More

    ಗ್ಯಾರಂಟಿ ಯೋಜನೆ ಸೊಸೆಗಾ, ಅತ್ತೆಗಾ ? ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಲೇವಡಿ 

    ಕುಣಿಗಲ್: ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿ ಗ್ಯಾರಂಟಿ ಕಾಂಗ್ರೆಸ್‌ನ ಯೋಜನೆ, ಅತ್ತೆ ಸೊಸೆಯಂದಿರ ನಡುವೆ ಜಗಳ ಹಚ್ಚುವ ಯೋಜನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದರು.

    ಪಟ್ಟಣದ ಬಯಲು ರಂಗ ಮಂದಿರದಲ್ಲಿ ಸೋಮವಾರ ಜೆಡಿಎಸ್ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತ ಸಮಾವೇಶದಲ್ಲಿ ಮಾತನಾಡಿದರು.

    ಅಧಿಕಾರಕ್ಕೆ ಬರಲು ಕಾಂಗ್ರೆಸ್ 200 ಯೂನಿಟ್ ಪುಕ್ಕಟೆ ವಿದ್ಯುತ್, 10 ಕೆಜಿ ಉಚಿತ ಅಕ್ಕಿ ಹಾಗೂ ಮನೆ ಯಜಮಾನಿಗೆ ಎರಡು ಸಾವಿರ ರೂ ನೀಡುವ ಗ್ಯಾರಂಟಿ ಕಾರ್ಡ್‌ಗಳನ್ನು ಜನರಿಗೆ ನೀಡಿದೆ. ಈ ಯೋಜನೆ ಮನೆಯ ಸೊಸೆಗಾ ಅಥವಾ ಅತ್ತೆಗಾ ಎಂದು ಸ್ಪಷ್ಟಪಡಿಸಬೇಕು ಎಂದರು.

    ಜೆಡಿಎಸ್ ಅಧಿಕಾರಕ್ಕೆ ಬಂದರೆ ಕಿಡ್ನಿ ಕಳೆದುಕೊಂಡ ರೋಗಿಯ ಚಿಕಿತ್ಸೆಗೆ 50 ಲಕ್ಷ, ಉಚಿತ ಶಿಕ್ಷಣ, ವಿಧವೆಯರಿಗೆ ಮೂರು ಸಾವಿರ, ಹಿರಿಯ ನಾಗರಿಕರಿಗೆ 5 ಸಾವಿರ ಸೇರಿದಂತೆ ಮೊದಲಾದ ಜನಪರ ಯೋಜನೆಗಳನ್ನು ಜಾರಿಗೆ ತರುವುದು ಉದ್ದೇಶವಾಗಿದೆ ಎಂದರು.

    ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸಂಶುಲ್ಲಾಖಾನ್, ಮಾಜಿ ಶಾಸಕರಾದ ಡಿ.ನಾಗರಾಜಯ್ಯ, ಎಂ.ಟಿ.ಕೃಷ್ಣಪ್ಪ, ಬೆಂಗಳೂರು ಬಿಬಿಎಂಪಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಇಮ್ರಾನ್‌ಪಾಷ, ಜಿಲ್ಲಾಧ್ಯಕ್ಷ ಆಂಜನಪ್ಪ, ಜಿ.ಪಂ ಮಾಜಿ ಅಧ್ಯಕ್ಷ ಡಾ.ರವಿ, ತಾ.ಪಂ ಮಾಜಿ ಅಧ್ಯಕ್ಷರಾದ ಸುಭಾನ್‌ಖುರೇಷಿ, ಹರೀಶ್‌ನಾಯ್ಕ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಎನ್.ಜಗದೀಶ್, ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಎಲ್.ಹರೀಶ್, ಆಯಿಷಾಬಿ ಇದ್ದರು.

    ಕುಮಾರಸ್ವಾಮಿ ಸಿಎಂ ಖಚಿತ: ಟಿಪ್ಪು ಜಯಂತಿ ಮುಸ್ಲಿಂ ಜನಾಂಗ ಮಾಡುವ ಹಾಗೆ ಇಲ್ಲ, ಆದರೂ ಕಾಂಗ್ರೆಸ್‌ನವರು ಟಿಪ್ಪು ಜಯಂತಿಯನ್ನು ಅವರ ಅಧಿಕಾರ ಅವಧಿಯಲ್ಲಿ ಮಾಡಿ ಹಿಂದು, ಮುಸ್ಲಿಮರ ನಡುವೆ ವೈಮನಸ್ಸು ಉಂಟು ಮಾಡಿ ಕಲಹಕ್ಕೆ ಕಾರಣರಾಗಿದ್ದಾರೆ, ಜಮೀರ್ ಅಹ್ಮದ್ ಸೇರಿ ಮೊದಲಾದ ಮುಸ್ಲಿಂ ನಾಯಕರನ್ನು ರಾಜಕೀಯಕ್ಕೆ ತಂದವನು ನಾನು, ಅವರು ಜೆಡಿಎಸ್‌ನಲ್ಲಿ ಎಲ್ಲ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್‌ನಲ್ಲಿದ್ದಾರೆ, ಕಾಂಗ್ರೆಸ್‌ನವರು ಏನೇ ಆಮಿಷಗಳನ್ನು ಒಡ್ಡಿದರೂ, ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಅವರು ನೂರಕ್ಕೆ ನೂರರಷ್ಟು ಮುಖ್ಯಮಂತ್ರಿಯಾಗುವುದು ಖಚಿತ ಎಂದು ಸಿ.ಎಂ.ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.

    ಸಿದ್ದರಾಮಯ್ಯನನ್ನು ಗೆಲ್ಲಿಸಿದ್ದು ನಾನು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಸ್ಲಿಮರನ್ನು ಗೌರವದಿಂದ ಕಾಣುತ್ತಿಲ್ಲ, ಸಿದ್ದರಾಮಯ್ಯ ಅವರನ್ನು ನಾನು ಬಾದಾಮಿ ಕ್ಷೇತ್ರದಲ್ಲಿ ನಿಲ್ಲಿಸಿ 900 ಮತಗಳಿಂದ ಗೆಲ್ಲಿಸಿದೆ. ಅವರಿಗೆ ಮೇಕಪ್ ಮಾಡಿದವನು ನಾನೇ, ಆದರೆ ನಿನ್ನನ್ನು ಎಂಎಲ್‌ಸಿ ಮಾಡಿರುವುದು ದೊಡ್ಡದು ಎಂದು ಸಿದ್ದರಾಮಯ್ಯ ಹೇಳಿದರು. ರಾಜೀನಾಮೆ ಪತ್ರ ಬರೆದು ಅವರ ಮುಖದ ಮೇಲೆ ಎಸೆದು ಬಂದೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.

    ಸಂಕಷ್ಟದಲ್ಲಿ ರೈತ: ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಗೋಮಾಂಸ ಬ್ಯಾನ್ ಮಾಡಿದೆ, ಆದರೆ ಗೋವಾದಲ್ಲಿ ಏಕೆ ರದ್ದು ಮಾಡಿಲ್ಲ ಎಂದು ಪ್ರಶ್ನಿಸಿದ ಇಬ್ರಾಹಿಂ, ವಯಸ್ಸಾದ ಹಸುಗಳನ್ನು ರೈತ ಇಟ್ಟುಕೊಂಡು ಏನು ಮಾಡಬೇಕು, ನಿಷ್ಪ್ರಯೋಜಕ ಜಾನುವಾರುಗಳನ್ನು ಅರ್ಧ ಬೆಲೆಗೂ ಸರ್ಕಾರ ಖರೀದಿಸುತ್ತಿಲ್ಲ, ಇತ್ತ ರೈತರು ಹೊಸದಾಗಿ ಹಸುಗಳನ್ನು ಕೊಳ್ಳದಂತಹ ಪರಿಸ್ಥಿತಿಗೆ ಬಂದು ಆರು ಸಾವಿರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

    2023ರ ವಿಧಾನಸಭಾ ಚುನಾವಣೆ ಅಲ್ಪಸಂಖ್ಯಾತರ ಅಳಿವು, ಉಳಿವಿನ ಚುನಾವಣೆಯಾಗಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರೆ ನಜ್ಮಾನಝೀರ್ ಹೇಳಿದರು.
    2018ರ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಸುಳ್ಳಿನ ಸರಮಾಲೆ ಹಬ್ಬಿಸಿ ಮುಸ್ಲಿಂ ಮತಗಳನ್ನು ಪಡೆದುಕೊಂಡು, ಗೆದ್ದ ಬಳಿಕ ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಕಾಂಗ್ರೆಸ್‌ನ ಕೆಲ ಶಾಸಕರನ್ನು ಬಿಜೆಪಿಗೆ ಕಳಿಸಿ ಕಾಂಗ್ರೆಸ್ ಬಿಜೆಪಿಯ ಬಿ ಟೀಮ್ ಆಗಿದೆ, ಕಾಂಗ್ರೆಸ್‌ನ ಕುತಂತ್ರದಿಂದಾಗಿ ಮುಸ್ಲಿಂ ಹೆಣ್ಣು ಮಕ್ಕಳು ತಲೆ ಮೇಲೆ ಹಾಕಿಕೊಳ್ಳುವ ಬಟ್ಟೆಗೂ ಅತಂತ್ರವಾಗಿದೆ, ಇದಕ್ಕೆ ತಕ್ಕ ಪಾಠವನ್ನು ಮುಂದಿನ ಚುನಾವಣೆಯಲ್ಲಿ ಮುಸ್ಲಿಮರು ಕಲಿಸಬೇಕು ಎಂದು ಹೇಳಿದರು,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts