More

    ತೆರಿಗೆ ಒರತೆ, ಕೇಂದ್ರದ ಸಹಾಯಧನ ಕೊರತೆ: ನಿರೀಕ್ಷೆ ಮೀರುವ ಕರ, ಬದ್ಧತಾ ವೆಚ್ಚಗಳ ಭಾರ…

    | ವಿಲಾಸ ಮೇಲಗಿರಿ ಬೆಂಗಳೂರು

    ಜನಸಾಮಾನ್ಯರ ಮೇಲೆ ವರ್ಷದಿಂದ ವರ್ಷಕ್ಕೆ ಕರ ಭಾರ ಹೆಚ್ಚುತ್ತಿದೆ. ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳು ಬಡವರ ಬದುಕನ್ನು ಬಗ್ಗಡವಾಗಿಸುತ್ತಿವೆ. ಶ್ರೀಮಂತರಿಂದ ತೆರಿಗೆ ವಸೂಲು ಮಾಡಿ ಬಡವರ ಕಲ್ಯಾಣಕ್ಕೆ ವಿನಿಯೋಗಿಸುವುದು ಕಲ್ಯಾಣ ರಾಷ್ಟ್ರದ ಮೂಲ ತತ್ವ. ಆದರೀಗ ತೆರಿಗೆ ವಿಚಾರದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇದೆ ಎಂಬ ಕೂಗು ಕೇಳಿ ಬರುತ್ತಿದೆ. ‘ರಾಜನಾದವನು ತೋಟ ಕಾಯುವ ಮಾಲಿಯಾಗಿರಬೇಕು. ಇದ್ದಿಲು ಮಾರುವ ವ್ಯಾಪಾರಿಯಾಗಿರಬಾರದು’ ಎಂದು ಪ್ರತಿಪಕ್ಷಗಳು ಕೂಡ ಟೀಕಿಸಿವೆ. ಆದಾಗ್ಯೂ ರಾಜ್ಯದ ರಾಜಸ್ವ ಸಂಗ್ರಹಕ್ಕೇನೂ ಧಕ್ಕೆಯಾಗಿಲ್ಲ. ರಾಜ್ಯ ಎರಡು ವರ್ಷಗಳಿಂದ ನಾನಾ ವಿಪತ್ತು ಎದುರಿಸುತ್ತ ಬಂದಿದೆ. ಕರೊನಾ ಕಾಟ ಬೊಕ್ಕಸವನ್ನು ಬರಿದು ಮಾಡಿದೆ. ಜನಾರೋಗ್ಯ ಕಾಪಾಡಲು ಸರ್ಕಾರ ಸಾವಿರಾರು ಕೋಟಿ ರೂ. ವಿನಿಯೋಗಿಸಿದೆ. ಅದರ ಜತೆಗೆ ಅತಿವೃಷ್ಟಿ, ಪ್ರವಾಹಗಳು ಬೆನ್ನು ಬಿಡದಂತೆ ಕಾಡಿದವು. ಸಂತ್ರಸ್ಥರ ಸಂರಕ್ಷಣೆ, ಆಸ್ತಿಪಾಸ್ತಿ ರಕ್ಷಣೆಗೆ ಸರ್ಕಾರ ದೊಡ್ಡ ಮೊತ್ತವನ್ನೇ ವ್ಯಯಿಸಿದೆ. ಇದು ರಾಜ್ಯದ ಆರ್ಥಿಕ ಅಸ್ತವ್ಯಸ್ತತೆಗೆ ಪ್ರಮುಖ ಕಾರಣವಾಗಿದೆ.

    ಬದ್ಧತಾ ವೆಚ್ಚಗಳ ಭಾರ: ಎಲ್ಲ ಏಳುಬೀಳುಗಳ ನಡುವೆಯೂ ಅಭಿವೃದ್ಧಿ ಕಾರ್ಯಗಳು ಅನವರತ ಸಾಗಿವೆ. ಬದ್ಧತಾ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಭಾರವಾಗುತ್ತಿವೆ. ಯೋಜನೆ ಮತ್ತು ಯೋಜನೇತರ ವೆಚ್ಚ ಲೆಕ್ಕ ಹಾಕಿದರೆ ಅಭಿವೃದ್ಧಿ ಕಾರ್ಯಗಳಿಗೆ ಉಳಿಯುವ ಹಣ ತೀರಾ ಕಡಿಮೆ. ಹಾಗಾಗಿ ಸರ್ಕಾರ ಸಾಲ ಪಡೆಯುವ ಪ್ರಮಾಣ ಕೂಡ ಏರಿಕೆಯಾಗುತ್ತಿದೆ. ಸಾಲದ ಮೇಲಿನ ಬಡ್ಡಿ ಮಣಭಾರವಾಗುತ್ತಿದೆ. ಒಂದು ರೂ. ಆದಾಯದಲ್ಲಿ ಹತ್ತು ಪೈಸೆ ಸಾಲದ ಮೇಲಿನ ಬಡ್ಡಿ ಪಾವತಿಗೇ ವಿನಿಯೋಗವಾಗುತ್ತದೆ!

    ನಿರೀಕ್ಷಿತ ಫಲ ನೀಡದ ಪ್ರಯತ್ನ: ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಮೂಲೆ ನಿವೇಶನ ಹರಾಜು ಸೇರಿ ಸರ್ಕಾರ ನಡೆಸಿದ ನಾನಾ ಪ್ರಯತ್ನಗಳು ನಿರೀಕ್ಷಿತ ಫಲ ನೀಡಿಲ್ಲ. ಸರ್ಕಾರದ ರಾಜಸ್ವ ಸಂಗ್ರಹಕ್ಕೆ ಮಾಡಿದ ಪ್ರಯತ್ನಗಳು ‘ಹಸಿದವನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿರುವುದೂ ಸುಳ್ಳಲ್ಲ.

    ಸಾಲದ ಶೂಲ…: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಆದಾಯ ಶೇ.11 ಕಡಿಮೆಯಾಗಿದೆ. ಆದರೆ, ಸಾಲದ ಪ್ರಮಾಣ ಶೇ.33 ಹೆಚ್ಚಳವಾಗಿದೆ. ಬಜೆಟ್ ಗಾತ್ರ ಹಿಗ್ಗಿದಲ್ಲಿ ಸಾಲ ಪಡೆಯುವ ಪ್ರಮಾಣ ಹೆಚ್ಚಿಸಲು ಅವಕಾಶವಿದೆ. ಈ ಮಾರ್ಚ್ ಅಂತ್ಯಕ್ಕೆ ರಾಜ್ಯದ ಸಾಲ 4,57,899 ಕೋಟಿ ರೂ. ಗಳಾಗುತ್ತದೆ!

    ರಾಜ್ಯದ ನಿರೀಕ್ಷೆಯೂ ಕಡಿಮೆ: ಕೇಂದ್ರ ಸರ್ಕಾರ ಜಿಎಸ್​ಟಿ ಪರಿಹಾರ ಮತ್ತು ಸಹಾ ಯಧನ ಹಂಚಿಕೆ ಕಡಿಮೆ ಮಾಡುತ್ತಿರುವಂತೆಯೇ ರಾಜ್ಯದ ನಿರೀಕ್ಷೆಯೂ ಕಡಿಮೆಯಾಗುತ್ತ ಬಂದಿದೆ. 2019-2020ನೇ ಸಾಲಿನ ಬಜೆಟ್​ನಲ್ಲಿ ಕೇಂದ್ರದಿಂದ 39,806 ಕೋಟಿ ರೂ. ತೆರಿಗೆ ಪಾಲು ನಿರೀಕ್ಷಿಸಲಾಗಿತ್ತು. ಆಗ 30,919 ಕೋಟಿ ರೂ. ಬಂತು. 2020-2021ರಲ್ಲಿ 28,591 ಕೋಟಿ ರೂ. ನಿರೀಕ್ಷೆ ಮಾಡಲಾಗಿತ್ತು. ಆದರೆ, ಕೇಂದ್ರ ಬಿಡುಗಡೆ ಮಾಡಿದ್ದು, 21,694 ಕೋಟಿ ರೂ. ಮಾತ್ರ. ಅಂದರೆ ಶೇ.29 ಕಡಿಮೆ ಹಣ ಬಿಡುಗಡೆ ಮಾಡಲಾಗಿದೆ.

    ಕಾರ್ಪೋರೇಟ್​ ತೆರಿಗೆ ಇಳಿಕೆ!: ಕಾರ್ಪೋರೇಟ್​ ಕಂಪನಿಗಳ ಮೇಲಿನ ತೆರಿಗೆ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ. ಜನಸಾಮಾನ್ಯರಿಂದ ಶೇ.49 ತೆರಿಗೆ ವಸೂಲಿ ಮಾಡಿದರೆ, ಕಾಪೋರೇಟ್ ಕಂಪನಿಗಳಿಂದ ಶೇ.51 ತೆರಿಗೆ ವಿಧಿಸಲಾಗುತ್ತದೆ. ಕಾಪೋರೇಟ್ ಕಂಪನಿಗಳ ತೆರಿಗೆ ಹೊರೆ ಶೇ.24 ಕಡಿಮೆಯಾದರೆ, ಅದೇ ಸಂದರ್ಭದಲ್ಲಿ ಜನರ ಮೇಲಿನ ತೆರಿಗೆ ಶೇ.24 ಹೆಚ್ಚಿದೆ. ಅಚ್ಚರಿಯ ಸಂಗತಿ ಎಂದರೆ ಕರೊನಾ ಸಂದರ್ಭದಲ್ಲೂ ಕಾಪೋರೇಟ್ ತೆರಿಗೆ ಶೇ.7.50 ಕಡಿಮೆಯಾಗಿದೆ!

    ಜಿಎಸ್​ಟಿ ಪರಿಹಾರದ ಕತೆ ಏನು?: 2017ರಲ್ಲಿ ಜಿಎಸ್​ಟಿ ಜಾರಿಯಾದ ಬಳಿಕ ನಂತರ ಐದು ವರ್ಷಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತು. ಅದರ ಪ್ರಕಾರ 2022ಕ್ಕೆ ಪರಿಹಾರ ಸ್ಥಗಿತಗೊಳ್ಳಲಿದೆ. ಈ ಸಾಲಿಗೆ 22,840 ಕೋಟಿ ರೂ. ಸಿಗಬಹುದೆಂದು ಅಂದಾಜು ಮಾಡಲಾಗಿತ್ತು. ಇನ್ನೂ ಹಳೆಯ ಬಾಕಿ 9 ಸಾವಿರ ಕೋಟಿ ರೂ.ಗೂ ಹೆಚ್ಚು ಬರಬೇಕಾಗಿದೆ. ರಾಜ್ಯದಿಂದ ಕೇಂದ್ರಕ್ಕೆ ಸುಮಾರು 3 ಲಕ್ಷ ಕೋಟಿ ರೂ. ತೆರಿಗೆ ಸಂದಾಯವಾಗುತ್ತದೆ. ಅದರ ಪ್ರಕಾರ ಶೇ.42 ಅಂದರೆ 1.26 ಲಕ್ಷ ಕೋಟಿ ರೂ. ಕೇಂದ್ರದಿಂದ ಪರಿಹಾರ ಬರಬೇಕು. ಆದರೆ, ಈ ವರ್ಷ 43 ಸಾವಿರ ಕೋಟಿ ರೂ. ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರ ಅಷ್ಟು ಕೊಡುವುದು ಕೂಡ ಕಷ್ಟ ಎಂಬ ಪರಿಸ್ಥಿತಿ ಇದೆ. 2019-2020 ರಲ್ಲಿ 14,375 ಕೋಟಿ ರೂ. ಹಾಗೂ 2020-2021ರಲ್ಲಿ 14,270 ಕೋಟಿ ರೂ. ಜಿಎಸ್​ಟಿ ಪರಿಹಾರ ಲಭಿಸಿದೆ.

    ತೆರಿಗೆ ಒರತೆ, ಕೇಂದ್ರದ ಸಹಾಯಧನ ಕೊರತೆ: ನಿರೀಕ್ಷೆ ಮೀರುವ ಕರ, ಬದ್ಧತಾ ವೆಚ್ಚಗಳ ಭಾರ...

    ದೇಶವೂ ಸಾಲದ ಸುಳಿಯಲ್ಲಿ: ದೇಶದ ಸಾಲ 2013-14ನೇ ಸಾಲಿನಲ್ಲಿ 53.11 ಲಕ್ಷ ಕೋಟಿ ರೂ.ಗಳಾಗಿತ್ತು. 2021-2022ನೇ ಸಾಲಿನಲ್ಲಿ ಅದು 1,35,86,976 ಕೋಟಿ ರೂ.ಗಳಾಗಿದೆ. ಇದು 2023ಕ್ಕೆ 1,52,48,095 ಕೋಟಿ ರೂ. ಆಗಲಿದೆ ಎಂದು ಕೇಂದ್ರದ ಅಂಕಿ-ಅಂಶಗಳೇ ಸ್ಪಷ್ಟಪಡಿಸಿವೆ. ಅಚ್ಚರಿ ವಿಷಯವೆಂದರೆ, ಈ ವರ್ಷ ಸಾಲದ ಮೇಲಿನ ಬಡ್ಡಿಗಾಗಿಯೇ ಕೇಂದ್ರ ಸರ್ಕಾರ 9,40,651 ಕೋಟಿ ರೂ. ಭರಿಸಬೇಕಿದೆ. ಏಳೆಂಟು ವರ್ಷದಲ್ಲಿ ಕೇಂದ್ರ ಸರ್ಕಾರ ಮಾಡಿದ ಸಾಲ 100 ಲಕ್ಷ ಕೋಟಿ ರೂ. ಗಳಷ್ಟಾಗಿದೆ. ಜತೆಗೆ ಕೇಂದ್ರ ಸರ್ಕಾರ ಪಡೆಯುತ್ತಿರುವ ವಿದೇಶ ಸಾಲದ ಹೊರೆಯೂ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ.

    ಅಸಲು, ಬಡ್ಡಿ ಪಾವತಿ ಎಷ್ಟು?: ರಾಜ್ಯ ಸರ್ಕಾರದ ಸ್ಥಿತಿಯೇನೂ ಭಿನ್ನವಾಗಿಲ್ಲ. ಪ್ರಸಕ್ತ ಸಾಲಿನಲ್ಲಿ ಅಸಲು ಹಾಗೂ ಬಡ್ಡಿ ಪಾವತಿಗಾಗಿ ರಾಜ್ಯ ಸರ್ಕಾರ 41,726 ಕೋಟಿ ರೂ. ವೆಚ್ಚ ಮಾಡಬೇಕಿದೆ. ಮುಂದಿನ ವರ್ಷಗಳಲ್ಲಿ ಈ ಮೊತ್ತ ಇನ್ನಷ್ಟು ಹೆಚ್ಚಾಗುತ್ತದೆ.

    ಪರಿಣಾಮಗಳೇನು?

    • ಅಭಿವೃದ್ಧಿ ವೇಗಕ್ಕೆ ದೊಡ್ಡ ಅಡ್ಡಿ
    • ಕಲ್ಯಾಣ ಕಾರ್ಯಕ್ರಮ, ಜನಪ್ರಿಯ ಕಾರ್ಯಕ್ರಮ ಘೋಷಣೆ ಕಷ್ಟ
    • ಜನಸಾಮಾನ್ಯರ ಮೇಲೆ ಅಧಿಕ ತೆರಿಗೆ ಹೊರೆ
    • ಬಡತನದ ಪ್ರಮಾಣ ಹೆಚ್ಚಳ
    • ಬದ್ಧತಾ ವೆಚ್ಚ ನಿರ್ವಹಣೆಗೇ ಹೆಣಗಬೇಕಾದ ಸ್ಥಿತಿ

    1,29,490 ಕೋಟಿ ರೂ. ಸಂಗ್ರಹ: ರಾಜ್ಯ ಸರ್ಕಾರ 2021-2022ರ ಬಜೆಟ್​ನಲ್ಲಿ ಸ್ವಂತ ತೆರಿಗೆ ಮತ್ತು ರಾಜಸ್ವ ರೂಪದಲ್ಲಿ 1,72,541 ಕೋಟಿ ರೂ. ನಿರೀಕ್ಷಿಸಿತ್ತು. ಡಿಸೆಂಬರ್ ಅಂತ್ಯದವರೆಗೆ 1,29,490 ಕೋಟಿ ರೂ. ಸಂಗ್ರಹವಾಗಿದ್ದು, ಗುರಿ ಮುಟ್ಟುವ ಸಾಧ್ಯತೆಗಳಿವೆ.

    ಜನರ ಮೇಲೆ ತೆರಿಗೆ ಬರೆ: ಜಿಎಸ್​ಟಿ ಪರಿಹಾರ ಮತ್ತು ಕೇಂದ್ರದ ಸಹಾಯಧನ ಕಡಿತಗೊಂದರೆ ರಾಜ್ಯ ದೊಡ್ಡ ಮಟ್ಟದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತದೆ. ಆಗ ಸರ್ಕಾರ ವೆಚ್ಚಗಳಿಗೆ ಸಾಲದ ಹೊರತು ಬೇರೆ ದಾರಿಯೇ ಇರುವುದಿಲ್ಲ. ಜತೆಗೆ ರಾಜ್ಯ ಸರ್ಕಾರ ಸಂಪನ್ಮೂಲ ಕ್ರೋಡೀಕರಣಕ್ಕೆ ಆಸ್ತಿ ತೆರಿಗೆ, ನೀರು, ವಿದ್ಯುತ್ ಮತ್ತಿತರ ಸೇವೆಗಳಿಗೆ ಜನಸಾಮಾನ್ಯರ ಮೇಲೆ ತೆರಿಗೆ ಭಾರ ಹೊರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆಸ್ತಿ ತೆರಿಗೆ 2ರಿಂದ 3 ಪಟ್ಟು ಹೆಚ್ಚಿದೆ. ಖಾಲಿ ನಿವೇಶನಕ್ಕೂ ವಿಪರೀತ ತೆರಿಗೆ ವಿಧಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts