More

    ಗಡಿನಾಡ ಜನರು ಮತ್ತೆ ಅತಂತ್ರ: ಗಡಿ ತೆರೆಯಲು ಒತ್ತಡ

    ಮಂಗಳೂರು/ಮಂಜೇಶ್ವರ: ಕೇರಳದಲ್ಲಿ ಕರೊನಾ ಸೋಂಕಿನ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಮತ್ತೆ ಗಡಿಯಲ್ಲಿ ನಿರ್ಬಂಧ ಹೇರಲಾಗಿದ್ದು, ಗಡಿನಾಡಿನ ಜನರು ಮತ್ತೆ ಸಮಸ್ಯೆಗೆ ಸಿಲುಕಿದ್ದಾರೆ. ತುರ್ತು ಅವಶ್ಯಕತೆ ಹೊರತುಪಡಿಸಿ ಇತರ ಓಡಾಟವನ್ನು ನಿರ್ಬಂಧಿಸಿರುವುದರಿಂದ ಕಾಸರಗೋಡು ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ದಕ್ಷಿಣ ಕನ್ನಡವನ್ನು ಕಾಸರಗೋಡು ಜಿಲ್ಲೆಯಿಂದ ಸಂಪರ್ಕಿಸುವ 16 ರಸ್ತೆಗಳ ಪೈಕಿ ಕೆಲವನ್ನು ಮಾತ್ರ ಉಳಿಸಿಕೊಂಡು, ಉಳಿದ ರಸ್ತೆಗಳನ್ನು ಪೂರ್ಣವಾಗಿ ಬಂದ್ ಮಾಡಲಾಗಿದೆ. ಪುತ್ತೂರು ತಾಲೂಕಿನ ಪಾಣಾಜೆ ಸಹಿತ ಕೆಲವು ಕಡೆ ರಸ್ತೆಗೆ ಟಿಪ್ಪರ್, ಇಟಾಚಿಗಳಲ್ಲಿ ಮಣ್ಣು ಸುರಿದು ಸಂಪರ್ಕವನ್ನೇ ಕಡಿತಗೊಳಿಸಲಾಗಿದೆ. ಉಳಿದ ರಸ್ತೆಗಳಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಹೀಗಾಗಿ ಮಂಗಳೂರನ್ನು ಆಶ್ರಯಿಸಿದ ಕಾಸರಗೋಡಿನ ಜನತೆ, ಅದರಲ್ಲೂ ಪ್ರಧಾನವಾಗಿ ಕನ್ನಡಿಗರು ಅತಂತ್ರರಾಗಿದ್ದಾರೆ.

    ಎಲ್ಲ ವ್ಯವಹಾರ, ಉದ್ಯೋಗ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಹತ್ತಿರ ಸಂಪರ್ಕವನ್ನು ಇಟ್ಟುಕೊಂಡಿರುವ ಕನ್ನಡಿಗರು, ಈಗ ದ.ಕ. ಪ್ರವೇಶಕ್ಕೆ ಅವಕಾಶವಿಲ್ಲದೆ ಉದ್ಯೋಗ, ವ್ಯವಹಾರಗಳಿಂದ ವಂಚಿತರಾಗಿದ್ದಾರೆ.

    ಉದ್ಯೋಗ ನಷ್ಟ ಭೀತಿ: ಕರೊನಾ ಹಿನ್ನೆಲೆಯಲ್ಲಿ ಮೊದಲ ಅಲೆ ಸಂದರ್ಭ ಇದೇ ರೀತಿ ನಿಯಂತ್ರಣ ಹೇರಿದ್ದರಿಂದ ಮಂಗಳೂರಿನ ವಿವಿಧೆಡೆ ವೃತ್ತಿ ನಿರತರಾಗಿದ್ದ 600ಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಈಗ ಮತ್ತೆ ಜನರಲ್ಲಿ ಆತಂಕ ಆವರಿಸಿದೆ.

    ಸರ್ಕಾರಗಳ ಮೇಲೆ ಒತ್ತಡ: ಮುಚ್ಚಿರುವ ಕೇರಳ-ಕರ್ನಾಟಕ ಗಡಿಯನ್ನು ತೆರೆಯುವಂತೆ ಎರಡೂ ಸರ್ಕಾರಗಳ ಮೇಲೆ ಜನ ಒತ್ತಡ ಹೇರುತ್ತಿದ್ದಾರೆ. ಕರ್ನಾಟಕ ಪ್ರವೇಶ ನಿರ್ಬಂಧ ಕುರಿತು ತಲಪಾಡಿ ಗಡಿಯಲ್ಲಿ ಮಂಗಳವಾರವೂ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ. ‘ಭಾರತದಿಂದ ಲಂಡನ್‌ಗೆ ಹೋಗಲು ಎರಡು ಡೋಸ್ ವ್ಯಾಕ್ಸಿನ್ ಸಾಕು. ಆದರೆ ಅಡ್ಕಸ್ಥಳದಿಂದ ಅಡ್ಯನಡ್ಕಕ್ಕೆ ಹೋಗಲು ಅದು ಸಾಲದು’ ಎಂದು ರಾಜ್ಯದ ಕ್ರಮವನ್ನು ಟ್ರೋಲ್ ಮಾಡಲಾಗುತ್ತಿದೆ.

    ಅತ್ತ ಕೆಲವರು, ಕಳೆದ ಏಳು ದಶಕಗಳಿಂದ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆ ಕೇರಳ ಸರ್ಕಾರ ಅವಗಣಿಸಿದೆ. ಈ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಎಷ್ಟು ಉದ್ಯೋಗ/ಉದ್ಯಮ ಸೃಷ್ಟಿಯಾಗಿದೆ? ಆಧುನಿಕ ವ್ಯವಸ್ಥೆ ಮತ್ತು ನುರಿತ ವೈದ್ಯರ ತಂಡ ಇರುವ ಎಷ್ಟು ಆಸ್ಪತ್ರೆಗಳು ಸ್ಥಾಪನೆಯಾಗಿವೆ? ಎಷ್ಟು ಶಿಕ್ಷಣ ಸಂಸ್ಥೆಗಳು, ಕಾಲೇಜುಗಳಿವೆ? ನಾವ್ಯಾರಾದರೂ ಈ ನಿಟ್ಟಿನಲ್ಲಿ ಧಿಕ್ಕಾರ ಹಾಕಿದ್ದೇವಾ? ಕಾಸರಗೋಡು ಜಿಲ್ಲೆಯ ವಿಧಾನಸಭಾ ಸದಸ್ಯರು, ಸಂಸದರನ್ನು ಪ್ರಶ್ನಿಸಿದ್ದೇವಾ ಎಂದು ರವಿ ಎನ್ನುವವರು ಪ್ರಶ್ನಿಸಿದ್ದಾರೆ.

    ಕೇರಳದ ಕೋವಿಡ್ ಟೆಸ್ಟ್ ಸೆಂಟರ್ ಆರಂಭ: ಗಡಿ ಪ್ರದೇಶ ತಲಪಾಡಿಯಲ್ಲಿ ಕರ್ನಾಟಕದ ವೈದ್ಯಕೀಯ ತಂಡ ಸೋಮವಾರ ಕೋವಿಡ್ ಪರೀಕ್ಷೆ ಸ್ಥಗಿತಗೊಳಿಸಿದ ಕಾರಣ ಮಂಗಳವಾರ ಕೇರಳ ಸರ್ಕಾರ ಆ ಕಡೆಯಲ್ಲಿ ಕೋವಿಡ್ ಪರೀಕ್ಷೆ ಕೇಂದ್ರ ಆರಂಭಿಸಿದೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆ ತೆತ್ತು ಪರೀಕ್ಷೆ ನಡೆಸುವ ಅನಿವಾರ್ಯತೆ ತಪ್ಪಿದೆ.

    ರೋಗಿಗಳಿಗೆ ವಿನಾಯಿತಿ ಎಡಿಜಿಪಿ ಪ್ರತಾಪ್ ರೆಡ್ಡಿ ಹೇಳಿಕೆ: ರಾಜ್ಯ ಸರ್ಕಾರದ ಸೂಚನೆಯಂತೆ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಕರ್ನಾಟಕ ಪ್ರವೇಶಕ್ಕೆ ಅವಕಾಶವಿದೆ. ಇಲ್ಲಿ ಪರೀಕ್ಷೆ ಬರೆಯುತ್ತಿರುವ ಕೇರಳದ ವಿದ್ಯಾರ್ಥಿಗಳಿಗೆ ನಿರ್ಬಂಧವಿಲ್ಲ. ತುರ್ತು ವೈದ್ಯಕೀಯ ಸೇವೆ ಅಗತ್ಯ ಇರುವವರಿಗೂ ಅನುಮತಿ ನೀಡಲಾಗುತ್ತಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

    ಅವರು ಮಂಗಳವಾರ ದ.ಕ. ಜಿಲ್ಲೆಯ ವಿವಿಧ ಗಡಿಪ್ರದೇಶಗಳಿಗೆ ಭೇಟಿ ನೀಡಿ ತಪಾಸಣೆ ವ್ಯವಸ್ಥೆ ಪರಿಶೀಲಿಸಿದರು. ತಲಪಾಡಿಗೆ ತೆರಳಿದಾಗ, ಆರ್‌ಟಿಪಿಸಿಆರ್ ಪರೀಕ್ಷೆ ವರದಿ ಕಡ್ಡಾಯ ಆದೇಶ ಹಿಂಪಡೆಯಲು ಒತ್ತಾಯಿಸಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಕೇರಳದ ಜನರು ರಾಷ್ಟ್ರೀಯ ಹೆದ್ದಾರಿ ಅಡ್ಡಲಾಗಿ ಕುಳಿತು ಕೇರಳಕ್ಕೆ ಬರುವ ಕರ್ನಾಟಕದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಕಾಸರಗೋಡು ಜಿಪಂ ಸದಸ್ಯ ಹರ್ಷಾದ್ ವರ್ಕಾಡಿ, ಸಿಪಿಐ(ಎಂ) ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್.ಜಯಾನಂದ, ಯುಡಿಎಫ್ ಮುಖಂಡ ಸೈಫುಲ್ಲಾ ತಂಙಳ್ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

    ಪದವಿ ಪರೀಕ್ಷೆ ಮತ್ತೆ ಮಂದೂಡಿಕೆ: ಮಂಗಳೂರು: ಸೋಮವಾರವಷ್ಟೇ ಪ್ರಾರಂಭಗೊಂಡಿದ್ದ ಮಂಗಳೂರು ವಿಶ್ವವಿದ್ಯಾಲಯದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
    ಏಪ್ರಿಲ್‌ನಲ್ಲಿ ಪ್ರಾರಂಭಗೊಂಡಿದ್ದ ಪದವಿ ಪರೀಕ್ಷೆಗಳನ್ನು ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಅವುಗಳನ್ನು ಆಗಸ್ಟ್ ಮೊದಲ ವಾರ ನಡೆಸಲು ತೀರ್ಮಾನಿಸಿ, ಮೊದಲ ದಿನವಾದ ಸೋಮವಾರ ಮೊದಲ ಪರೀಕ್ಷೆ ನಡೆದಿತ್ತು. 1, 3, 5 ಹಾಗೂ 7ನೇ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಆಗಸ್ಟ್ 2ರಿಂದ ಹಾಗೂ 1, 3ನೇ ಸೆಮಿಸ್ಟರ್ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಆ.5ರಿಂದ ನಡೆಸಲು ನಿರ್ಧರಿಸಲಾಗಿತ್ತು.
    ಆದರೆ ಈಗ ಕೋವಿಡ್ ಮತ್ತೆ ಹೆಚ್ಚಾಗುತ್ತಿದೆ. ಮಂಗಳೂರು ವಿವಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಸರಗೋಡು ಜಿಲ್ಲೆಯಿಂದ ಆಗಮಿಸುತ್ತಿದ್ದು, ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ ಸಂಭಾವ್ಯ ಅಪಾಯ ತಪ್ಪಿಸಲು ಗಡಿಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಂಗಳೂರು ವಿವಿ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಅದರಂತೆ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕ ತಿಳಿಸಲಾಗುವುದು. ಅಲ್ಲದೆ ಮಂಗಳವಾರ ಆರಂಭಗೊಂಡ ಮೌಲ್ಯಮಾಪನ ಕಾರ್ಯವನ್ನೂ ಮುಂದೂಡಲಾಗುವುದು ಎಂದು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಪಿ.ಎಲ್.ಧರ್ಮ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    5 ಕಿ.ಮೀ. ವ್ಯಾಪ್ತಿಯ ಮದ್ಯದಂಗಡಿ ಬಂದ್
    ಕೇರಳ ಗಡಿಭಾಗದ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಲು ದ.ಕ ಜಿಲ್ಲಾಡಳಿತ ಆದೇಶಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ದಿನೇದಿನೆ ಹೆಚ್ಚುತ್ತಿದ್ದು, ಅಲ್ಲಿನವರು ಮದ್ಯ ಸೇವನೆಗೆ ದ.ಕ ಜಿಲ್ಲೆಯ ಗಡಿಭಾಗಗಳ ಮದ್ಯದಂಗಡಿಗಳನ್ನೇ ಅವಲಂಸಿರುವುದರಿಂದ ದ.ಕ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸಲು ಗಡಿಭಾಗದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ಪ್ರದೇಶಗಳಲ್ಲಿ ಆ.15ರವರೆಗೆ ಎಲ್ಲ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ. ಈ ನಿರ್ಬಂಧ ಜಾರಿಯಲ್ಲಿರುವ ವ್ಯಾಪ್ತಿಯ ವೈನ್‌ಶಾಪ್, ಬಾರ್‌ಗಳ ಮುಂದಿನ ಮತ್ತು ಹಿಂದಿನ ಬಾಗಿಲುಗಳಿಗೆ ಅಬಕಾರಿ ಇಲಾಖೆ ಮೊಹರು ಹಾಕಿ ಕಡ್ಡಾಯವಾಗಿ ಮುಚ್ಚಬೇಕು ಎಂದೂ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts