More

    ಬಿಜೆಪಿಗೆ ಪ್ರಧಾನಿಯೇ ಗ್ಯಾರಂಟಿ: ಬಿ.ವೈ.ರಾಘವೇಂದ್ರ

    ಶಿವಮೊಗ್ಗ: ಕಾಂಗ್ರೆಸ್‌ನ ಗ್ಯಾರಂಟಿಗಳ ಮುಂದೆ ನಮಗೆ ಪ್ರಧಾನಿ ನರೇಂದ್ರ ಮೋದಿ ಅವರೇ ದೊಡ್ಡ ಗ್ಯಾರಂಟಿ ಆಗಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರದ ಈಗಿನ ಗ್ಯಾರಂಟಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಗುರುವಾರ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿವಿಧ ಮೋರ್ಚಾಗಳ ಸಂಯುಕ್ತ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಕೇವಲ ಮತ ಬ್ಯಾಂಕ್‌ಗಾಗಿ ಗ್ಯಾರಂಟಿಗಳ ಮೂಲಕ ಜನರನ್ನು ಓಲೈಸಿಕೊಳ್ಳುವ ಕೆಲಸ ಮಾಡಿತು. ಆದರೆ ಪ್ರಧಾನಿ ಮೋದಿ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಹತ್ತು ಹಲವಯ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
    ರಾಜ್ಯದಲ್ಲಿ ಕಾಂಗ್ರೆಸ್‌ನ ಹೊಂದಾಣಿಕೆ ರಾಜಕಾರಣದಿಂದ ಪಕ್ಷಕ್ಕೆ ತಾತ್ಕಾಲಿಕ ಹಿನ್ನಡೆಯಾಗಿರಬಹುದು. ಕಾಂಗ್ರೆಸ್‌ನ ಪೊಳ್ಳು ಭರವಸೆ ಮತ್ತು ಅಪಪ್ರಚಾರ ಬದಿಗಿಟ್ಟು ಕೇಂದ್ರ ಸರ್ಕಾರದ ಸಾಧನೆ ನಮ್ಮ ಮುಂದಿದ್ದು ಆ ಮೂಲಕ ಭವಿಷ್ಯದಲ್ಲಿ ದೇಶ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿದರು.
    ಮೋದಿ ಸರ್ಕಾರ ಕಳೆದ ಒಂಬತ್ತು ವರ್ಷದಲ್ಲಿ ಮಾಡಿದ ಸಾಧನೆಗಳನ್ನು ಮನೆಮನೆಗೆ ತಲುಪಿಸಿ ಆ ಮೂಲಕ ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯವೆಂದು ನಂಬಿಸುವ ಕಾಂಗ್ರೆಸ್ ಹುನ್ನಾರವನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕಿದೆ. ಸಂಪರ್ಕ್ ಸೆ ಸಮರ್ಥನ್ ಮತ್ತು ವಿಕಾಸ ತೀರ್ಥ ಯಾತ್ರೆ ಮೂಲಕ ಕಾರ್ಯಕರ್ತರು ಬಿಜೆಪಿ ಸರ್ಕಾರದ ಸಾಧನೆ ಮನೆ ಮನಗಳಿಗೆ ಮುಟ್ಟಿಸಬೇಕಿದೆ. ಕನಿಷ್ಠ 2 ಗಂಟೆ ಸಮಯವನ್ನು ಪಕ್ಷಕ್ಕಾಗಿ ಮೀಸಲಿಡಬೇಕಿದೆ ಎಂದು ಹೇಳಿದರು.
    ಬಿಜೆಪಿ ಸಾಮಾಜಿಕ ಜಾಲತಾಣದ ರಾಜ್ಯ ಸಂಚಾಲಕ ವಿಕಾಸ್ ಪುತ್ತೂರು ಮಾತನಾಡಿ, ಸ್ವಾತಂತ್ರ್ಯದ ನಂತರ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಏಕತೆಗಾಗಿ ಮೊದಲು ಬಲಿದಾನ ಮಾಡಿದವರು ಡಾ. ಶ್ಯಾಮಾಪ್ರಸಾದ್ ಮುಖರ್ಜಿ. ಅವರ ಉದ್ದೇಶವನ್ನು ಮೋದಿ ಸರ್ಕಾರ ಈಡೇರಿಸಿದೆ. ರಾಮಾಯಣವನ್ನು ಕೇವಲ ಅರ್ಧಗಂಟೆಯಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲವೋ ಅದೇ ರೀತಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಕೆಲವೇ ನಿಮಿಷ, ಗಂಟೆ ಅಥವಾ ದಿನಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಅಶೋಕಮೂರ್ತಿ, ರೈತ ಮೋರ್ಚಾ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ.ಹರಿಕೃಷ್ಣ, ಜಿಪಂ ಮಾಜಿ ಸದಸ್ಯರಾದ ವೀರಭದ್ರಪ್ಪ ಪೂಜಾರಿ, ನಾಗರಾಜ್ ತಮ್ಮಡಿಹಳ್ಳಿ, ಸೌಮ್ಯಾ ಭೋಜ್ಯಾನಾಯ್ಕ, ಪ್ರೇಮಾ ಸುಧಾಕರ್, ಶಿಮುಲ್ ನಿರ್ದೇಶಕ ದಿನೇಶ್ ಬುಳ್ಳಾಪುರ, ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಮಂಜುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts