More

    ಜನರ ಸಮಸ್ಯೆ ಪಟ್ಟಿ ಮಾಡದ ಪ್ರಧಾನಿ | ಪ್ರಿಯಾಂಕಾ ಗಾಂಧಿ ವಾಗ್ದಾಳಿ

    ಜಮಖಂಡಿ: ಪ್ರಧಾನಿ ಜನರ ಸಮಸ್ಯೆ ಬಗ್ಗೆ ಪಟ್ಟಿ ಮಾಡಿಕೊಳ್ಳುವುದಿಲ್ಲ. ಬದಲಾಗಿ ನನ್ನನ್ನು ಎಷ್ಟು ಜನ ಬೈದರು ಅಂತ ಮೋದಿ ಲಿಸ್ಟ್ ಮಾಡಿಕೊಳ್ಳುತ್ತಾರೆ. ಅವರು ಗಾಂಧಿ ಕುಟುಂಬಕ್ಕೆ ಬೈದಿದ್ದನ್ನ ನೋಡಿದರೆ ಸಾಲು ಸಾಲು ಪುಸ್ತಕಗಳನ್ನು ಪ್ರಿಂಟ್ ಹಾಕಿಸಬೇಕಾಗುತ್ತೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

    ನಗರದ ಪೋಲೋ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಕರ್ನಾಟಕದ ಸೌಂದರ್ಯ ವರ್ಣಿಸಿದ ಪ್ರಿಯಾಂಕಾ, ಭಾರತವಷ್ಟೇ ಅಲ್ಲ, ಇಡೀ ಜಗತ್ತೇ ಮೆಚ್ಚುವಂತಹ ನಾಡು ಕರುನಾಡು. ಬಸವೇಶ್ವರ, ನಾರಾಯಣ ಗುರೂಜಿ ಅವರಂಥ ಮಹಾನ್ ಪುರುಷರಿಂದ ಆಧ್ಯಾತ್ಮಿಕವಾಗಿ ನಾಡು ಬಹಳ ಶ್ರೀಮಂತವಾಗಿದೆ ಎಂದರು.

    ಹನ್ನೆರಡನೇ ಶತಮಾನದಲ್ಲೇ ಬಸವಣ್ಣನವರು ಪುರುಷ ಹಾಗೂ ಮಹಿಳೆ ಸಮಾನರು ಎಂಬ ಸಂದೇಶ ಸಾರಿದ್ದಾರೆ. ಅವರು ಸಮಾನ ಸಮಾಜ ಸೃಷ್ಟಿಸಲು ಶ್ರಮಿಸಿದರು. ಬಸವಣ್ಣವರ ಸಿದ್ಧಾಂತ ಅಳವಡಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಸಮಾಜದಲ್ಲಿ ಸಮಾನತೆ ತರಲು ನಿರಂತರ ಶ್ರಮಿಸುತ್ತಿದೆ ಎಂದರು.

    ಪ್ರಧಾನಿ ಮೋದಿ ಅವರೇ ನೀವು ನನ್ನ ತಮ್ಮನಿಂದ ಅನೇಕ ವಿಷಯಗಳನ್ನು ಕಲಿಯಬೇಕಿದೆ. ಜನರಿಗಾಗಿ ನನ್ನ ತಮ್ಮ(ರಾಹುಲ್) ಗುಂಡಿಗೆ ಎದೆಯೊಡ್ಡಲು ಸಿದ್ಧನಿದ್ದೇನೆ ಅಂತಾರೆ. ಮೋದಿಯವರೇ ಇದು ಸಾರ್ವಜನಿಕ ಜೀವನ, ನೀವೂ ಹೆದರಬೇಡಿ. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಸಾಮಾನ್ಯ ಎಂದರು.

    ರೈತರು ಸಂಕಷ್ಟದಲ್ಲಿದ್ದರೂ ಬಿಜೆಪಿ ಸರ್ಕಾರ ಅವರ ಸಮಸ್ಯೆಗೆ ಸ್ಪಂದಿಸಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಅವುಗಳನ್ನು ಖರೀದಿಸಲು ಜನರ ಬಳಿ ಹಣ ಇಲ್ಲ. ಆದರೂ ಮಹಿಳೆಯರು ಕುಟುಂಬ ನಿರ್ವಹಣೆಗೆ ಧೈರ್ಯದಿಂದ ದುಡಿದು ಜೀವನ ಸಾಗಿಸುತ್ತಿದ್ದಾರೆ ಎಂದರು.

    ಇದನ್ನೂ ಓದಿ https://www.vijayavani.net/priyanka-gandhi-tries-to-attract-karntaka-people-to-vote-for-congress

    ರಾಜ್ಯದಲ್ಲಿ ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಸರ್ಕಾರಿ ನೌಕರಿ ಕೊಡುವುದು ಸರ್ಕಾರದ ಕೆಲಸ. ಪಿಎಸ್‌ಐ ನೇಮಕಾತಿ ರಾಜ್ಯದಲ್ಲಿ ಏನಾಯ್ತು? ಪೊಲೀಸ್ ಹುದ್ದೆಗಳ ನೇಮಕಕ್ಕೆ ರೇಟ್ ಫಿಕ್ಸ್ ಮಾಡಿದ್ದು ದೊಡ್ಡ ದುರಂತ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಿಯಾಂಕಾ ವಾಗ್ದಾಳಿ ನಡೆಸಿದರು.

    ರಾಜ್ಯ ಬಿಜೆಪಿ ಸರ್ಕಾರ 40 ಪರ್ಸೆಂಟೇಜ್ ಸರ್ಕಾರ. ಬಿಜೆಪಿ ಶಾಸಕನ ಮನೆಯಲ್ಲಿ ಕೋಟಿ ಕೋಟಿ ಹಣ ಸಿಗುತ್ತೆ. ಅವರ ವಿರುದ್ಧ ಯಾವುದೇ ಕ್ರಮ ಇಲ್ಲ. ಒಂದೂವರೆ ಲಕ್ಷ ಕೋಟಿ ಹಣವನ್ನ ರಾಜ್ಯ ಸರ್ಕಾರ ಲೂಟಿ ಹೊಡೆದಿದೆ. ರಾಜ್ಯ ಸರ್ಕಾರ ಮೋಸದಿಂದ ಅಧಿಕಾರಕ್ಕೆ ಬಂದಿದೆ. ಎಲ್ಲರಿಗೂ ಬಿಜೆಪಿ ಸರ್ಕಾರದಿಂದ ಮೋಸವಾಗಿದೆ ಎಂದು ಟೀಕಿಸಿದರು.

    ಪ್ರಧಾನಿ ಮೋದಿ ಸೇರಿ ಹಲವರು ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಹೇಳುವುದಕ್ಕೆ ಅವರ ಬಳಿ ವಿಷಯಗಳೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದರು. ದೇಶದಲ್ಲಿ ಬಹಳಷ್ಟು ಪ್ರಧಾನ ಮಂತ್ರಿಗಳನ್ನು ನೋಡಿದ್ದೇನೆ. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಮೋದಿಯಂತಹ ಪ್ರಧಾನಿ ನೋಡಲಿಲ್ಲ, ಜನರ ಸಮಸ್ಯೆ ಬಗೆಹರಿಸುವ ಬದಲು ತಾವೇ ಕಣ್ಣೀರು ಹಾಕಿ ತಮ್ಮ ಸಮಸ್ಯೆ ಹೇಳುತ್ತಾರೆ ಎಂದರು.

    ಕಾಂಗ್ರೆಸ್ ಸರ್ಕಾರದ ಬಣ್ಣನೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಜನರಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಈಗ ಜನರಿಗೆ ಯಾವುದೇ ಸೌಲಭ್ಯ ದಕ್ಕುತ್ತಿಲ್ಲ. ಈಗಿನ ಸರ್ಕಾರ ಕೊಡುವ ಅಕ್ಕಿ ಗುಣಮಟ್ಟದಿಂದ ಕೂಡಿಲ್ಲ. ನಮ್ಮ ಸರ್ಕಾರ ಇದ್ದಾಗ ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಪ್ರಿಯಾಂಕಾ ಗಾಂಧಿ ಬಣ್ಣಿಸಿದರು.

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2 ಲಕ್ಷ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ವಿವಿಧ ಯೋಜನೆ ಅನುಷ್ಠಾನಗೊಳಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ನಿರ್ಮೂಲನೆ, ಪಾರದರ್ಶಕ ಆಡಳಿತ ಜಾರಿಗೆ ತರುತ್ತೇವೆ. ಕಾಂಗ್ರೆಸ್ ಬೆಂಬಲಿಸುವಂತೆ ಪ್ರಿಯಾಂಕ ಮನವಿ ಮಾಡಿದರು.

    ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ, ಗಟ್ಟಿಮುಟ್ಟವಾದ ಸರ್ಕಾರ ರಚಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲು ವಿನಂತಿಸಿದರು.
    ಮಾಜಿ ಸಚಿವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ, ಕ್ಷೇತ್ರದ ನೀರಾವರಿಗೆ ಸಾಕಷ್ಟು ಯೋಜನೆಗಳನ್ನು ತರಲಾಗಿದೆ. ಸಾವಳಗಿ ಭಾಗದಲ್ಲಿ ನಾನು ಮತ್ತು ಲಕ್ಷ್ಮಣ ಸವದಿ ಅವರು ಪ್ರಚಾರಕ್ಕೆ ಬರುತ್ತೇವೆ ಎಂದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಕಾಂಗ್ರೆಸ್ ಪಕ್ಷ ಸರ್ವರಿಗೂ ಸಾಮಾಜಿಕ ನ್ಯಾಯ ಕೊಟ್ಟಿದೆ. ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಜಮಖಂಡಿ ಕ್ಷೇತ್ರದಿಂದ ಆನಂದ ನ್ಯಾಮಗೌಡ, ತೇರದಾಳ ಕ್ಷೇತ್ರದಿಂದ ಸಿದ್ದು ಕೊಣ್ಣೂರ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ಮುಖಂಡ ಮುತ್ತಣ್ಣ ಹಿಪ್ಪರಗಿ ಮಾತನಾಡಿದರು.

    ನಿಮ್ಮ ಸೇವೆ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕೊಡಿ: ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಕ್ಷೇತ್ರದ ಜನರು ಕಳೆದ ಸಲ ನನ್ನನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಇಡೀ ದೇಶದಲ್ಲೇ ಪ್ರಥಮವಾಗಿ ನಾನು ನಮ್ಮ ಜನರ ರಕ್ಷಣೆಗೆ ಕರೊನಾ ಲಸಿಕೆ ಕೊಡಿಸುವ ಕಾರ್ಯ ಮಾಡಿದ್ದೇನೆ. ಕ್ಷೇತ್ರದಲ್ಲಿ ನೀರಾವರಿ, ಶಿಕ್ಷಣ, ಆರೋಗ್ಯಕ್ಕೆ ಬಹಳಷ್ಟು ಆದ್ಯತೆ ನೀಡಿದ್ದೆನೆ. ಇನ್ನೂ ಹಲವಾರು ಕಾರ್ಯಗಳು ಆಗಬೇಕಿವೆ. ಅವುಗಳನ್ನು ಪೂರ್ಣಗೊಳಿಸಲು ನನಗೆ ಮತ್ತೊಮ್ಮೆ ನಿಮ್ಮ ಸೇವೆ ಸಲ್ಲಿಸಲು ಅವಕಾಶ ಕೊಡಿ ಎಂದರು.

    ಕ್ಷೇತ್ರದ ನೀರಾವರಿಗೆ ದಿ.ಸಿದ್ದು ನ್ಯಾಮಗೌಡ, ಎಂ.ಬಿ.ಪಾಟೀಲ ಅವರ ಕೊಡುಗೆ ಬಹಳಷ್ಟಿದೆ. ದೇಶಕ್ಕೆ ಗಾಂಧಿ ಕುಟುಂಬದವರು ಜನಸಾಮಾನ್ಯರ ಪ್ರಗತಿಗೆ ಶ್ರಮಿಸುತಿದ್ದಾರೆ ಎಂದರು.

    ಮಗನಿಗೆ ಆಶೀರ್ವದಿಸಿ: ದಿ.ಸಿದ್ದು ನ್ಯಾಮಗೌಡ ಅವರ ಪತ್ನಿ ಸುಮಿತ್ರಾ ನ್ಯಾಮಗೌಡ ಮಾತನಾಡಿ, ನನ್ನ ಮಗನನ್ನು ಕಳೆದ ಬಾರಿ ಆಶೀರ್ವದಿಸಿದಂತೆ ಈ ಬಾರಿಯೂ ಗೆಲ್ಲಿಸುವಂತೆ ಮನವಿ ಮಾಡಿದರು.

    ರಾಜ್ಯ ಉಸ್ತುವಾರಿ ರಣದೀಪ ಸುರ್ಜೆವಾಲಾ, ಅಮರಾವತಿ ಶಾಸಕ ಸುನೀಲ ದೇಶಮುಖ, ತೇರದಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಕೊಣ್ಣೂರ, ಅಜಯಕುಮಾರ ಸರನಾಯಕ, ಶ್ರೀಶೈಲ ದಳವಾಯಿ, ಬಸವರಾಜ ಸಿಂಧೂರ, ನಜೀರ ಕಂಗನೊಳ್ಳಿ, ಅರುಣಕುಮಾರ ಶಹಾ, ಅರ್ಜುನ ದಳವಾಯಿ, ಶ್ಯಾಮರಾವ ಘಾಟಗೆ, ವಧರ್ಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ಸಿದ್ದು ಮಿಶಿ, ರಫೀಕ ಬಾರಿಗಡ್ಡಿ, ಫಕೀರಸಾಬ ಬಾಗವಾನ, ರವಿ ಯಡಹಳ್ಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts