More

    ಶುಂಠಿ ಬೆಳೆಯಲು ಸಿದ್ಧತೆ

    ವಿಜಯವಾಣಿ ವಿಶೇಷ ಹಾನಗಲ್ಲ

    ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ಶುಂಠಿ ಬೆಳೆ ಕ್ಷೇತ್ರ ಹೆಚ್ಚಾಗುವ ಲಕ್ಷಣ ಕಂಡು ಬರುತ್ತಿದೆ.

    ಕಳೆದ ವರ್ಷ ಶುಂಠಿಗೆ ಹೆಚ್ಚಿನ ದರ ಸಿಗದಿದ್ದರೂ ಮುಂದೆ ಬೆಲೆ ಬಂದೀತು ಎಂಬ ನಿರೀಕ್ಷೆಯಿಂದ ರೈತರು ಶುಂಠಿ ನಾಟಿಗೆ ಭರದ ಸಿದ್ಧತೆ ನಡೆಸಿದ್ದಾರೆ. ಕೊಳವೆಬಾವಿ ಹೊಂದಿರುವ ರೈತರು ಹೊಲಗಳನ್ನು ಶುಂಠಿ ಬಿತ್ತನೆಯ ಮಡಿಗಳನ್ನಾಗಿ ಪರಿವರ್ತಿಸಿ, ಕಿರು ಕಾಲುವೆ ಮಾಡಿ ಸ್ಪ್ರಿಂಕ್ಲರ್​ಗಳನ್ನು ಅಳವಡಿಸುತ್ತಿದ್ದಾರೆ. ಪ್ರಗತಿಪರ ರೈತರು ತಾವು ಬೆಳೆದ ಹಸಿ ಶುಂಠಿಯನ್ನು ಹದ ಹಾಕಿ ಒಣಶುಂಠಿಯನ್ನಾಗಿ ಮಾರ್ಪಡಿಸಿಟ್ಟುಕೊಳ್ಳುತ್ತಿದ್ದಾರೆ. ಬೆಲೆ ಬಂದಾಗ ಮಾರಾಟ ಮಾಡಿ ಲಾಭ ಪಡೆಯಲಿದ್ದಾರೆ.

    ತಾಲೂಕಿನಲ್ಲಿ ಶುಂಠಿ ಬೆಳೆ ಕಳೆದ ಮೂರ್ನಾಲ್ಕು ವರ್ಷದಲ್ಲಿ ಹೆಚ್ಚುತ್ತ ಸಾಗುತ್ತಿದೆ. 2018-19ರಲ್ಲಿ 8000 ಎಕರೆ, 2019-20ರಲ್ಲಿ 10,000 ಎಕರೆ ಹಾಗೂ 2020-21ರಲ್ಲಿ 12,000 ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿತ್ತು. ಪ್ರಸ್ತುತ ವರ್ಷ ಶುಂಠಿ ಬೆಳೆವ ಕ್ಷೇತ್ರ 14 ಸಾವಿರ ಎಕರೆಯಷ್ಟಾಗಬಹುದು ಎಂದು ಅಂದಾಜಿಸಲಾಗಿದೆ.

    ಕಳೆದ 5 ವರ್ಷಗಳಿಂದ ಕೇರಳದ ರೈತರು ಗುತ್ತಿಗೆ ಆಧಾರದ ಮೇಲೆ ಇಲ್ಲಿನ ಭೂಮಿ ಪಡೆದು ಶುಂಠಿ ಬೆಳೆಯುತ್ತಿದ್ದಾರೆ. ಕೇರಳ ರೈತರು ಅನುಸರಿಸುವ ಪದ್ಧತಿ ಅರಿತು ಇತ್ತೀಚೆಗೆ ಸ್ಥಳೀಯ ರೈತರೇ ಶುಂಠಿ ಬೆಳೆಯುವಂತಾಗಿರುವುದು ವಿಶೇಷ ಬೆಳವಣಿಗೆ. ಸದ್ಯ ಮಾರುಕಟ್ಟೆಯಲ್ಲಿ ಹಿಮಾಚಲ ತಳಿಯ ಶುಂಠಿ ಕ್ವಿಂಟಾಲ್​ಗೆ 2400 ರೂಪಾಯಿ, ರೆಗೊಡಿ, ಮಹಿಮಾ ಇತರ ತಳಿಯ ಶುಂಠಿಗೆ 1200 ರೂಪಾಯಿ ದರ ಸಿಗುತ್ತಿದೆ. ಹಾನಗಲ್ಲ ತಾಲೂಕಿನಲ್ಲಿ ಹೆಚ್ಚು ರೈತರು ಹಿಮಾಲಯ ತಳಿಯನ್ನೇ ಬೆಳೆಯುತ್ತಿದ್ದಾರೆ. ಹಿಮಾಚಲ ತಳಿಯಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಖರೀದಿದಾರರು ಹೆಚ್ಚು ಆದ್ಯತೆ ನೀಡುತ್ತಾರೆ.

    ಶುಂಠಿ ದರ ಏರಿಳಿತ : (ಪ್ರತಿ ಕ್ವಿಂಟಾಲ್​ಗೆ)

    2016ರಲ್ಲಿ 1800ರೂಪಾಯಿ

    2017ರಲ್ಲಿ 1900ರೂಪಾಯಿ

    2018ರಲ್ಲಿ 5000 ದಿಂದ 14,000ರೂಪಾಯಿ

    2019ರಲ್ಲಿ 4800 ರಿಂದ 12,000ರೂಪಾಯಿ

    2020ರಲ್ಲಿ 2400ರೂಪಾಯಿ (ಕಳೆದ ವರ್ಷ ಬೆಳೆದ ಶುಂಠಿ, ಈಗ ಮಾರಲಾಗುತ್ತಿದೆ)

    ಮಾರುಕಟ್ಟೆ ಬೇಡಿಕೆ, ಹವಾಮಾನ, ಮಣ್ಣಿನ ಗುಣಧರ್ಮವನ್ನಾಧರಿಸಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಬಹುಬೆಳೆ ಪದ್ಧತಿಯನ್ನು ಅನುಸರಿಸಿದರೆ ಕೃಷಿ ಲಾಭದಾಯಕವಾಗಲು ಸಾಧ್ಯ. ಎಲ್ಲ ರೈತರು ಏಕ ಕಾಲಕ್ಕೆ ಒಂದೇ ಬೆಳೆಯನ್ನು ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ದರ ಕುಸಿತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೈತರು ನಿರಂತರವಾಗಿ ಮಾರುಕಟ್ಟೆ ಅಧ್ಯಯನ ಮಾಡಬೇಕಿದೆ.

    | ಮಂಜುನಾಥ ಬಣಕಾರ, ತೋಟಗಾರಿಕೆ ಅಧಿಕಾರಿ, ಹಾನಗಲ್ಲ.

    ನಾಟಿಗೆ ಮಾರ್ಚ್ ಸಕಾಲ

    ಹಾನಗಲ್ಲ: ಶುಂಠಿ ಬೆಳೆಯನ್ನು ಫೆಬ್ರವರಿ ಹಾಗೂ ಮಾರ್ಚ್​ನಲ್ಲಿ ನಾಟಿ ಮಾಡುವುದು ಸಕಾಲವಾಗಿದೆ. ನಾಟಿಗೂ ಪೂರ್ವದಲ್ಲಿ ಮುಂದಿನ ಫಸಲಿಗೆ ರೋಗ ಬಾರದಂತೆ ಭೂಮಿಯನ್ನು ಹದಗೊಳಿಸುವುದು ಅಗತ್ಯ ಎಂದು ಹಿರಿಯ ಕೃಷಿ ನಿರ್ದೇಶಕ ಮಂಜುನಾಥ ಬಣಕಾರ ಶುಂಠಿ ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.

    ತಾಲೂಕಿನಲ್ಲಿ ಈಗ ಶುಂಠಿ ನಾಟಿಗೆ ಮುಂಗಾರು ಪೂರ್ವ ಚಟುವಟಿಕೆಗಳು ಚುರುಕುಗೊಂಡಿವೆ. ಬಿತ್ತನೆ ಮೊದಲು ರೈತರು ಭೂಮಿಯನ್ನು 2 ರಿಂದ 3 ಬಾರಿ ಉಳುಮೆ ಮಾಡಬೇಕು. ಪ್ರತಿ ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರ, 40 ಕೆ.ಜಿ ಸಾರಜನಕ, 20 ಕೆ.ಜಿ ರಂಜಕ, 20 ಕೆ.ಜಿ. ಪೊಟ್ಯಾಷ್, 800 ಕೆ.ಜಿ. ಬೇವಿನಹಿಂಡಿ, 2 ಟನ್ ಎರೆಹುಳು ಗೊಬ್ಬರ ಹಾಕಬೇಕು. 3 ಅಡಿ ಅಗಲ ಹಾಗೂ 30 ಸೆಂ.ಮೀ. ಎತ್ತರದ ಏರು ಮಡಿಗಳನ್ನು ಮಾಡಬೇಕು. ಎಕರೆಗೆ 3 ಕ್ವಿಂಟಾಲ್ ಬೇವಿನಹಿಂಡಿಯನ್ನು ಕೊಟ್ಟಿಗೆ ಗೊಬ್ಬರದೊಂದಿಗೆ 4 ರಿಂದ 5 ಕೆ.ಜಿ. ಟ್ರೈಕೋಡಮ್ರ್ ಮಿಶ್ರಣ ಮಾಡಿ ಮಡಿಗಳಿಗೆ ಹಾಕಬೇಕು. ಎಕರೆ ಬಿತ್ತನೆ ಕ್ಷೇತ್ರಕ್ಕೆ 8-10 ಕ್ವಿಂಟಾಲ್ ರೋಗರಹಿತ, 30 ಗ್ರಾಂ ಗುಣಮಟ್ಟದ ಶುಂಠಿ ಗಡ್ಡೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬಿತ್ತನೆಗೂ ಪೂರ್ವದಲ್ಲಿ ಪ್ರತಿ ಲೀ. ನೀರಿಗೆ 5 ಗ್ರಾಂ. ಸ್ಟೆಪ್ರೋಸೈಕ್ಲೀನ್, 5 ಗ್ರಾಂ ಕೆಸೈಕ್ಲೀನ್ ಹಾಗೂ 3 ಗ್ರಾಂ ಸಿಒಸಿ ಪೌಡರ್ ಮಿಶ್ರಣ ಮಾಡಿ ಬಿತ್ತನೆಯ ಅರ್ಧಗಂಟೆ ಮೊದಲು ಬೀಜಗಳನ್ನು ನೆನೆಸಿ ನೆರಳಿನಲ್ಲಿ ಒಣಗಿಸಬೇಕು.

    ಬಿತ್ತನೆಯ 15 ದಿನಗಳ ನಂತರ ಕೆಂಪುಕೊಳೆ ರೋಗದ ನಿಯಂತ್ರಣಕ್ಕಾಗಿ ಪ್ರತಿ ಲೀ. ನೀರಿಗೆ 3 ಗ್ರಾಂ ಮೆಟಲಾಕ್ಸಿಲ್, 3 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್, 5 ಗ್ರಾಂ ಸ್ಟೆಪ್ರೋಸೈಕ್ಲೀನ್ ಮಿಶ್ರಣವನ್ನು ಮಡಿಗಳಿಗೆ ಸಿಂಪಡಿಸಬೇಕು. ಕೊಳೆರೋಗ ಹೆಚ್ಚಾಗಿದ್ದಲ್ಲಿ ಅಂಥ ಮಡಿಗಳಿಗೆ 4 ಗ್ರಾಂ. ಶೇ.33ರ ಬ್ಲೀಚಿಂಗ್ ಪೌಡರ್, 5 ಗ್ರಾಂ ಸ್ಟೆಪ್ರೋಸೈಕ್ಲೀನ್, 3 ಗ್ರಾಂ ಕಾಪರ್ ಆಕ್ಸಿಕ್ಲೋವೈಡ್ ಬೆರೆಸಿ ಎಲೆಗಳಿಗೆ ತಾಗದಂತೆ ಗಿಡದ ಬುಡಕ್ಕೆ ಸಿಂಪಡಿಸಬೇಕು. ಹಸಿರು ಕೊಳೆರೋಗ ನಿಯಂತ್ರಣಕ್ಕೆ ಹೊಲದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts