More

    ಪ್ರಧಾನಿಯಿಂದ ಫೆ.27ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ; ಬಿಎಸ್​​ವೈ ಸಲಹೆಯಂತೆ ಕುವೆಂಪು ಹೆಸರಿಡಲು ತೀರ್ಮಾನ

    ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭ ಫೆ.27ರಂದು ನಿಶ್ಚಿತವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವರು ಎಂದು ಬಿಜೆಪಿ ಕೇಂದ್ರ ಸಂಸದೀಯ ಸದಸ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

    ಈಗಾಗಲೇ ವಿಮಾನ ನಿಲ್ದಾಣ ಬಹುತೇಕ ಮುಕ್ತಾಯಗೊಂಡಿದ್ದು ಅದೇ ದಿನ ವಿಮಾನ ನಿಲ್ದಾಣಕ್ಕೆ ನಾಡುಕಂಡ ಶ್ರೇಷ್ಠ ಕವಿ, ಜ್ಞಾನಪೀಠ ಪುರಸ್ಕೃತ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.

    ವಿಮಾನ ನಿಲ್ದಾಣದ ಉದ್ಘಾಟನೆಗೆ ನರೇಂದ್ರ ಮೋದಿ ಅವರು ಬರುವುದಾಗಿ ಪ್ರಧಾನಿ ಕಾರ್ಯಾಲಯ ಖಚಿತಪಡಿಸಿದೆ. ಹಾಗಾಗಿ ವಿಮಾನ ನಿಲ್ದಾಣ ಉದ್ಘಾಟನೆ ವೇಳೆಯೇ ಕುವೆಂಪು ಅವರ ಹೆಸರನ್ನು ಮೋದಿ ಅವರೇ ಘೋಷಣೆ ಮಾಡಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆಯಾಗಿದೆ ಎಂದರು.

    20ನೇ ಶತಮಾನ ಕಂಡ ಶ್ರೇಷ್ಠ ಕವಿ, ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಕುವೆಂಪು ಅವರ ಹೆಸರಿಡಬೇಕೆಂದು ತೀರ್ಮಾನಿಸಿದ್ದು ಮುಂಬರುವ ಬಜೆಟ್ ಅಧಿವೇಶನದಲ್ಲಿ ನಾನೇ ವಿಷಯ ಪ್ರಸ್ತಾಪಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.

    ಕುವೆಂಪು ಅವರು ವಿಶ್ವಮಾನ್ಯ ಸಂದೇಶವನ್ನು ಜಗತ್ತಿಗೆ ಸಾರಿದ್ದು ಪ್ರಧಾನಿ ಮೋದಿ ಅವರು ಅದೇ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಹಾಗಾಗಿ ವಿಮಾನ ನಿಲ್ದಾಣಕ್ಕೆ ಮೋದಿ ಅವರಿಂದಲೇ ಕುವೆಂಪು ಹೆಸರು ನಾಮಕರಣ ಮಾಡಿಸಬೇಕೆಂಬುದು ನಮ್ಮೆಲ್ಲರ ಬೇಡಿಕೆಯಾಗಿದ್ದು ನಾಡಿನ ಸಮಸ್ತ ಜನರು ಈ ನಿರ್ಧಾರವನ್ನು ಸ್ವಾಗತಿಸುವ ವಿಶ್ವಾಸವಿದೆ ಎಂದರು.

    424 ಕೋಟಿ ರೂ. ವೆಚ್ಚದಲ್ಲಿ ಇಡೀ ದೇಶದಲ್ಲಿ ಅತಿ ವೇಗವಾಗಿ ನಿರ್ಮಾಣಗೊಂಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಅತಿ ಉದ್ದದ ರನ್ ವೇ, ರಾತ್ರಿ ವಿಮಾನ ಇಳಿಸುವ ವ್ಯವಸ್ಥೆ ಸುಸಜ್ಜಿತ ಕಟ್ಟಡ, ಟರ್ಮಿನಲ್ ಸೇರಿದಂತೆ ಎಲ್ಲ ಸೌಕರ್ಯಗಳನ್ನು ನಿಲ್ದಾಣ ಹೊಂದಿದೆ ಎಂದು ಹೇಳಿದರು.

    ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರಿಡುವುದಾಗಿ ಮಾಡಿದ ಘೋಷಣೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನನ್ನ ಹೆಸರಿಡುವ ಪ್ರಶ್ನೆಯೇ ಇಲ್ಲ. ನನ್ನ ಹೆಸರಿಡಿಬೇಕೆಂದು ಸಿಎಂ ಹೇಳಿದ್ದಾರೆ. ಆದರೆ ಈ ಸಂಬಂಧ ಈಗಾಗಲೇ ಸ್ಪಷ್ಟಪಡಿಸಿದ್ದು ಅವರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts