More

    ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗಕ್ಕೆ ಕರ್ನಾಟಕದ ಹೊಸ ಕೊಡುಗೆ ಪ್ರಸಿದ್ಧಕೃಷ್ಣ

    ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಇನ್ನು ಕೇವಲ 4 ದಿನಗಳು ಬಾಕಿ ಇರುವಾಗ ಕೊನೆಗೂ 18 ಆಟಗಾರರ ಭಾರತ ತಂಡದ ಪ್ರಕಟಗೊಂಡಿದ್ದು, ಕರ್ನಾಟಕದ ಯುವ ವೇಗಿ ಪ್ರಸಿದ್ಧಕೃಷ್ಣ ಚೊಚ್ಚಲ ಬಾರಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಪರ ಈಗಾಗಲೆ ಟಿ20 ಕ್ರಿಕೆಟ್ ಆಡಿರುವ ಸೂರ್ಯಕುಮಾರ್ ಯಾದವ್ ಮತ್ತು ಆಲ್ರೌಂಡರ್ ಕೃನಾಲ್ ಪಾಂಡ್ಯ ಮೊದಲ ಬಾರಿಗೆ ಏಕದಿನ ತಂಡದಲ್ಲೂ ಅವಕಾಶ ಪಡೆದಿದ್ದಾರೆ. ಏಕದಿನ ಸರಣಿಯ 3 ಪಂದ್ಯಗಳು ಮಾರ್ಚ್ 23, 26 ಮತ್ತು 28ರಂದು ಪುಣೆಯಲ್ಲಿ ನಡೆಯಲಿವೆ.

    ಈಗಾಗಲೆ ಭಾರತ ಎ ಮತ್ತು ಐಪಿಎಲ್‌ನಲ್ಲಿ ಕೆಕೆಆರ್ ತಂಡಗಳ ಪರ ಮಿಂಚಿರುವ ಬೆಂಗಳೂರಿನ 25 ವರ್ಷದ ಪ್ರಸಿದ್ಧಕೃಷ್ಣ, ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯಲ್ಲೂ 14 ವಿಕೆಟ್ ಕಬಳಿಸಿ ತೋರಿದ್ದ ಗಮನಾರ್ಹ ನಿರ್ವಹಣೆಯಿಂದ ಭಾರತ ತಂಡಕ್ಕೆ ಕರೆ ಪಡೆದಿದ್ದಾರೆ. ಭಾರತ ಪರ ಇದುವರೆಗೆ 18 ಟಿ20 ಪಂದ್ಯ ಆಡಿರುವ ಕೃನಾಲ್ ಪಾಂಡ್ಯ ಕೂಡ ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಡ ಪರ 5 ಪಂದ್ಯಗಳಲ್ಲಿ 2 ಶತಕ, 2 ಅರ್ಧಶತಕಗಳ ಸಹಿತ 388 ರನ್ ಸಿಡಿಸಿ ಉತ್ತಮ ನಿರ್ವಹಣೆ ತೋರಿದ್ದರು. ಮುಂಬೈ ಆಟಗಾರ ಸೂರ್ಯಕುಮಾರ್ ಇಂಗ್ಲೆಂಡ್ ವಿರುದ್ಧ 4ನೇ ಟಿ20ಯಲ್ಲಿ ಬಿರುಸಿನ ಅರ್ಧಶತಕ ಸಿಡಿಸಿ ಮಿಂಚಿದ್ದರಿಂದ ಏಕದಿನದಲ್ಲೂ ಅವಕಾಶ ಪಡೆದಿದ್ದಾರೆ.

    ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ವೇಗಿ ಜಸ್‌ಪ್ರೀತ್ ಬುಮ್ರಾ ಏಕದಿನ ಸರಣಿಯಿಂದಲೂ ವಿಶ್ರಾಂತಿ ಪಡೆದಿದ್ದರೆ, ವೇಗಿ ಮೊಹಮದ್ ಶಮಿ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಇನ್ನೂ ಫಿಟ್ ಆಗದ ಕಾರಣ ತಂಡದಲ್ಲಿ ಸ್ಥಾನ ಪಡೆದಿಲ್ಲ. ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ತಂಡದಲ್ಲಿ ವಿಕೆಟ್ ಕೀಪರ್‌ಗಳಾಗಿ ಸ್ಥಾನ ಪಡೆದಿದ್ದು, ಟಿ20 ಸರಣಿಯಲ್ಲಿ ಮಿಂಚಿದರೂ ಇಶಾನ್ ಕಿಶನ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿಲ್ಲ. ಕಳೆದ ಆಸ್ಟ್ರೇಲಿಯಾ ಪ್ರವಾಸದ ಏಕದಿನ ತಂಡದಲ್ಲಿದ್ದ ಕನ್ನಡಿಗರಾದ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ ಮತ್ತು ನವದೀಪ್ ಸೈನಿ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿಲ್ಲ.

    ಏಕದಿನ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪನಾಯಕ), ಶಿಖರ್ ಧವನ್, ಶುಭಮಾನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿ.ಕೀ), ಕೆಎಲ್ ರಾಹುಲ್ (ವಿ.ಕೀ), ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್, ಭುವನೇಶ್ವರ ಕುಮಾರ್, ಮೊಹಮದ್ ಸಿರಾಜ್, ಪ್ರಸಿದ್ಧಕೃಷ್ಣ, ಶಾರ್ದೂಲ್ ಠಾಕೂರ್.

    ಸರ್ಪ್ರೈಸ್ ಪ್ಯಾಕೇಜ್ ಪ್ರಸಿದ್ಧಕೃಷ್ಣ
    ನಿರಂತರವಾಗಿ ಗಂಟೆಗೆ 140 ಕಿಮೀ ವೇಗದಲ್ಲಿ ಚೆಂಡೆಸೆಯಬಲ್ಲ ಸಾಮರ್ಥ್ಯದ ಲಂಬೂ ವೇಗಿ ಪ್ರಸಿದ್ಧಕೃಷ್ಣ, ಟಿ20 ವಿಶ್ವಕಪ್‌ಗೆ ‘ಸರ್ಪ್ರೈಸ್ ಪ್ಯಾಕೇಜ್’ ಆಗುತ್ತಾರೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ ವರ್ಷವೇ ಹೇಳಿಕೊಂಡಿದ್ದರು. ಆದರೆ ಕರೊನಾ ಹಾವಳಿಯಿಂದಾಗಿ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿಲ್ಲ. ಇದರಿಂದಾಗಿ ಪ್ರಸಿದ್ಧಕೃಷ್ಣ ಕೂಡ ಭಾರತ ಪರ ಆಡುವ ಅವಕಾಶಕ್ಕಾಗಿ ನಿರೀಕ್ಷೆಗಿಂತ ಹೆಚ್ಚು ಸಮಯ ಕಾಯಬೇಕಾಯಿತು. 2015ರಲ್ಲಿ ಬಾಂಗ್ಲಾದೇಶ ಎ ವಿರುದ್ಧ ಮೈಸೂರಿನಲ್ಲಿ ಕರ್ನಾಟಕ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಪ್ರಸಿದ್ಧಕೃಷ್ಣ ಆ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದು ಮಿಂಚಿದ್ದರು. ಕರ್ನಾಟಕ ತಂಡದ ಬಲಿಷ್ಠ ವೇಗದ ಬೌಲಿಂಗ್ ವಿಭಾಗದಿಂದಾಗಿ ಅವರಿಗೆ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚಿನ ಅವಕಾಶ ಸಿಗದಿದ್ದರೂ, ಏಕದಿನ-ಟಿ20 ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವ ಸಂಪಾದಿಸಿದ್ದಾರೆ.

    48 ಲಿಸ್ಟ್ ಎ ಪಂದ್ಯಗಳಲ್ಲಿ 81 ವಿಕೆಟ್ ಮತ್ತು 40 ಟಿ20 ಪಂದ್ಯಗಳಲ್ಲಿ 33 ವಿಕೆಟ್ ಕಬಳಿಸಿರುವ ಪ್ರಸಿದ್ಧಕೃಷ್ಣ, ಐಪಿಎಲ್‌ನಲ್ಲೂ ಕೋಲ್ಕತ ನೈಟ್‌ರೈಡರ್ಸ್‌ ಪರ ಉತ್ತಮ ನಿರ್ವಹಣೆ ತೋರಿದ್ದಾರೆ. ಜತೆಗೆ ಕೆಪಿಎಲ್‌ನಲ್ಲಿ ವಿವಿಧ ತಂಡಗಳ ಪರ ಆಡಿದ್ದು, ಭಾರತ ಎ ತಂಡದ ಜತೆಗೂ ಹಲವು ಸರಣಿ ಆಡಿದ್ದಾರೆ. ಬೆಂಗಳೂರು ನಗರದಲ್ಲೇ ಹುಟ್ಟಿ ಬೆಳೆದಿರುವ ಪ್ರಸಿದ್ಧಕೃಷ್ಣ, ಕಾರ್ಮೆಲ್ ಸ್ಕೂಲ್ ಮತ್ತು ಮಹಾವೀರ್ ಜೈನ್ ಕಾಲೇಜಿನ ಹಳೆವಿದ್ಯಾರ್ಥಿ. 13ನೇ ವಯಸ್ಸಿನಲ್ಲೇ ಬಸವನಗುಡಿ ಕ್ರಿಕೆಟ್ ಅಕಾಡೆಮಿ ಸೇರಿದ್ದರು. ತಮ್ಮ ಎಸೆತಕ್ಕೆ ವಿಕೆಟ್ ಹಾರಿ ಹೋಗುವುದನ್ನು ಆನಂದಿಸಲು ಮತ್ತು ಬ್ಯಾಟ್ಸ್ ಮನ್‌ಗಳು ಬೌನ್ಸರ್‌ಗಳಿಗೆ ಹೆದರುತ್ತಾರೆ ಎಂಬುದನ್ನು ಅರಿತುಕೊಂಡು ವೇಗದ ಬೌಲರ್ ಆಗುವತ್ತ ಅವರು ಗಮನಹರಿಸಿದ್ದರು. ಚೆನ್ನೈನಲ್ಲಿ ನಡೆದ ಎಂಆರ್‌ಎಫ್​ ಪೇಸ್ ಫೌಂಡೇಷನ್ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಬೌಲಿಂಗ್ ಅಸ್ತ್ರವನ್ನು ಹರಿತಗೊಳಿಸಿದ್ದರು. ಗಂಟೆಗೆ 150 ಕಿಮೀ ವೇಗದಲ್ಲೂ ಚೆಂಡೆಸೆಯಬಲ್ಲ ಸಾಮರ್ಥ್ಯದ ಪ್ರಸಿದ್ಧಕೃಷ್ಣ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ವಿನಯ್‌ಕುಮಾರ್, ಅಭಿಮನ್ಯು ಮಿಥುನ್ ಬಳಿಕ ಟೀಮ್ ಇಂಡಿಯಾದ ವೇಗದ ಬೌಲಿಂಗ್ ಪಡೆಗೆ ಕರ್ನಾಟಕದ ಹೊಸ ಕೊಡುಗೆಯಾಗಲಿದ್ದಾರೆ.

    *ದೇಶದ ಪರ ಆಡಲು ಬಂದಿರುವ ಈ ಕರೆ ಅಭೂತಪೂರ್ವ ಅನುಭವ ನೀಡಿದೆ. ಕನಸು ನನಸಾದಂತಾಗಿದೆ. ನನ್ನ ಪಾಲಿನ ಆಟವನ್ನು ಆಡಲು ಮತ್ತು ತಂಡದ ಯಶಸ್ಸಿಗೆ ಕೊಡುಗೆ ನೀಡಲು ಉತ್ಸುಕನಾಗಿರುವೆ. ಬಿಸಿಸಿಐಗೆ ಧನ್ಯವಾದಗಳು. ಈ ಹೊಸ ಅಧ್ಯಾಯ ಆರಂಭಕ್ಕೆ ಕಾತರದಿಂದಿರುವೆ.
    | ಪ್ರಸಿದ್ಧಕೃಷ್ಣ

    ದಕ್ಷಿಣ ಆಫ್ರಿಕಾಕ್ಕೆ ಕುಲಶೇಖರ ಕಡಿವಾಣ, ಫೈನಲ್‌ಗೇರಿದ ಶ್ರೀಲಂಕಾ ಲೆಜೆಂಡ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts