More

    ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿ ; ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನರಸಿಂಹಮೂರ್ತಿ ಸಲಹೆ

    ತುಮಕೂರು : ಕರೊನಾ ಹಿನ್ನೆಲೆಯಲ್ಲಿ ಪಿಯು ಕಾಲೇಜು ಆರಂಭ ವಿಳಂಬ ಕಾರಣಕ್ಕೆ ಕಡಿತಗೊಳಿಸಿರುವ ಪಠ್ಯಕ್ರಮವನ್ನು ಹೊರತುಪಡಿಸಿ ಪರೀಕ್ಷೆಗೆ ಸಿದ್ಧರಾಗುವಂತೆ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ.ನರಸಿಂಹಮೂರ್ತಿ ಹೇಳಿದರು.

    ನಗರದ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಪಿಯುಸಿ ಕನ್ನಡ ವಿಷಯದಲ್ಲಿ ಕಡಿತಗೊಂಡ ಪಠ್ಯಕ್ರಮದ ಬಗ್ಗೆ ವಿಶ್ಲೇಷಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಥಮ ಪಿಯುಸಿಯಲ್ಲಿ ನಾಲ್ಕು ಪದ್ಯಭಾಗ ಮತ್ತು ಎರಡು ಗದ್ಯಭಾಗಗಳ ವ್ಯಾಕರಣಾಂಶಗಳನ್ನು ತೆಗೆಯಲಾಗಿದ್ದು, ಅದೇ ರೀತಿ ದ್ವಿತೀಯ ಪಿಯುಸಿಯಲ್ಲಿ ಮೂರು ಪದ್ಯಭಾಗ ಮತ್ತು ಎರಡು ಗದ್ಯ ಭಾಗಗಳನ್ನು ಹೊರತು ಪಡಿಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಲು ತಿಳಿ ಹೇಳುವಂತೆ ಸಲಹೆ ನೀಡಿದರು.

    ಕನ್ನಡ ವಿಷಯದಲ್ಲಿ ಪಠ್ಯವನ್ನು ಕಡಿತಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಕಾಲೇಜುಗಳಲ್ಲಿ ಶೇ.100ಕ್ಕೆ 100ರಷ್ಟು ಫಲಿತಾಂಶ ಬರುವಂತೆ ಉಪನ್ಯಾಸಕರು ತಕ್ಕ ಸಿದ್ಧತೆ ಮಾಡಿಕೊಳ್ಳಬೇಕು. ನಾವೆಲ್ಲಾ ಪ್ರಯತ್ನಪಟ್ಟರೆ ಅಸಾಧ್ಯವಾದುದನ್ನು ಸಾಧಿಸಬಹುದು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು ಎಂದರು.

    ಎಂಪ್ರೆಸ್ ಕಾಲೇಜಿನ ಪ್ರಾಚಾರ್ಯ ಎಸ್.ಷಣ್ಮುಖ ಅಧ್ಯಕ್ಷತೆವಹಿಸಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಕೆ.ಎಸ್.ಸಿದ್ದಲಿಂಗಪ್ಪ, ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಎಚ್.ಗೋವಿಂದಯ್ಯ, ವಾಸವಿ ಪಿಯು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಆರಾಧ್ಯ, ಡಾ.ಕೆ.ವಿ.ಸುಬ್ಬರಾವ್, ನೇ.ರಂ.ನಾಗರಾಜು, ಎನ್.ಕೃಷ್ಣಯ್ಯ, ಎ.ಮಲ್ಲಿಕಾರ್ಜುನ, ಉಪಸ್ಥಿತರಿದ್ದರು. ಡಾ.ಮುದ್ದವೀರಪ್ಪ, ಮಾರುತೇಶ್, ಪ್ರೇಮಲೀಲಾ, ಕೆ.ಜಿ.ಯತೀಶ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.

    ಕನ್ನಡದಲ್ಲಿ ರಾಮಾಯಣದ ಪರಂಪರೆ ಹಾಗೂ ಮಹಾಭಾರತದ ಪರಂಪರೆ ಎರಡು ಮಹಾಪಠ್ಯಗಳಿದ್ದು, ರಾಮಚಂದ್ರ ಚರಿತ ಪುರಾಣ ಕನ್ನಡದ ಮೊದಲ ರಾಮಾಯಣ, ಕುಮಾರವ್ಯಾಸ ಭಾರತ ಈ ಎರಡು ಪಠ್ಯಗಳಿವೆ. ರಾಮಾಯಣ ಮತ್ತು ಮಹಾಭಾರತ ಪರಂಪರೆ ಸಂಸ್ಕೃತ ಪರಂಪರೆಗಿಂತ ಭಿನ್ನವಾದವು.
    ರಾಜಪ್ಪ ದಳವಾಯಿ ಸಾಹಿತಿ

    ಫೋಟೋ ಕ್ಯಾಪ್ಷನ್: ತುಮಕೂರಿನ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಪಿಯುಸಿ ಕನ್ನಡ ವಿಷಯದಲ್ಲಿ ಕಡಿತಗೊಂಡ ಪಠ್ಯಕ್ರಮದ ಬಗ್ಗೆ ವಿಶ್ಲೇಷಣಾ ಕಾರ್ಯಾಗಾರವನ್ನು ಎಚ್.ಕೆ.ನರಸಿಂಹಮೂರ್ತಿ ಉದ್ಘಾಟಿಸಿದರು. ರಾಜಪ್ಪ ದಳವಾಯಿ, ಎಸ್.ಷಣ್ಮುಖ, ಎಚ್.ಗೋವಿಂದಯ್ಯ, ಡಾ.ಕೆ.ವಿ.ಸುಬ್ಬರಾವ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts