More

    ಸಾಲದೊಂದಿಗೆ ಕೇಂದ್ರ ಸರ್ಕಾರದ ಮೇಲೂ ಒತ್ತಡ

    ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಸಂಪನ್ಮೂಲ ಕೊರತೆ ನೀಗಿಸಿಕೊಳ್ಳಲು ಹಣಕಾಸು ಸಂಸ್ಥೆಗಳಿಂದ ಸಾಲ ಹಾಗೂ ಕೇಂದ್ರದ ನೆರವನ್ನು ದೊಡ್ಡ ಪ್ರಮಾಣದಲ್ಲಿ ಯಾಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ.

    ಯಡಿಯೂರಪ್ಪ ಮಂಡಿಸಲಿರುವ ತಮ್ಮ ಏಳನೇ ಬಜೆಟ್​ನ ಗಾತ್ರವನ್ನು 2.50 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮಾಡಬೇಕಾದರೆ ಸಂಪನ್ಮೂಲ ತೋರಿಸಬೇಕಾಗಿದೆ. ಅದಕ್ಕಾಗಿಯೇ ಸಾಲ ಮಾಡುವುದು ಹಾಗೂ ಕೇಂದ್ರದ ನೆರವನ್ನು ಕೇಳುವುದು ಸಿಎಂ ಮುಂದಿರುವ ಆಯ್ಕೆಯಾಗಿದೆ. ಮುಂದಿನ 5 ವರ್ಷ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಕಡಿಮೆಯಾಗುತ್ತದೆ. ಶೇ. 4.713 ಇರುವುದು, ಶೇ. 3.646ಕ್ಕೆ ಇಳಿಕೆಯಾಗುತ್ತದೆ. ಇದು ದೊಡ್ಡ ಪರಿಣಾಮ ಬೀರುವುದರಿಂದ ಕೇಂದ್ರಕ್ಕೆ ಮೊರೆ ಹೋಗುವುದು ಅನಿವಾರ್ಯವಾಗಿದೆ.

    ನೀರಾವರಿಯಲ್ಲಿ ಕ್ರಾಂತಿ: ರಾಜ್ಯದ ನೀರಾವರಿ ಯೋಜನೆಗಳಲ್ಲಿ ಕ್ರಾಂತಿ ಮಾಡುವ ಮೂಲಕ ತಮ್ಮ ಹೆಸರು ಉಳಿಸಿಕೊಳ್ಳುವುದು ಬಿಎಸ್​ವೈ ಕನಸು. ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಮುಗಿಸ ಬೇಕಾದರೆ ಸುಮಾರು 1.81 ಲಕ್ಷ ಕೋಟಿ ರೂ. ಅಗತ್ಯವಿದೆ. ರಾಜ್ಯದ ಸಂಪನ್ಮೂಲಗಳನ್ನಷ್ಟೇ ನೆಚ್ಚಿಕೊಂಡರೆ ಯೋಜನೆ ಮುಗಿಸಲು ಸಾಧ್ಯವಿಲ್ಲ.

    ಕೇಂದ್ರಕ್ಕೆ ಮನವಿ: ಕೇಂದ್ರ ಸರ್ಕಾರ ಹಿಂದೆ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡಿತ್ತು. ಆದ್ದರಿಂದ ಅಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು. ಅದೇ ಮಾದರಿಯಲ್ಲಿ ರಾಜ್ಯಕ್ಕೂ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.

    ಬಜೆಟ್ ಮಂಡಿಸಿದ ಮಾರನೇ ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪುತ್ರಿ ಮದುವೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿರುವ ಯಡಿಯೂರಪ್ಪ, ಪ್ರಧಾನಿ ಅವರನ್ನು ಭೇಟಿಯಾಗಿ ನೀರಾವರಿ ಯೋಜನೆಗಳಿಗಾಗಿ 50 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನೀಡುವಂತೆ ಕೋರಲಿದ್ದಾರೆ. ಕೇಂದ್ರ ನೆರವು ನೀಡಿದರೆ ನೆರೆಯ ಆಂಧ್ರಪ್ರದೇಶದಲ್ಲಿ ನೀರಾವರಿ ಯೋಜನೆಗಳು ತ್ವರಿತವಾಗಿ ಮುಗಿದಂತೆ ರಾಜ್ಯದಲ್ಲಿಯೂ ಮುಂದಿನ 3 ವರ್ಷಗಳಲ್ಲಿ ಮುಗಿಸುವುದು ಸಿಎಂ ಉದ್ದೇಶವಾಗಿದೆ. ಯುಕೆಪಿ ಮೂರನೇ ಹಂತ, ಮಹದಾಯಿ ಯೋಜನೆಗಳನ್ನು ಒಂದು ಹಂತಕ್ಕೆ ತರುವ ಉದ್ದೇಶವನ್ನು ಹೊಂದಿದ್ದು, ಯುಕೆಪಿ ಮೂರನೇ ಹಂತದ ಭೂ ಸ್ವಾಧೀನಕ್ಕೆ 30 ಸಾವಿರ ಕೋಟಿ ರೂ.ಗಳ ಅಗತ್ಯವಿದೆ.

    ಸಾಲದ ಸಾಧ್ಯತೆ: ಈಗಾಗಲೇ ರಾಜ್ಯ ಸರ್ಕಾರ 3.27 ಲಕ್ಷ ಕೋಟಿ ರೂ. ಸಾಲದ ಹೊರೆ ಎದುರಿಸುತ್ತಿದೆ. ಆದ್ದರಿಂದಲೇ ಹಣಕಾಸು ಇಲಾಖೆ ಅಧಿಕಾರಿಗಳು ಮತ್ತೆ ಸಾಲ ಮಾಡದಂತೆ ಒತ್ತಡ ತಂದಿದ್ದಾರೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಸಾಲ ಮಾಡದೆ ವಿಧಿ ಇಲ್ಲ. ಆದ್ದರಿಂದಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಣಕಾಸು ಸಂಸ್ಥೆಗಳಾದ ವಿಶ್ವಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್, ಜಪಾನ್ ಅಭಿವೃದ್ಧಿ ಬ್ಯಾಂಕ್, ನಬಾರ್ಡ್​ಗಳಿಂದ ಯೋಜನೆಗಳ ಆಧಾರದಲ್ಲಿ ಸಾಲ ಪಡೆಯಲು ಚಿಂತನೆ ನಡೆದಿದೆ. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಪ್ರಕಾರ ಜಿಎಸ್​ಡಿಪಿಯ ಶೇ.3 ಸಾಲ ಪಡೆಯಲು ಅವಕಾಶ ಇದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಶೇ. 2.6 ಸಾಲ ಮಾಡಲಾಗಿತ್ತು. ಈಗ ಶೇ.3 ಮಾಡಿದರೆ ಸುಮಾರು 54 ಸಾವಿರ ಕೋಟಿ ರೂ. ತನಕ ಸಾಲ ಮಾಡಲು ಅವಕಾಶ ಇದೆ. ಆದ್ದರಿಂದಲೇ ಆ ಬಗ್ಗೆ ಚರ್ಚೆ ನಡೆದಿದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ. ವಿಶ್ವಬ್ಯಾಂಕ್​ನಿಂದ ಬಹುಕೋಟಿ ರೂ.ಗಳ ಸುಜಾಲ ಜಲಾನಯನ ಯೋಜನೆ, ನೀರಾವರಿ ಯೋಜನೆಗಳಿಗೆ ಎಡಿಬಿ ಹಾಗೂ ನಬಾರ್ಡ್​ನಿಂದ ಕೃಷಿ, ಸಹಕಾರ ಹಾಗೂ ನೀರಾವರಿ ಕ್ಷೇತ್ರದ ಯೋಜನೆಗಳಿಗೆ 1,100 ಕೋಟಿ ರೂ. ಸಾಲ ಮಾಡಲು ಆಲೋಚನೆ ಮಾಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

    ಸಲಹೆಗೆ ಒಪ್ಪದ ಬಿಎಸ್​ವೈ

    ಆರ್ಥಿಕ ಸಂಕಷ್ಟ ಇರುವುದರಿಂದ ಬಜೆಟ್ ಗಾತ್ರವನ್ನು 2019-20ರಷ್ಟೇ ಉಳಿಸಿಕೊಳ್ಳಲು ಸಾಕಷ್ಟು ಸಲಹೆ ಬಂದಿದ್ದವು. ಇದರಿಂದ ಹೊರೆ ಆಗುವುದಿಲ್ಲ. ಹಿಂದೆ ಒಮ್ಮೆ ಈ ರೀತಿ ಮಾಡಲಾಗಿತ್ತು ಎಂದು ಸಿಎಂ ಅವರನ್ನು ಮನವೊಲಿಸಲು ಕೆಲ ಮಂತ್ರಿಗಳು ಹಾಗೂ ಅಧಿಕಾರಿಗಳು ಪ್ರಯತ್ನ ಮಾಡಿದ್ದರು. ಆದರೆ, ಅದಕ್ಕೆ ಸಿಎಂ ಸಮ್ಮತಿಸಲಿಲ್ಲ. ಬಜೆಟ್ ಗಾತ್ರ ಹಿಗ್ಗದಿದ್ದರೆ ತಪು್ಪ ಸಂದೇಶ ರವಾನೆಯಾಗುತ್ತದೆ ಎಂದು ಈ ರೀತಿಯ ಅಭಿಪ್ರಾಯಗಳನ್ನು ತಳ್ಳಿ ಹಾಕಿದರೆಂದು ಹೇಳಲಾಗಿದೆ.

    ಸಂಪನ್ಮೂಲ ಕೊರತೆಗೆ ಸಮಸ್ಯೆ ಏನು?

    ಇಡೀ ವಿಶ್ವವನ್ನೇ ಕಾಡಿರುವ ಆರ್ಥಿಕ ಹಿಂಜರಿತದ ಪರಿಣಾಮ ಕೇಂದ್ರದಿಂದ ಬರಬೇಕಾದ ಪಾಲು ಬಂದಿಲ್ಲರುವುದು ಒಂದೆಡೆಯಾದರೆ, ರಾಜ್ಯದಲ್ಲಿಯೂ ತೆರಿಗೆ ಸಂಗ್ರಹಣೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಕೇಂದ್ರದಿಂದ ಜಿಎಸ್​ಟಿ ಪಾಲು, ಜಿಎಸ್​ಟಿ ಪರಿಹಾರ ಸುಮಾರು 17 ಸಾವಿರ ಕೋಟಿ ರೂ.ಗಳಲ್ಲಿ 11 ಸಾವಿರ ಕೋಟಿ ರೂ. ಬಂದಿದೆ. ಅದೇ ರೀತಿ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳ ಪಾಲು ಸಹ ಬಾಕಿ ಇದೆ. 15 ಸಾವಿರ ಕೋಟಿ ರೂ.ಗಳಲ್ಲಿ ಅರ್ಧದಷ್ಟು ಬಿಡುಗಡೆಯಾಗಿಲ್ಲ. 15 ನೇ ಹಣಕಾಸು ಆಯೋಗ ವರ್ಷಕ್ಕೆ 10 ಸಾವಿರ ಕೋಟಿ ರೂ. ಕಡಿತ ಮಾಡುತ್ತಿದೆ. ಇದೆಲ್ಲದರ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಬಜೆಟ್​ಗೆ ಸಂಪನ್ಮೂಲ ಕ್ರೋಡೀಕರಣ ಮಾಡಬೇಕಾದ ಸಂದಿಗ್ಧ ಸ್ಥಿತಿ ನಿರ್ವಣವಾಗಿದೆ.

    ಯಾವ ಇಲಾಖೆಗೂ ಇಲ್ಲ ಹೆಚ್ಚುವರಿ ಮೊತ್ತ

    ಕೃಷಿ, ನೀರಾವರಿ, ಸಹಕಾರ, ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ 3-4 ಹೊಸ ಘೋಷಣೆ ಬಿಟ್ಟು ಬಹುತೇಕ ಇಲಾಖೆಗಳಲ್ಲಿ ಮುಂದುವರಿದ ಕಾರ್ಯಕ್ರಮಗಳಿಗೆ ಅನುದಾನದ ಹೊಂದಾಣಿಕೆ ಬಿಟ್ಟರೆ ಹೊಸ ಯೋಜನೆಗಳ ಜಾರಿ ಇಲ್ಲ. ಬಹುತೇಕ ಇಲಾಖೆಗಳಿಗೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನೀಡಿರುವ ಅನುದಾನದಲ್ಲಿಯೇ ಶೇ. 30 ಕಡಿತವಾಗುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ. ಇದರಿಂದಾಗಿಯೇ ಯಾವ ಸಚಿವರಿಗೂ ಆಸಕ್ತಿಯೇ ಇಲ್ಲದಂತಾಗಿದೆ.

    ಕರೊನಾ ಭೀತಿ

    ಚೀನಾದಲ್ಲಿ ಕರೊನಾ ರುದ್ರ ತಾಂಡವವಾಡಿದ್ದರಿಂದ ಅಲ್ಲಿನ ಆರ್ಥಿಕ ವ್ಯವಸ್ಥೆಯೇ ಕುಸಿತು ಹೋಗಿತ್ತು. ದೇಶದಲ್ಲಿಯೂ ಕರೊನಾ ವ್ಯಾಪಿಸಿದ್ದೇ ಅದರೆ ಸಂಪನ್ಮೂಲ ಕ್ರೋಡೀಕರಣದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದಲೇ ಅಧಿಕಾರಿಗಳಲ್ಲಿ ಆ ಭಯವೂ ಆವರಿಸಿರುವುದು ಸುಳ್ಳೇನು ಅಲ್ಲ.

    ರುದ್ರಣ್ಣ ಹರ್ತಿಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts