More

    ಪಂಚಾಯಿತಿ ಫೈಟ್​ಗೆ ಕಮಲಪಡೆ ತಯಾರಿ

    ಧಾರವಾಡ: ಗ್ರಾಮ ಪಂಚಾಯಿತಿ ಚುನಾವಣೆಗೆ ಬೃಹತ್ ಮಟ್ಟದ ಸಮಾವೇಶಗಳನ್ನು ನಡೆಸಿ ಪೂರ್ವ ತಯಾರಿ ಮಾಡುತ್ತಿರುವ ಏಕೈಕ ಪಕ್ಷ ಬಿಜೆಪಿ. ಇದು ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಚುನಾವಣೆ. ಹೀಗಾಗಿ ಅತ್ಯಂತ ಮಹತ್ವ ಪಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ನಗರದ ಸಾಯಿ ಅರಣ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಪಕ್ಷದ ಗ್ರಾಮಸ್ವರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಗೊಂದಲದ ಗೂಡಾಗಿರುವ ಕಾಂಗ್ರೆಸ್ ಹಾಗೂ ಅಸ್ತಿತ್ವ ಕಳೆದುಕೊಂಡಿರುವ ಜೆಡಿಎಸ್​ಗೆ ಇದರ ಅವಶ್ಯಕತೆ ಇಲ್ಲ. ಬಿಜೆಪಿ ಮಾತ್ರ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

    ಕೇಂದ್ರ ಸರ್ಕಾರದ ಅನುದಾನ ಪಂಚಾಯಿತಿಗೆ ತಲುಪುವಷ್ಟರಲ್ಲಿ ಸೋರಿಕೆ ಆಗುತ್ತದೆ ಎಂಬ ಮಾತಿತ್ತು. ಅದನ್ನು ತಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಕೆಳ ಹಂತದ ಆಡಳಿತ ಸುಧಾರಣೆಗೆ ಆದ್ಯತೆ ನೀಡಿದ್ದಾರೆ. ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಕಾರ್ಯಕರ್ತರು ಕೇಂದ್ರ-ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದರು.

    ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಪಕ್ಷದೊಳಗೂ ಆಂತರಿಕ ಪ್ರಜಾಪ್ರಭುತ್ವ ಇರುವುದು ಬಿಜೆಪಿಯಲ್ಲಿ ಮಾತ್ರ. ಕಾರ್ಯಕರ್ತರಿಂದಲೇ ಶಾಸಕರು, ಸಂಸದರು ಮಂತ್ರಿಗಳಾಗಲು ಸಾಧ್ಯ. ಈಗ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಲು ನಾವು ಸಿದ್ಧರಾಗಿದ್ದೇವೆ. ಹೀಗಾಗಿ ಎಲ್ಲರೂ ಪಕ್ಷದ ಸಿದ್ಧಾಂತ, ಬದ್ಧತೆಗೆ ಬೆಲೆ ನೀಡಬೇಕು ಎಂದರು.

    ಉತ್ತಮ ಯೋಜನೆ ರೂಪಿಸಿ ಅನುದಾನ ನೀಡುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡುವೆ ಪೈಪೋಟಿ ನಡೆದಿದೆ. ಗ್ರಾಪಂಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮಾತ್ರ ಯೋಜನೆಗಳು ಜನರಿಗೆ ಮುಟ್ಟಲು ಸಾಧ್ಯ. ಬೇರೆಯವರು ಅಧಿಕಾರದಲ್ಲಿದ್ದರೆ ಹಣ ಲೂಟಿ ಮಾಡುತ್ತಾರೆ ಎಂದು ಕಾಂಗ್ರೆಸ್​ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

    ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಕಾರ್ಯಕರ್ತರ ಚುನಾವಣೆಗೆ ಬೇರೆ ಯಾವ ಪಕ್ಷವೂ ಸಮಾವೇಶ ನಡೆಸಿದ್ದನ್ನು ನೋಡಿಲ್ಲ. ಈಗಾಗಲೇ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾಗಿದೆ. ಮುಂದಿನ ದಿನಗಳಲ್ಲಿ ಧಾರವಾಡ ಜಿಲ್ಲೆ ಸಹ ಕಾಂಗ್ರೆಸ್ ಮುಕ್ತವಾಗಬೇಕು. ಅದನ್ನು ಸಾಧಿಸಲು ಕಾರ್ಯಕರ್ತರು ಸಜ್ಜಾಗಬೇಕು ಎಂದರು.

    ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕಾರ್ಯಕರ್ತರಿಂದ ಅಧಿಕಾರ ಹಿಡಿದ ನಾವು ಕಾರ್ಯಕರ್ತರನ್ನು ಗೆಲ್ಲಿಸಲು ಸಿದ್ಧರಾಗಿದ್ದೇವೆ. ಎಲ್ಲ ಆಡಳಿತಕ್ಕೂ ಗ್ರಾಪಂ ಅಡಿಪಾಯ. ಅಡಿಪಾಯ ಗಟ್ಟಿಯಾದರೆ ಪಕ್ಷ ಮತ್ತಷ್ಟು ಗಟ್ಟಿಯಾಗಲಿದೆ ಎಂದರು.

    ಸಚಿವ ಶಿವರಾಮ ಹೆಬ್ಬಾರ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ. ಸಿ.ಎಂ. ನಿಂಬಣ್ಣವರ ಮಾತನಾಡಿದರು. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಪ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕಿ ಸೀಮಾ ಮಸೂತಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಜಿಪಂ ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ, ಮುಖಂಡರಾದ ಎಂ. ರಾಜೇಂದ್ರ, ಡಾ. ಸಂದೀಪ ಪಾಟೀಲ, ಭಾರತಿ ಮಗದುಮ್ ಲಿಂಗರಾಜ ಪಾಟೀಲ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ನಾರಾಯಣ ಜರತಾರಘರ, ಶಂಕರ ಕೋಮಾರದೇಸಾಯಿ, ಇತರರು ಇದ್ದರು.

    ಷಣ್ಮುಖ ಗುರಿಕಾರ ಸ್ವಾಗತಿಸಿದರು. ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಯಡಿಯೂರಪ್ಪ ಅವರಂತಹ ನಾಯಕರು ಮುಖ್ಯಮಂತ್ರಿಯಾಗಿದ್ದಾಗ ಮಾತ್ರ ಕೆಳ ಹಂತದ ಆಡಳಿತಗಳಿಗೆ ಅನುದಾನ ಹರಿದು ಬರಲು ಸಾಧ್ಯ. ಸಿದ್ದರಾಮಯ್ಯ ಅವರಂಥವರು ಸಿಎಂ ಆದಾಗ ಎಲ್ಲ ಅನುದಾನ ವಿಧಾನಸೌಧದಲ್ಲೇ ಗ್ರೀಸ್ ಆಗಿ ಹೆಪ್ಪುಗಟ್ಟಿ ನಿಲ್ಲುತ್ತದೆ. ಜೇನುತುಪ್ಪದಂತೆ ಅನುದಾನ ಹರಿದು ಬಂದಾಗಲೇ ಆಡಳಿತ ವಿಕೇಂದ್ರೀಕರಣಕ್ಕೆ ನಿಜವಾದ ಅರ್ಥ ಸಿಗಲು ಸಾಧ್ಯ.

    ಬಸವರಾಜ ಬೊಮ್ಮಾಯಿ, ಸಚಿವ

    ನೀವು ಮನೆಯಲ್ಲಿದ್ದರೆ ನಾವೂ ಮನೆಯಲ್ಲೇ

    ಗ್ರಾಪಂ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಎಲ್ಲ ಸಹಕಾರ ನೀಡುತ್ತೇವೆ. ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಬೇಡ. ಕೆಲವರು ಇಲ್ಲಸಲ್ಲದ್ದನ್ನು ತಲೆಗೆ ತುಂಬಿ ಒಂದು ಕುಟುಂಬದಲ್ಲಿ ಇಬ್ಬರು ಸ್ಪರ್ಧೆಗೆ ಇಳಿಯುವಂತೆ ಮಾಡಿ ಮನೆ ಮುರಿಯುವುದಿದೆ. ಅಂಥದ್ದಕ್ಕೆ ಆಸ್ಪದ ನೀಡಬೇಡಿ. ಒಂದು ವೇಳೆ ನೀವು ಮನೆಯಲ್ಲಿ ಕುಳಿತರೆ, ಮುಂದಿನ ಚುನಾವಣೆಯಲ್ಲಿ ನಾವೆಲ್ಲರೂ ಮನೆಯಲ್ಲೇ ಕುಳಿತುಕೊಳ್ಳುವಂತಾಗುತ್ತದೆ. ಎಚ್ಚರಿಕೆಯಿಂದ ಚುನಾವಣೆ ಎದುರಿಸಿ ಎಂದು ಶಾಸಕ ಅಮೃತ ದೇಸಾಯಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts