More

    ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಸಾಧನೆ

    ಹುಣಸೂರು: ಗ್ಯಾರಂಟಿಗಳ ಹೆಸರಿನಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ಶೇ.30 ಏರಿಕೆ ಮಾಡಿರುವುದೇ ರಾಜ್ಯ ಸರ್ಕಾರದ ಸಾಧನೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು.


    ನಗರದ ಕನಕ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕುರುಬ ಸಮಾಜದ ಜಾಗೃತ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಮಹಿಳೆಗೆ ಒಂದು ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದೆ. ಎಲ್ಲಿದೆ ಹಣ? ಇಂತಹ ಸುಳ್ಳು ಭರವಸೆಗಳಿಗೆ ಮಹಿಳೆಯರು ಮೋಸ ಹೋಗಬಾರದು. ಈಗಾಗಲೇ ಗ್ಯಾರಂಟಿ ಯೋಜನೆಗಳ ಪ್ರಭಾವದಿಂದ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಶೇ.30 ಏರಿಕೆ ಕಂಡಿದೆ. ಇನ್ನು ದೇಶದಲ್ಲೂ ಇದೇ ನೀತಿ ಜಾರಿಯಾದರೆ ಬಡವ ಬದುಕಲು ಸಾಧ್ಯವಿಲ್ಲದಂತಾಗಲಿದೆ. ಮೈಸೂರು ಸಂಸ್ಥಾನದ ಯದುವಂಶದ ಅರಸರು ಈ ನಾಡಿಗಾಗಿ ನೀಡಿರುವ ಕೊಡುಗೆಗಳು ಅಪಾರ. ಅದನ್ನು ನಾವೆಂದು ಮರೆಯಬಾರದು. ಯುದುವಂಶದ ಕುಡಿಯಾದ ಯದುವೀರ್ ಒಡೆಯರ್‌ಗೆ ನಮ್ಮೆಲ್ಲರ ಮತವನ್ನು ಮೀಸಲಿರಿಸೋಣ ಎಂದು ಹೇಳಿದರು.


    ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ದೇಶದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ. ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಯದುವೀರ್‌ಗೆ ಬಹುಮತ ನೀಡಿದ್ದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿ ಕೈಗೊಳ್ಳುವ ಜವಾಬ್ದಾರಿ ನನ್ನದು. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗೆ ರೈತರು ಬೇಸತ್ತಿದ್ದಾರೆ. ಕೃಷಿ ಪಂಪ್‌ಸೆಟ್ ಟಿಸಿಗೆ ಇದ್ದ 10 ಸಾವಿರ ರೂ. ಶುಲ್ಕವನ್ನು ಇದೀಗ 3 ಲಕ್ಷಕ್ಕೆ ಏರಿಸಿರುವ ರಾಜ್ಯ ಸರ್ಕಾರ ರೈತ ವಿರೋಧಿಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.


    ಕುರುಬ ಸಮಾಜದ ಮುಖಂಡ ಗಣೇಶ್ ಕುಮಾರಸ್ವಾಮಿ ಮಾತನಾಡಿ, 15 ವರ್ಷ ತಾಲೂಕಿನ ಶಾಸಕರಾಗಿದ್ದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಗೆಲುವಿನಲ್ಲಿ ಕುರುಬ ಸಮಾಜದ ಪಾತ್ರ ಬಹುದೊಡ್ಡದು. ಆದರೆ, ತಾಲೂಕಿಗೆ ಮಂಜುನಾಥ್ ಕೊಡುಗೆ ಶೂನ್ಯ ಎಂದು ದೂರಿದರು.
    ತಾಲೂಕು ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ಮೂಕನಹಳ್ಳಿ ವಾಸೇಗೌಡ, ಜಿಪಂ ಮಾಜಿ ಸದಸ್ಯ ಎಂ.ಬಿ.ಸುರೇಂದ್ರ, ಖಜಾಂಚಿ ಗಣೇಶ್‌ಕುಮಾರ್ ಸ್ವಾಮಿ, ಗ್ರಾಪಂ ಸದಸ್ಯ ಮೂಕನಹಳ್ಳಿ ಚಂದ್ರಶೇಖರ್, ದೇವರಾಜ್‌ಒಡೆಯರ್, ಪ್ರಭಾಕರ್ ಹೆಗ್ಡೆ, ಗೋವಿಂದೇಗೌಡ, ಸೋಮಣ್ಣ, ಉದಯ್, ಶಿವಾನಂದ್, ಅಶೋಕ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts