More

    ವಿವಿಧ ರೈಲು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

    ಬಾಗಲಕೋಟೆ: ಅಮೃತ ಭಾರತ ನಿಲ್ದಾಣ ಯೋಜನೆ ಅಡಿ ಬಾಗಲಕೋಟೆ ಜಿಲ್ಲೆಯ ಎರಡು ರೈಲ್ವೆ ನಿಲ್ದಾಣ ಹಾಗೂ ಎರಡು ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಒಳಗೊಂಡಂತೆ ದೇಶದ ವಿವಿಧ ರೈಲ್ವೆ ಯೋಜನೆಗಳಿಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

    ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇಶದಲ್ಲಿ ಒಟ್ಟು 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ, 1500 ರಸ್ತೆ ಮೇಲ್ಸೇತುವೆ ಹಾಗೂ ರಸ್ತೆ ಕೆಳಸೇತುವೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ, ಪ್ರಧಾನಮಂತ್ರಿಗಳು ಮಾತನಾಡಿದರು.

    ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಪಿ.ಸಿ.ಗದ್ದಿಗೌಡರ, ಬಾಗಲಕೋಟೆ ನೂತನ ಜಿಲ್ಲೆ ಆದಾಗಿನಿಂದ ಸುಸಜ್ಜಿತ ಮೇಲ್ದರ್ಜೆಯ ರೇಲ್ವೆ ನಿಲ್ದಾಣ ಅವಶ್ಯವಾಗಿತ್ತು. ಇವತ್ತು ಬಾಗಲಕೋಟೆ ಹಾಗೂ ಬಾದಾಮಿ ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಯ ಸ್ಥಾನ ಪಡೆದಿವೆ ಎಂದು ಹೇಳಿದರು.

    ಪ್ರಧಾನ ಮಂತ್ರಿಗಳ ವಿಕಸಿತ ಭಾರತ ಎಂಬ ಕಲ್ಪನೆ ಮೇರೆಗೆ ಇಂದು ಹಲವಾರು ಕಾರ್ಯಗಳು ನೆರವೇರುತ್ತಿವೆ . ಕೇಂದ್ರ ಸರ್ಕಾರದ ಹಲವಾರು ಉಪಯುಕ್ತ ಯೋಜನೆಗಳಿಂದ ಭಾರತ ಇಂದು ಜಾಗತಿಕ ಮನ್ನಣೆ ಪಡೆಯುತ್ತಿದೆ ಎಂದರು.

    ದೇಶದ 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದು ಮುಖ್ಯವಾಹಿನಿಗೆ ಬಂದಿದ್ದಾರೆ. ಇದು ದೇಶ ಬೆಳವಣಿಗೆ ಹೊಂದುತ್ತಿರುವ ಸಂಕೇತವಾಗಿದೆ. ಆಜಾದ್ ಕಾ ಅಮೃತ ಎಂಬ ವಿನೂತನ ಯೋಜನೆಯಿಂದ 2047ರಲ್ಲಿ ಭಾರತ ಹೇಗಿರಬೇಕೆಂಬ ಕಲ್ಪನೆ ಪ್ರಧಾನಿಗಳದ್ದಾಗಿದೆ. ಅದರಲ್ಲಿ ರೈಲ್ವೆ ಪ್ರಮುಖವಾಗಿದ್ದು, ಜನತೆಗೆ ಹಾಗೂ ಸಾರಿಗೆ ಸಂಪರ್ಕಕ್ಕೆ ಬಹುಮುಖ್ಯ ವಾಹಿನಿಯಾಗಿದೆ ಎಂದು ಹೇಳಿದರು.

    ಕೇವಲ ರೈಲ್ವೆಗಳ ಅಭಿವೃದ್ಧಿಯಲ್ಲದೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿ ಅಂಗವಿಕಲರು ಹಾಗೂ ವೃದ್ಧರಿಗೆ ಲಿಫ್ಟ್ ವ್ಯವಸ್ಥೆ, ಮಹಿಳೆಯರು ಮತ್ತು ಮಕ್ಕಳಿಗಾಗಿ ಎಕ್ಸಿಲೇಟರ್, ಶುದ್ಧ ಕುಡಿಯುವ ನೀರು, ತಂಗುದಾಣ ಹಾಗೂ ಸುಸಜ್ಜಿತ ಶೌಚಗೃಹಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

    ಜಿಲ್ಲೆಗೆ ಒಟ್ಟು 103.37 ಕೋಟಿ ರೂ. ಕೊಡುಗೆ ನೀಡಲಾಗಿದೆ. ಅಮೃತ ಭಾರತ ಯೋಜನೆಯಡಿ ಬಾಗಲಕೋಟೆ ರೈಲು ನಿಲ್ದಾಣ ಪುನರಾಭಿವೃದ್ಧಿಗೆ 16.24 ಕೋಟಿ ರೂ., ಬಾದಾಮಿ ರೈಲು ನಿಲ್ದಾಣ ಪುನರಾಭಿವೃದ್ಧಿಗೆ 15.21 ಕೋಟಿ ಹಾಗೂ ಬಾದಾಮಿ ಸ್ಟೇಷನ್ ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ 39.63 ಕೋಟಿ, ಗುಳೇದಗುಡ್ಡ ಸ್ಟೇಷನ್ ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ 32.29 ಕೋಟಿ ರೂ. ವೆಚ್ಚದ ಕಾಮಗಾರಿಗೆ ಪ್ರಧಾನ ಮಂತ್ರಿ ಅವರು ಇಂದು ಚಾಲನೆ ನೀಡಿದ್ದಾರೆ ಎಂದು ವಿವರಿಸಿದರು.

    ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಹಿರಿಯ ಅಭಿಯಂತರ ಸ್ವಪ್ನಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಾಜಿ ಶಾಸಕ ವೀರಣ್ಣ ಚರಂತಿಮಠ, ನಗರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಉಪಸ್ಥಿತರಿದ್ದರು.

    ಸುರೇಶ ಅಂಗಡಿ, ಡಿಸಿ ರಾಜೇಂದ್ರ ಸ್ಮರಿಸಿದ ಸಂಸದರು

    ಬಾದಾಮಿ ಹಾಗೂ ಗುಳೇದಗುಡ್ಡ ರೈಲ್ವೆ ಸ್ಟೇಷನ್ ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಿಸಲು 2 ವರ್ಷಗಳ ಹಿಂದೆ ಮಂಜೂರಾತಿ ದೊರೆತಿದ್ದರೂ ಭೂಸ್ವಾಧೀನ ಪಡಿಸಿಕೊಳ್ಳುವಲ್ಲಿ ವಿಳಂಬವಾಗಿತ್ತು. ಆದರೆ, ಅಂದಿನ ರೈಲ್ವೆ ಮಂತ್ರಿ ದಿ.ಸುರೇಶ ಅಂಗಡಿ ಹಾಗೂ ಅಂದಿನ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ ಈ ಕಾರ್ಯಕ್ಕೆ ಹೆಚ್ಚಿನ ಆಸಕ್ತಿ ತೋರಿಸಿದ್ದನ್ನು ಸಂಸದ ಪಿ.ಸಿ.ಗದ್ದಿಗೌಡರ ನೆನಪು ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts