲಿ ಅಥವಾ ನಿರ್ಲಕ್ಷಿಸುವುದಾಗಲಿ ಮಾಡಬಾರದು. ಅಭಿವೃದ್ಧಿಯ ಜೊತೆಯಲ್ಲಿ ಆರೋಗ್ಯ ಸಂರಕ್ಷಣೆಗೂ ಆದ್ಯತೆ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಹಳಿಯಾಳ ಕ್ಷೇತ್ರಕ್ಕೆ ಮೊದಲ ಬಾರಿ ಆಗಮಿಸಿದ ಅವರು, ಸೋಮವಾರ ಮಿನಿ ವಿಧಾನ ಸೌಧದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ಕೋವಿಡ್-19 ಸಮಸ್ಯೆ ತಕ್ಷಣ ಪರಿಹಾರವಾಗುವ ಸಮಸ್ಯೆಯಲ್ಲ. ಬೇರೆ ಮಹಾಮಾರಿಯಂತೆ ಇದನ್ನು ಸಹ ನಮ್ಮ ಜೀವನದ ಭಾಗವೆಂದು ಭಾವಿಸಿ ಮುಂಜಾಗ್ರತೆಯೊಂದಿಗೆ ಹೆಜ್ಜೆಯಿಡುವ ಬಹುದೊಡ್ಡ ಸವಾಲು ನಮ್ಮದೆರು ಇದೆ. ಕೋವಿಡ್-19 ಪರಿಣಾಮ ಕುಸಿದು ಹೋದ ಆರ್ಥಿಕ ಸ್ಥಿತಿಗೆ ಮರುಜೀವ ನೀಡುವ ಮಹತ್ತರ ಜವಾಬ್ದಾರಿ ನಮಗಿದೆ ಎಂದರು.

    ಹಳಿಯಾಳ ತಾಲೂಕು ಗಡಿಯಲ್ಲಿರುವುದರಿಂದ ಮಹಾರಾಷ್ಟ್ರ ಹಾಗೂ ಗೋವಾದಿಂದ ಜನ ನುಸುಳಬಹುದು. ಅದಕ್ಕಾಗಿ ಪೊಲೀಸ್ ಇಲಾಖೆ ಹೆಚ್ಚಿನ ನಿಗಾವಹಿಸಬೇಕು ಎಂದರು. ಕೋವಿಡ್-19 ಎದುರಿಸಲು ಉತ್ತರ ಕನ್ನಡ ಜಿಲ್ಲೆ ಸರ್ವ ಸನ್ನದವಾಗಿದೆ ಎಂದರು.

    ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಘೊಷಿಸಿದ ಪ್ಯಾಕೇಜ್ ಪಡೆಯಲು ಅವಶ್ಯಕವಾಗಿರುವ ಸೇವಾ ಸಿಂಧು ವೆಬ್ ಸೈಟ್ ಆರಂಭಿಸಲು ಕ್ರಮ ಕೈಗೊಳ್ಳಿ ಎಂದರು.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇರೆ ರಾಜ್ಯದ ಕಾರ್ವಿುಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ತೆರಳಲು ಕುಮಟಾ ಮೂಲಕ ರೈಲು ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಎಲ್ಲ ತಾಲೂಕುಗಳಿಗೆ ಎನ್​ಡಿಆರ್​ಎಫ್ ನಿಧಿಯಿಂದ ಅನುದಾನ ಬಿಡುಗಡೆ ಮಾಡಬೇಕು ಎಂದರು. ಹಿಂದಿನ ಮೈತ್ರಿ ಸರ್ಕಾರದಲ್ಲಿ ಅನುಷ್ಠಾನದಲ್ಲಿದ್ದ ಮನೆ ಹಾನಿ ಪರಿಹಾರ ಮಾನದಂಡವನ್ನು ಮುಂದುವರೆಸಬೇಕು. ಹೋಟೆಲ್​ಗಳಿಗೆ ಪೌರ ಸಂಸ್ಥೆಗಳು ವಿಧಿಸುತ್ತಿರುವ ಘನತ್ಯಾಜ್ಯ ಕರವನ್ನು ಮರು ಪರಿಶೀಲಿಸಿ ಎಂದು ಮನವಿ ಮಾಡಿದರು.

    ವಿ.ಪ. ಸದಸ್ಯ ಎಸ್.ಎಲ್. ಘೊಟ್ನೇಕರ ಮಾತನಾಡಿ, ತಾಲೂಕಿನಲ್ಲಿ ಬಿದ್ದ ಆಕಾಲಿಕ ಮಳೆಗೆ ಮಾವು ಬೆಳೆಗೆ ಅಪಾರ ಹಾನಿಯಾಗಿದ್ದು, ಪರಿಹಾರ ನೀಡಬೇಕು ಎಂದರು. ರಾಜ್ಯ ಸರ್ಕಾರದಿಂದ ಜಿಲ್ಲೆಗೆ 60 ಕೋಟಿ ಹಾಗೂ ಹಳಿಯಾಳ ತಾಲೂಕಿಗೆ 7ಕೋಟಿ ಸಾಲ ಮನ್ನಾದ ಹಣ ಬರಬೇಕಾಗಿದ್ದು ಸರ್ಕಾರದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಯ ಪ್ರಗತಿ ವಿವರ ಮಂಡಿಸಿದರು.

    ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣ ಪಾಟೀಲ, ಲಕ್ಷ್ಮಿ ಕೊರ್ವೆಕರ, ಮಹೇಶ್ವರಿ ಮಿಶಾಳೆ, ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ, ಸಹಾಯಕ ಆಯುಕ್ತೆ ಪ್ರಿಯಾಂಗಾ, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts