More

    ಸಂಕಷ್ಟದ ನಡುವೆಯೂ ಭಾರತ ವೇಗದ ಓಟ: ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ

    ಏಪ್ರಿಲ್ 1ರಂದು ಪ್ರಾರಂಭವಾಗಲಿರುವ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 6ರಿಂದ 6.8ರ ನಡುವೆ ಇರಲಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ. ರಫ್ತಿನ ಮೇಲೆ ಜಾಗತಿಕ ಮಂದಗತಿಯ ಪರಿಣಾಮ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜಿಸಲಾದ ಶೇ. 7ರ ಬೆಳವಣಿಗೆಗಿಂತ ಇದು ಕಡಿಮೆ ಇರಲಿದೆ. ಇದರ ಹೊರತಾಗಿಯೂ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಬೆಳವಣಿಗೆ ವೇಗವಾಗಿಯೇ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಬುಧವಾರ ಮಂಡಿಸಲಿರುವ ಬಜೆಟ್​ಗೆ ಮುಂಚಿತವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸಿದರು. ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕ ಸ್ಥಿತಿಗತಿಯ ಕುರಿತು ಸರ್ಕಾರದ ಮುನ್ನೋಟ ಹಾಗೂ ವಿಶ್ಲೇಷಣೆಗಳನ್ನು ಒಳಗೊಂಡಿರುತ್ತದೆ.

    ದೇಶದ ಹಿತಾಸಕ್ತಿಗೆ ಸರ್ಕಾರದ ಆದ್ಯತೆ

    ನವದೆಹಲಿ: ದೇಶವನ್ನು ಸ್ವಾವಲಂಬಿಯ ನ್ನಾಗಿ ಮಾಡಲು ಸರ್ವ ಪ್ರಯತ್ನ ಮಾಡುತ್ತಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಗ್ರ ಪ್ರಾಶಸ್ಱ ನೀಡಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುಮು ಮಂಗಳವಾರ ಹೇಳಿದ್ದಾರೆ. ಬಜೆಟ್ ಅಧಿವೇಶನದ ಮೊದಲ ದಿನ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮುಮು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಅನೇಕ ಉಪಕ್ರಮಗಳನ್ನು ವಿವರಿಸಿದರು.

    ಇದು ರಾಷ್ಟ್ರಪತಿಯಾಗಿ ಮುಮು ಅವರ ಚೊಚ್ಚಲ ಸಂಸತ್ ಭಾಷಣವಾಗಿದೆ. ‘25 ವರ್ಷಗಳ ಅಮೃತ ಕಾಲವು ಸ್ವಾತಂತ್ರ್ಯದ ಸ್ವರ್ಣ ಶತಮಾನ ವಾಗಿದೆ ಮತ್ತು ಅಭಿವೃದ್ಧಿಹೊಂದಿದ ಭಾರತವನ್ನು ಕಟ್ಟುವ ಅವಧಿಯಾಗಿದೆ. ಈ 25 ವರ್ಷಗಳು ನಾವೆಲ್ಲರೂ ಮತ್ತು ಪ್ರತಿ ಪ್ರಜೆಯೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಪ್ರದರ್ಶಿಸುವ ಕಾಲವಾಗಿದೆ’ ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟರು.

    ಸರ್ಕಾರದ ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಅನೇಕ ಧನಾತ್ಮಕ ಬದಲಾವಣೆಗಳನ್ನು ಕಂಡಿದೆ. ಇಂದು ಪ್ರತಿಯೊಬ್ಬ ಭಾರತೀಯರ ಆತ್ಮವಿಶ್ವಾಸ ಉತ್ತುಂಗದಲ್ಲಿದೆ ಹಾಗೂ ಭಾರತ ಕುರಿತ ಜಾಗತಿಕ ದೃಷ್ಟಿಕೋನ ಬದಲಾಗಿದ್ದು ಇದುವೇ ಅತಿ ದೊಡ್ಡ ಬದಲಾವಣೆ ಎಂದು ಹೇಳಿದರು.

    ಭ್ರಷ್ಟಾಚಾರ ದೊಡ್ಡ ವೈರಿ: ಭ್ರಷ್ಟಾಚಾರವು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಅತಿ ದೊಡ್ಡ ವೈರಿ ಎಂಬುದು ತಮ್ಮ ಸರ್ಕಾರದ ಸ್ಪಷ್ಟ ಅಭಿಪ್ರಾಯವಾಗಿದೆ. ಆದ್ದರಿಂದಲೇ ಕೆಲವು ವರ್ಷಗಳಿಂದ ಈ ಪಿಡುಗಿನ ವಿರುದ್ಧ ಸತತ ಹೋರಾಟ ನಡೆಸಲಾಗುತ್ತಿದೆ ಎಂದ ಮುಮು, ಪ್ರಾಮಾಣಿಕರನ್ನು ಗೌರವಿಸುವುದನ್ನು ನಾವು ಖಾತರಿಪಡಿಸಿದ್ದೇವೆ ಎಂದರು.

    ಪ್ರಮುಖ ಸಾಧನೆಗಳು: ಆದಾಯ ತೆರಿಗೆ ವಿವರ (ಐಟಿಆರ್) ಸಲ್ಲಿಕೆ ವ್ಯವಸ್ಥೆಯ ಸರಳೀಕರಣ, ಜಿಎಸ್​ಟಿ ಮೂಲಕ ತೆರಿಗೆದಾರರ ಘನತೆಗೆ ಖಾತರಿ, ಜನ ಧನ್- ಆಧಾರ್- ಮೊಬೈಲ್​ನಿಂದ ಒಂದು ರಾಷ್ಟ್ರ- ಒಂದು ರೇಷನ್ ಕಾರ್ಡ್ ವರೆಗೆ ಬದಲಾವಣೆ ಮಾಡಿ ಹುಸಿ ಫಲಾನುಭವಿಗಳನ್ನು ತೆಗೆದು ಹಾಕಿದ್ದು ಮೊದಲಾದವು ತಮ್ಮ ಸರ್ಕಾರದ ಕೆಲವು ಪ್ರಮುಖ ಸಾಧನೆಗಳು ಎಂದು ವಿವರಿಸಿದರು. ಡಿಜಿಟಲ್ ಇಂಡಿಯಾ ಸ್ವರೂಪದಿಂದ ನೇರ ಫಲಾನುಭವಿಗೆ ವರ್ಗಾವಣೆಯಿಂದ (ಡಿಬಿಟಿ) ದೇಶ ಒಂದು ಕಾಯಂ ಹಾಗೂ ಪಾರದರ್ಶಕ ವ್ಯವಸ್ಥೆಯನ್ನು ಸೃಷ್ಟಿಸಿದೆ ಎಂದರು.

    ವಿರೋಧ ಪಕ್ಷ ಟೀಕೆ: ರಾಷ್ಟ್ರಪತಿ ಭಾಷಣದಲ್ಲಿ ಹೊಸದೇನೂ ಇಲ್ಲ. ಸರ್ಕಾರ ಹೇಳಬೇಕೆಂದಿರುವುದನ್ನು ಅವರು ಹೇಳಿದ್ದಾರೆ, ಅಷ್ಟೇ ಎಂದು ರಾಜ್ಯಸಭೆಯ ಪ್ರತಿಪಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರೆ, ರಾಷ್ಟ್ರಪತಿಯವರ ಮೂಲಕ ಬಿಜೆಪಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಆರೋಪಿಸಿದ್ದಾರೆ.

    ಮೊದಲ ಹಂತದ ಅಧಿವೇಶನದ ಅವಧಿ ಇಳಿಕೆ?: ಬಜೆಟ್ ಮೊದಲ ಹಂತದ ಅಧಿವೇಶನ ಫೆ. 13ರವರೆಗೆ ನಿಗದಿಯಾಗಿದ್ದರೂ ಅದು ಫೆ. 10ಕ್ಕೆ ಮೊಟಕುಗೊಳ್ಳುವ ಸಾಧ್ಯತೆ ಇದೆ. ಸಂಸದೀಯ ಕಲಾಪ ಸಮಿತಿ ಸಭೆಯಲ್ಲಿ ವಿರೋಧ ಪಕ್ಷಗಳು ಈ ಒತ್ತಾಯ ಮಾಡಿದ್ದು, ಇದನ್ನು ಸ್ಪೀಕರ್ ಓಂ ಬಿರ್ಲಾ ಪರಿಶೀಲಿಸುವುದಾಗಿ ಹೇಳಿದ್ದಾರೆ. ಫೆ. 11 ಮತ್ತು 12 ವಾರಾಂತ್ಯದ ದಿನವಾಗಿರುವುದರಿಂದ ಅಧಿವೇಶನ ಇರುವುದಿಲ್ಲ. ಹೀಗಾಗಿ ಫೆ. 10ಕ್ಕೆ ಅಧಿವೇಶನ ಮುಗಿಸುವಂತೆ ವಿರೋಧ ಪಕ್ಷಗಳು ಕೋರಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

    ಕೋವಿಡ್, ಯುದ್ಧದ ಸವಾಲಿಗೆ ಸ್ಪಂದನೆ: ಕೋವಿಡ್ ಸಾಂಕ್ರಾಮಿಕದಿಂದ ಭಾರತ ಚೇತರಿಸಿಕೊಂಡಿರುವುದು ತುಲನಾತ್ಮಕವಾಗಿ ತ್ವರಿತವಾಗಿದೆ. ವ್ಯಾಪಕ ದೇಶೀಯ ಬೇಡಿಕೆ, ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳದಿಂದ ಮುಂದಿನ ಆರ್ಥಿಕ ಬೆಳವಣಿಗೆಗೆ ಬೆಂಬಲ ದೊರೆಯಲಿದೆ. ಭಾರತದ ಆರ್ಥಿಕ ಸ್ಥಿತಿಸ್ಥಾಪಕತ್ವವು ರಷ್ಯಾ-ಯೂಕ್ರೇನ್ ಸಂಘರ್ಷದಿಂದ ಉಂಟಾದ ಬಾಹ್ಯ ಅಸಮತೋಲನವನ್ನು ತಗ್ಗಿಸುವ ಸವಾಲನ್ನು ತಡೆದುಕೊಳ್ಳಲು ಸಹಾಯ ಮಾಡಿದೆ. ವಿದೇಶಿ ಹೂಡಿಕೆ ವಾಪಸಾತಿಯ ಹಿನ್ನೆಲೆಯಲ್ಲಿಯೂ 2022ನೇ ಸಾಲಿನಲ್ಲಿ ಭಾರತದ ಷೇರು ಮಾರುಕಟ್ಟೆ ಧನಾತ್ಮಕ ಪ್ರತಿಫಲವನ್ನೇ ನೀಡಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

    ರೂಪಾಯಿ ಮೌಲ್ಯ ಮತ್ತು ಚಾಲ್ತಿ ಖಾತೆ ಕಳವಳ: ಎರವಲು ವೆಚ್ಚವು ದೀರ್ಘಕಾಲ ಅಧಿಕವಾಗಿಯೇ ಉಳಿಯಬಹುದಾಗಿದೆ. ಅಮೆರಿಕದ ಫೆಡರಲ್ ಬ್ಯಾಂಕ್​ನಿಂದ ಬಡ್ಡಿದರದಲ್ಲಿ ಮತ್ತಷ್ಟು ಹೆಚ್ಚಳದ ಸಾಧ್ಯತೆಯಿಂದ ರೂಪಾಯಿ ಮೌಲ್ಯ ಕುಸಿತದ ಸವಾಲು ಹಾಗೆಯೇ ಮುಂದುವರಿಯಬಹುದು. ಜಾಗತಿಕವಾಗಿ ಸರಕುಗಳ ಬೆಲೆಗಳು ಉನ್ನತ ಮಟ್ಟದಲ್ಲಿ ಉಳಿಯುವುದರಿಂದ ಚಾಲ್ತಿ ಖಾತೆ ಕೊರತೆ (ಸಿಎಡಿ) ಹಾಗೆಯೇ ಅಧಿಕ ಪ್ರಮಾಣದಲ್ಲಿ ಮುಂದುವರಿಯಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಸಿಎಡಿ ಮತ್ತಷ್ಟು ಹೆಚ್ಚಳ ಕಂಡರೆ ಅಮೆರಿಕದ ಡಾಲರ್ ಎದುರು ರೂಪಾಯಿ ಮತ್ತಷ್ಟು ಅಪಮೌಲ್ಯ ಗೊಳ್ಳಬಹುದು. ಒಟ್ಟಾರೆ ಬಾಹ್ಯ ಪರಿಸ್ಥಿತಿಯನ್ನು ನಿರ್ವಹಿಸಬಹುದಾಗಿದೆ. ಭಾರತವು ಸಿಎಡಿಗೆ ಹಣಕಾಸು ಒದಗಿಸಲು ಮತ್ತು ರೂಪಾಯಿ ಚಂಚಲತೆಯನ್ನು ನಿರ್ವಹಿಸಲು ವಿದೇಶಿ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಲು ಸಾಕಷ್ಟು ವಿದೇಶಿ ವಿನಿಮಯ ಮೀಸಲು ಹೊಂದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಮಂಡಿಸಿದ ಸಮೀಕ್ಷೆ ವಿವರಿಸಿದೆ.

    ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತವು ಮುಂದಿನ ಹಣಕಾಸು ವರ್ಷದಲ್ಲಿ ಮುಂದುವರಿಯುತ್ತದೆ. ಜಾಗತಿಕವಾಗಿ ತಲೆದೋರುವ ಅಸಾಧಾರಣ ಸವಾಲುಗಳನ್ನು ಎದುರಿಸುವಲ್ಲಿ ಭಾರತ ಉತ್ತಮವಾಗಿದೆ. ತೈಲ ಬೆಲೆಗಳು ಪ್ರತಿ ಬ್ಯಾರೆಲ್​ಗೆ 100 ಡಾಲರ್​ಗಿಂತ ಕಡಿಮೆ ಇರುವವರೆಗೂ ಯೋಜಿತ ಬೆಳವಣಿಗೆ ದರವು ಅಡೆತಡೆಯಿಲ್ಲದೆ ಉಳಿಯುತ್ತದೆ.

    | ಅನಂತ ನಾಗೇಶ್ವರನ್ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ

    ಭಾರತದ ಜಿಡಿಪಿ ಶೇ. 6 ಐಎಂಎಫ್ ಅಂದಾಜು: 2023ನೇ ವರ್ಷದಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಗೆ ಅರ್ಧದಷ್ಟು ಕೊಡುಗೆಯನ್ನು ಭಾರತ ಹಾಗೂ ಚೀನಾ ದೇಶಗಳು ನೀಡಲಿವೆ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳ ಪಾಲು ಇದರಲ್ಲಿ ಶೇ. 10ರಷ್ಟು ಮಾತ್ರ ಇರಲಿದೆ ಎಂದು ಅಂತರರಾಷ್ಟ್ರೀಯ ಹಣ ಕಾಸು ನಿಧಿ (ಐಎಂಎಫ್) ಹೇಳಿದೆ. ಜಾಗತಿಕ ಆರ್ಥಿಕ ನೋಟದ ಪರಿಷ್ಕೃತ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದ ಐಎಂಎಫ್, ಜಾಗತಿಕ ಆರ್ಥಿಕ ಬೆಳವಣಿಗೆಯು 2022ರಲ್ಲಿನ ಶೇ. 3.4ರಿಂದ 2023ರಲ್ಲಿ ಶೇ. 2.9ಕ್ಕೆ ಕುಸಿಯಲಿದೆ ಹಾಗೂ 2024ರಲ್ಲಿ ಶೇ. 3.1ಕ್ಕೆ ತಲುಪಲಿದೆ ಎಂದು ಹೇಳಿದೆ. ಭಾರತವು ಶೇ. 6ರಷ್ಟು ಬೆಳವಣಿಗೆಯನ್ನು ಮುಂದುವರಿಸಲಿದೆ. ಚೀನಾ ದೇಶವು ಶೇ. 5ರಷ್ಟು ಪ್ರಗತಿ ದಾಖಲಿಸಿದೆ ಎಂದು ಅದು ಹೇಳಿದೆ. ನಾವು ಭಾರತ ಹಾಗೂ ಚೀನಾ ಎರಡನ್ನೂ ಕೂಡಿನೋಡಿದರೆ 2023ರಲ್ಲಿ ಜಗತ್ತಿನ ಆರ್ಥಿಕ ಬೆಳವಣಿಗೆಗೆ ಈ ಎರಡೂ ರಾಷ್ಟ್ರಗಳ ಪಾಲು ಶೇ. 50ರಷ್ಟು ಆಗಲಿದೆ. ಇದೊಂದು ಬಹುದೊಡ್ಡ ಕೊಡುಗೆಯಾಗಲಿದೆ ಎಂದು ಐಎಂಎಫ್​ನ ಸಂಶೋಧನಾ ವಿಭಾಗದ ನಿರ್ದೇಶಕ ಪಿಯರ್ ಆಲಿವಿರ್ ಗೌರಿಂಚಾಸ್ ಹೇಳಿದ್ದಾರೆ.

    ಸಮೀಕ್ಷೆ ಮುಖ್ಯಾಂಶಗಳು

    • ಜಗತ್ತಿನಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿಯುತ್ತದೆ.
    • ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಆರ್ಥಿಕ ಸವಾಲನ್ನು ಅಸಾಧಾರಣ ರೀತಿಯಲ್ಲಿ ಎದುರಿಸಿದೆ.
    • ಭಾರತದ ಆರ್ಥಿಕತೆ ಪ್ರಸ್ತುತ ಹಣಕಾಸು ವರ್ಷದಲ್ಲಿ ಶೇ. 7 (ಅಂದಾಜು) ಮತ್ತು 2021-22 ರಲ್ಲಿ ಶೇ. 8.7 ಇತ್ತು. ಜಾಗತಿಕ ಆರ್ಥಿಕ, ರಾಜಕೀಯ ಪರಿಸ್ಥಿತಿ ಅವಲಂಬಿಸಿ 2023-24ರ ಹಣಕಾಸು ವರ್ಷದಲ್ಲಿ ನಿಜವಾದ ಜಿಡಿಪಿ ಬೆಳವಣಿಗೆ ಶೇ. 6-6.8ರ ವ್ಯಾಪ್ತಿಯಲ್ಲಿರಲಿದೆ.
    • ಮಾರುಕಟ್ಟೆ ದರದಲ್ಲಿ ಜಿಡಿಪಿ (ನಾಮಿನಲ್ ಜಿಡಿಪಿ) ಮುಂದಿನ ಹಣಕಾಸು ವರ್ಷದಲ್ಲಿ ಶೇ. 11ರಷ್ಟು ಬೆಳವಣಿಗೆಯಾಗಲಿದೆ. ಖಾಸಗಿ ಬಳಕೆಯ ಹೆಚ್ಚಳ, ಬಂಡವಾಳ ವೆಚ್ಚದ ಹೆಚ್ಚಳ, ಬೃಹತ್ ಕಂಪನಿಗಳ ಬ್ಯಾಲೆನ್ಸ್ ಶೀಟ್ ಬಲವರ್ಧನೆ, ಸಣ್ಣ ಉದ್ದಿಮೆಗಳಿಗೆ ಸಾಲ ವೃದ್ಧಿ ಮತ್ತು ನಗರಗಳಿಗೆ ವಲಸೆ ಕಾರ್ವಿುಕರ ಮರಳುವಿಕೆ ಮುಂತಾದವು ಈ ಬೆಳವಣಿಗೆಗೆ ಕೊಡುಗೆ ನೀಡಲಿವೆ.
    • ಖಾಸಗಿ ಬಳಕೆ, ಬಂಡವಾಳ ರಚನೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದ್ದು ಉದ್ಯೋಗ ಸೃಷ್ಟಿಸಲು ಸಹಾಯ ಮಾಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ನೋಂದಣಿ ಏರಿದ್ದರೆ, ನಗರ ಉದ್ಯೋಗ ದರ ಇಳಿಮುಖವಾಗಿದೆ.
    • ಖರೀದಿ ಸಾಮರ್ಥ್ಯ ಲೆಕ್ಕಾಚಾರದಲ್ಲಿ ಭಾರತವು ಜಗತ್ತಿನಲ್ಲಿಯೇ ಮೂರನೇ ಅತಿದೊಡ್ಡ ಆರ್ಥಿಕತೆ ಹಾಗೂ ವಿನಿಮಯ ದರದ ಲೆಕ್ಕಾಚಾರದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಕೋವಿಡ್ ಸಾಂಕ್ರಾಮಿಕ ಹಾಗೂ ಯುರೋಪ್ ಸಂಘರ್ಷ ಸಂದರ್ಭದಲ್ಲಿ ಕಳೆದುಹೋದದ್ದನ್ನು ಬಹುತೇಕವಾಗಿ ಮರಳಿ ಪಡೆದುಕೊಂಡಿದೆ; ನಿಧಾನಗೊಂಡಿದ್ದನ್ನು ನವೀಕರಿಸಲಾಗಿದೆ ಮತ್ತು ಪುನರುಜ್ಜೀವನಗೊಳಿಸಲಾಗಿದೆ.
    • ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ರಫ್ತು ಬೆಳವಣಿಗೆಯು ಮಧ್ಯಮವಾಗಿದೆ. 2021-22 ಮತ್ತು ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಬೆಳವಣಿಗೆಯ ದರದಲ್ಲಿನ ಉಲ್ಬಣವು ಉತ್ಪಾದನಾ ಪ್ರಕ್ರಿಯೆಗಳನ್ನು ‘ಸೌಮ್ಯ ವೇಗವರ್ಧನೆ’ಯಿಂದ ‘ತೀವ್ರಗತಿಯ ವೇಗವರ್ಧನೆ’ಗೆ ಬದಲಾಯಿಸಲು ಕಾರಣವಾಯಿತು.

    ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಬಂದ್; ಈಗ ಕ್ರೇನ್​ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?

    ಒಂದೇ ದಿನ 43 ಪೊಲೀಸ್ ಇನ್​ಸ್ಪೆಕ್ಟರ್​​ಗಳ ವರ್ಗಾವಣೆ; ನಿಮ್ಮ ಏರಿಯಾಗೆ ಯಾರು? ಇಲ್ಲಿದೆ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts