More

    ಸಂರಕ್ಷಣೆ ಕಾಣಲಿದೆ ಮೈಸೂರಿನ ಪಾರಂಪರಿಕ ಸ್ವಾಗತಕಮಾನು

    ಮೈಸೂರು: ನಗರದ ಸರ್ಕಾರಿ ಅತಿಥಿಗೃಹ ಮತ್ತು ಮಹಾರಾಣಿ ಮಹಿಳಾ ಕಾಲೇಜಿನ ಪಾರಂಪರಿಕ ಸ್ವಾಗತ ಕಮಾನು, ವೀರನಗೆರೆಯ ಪಾರಂ ಪರಿಕ ಕಾವಲುಗೋಪುರದ ಕಾಯಕಲ್ಪ ಕಾಮಗಾರಿ ಮತ್ತು ಲಲಿತಮಹಲ್ ರಸ್ತೆಯ ಪಾರಂಪರಿಕ ಸ್ವಾಗತ ದ್ವಾರದ ಸ್ಥಳಾಂತರ ಕಾಮಗಾರಿ ಕೈಗೊಳ್ಳಲು ಜಿಲ್ಲಾ ಪಾರಂಪರಿಕ ಸಮಿತಿ ಸಭೆ ಅನುಮೋದನೆ ನೀಡಿದೆ.

    ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ನಗರದ ಸರ್ಕಾರಿ ಅತಿಥಿ ಗೃಹಕ್ಕೆ ಸೇರಿದ ಸ್ವಾಗತ ಕಮಾನಿನ ದುಸ್ಥಿತಿಯ ಕುರಿತು ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಜು.26 ರ ಸಂಚಿಕೆಯಲ್ಲಿ ‘ಕುದುರೆ ಲಾಯವಾದ ಸ್ವಾಗತ ಕಮಾನು’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ವರದಿಗೆ ಸ್ಪಂದಿಸಿದ ಮೇಯರ್ ಶಿವಕುಮಾರ್, ಸರ್ಕಾರಿ ಅತಿಥಿ ಗೃಹಕ್ಕೆ ಸೇರಿದ ಸ್ವಾಗತ ಕಮಾನಿನ ಜತೆಗೆ ಮಹಾರಾಣಿ ಮಹಿಳಾ ಕಾಲೇಜಿನಲ್ಲಿರುವ ಪಾರಂಪರಿಕ ಸ್ವಾಗತ ಕಮಾನು, ವೀರನಗೆರೆಯಲ್ಲಿರುವ ಪಾರಂಪರಿಕ ಕಾವಲು ಗೋಪುರದ ಕಾಯಕಲ್ಪ ನೀಡಲು ಹಾಗೂ ಲಲಿತಮಹಲ್ ರಸ್ತೆಯ ಸ್ವಾಗತ ದ್ವಾರ ಸ್ಥಳಾಂತರಿಸುವ ನಿರ್ಧಾರ ಕೈಗೊಂಡರು.

    ಪಾರಂಪರಿಕ ಕಟ್ಟಡಗಳ ಕಾಯಕಲ್ಪ ಹಾಗೂ ಸ್ಥಳಾಂತರ ಕಾಮಗಾರಿಗೆ ಒಟ್ಟು 2.75 ಕೋಟಿ ರೂ.ಮೊತ್ತದ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ನಗರ ಪಾಲಿಕೆ ಸಿದ್ಧಪಡಿಸಿ ಜಿಲ್ಲಾ ಪಾರಂಪರಿಕ ಸಮಿತಿಗೆ ಕಳುಹಿಸಿಕೊಟ್ಟಿತ್ತು. ಈ ಎಲ್ಲ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿರುವ ಹಿನ್ನೆಲೆಯಲ್ಲಿ ಸಮಿತಿ ಒಪ್ಪಿಗೆ ಪಡೆಯದೆ ಕಾಮಗಾರಿ ಕೈಗೊಳ್ಳಲು ಅವಕಾಶ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಾರಂಪರಿಕ ಸಮಿತಿಗೆ ಒಪ್ಪಿಗೆಗೋಸ್ಕರ ಪಾಲಿಕೆ ಕಾಯುತಿತ್ತು. ಸೋಮವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪಾರಂಪರಿಕ ಸಮಿತಿ ಸಭೆಯಲ್ಲಿ ಕಾಮಗಾರಿಗಳಿಗೆ ಒಪ್ಪಿಗೆ ಸೂಚಿಸಲಾಯಿತು. ಇದೀಗ ಒಂದು ವಾರದ ಅಲ್ಪಾವಧಿಯ ಟೆಂಡರ್ ಕರೆದು ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಿ ದಸರೆಯೊಳಗೆ ಪೂರ್ಣಗೊಳಿಸುವ ಗುರಿಯನ್ನು ನಗರ ಪಾಲಿಕೆ ಹೊಂದಿದೆ.

    ಕಟ್ಟಡ ಸ್ಥಳಾಂತರ

    ಲಲಿತಮಹಲ್ ಪ್ಯಾಲೆಸ್‌ಗೆ ತೆರಳುವ ಮಾರ್ಗದಲ್ಲಿರುವ ಪಾರಂಪರಿಕ ಸ್ವಾಗತ ದ್ವಾರದಿಂದ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಪಾರಂಪರಿಕ ಸ್ವಾಗತ ದ್ವಾರವನ್ನು ಪಕ್ಕಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಸ್ವಾಗತದ್ವಾರ ಸ್ಥಳಾಂತರದಿಂದ ಒಟ್ಟು 30 ಅಡಿಗಳಷ್ಟು ರಸ್ತೆ ವಿಸ್ತರಣೆಯಾಗಲಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.

    ಸೆಲ್ಫಿ ಪಾಯಿಂಟ್

    ನಗರದ ವಿನೋಬಾ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜು ಆವರಣದಲ್ಲಿರುವ ಪಾರಂಪರಿಕ ಸ್ವಾಗತ ಕಮಾನು ದುಸ್ಥಿತಿಯಲ್ಲಿದ್ದು, ಈ ಸ್ವಾಗತ ಕಮಾನಿಗೆ ಕಾಯಕಲ್ಪ ನೀಡಿ ಸ್ವಾಗತ ಕಮಾನಿನ ಬಳಿಯಲ್ಲಿ ಮೈಸೂರು ಸಂಸ್ಥಾನದ ಮಹಾರಾಣಿಯಾಗಿದ್ದ ಕೆಂಪನಂಜಮ್ಮಣಿ ವಾಣಿವಿಲಾಸ ಸನ್ನಿಧಾನ ಅವರ ಪ್ರತಿಮೆಯೊಂದನ್ನು ನಿರ್ಮಿಸಿ ಆ ಜಾಗವನ್ನು ಸೆಲ್ಫಿ ಪಾಯಿಂಟ್‌ಆಗಿ ಪರಿವರ್ತಿಸಲಾಗುವುದು.

    ನಗರದ ಸರ್ಕಾರಿ ಅತಿಥಿ ಗೃಹದ ಸ್ವಾಗತ ಕಮಾನಿನ ಕಟ್ಟಡವನ್ನು ಕೆಲವರು ಕುದುರೆ ಲಾಯವಾಗಿ ಪರಿವರ್ತಿಸಿದ್ದರು. ಕುದುರೆಗಳನ್ನು ಕಟ್ಟಿಹಾಕಿದ ಪರಿಣಾಮ ಗೋಡೆಗಳು ಕಿತ್ತುಬಂದು ಕಟ್ಟಡ ಸಂಪೂರ್ಣ ದುಸ್ಥಿತಿಗೆ ತಲುಪಿದೆ. ಈ ಸ್ವಾಗತ ಕಮಾನು ಇದೀಗ ಕಾಯಕಲ್ಪ ಕಾಣಲಿದೆ. ಸ್ವಾಗತ ಕಮಾನುಗಳ ಕಾಯಕಲ್ಪ ಕಾಮಗಾರಿಯ ಬಳಿಕ ಅವುಗಳಿಗೆ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts