More

    ಕುಷ್ಟಗಿಯಲ್ಲಿ ಡಿ.1ಕ್ಕೆ ಜನತಾ ದರ್ಶನ

    ಕುಷ್ಟಗಿ: ಪಟ್ಟಣದಲ್ಲಿ ನಡೆಯಲಿರುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರ ಹೇಳಿದರು.

    ತಹಸಿಲ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಡಿ.1ರಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ(ಡಿಗ್ರಿ) ಕಾಲೇಜಿನ ಆಡಿಟೋರಿಯಂನಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುತ್ತದೆ. ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು.

    ಜನತಾ ದರ್ಶನ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯವಾಗಬೇಕು. ಯಾರಿಂದಲೂ ಮಾಹಿತಿ ಇಲ್ಲ ಎಂಬ ದೂರು ಕೇಳಿಬರದಂತೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಈ ಸಂಬಂಧ ಗ್ರಾಪಂ ಪಿಡಿಒಗಳ ಸಭೆ ಕರೆದು ಆಯಾ ಗ್ರಾಪಂ ವ್ಯಾಪ್ತಿಯ ಜನರಿಗೆ ಮಾಹಿತಿ ನೀಡುವಂತೆ ಸೂಚಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪೊಪಾಗೆ ಸೂಚಿಸಿದರು.

    ರಥ ಯಾತ್ರೆ ಆಗಮನ: ಕರ್ನಾಟಕ 50ರ ಸಂಭ್ರಮದ ಕನ್ನಡ ಜ್ಯೋತಿ ರಥ ಯಾತ್ರೆ ಡಿ.2ರಂದು ತಾಲೂಕಿಗೆ ಆಗಮಿಸುತ್ತಿದ್ದು, 3ರಂದು ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಗುಮಗೇರಾ, ಹಿರೇಮನ್ನಾಪುರದಿಂದ ಮೇಣೆಧಾಳ ವರೆಗೆ ನಡೆಯಲಿದೆ. ಈ ರಥಯಾತ್ರೆಯಲ್ಲಿಯೂ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಭಾನುವಾರ ರಜೆ ಎಂಬ ಕಾರಣಕ್ಕೆ ಯಾತ್ರೆಯಲ್ಲಿ ಪಾಲ್ಗೊಳ್ಳದೆ ನಿರ್ಲಕ್ಷ್ಯ ವಹಿಸುವಂತಿಲ್ಲ ಎಂದು ಎಚ್ಚರಿಸಿದರು. ಕೃಷಿ, ತೋಟಗಾರಿಕೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಅಡ್ಡಡ್ಡ ಬಾಯಿ ಹಾಕಿದ ಮುಖ್ಯಾಧಿಕಾರಿ!
    ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರ ಮಾಹಿತಿ ನೀಡುವ ವೇಳೆ ವಿವಿಧ ಇಲಾಖೆಗಳಿಗೆ ಊಟ, ಹಾರ-ತುರಾಯಿ ಇತರ ಜವಾಬ್ದಾರಿ ನೀಡುವ ಕುರಿತು ಮಧ್ಯೆ ಮಧ್ಯೆ ಬಾಯಿ ಹಾಕಿ ಸಲಹೆ ನೀಡುತ್ತಿದ್ದ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ತಹಸೀಲ್ದಾರರನ್ನು ಮುಜುಗರಕ್ಕೀಡು ಮಾಡಿದರು.

    ಕಾಲೇಜು ಆಡಿಟೋರಿಯಂನಲ್ಲಿ ಜನತಾ ದರ್ಶನ ಆಯೋಜಿಸಲಾಗಿದೆ ಎಂದು ಹೇಳುತ್ತಿದ್ದಂತೆ ಕಾಲೇಜು ಆವರಣ ಕ್ಲೀನ್ ಮಾಡಿಸಿಕೊಡುವುದಾಗಿ ಹೇಳಿದ ಚೀಫ್ ಆಫಿಸರ್, ಕಾಲೇಜಿನವರು ಕ್ಲೀನ್ ಇಟ್ಟಿದ್ದಾರೆಂದು ತಹಸೀಲ್ದಾರ್ ಹೇಳಿದಾಗ್ಯೂ ಆದ್ರೂ ನೀವು ಕರೀತೀರಿ ಎಂದು ಹೇಳಿ ಕಿರಿಕಿರಿ ಉಂಟು ಮಾಡಿದರು. ಮುಂದುವರಿದು ಮಾಹಿತಿ ನೀಡುತ್ತಿದ್ದ ತಹಸೀಲ್ದಾರರು ಮುಖ್ಯಾಧಿಕಾರಿ ಮಾತಿನಿಂದ ನಾನು ಹೇಳುವುದು ಪೂರ್ಣಗೊಳಿಸಲು ಬಿಡಿ ಎಂದು ಹೇಳುವ ಹಂತ ತಲುಪಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts