More

    250 ಆಕ್ಸಿಜನ್ ಬೆಡ್‌ಗಳ ಸಿದ್ಧತೆ ; ಆಮ್ಲಜನಕ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾದ ರಾಮನಗರ ಜಿಲ್ಲಾಡಳಿತ

    ರಾಮನಗರ : ಕರೊನಾ ಎರಡನೇ ಅಲೆಯಲ್ಲಿ ಸೋಂಕಿತರು ಎದುರಿಸುತ್ತಿರುವ ಆಮ್ಲಜನಕ ಸಮಸ್ಯೆಗೆ ಜಿಲ್ಲಾಡಳಿತ ಬ್ರೇಕ್ ಹಾಕಲು ಮುಂದಾಗಿದ್ದು, ಇನ್ನೊಂದು ವಾರದಲ್ಲಿ ಆಮ್ಲಜನಕ ಪೂರೈಕೆ ಹೊಂದಿರುವ ಸುಮಾರು 250 ಹಾಸಿಗೆಗಳು ಜಿಲ್ಲೆಯಲ್ಲಿ ಲಭ್ಯವಾಗಲಿವೆ.

    ಜಿಲ್ಲೆಯಲ್ಲಿ ದಿನವೊಂದಕ್ಕೆ 200ರಿಂದ 300 ಪಾಸಿಟಿವ್ ಪ್ರಕರಣಗಳು ವರದಿ ಆಗುತ್ತಿವೆ. ರಾಮನಗರ ಕೋವಿಡ್ ಆಸ್ಪತ್ರೆಯಲ್ಲಿ 200, ದಯಾನಂದ ಸಾಗರ್ ಆಸ್ಪತ್ರೆಯಲ್ಲಿ 30, ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆಗಳಂತೆ ಒಟ್ಟು 200 ಹಾಸಿಗೆ, ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 500 ಹಾಸಿಗೆ ಇದೆ. ಆದರೆ, ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಕಾರಣ ಹೆಚ್ಚಿನ ಮಂದಿ ಕರೊನಾಗೆ ಬಲಿಯಾಗುತ್ತಿದ್ದಾರೆ.

    ಈ ಹಿನ್ನೆಲೆಯಲ್ಲಿ ಮುಂದೆ ಎದುರಾಗಬಹುದಾದ ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿರುವ ಜಿಲ್ಲಾಡಳಿತ, ನೂತನವಾಗಿ ಸಿದ್ಧಗೊಳ್ಳುತ್ತಿರುವ ಜಿಲ್ಲಾಸ್ಪತ್ರೆಯ ಮೊದಲ ಮಹಡಿಯಲ್ಲಿ 125 ಹಾಸಿಗೆಗಳಿಗೆ ಆಕ್ಸಿಜನ್ ಪೂರೈಕೆಗೆ ಅಗತ್ಯವಿರುವ ಎಲ್ಲ ಸಲಕರಣೆಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ರೆೆರಲ್ ಕೋವಿಡ್ ಆಸ್ಪತ್ರೆಯಲ್ಲಿ 50, ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ 20 ಆಕ್ಸಿಜನ್ ಹಾಸಿಗೆ ಸಿದ್ಧಗೊಂಡಿದ್ದು, ಅಂತಿಮ ಹಂತದ ಕಾರ್ಯಗಳು ಪ್ರಗತಿಯಲ್ಲಿವೆ. ಇನ್ನು ಕೆಲವೇ ದಿನಗಳಲ್ಲಿ ಆಕ್ಸಿಜನ್ ಸೌಲಭ್ಯದ ಹಾಸಿಗೆಗಳು ಜಿಲ್ಲೆಯಲ್ಲಿ ಲಭ್ಯವಾಗಲಿವೆ.

    ಬೆನ್‌ಟ್ಲೇ ಜತೆಗೆ ಒಪ್ಪಂದ: ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಾಪ್ 20 ಆಮ್ಲಜನಕ ಉತ್ಪಾದನಾ ಘಟಕಗಳ ಪೈಕಿ ಬಿಡದಿಯ ಬೆನ್‌ಟ್ಲೇ ಸಹ ಒಂದು. ರಾಮನಗರ ಜಿಲ್ಲೆಯ ಆಸ್ಪತ್ರೆಗಳಿಗೆ ಜೀವವಾಯು ಪೂರೈಕೆ ಮಾಡುವ ಒಪ್ಪಂದಕ್ಕೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹರಿಯಂತ್ ರಾಂಕ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮಾಹಿತಿಯನ್ನು ರಾಂಕ ಗೂಗಲ್‌ನಲ್ಲಿ ಹಂಚಿಕೊಂಡಿದ್ದಾರೆ. ಬಿಡದಿಯಲ್ಲಿನ ಬೆನ್‌ಟ್ಲೇ ಇಂಡಿಯಾ ಆಕ್ಸಿಜನ್ ಘಟಕ ದಿನಕ್ಕೆ 450ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್‌ಗಳನ್ನು ರೀಫಿಲ್ ಮಾಡುತ್ತಿದೆ. ಒಂದು ಸಿಲಿಂಡರ್ ರೀಫಿಲ್‌ಗೆ ಕನಿಷ್ಠ 2 ಗಂಟೆ ಕಾಲಾವಕಾಶ ಬೇಕಿದೆ. ಹೀಗಾಗಿ ಜಿಲ್ಲೆಗೆ ಅಗತ್ಯವಿರುವ ಜಂಬೋ ಸಿಲಿಂಡರ್‌ಗಳ ಪೂರೈಕೆಗೆ ಜಿಲ್ಲಾಡಳಿತ ಇದೇ ಕಂಪನಿಯೊಂದಿಗೆ ಮಾತುಕತೆ ನಡೆಸಿದೆ. ಒಮ್ಮೆ ವಿದ್ಯುತ್ ಕೈ ಕೊಟ್ಟರೆ, ಮತ್ತೆ ಸಿಲಿಂಡರ್ ಕೆಲಸ ಶುರು ಮಾಡಲು 2 ಗಂಟೆ ಸಮಯ ಆಗಲಿದೆ. ಹೀಗಾಗಿ ಬೆಸ್ಕಾಂ ಮೂಲಕ ಪ್ರತ್ಯೇಕ ಲೈನ್ ಸಹ ಎಳೆಯಲಾಗಿದ್ದು, ಸಿಲಿಂಡರ್‌ಗಳ ಮರು ಭರ್ತಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತಿದೆ. ಜಿಲ್ಲೆಗೆ ಅಗತ್ಯವಿರುವ ಸಿಲೆಂಡರ್‌ಗಳ (ದಿನಕ್ಕೆ 250) ಪೂರೈಕೆಗೆ ಕಂಪನಿ ಮುಂದಾಗಿದೆ. ರಾಜರಾಜೇಶ್ವರಿ ಹಾಗೂ ದಯಾನಂದ ಸಾಗರ್ ಆಸ್ಪತ್ರೆಗಳಿಗೆ ಬೆಂಗಳೂರಿನ ಖಾಸಗಿ ಕಂಪನಿಯೊಂದು ಲಿಕ್ವಿಡ್ ಆಕ್ಸಿಜನ್ ಪೂರೈಸುತ್ತಿದೆ. ಇನ್ನುಳಿದಂತೆ ಜಿಲ್ಲೆಗೆ ಅವಶ್ಯಕತೆ ಇರುವ ಜಂಬೋ ಸಿಲಿಂಡರ್‌ಗಳನ್ನು ಪೂರೈಸಲು ‘ಬೆನ್ ಟ್ಲೇ ಇಂಡಿಯಾ ಆಕ್ಸಿಜನ್ ಘಟಕ’ ಮುಂದಾಗಿದೆ. ಹೀಗಾಗಿ ಜಿಲ್ಲೆಗೆ ಮುಂದಿನ ದಿನಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗುವುದಿಲ್ಲ ಎನ್ನುವ ಭರವಸೆ ಜಿಲ್ಲಾಡಳಿತದ್ದು.

    ಜಿಲ್ಲೆಯಲ್ಲಿ ಸುಮಾರು ಆಮ್ಲಜನಕ ಪೂರೈಕೆಯುಳ್ಳ 250 ಹಾಸಿಗೆಗಳ ಸಿದ್ಧತೆ ಕಾರ್ಯ ನಡೆಯುತ್ತಿದ್ದು, ಮುಂದೆ ಎದುರಾಗಬಹುದಾದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ. ಜನತೆ ಮನೆಯಲ್ಲಿಯೇ ಇದ್ದು ಕರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಬೇಕು.
    ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ, ರಾಮನಗರ

    ಡಿಸಿ, ಡಿಎಚ್‌ಒ ಹಾಗೂ ನಾನೂ ಸೇರಿದಂತೆ ಇತರೆ ಅಧಿಕಾರಿಗಳು ಕಳೆದ ವಾರ ಬೆನ್‌ಟ್ಲೇ ಇಂಡಿಯಾ ಆಕ್ಸಿಜನ್ ಘಟಕಕ್ಕೆ ಭೇಟಿ ನೀಡಿದ್ದೆವು. ಅವರಿಗೆ ಪ್ರತ್ಯೇಕವಾಗಿ ವಿದ್ಯುತ್ ಮಾರ್ಗ, ಅಗತ್ಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿದ್ದು, ಜಿಲ್ಲೆಗೆ ಅವಶ್ಯಕವಾಗಿರುವ ಸಿಲಿಂಡರ್‌ಗಳ ಪೂರೈಕೆಗೆ ಕಂಪನಿ ಒಪ್ಪಿಕೊಂಡಿದೆ.
    ಇಕ್ರಂ ಸಿಇಒ ಜಿಲ್ಲಾ ಪಂಚಾಯಿತಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts