More

    ಪ್ರಶಾಂತ್​ ಕಿಶೋರ್​ರನ್ನು ಪಕ್ಷದಿಂದಲೇ ಉಚ್ಛಾಟಿಸಿದ ಬಿಹಾರ ಸಿಎಂ: ಈ ಬಗ್ಗೆ ಚುನಾವಣಾ ಚಾಣಕ್ಯ ಹೇಳಿದ್ದೇನು?

    ಪಟನಾ: ಬಿಹಾರದ ಸಂಯುಕ್ತ ಜನಾತದಳ ಪಕ್ಷ(ಜೆಡಿಯು)ದಲ್ಲಿ ಬುಧವಾರ ಭಾರೀ ಬದಲಾವಣೆ ನಡೆದಿದೆ. ಪಕ್ಷದ ಸಂಸ್ಥಾಪಕ ಹಾಗೂ ಸಿಎಂ ನಿತೀಶ್​ ಕುಮಾರ್​ ಅವರು ಪಕ್ಷದ ಉಪಾಧ್ಯಕ್ಷ ಹಾಗೂ ಚುನಾವಣಾ ಚಾಣಕ್ಯ ಎಂದೇ ಖ್ಯಾತರಾಗಿರುವ ಪ್ರಶಾಂತ್​ ಕಿಶೋರ್​ ಎಂಬುವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.

    ಪ್ರಶಾಂತ ಕಿಶೋರ್​ ಮಾತ್ರವಲ್ಲದೆ ಪಕ್ಷದ ಮತ್ತೊಬ್ಬ ನಾಯಕ ಪವನ್​ ವರ್ಮಾ ಅವರನ್ನು ಪಕ್ಷದಿಂದ ಹೊರದೂಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಕಿಶೋರ್​ ಆರಂಭದಿಂದಲೂ ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಯು ಮೈತ್ತಿಕೂಟ ಆಗಿರುವುದರಿಂದ ಸಿಎಂ ನಿತೀಶ್​ ಕುಮಾರ್​ ಅವರಿಗೆ ಕಿಶೋರ್​ ಹೇಳಿಕೆ ಇರಿಸುಮುರಿಸು ಉಂಟಾಗಿತ್ತು. ಅಲ್ಲದೆ, ಕಿಶೋರ್​ ಮತ್ತು ಬಿಜೆಪಿ ನಾಯಕರ ನಡುವೆ ಟ್ವೀಟ್​ ವಾರ್​ ಕೂಡ ನಡೆಯುತ್ತಿತ್ತು.

    ಇನ್ನು ಪವನ್​ ವರ್ಮಾ, ನಿತೀಶ್​ ಕುಮಾರ್​ ಅವರಿಗೆ ಬಹಿರಂಗವಾಗಿಯೇ ಪತ್ರ ಬರೆದು ಬಿಜೆಪಿ ಮತ್ತು ಸ್ವಪಕ್ಷವನ್ನು ಟೀಕಿಸಿದ್ದರು. ಇಂದು ಜೆಡಿಯು ಅಸಹಿಷ್ಣುತೆ ಆಗಿರುವುದು ದುಃಖಕರ ದಿನ. ಕಠಿಣವಾದ ಪ್ರಶ್ನೆಗಳನ್ನು ಕೇಳಿದಾಗ ಜೆಡಿಯು ತನ್ನ ಮುಖವನ್ನೇ ಕನ್ನಡಿಯಲ್ಲಿ ನೋಡಿಕೊಳ್ಳಲು ಆಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು.

    ಈ ಎಲ್ಲ ಬೆಳವಣಿಗೆಯ ನಡುವೆಯೇ ಕೆಲ ದಿನಗಳ ಹಿಂದೆ ಕಿಶೋರ್​ ಮತ್ತು ಪವನ್​ ವರ್ಮಾ ಉದ್ದೇಶಿಸಿ ಇಬ್ಬರು ಆರಾಮವಾಗಿ ಪಕ್ಷವನ್ನು ತ್ಯಜಿಸಬಹುದೆಂದು ಹೇಳಿದ್ದರು. ಇದೀಗ ನಿತೀಶ್​ ಅವರೇ ಕಿಶೋರ್ ಮತ್ತು ವರ್ಮಾರನ್ನು​ ಪಕ್ಷದಿಂದ ಹೊರದೂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ಪಕ್ಷದಿಂದ ಉಚ್ಛಾಟನೆ ಮಾಡಿದ ಬೆನ್ನಲ್ಲೇ ಟ್ವೀಟ್​ ಮಾಡಿರುವ ಕಿಶೋರ್, ಧನ್ಯವಾದಗಳು ನಿತೀಶ್ ಕುಮಾರ್​. ಬಿಹಾರದ ಸಿಎಂ ಸ್ಥಾನವನ್ನು ಉಳಿಸಿಕೊಂಡಿದ್ದಕ್ಕೆ ನಿಮಗೆ ಶುಭಾಶಯಗಳು. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

    ಅಂದಹಾಗೆ ಪ್ರಶಾಂತ್​ ಕಿಶೋರ್​ ಚುನಾವಣಾ ತಂತ್ರಗಳಲ್ಲಿ ಪರಿಣಿತರಾಗಿದ್ದಾರೆ. 2015ರ ಬಿಹಾರ ಚುನಾವಣೆಯಲ್ಲಿ ಜೆಡಿಯು ಗೆಲುವಿನಲ್ಲಿ ಕಿಶೋರ್​ ಪಾತ್ರ ಮಹತ್ವದ್ದು ಎಂದು ಅಂದಾಜಿಸಲಾಗಿದೆ. ಕಿಶೋರ್​ 2018ರಿಂದ ಜೆಡಿಯುನ ಉಪಾಧ್ಯಕ್ಷರಾಗಿದ್ದರು. ಇಬ್ಬರ ನಡುವೆ ಒಳ್ಳೆಯ ಸಂಬಂಧವೂ ಇತ್ತು. ಆದರೆ, ಸಿಎಎ ವಿಚಾರದಲ್ಲಿನ ವಿಭಿನ್ನ ನಿಲುವು ಇಬ್ಬರ ನಡುವಿನ ಸಂಬಂಧ ಹಳಸುವಂತೆ ಮಾಡಿತು.

    ಸಿಎಎ ಹಾಗೂ ಎನ್​ಸಿಆರ್​ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬರುವಂತೆ ಆಗಾಗ ನಿತೀಶ್​ ಕುಮಾರ್​ ಅವರನ್ನು ಕಿಶೋರ್​ ಒತ್ತಾಯಿಸುತ್ತಿದ್ದರು. ಅಲ್ಲದೆ, ಸಿಎಎ ವಿರೋಧಿಸುವಂತೆ ಇತರೆ ಪಕ್ಷದ ನಾಯಕರ ಸಹಾಯವನ್ನು ಕಿಶೋರ್ ಕೋರುತ್ತಿದ್ದರು. ಈ ಎಲ್ಲ ಬೆಳವಣಿಗೆಯೇ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಕಾರಣವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts