More

    ಐಟಿ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವದಲ್ಲೇ ಮೊದಲ ಸ್ಥಾನ

    ಮಂಗಳೂರು: ಭಾರತ ಇಂದು ಸಾಫ್ಟ್‌ವೇರ್ ದಿಗ್ಗಜ ರಾಷ್ಟ್ರಗಳಲ್ಲಿ ಒಂದಾಗಿದ್ದು, ಮುಂದಿನ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಸಿಲಿಕಾನ್ ವ್ಯಾಲಿಯನ್ನೂ ಬೆಂಗಳೂರು ಮೀರಿ ನಿಲ್ಲಲಿದೆ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಚೇರ‌್ಮನ್ ಟಿ.ವಿ.ಮೋಹನ್‌ದಾಸ್ ಪೈ ಹೇಳಿದರು.
    ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿ, ವಿಕೆಎಸ್‌ಎಸ್‌ಎಫ್ ಅಲುಮ್ನಿ ಅಸೋಸಿಯೇಶನ್ ಮತ್ತು ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ಶನಿವಾರ ಕೊಡಿಯಾಲ್‌ಬೈಲ್‌ನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಆಯೋಜಿಸಲಾದ ಪ್ರೇರಣಾ-2020 ಸಮಾವೇಶದಲ್ಲಿ ಸಮಾರೋಪ ಭಾಷಣ ಮಾಡಿದರು.

    ಭಾರತದಲ್ಲಿ ಮಾಹಿತಿತಂತ್ರಜ್ಞಾನಕ್ಕೆ ಸಂಬಂಧಿಸಿ ವಾರ್ಷಿಕ 150 ಬಿಲಿಯನ್ ಡಾಲರ್ ವ್ಯವಹಾರ ನಡೆಯುತ್ತಿದೆ. ಬೆಂಗಳೂರು ಒಂದರಲ್ಲೇ ಸುಮಾರು 20 ಲಕ್ಷ ಮಂದಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, 55 ಬಿಲಿಯನ್ ಪ್ರಾಜೆಕ್ಟ್‌ಗಳು ವಿದೇಶಗಳಿಗೆ ಮುಖ್ಯವಾಗಿ ಅಮೆರಿಕಕ್ಕೆ ರಫ್ತಾಗುತ್ತಿದೆ. ವಾರ್ಷಿಕ ಲಕ್ಷಾಂತರ ಮಂದಿ ಐಟಿ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ ಎಂದರು.
    ಇಂದು ತಂತ್ರಜ್ಞಾನ ಬೆಳೆದಿದ್ದು, ಮನುಷ್ಯರು ಮಾಡುವ ಕೆಲಸಗಳನ್ನು ಯಂತ್ರಗಳು, ರೋಬಾಟ್‌ಗಳು ಮಾಡುತ್ತಿವೆ. ತಂತ್ರಜ್ಞಾನದ ಬಳಕೆಯಲ್ಲೂ ದೇಶ ಮುಂದಿದ್ದು, ಕಳೆದ ತಿಂಗಳು 1.3 ಬಿಲಿಯನ್ ರೂ. ಯುಪಿಐ ಬಳಕೆ ಮಾಡಿ ಪಾವತಿ ನಡೆದಿದೆ. 45 ಸಾವಿರ ಸ್ಟಾರ್ಟಪ್‌ಗಳು ದೇಶದಲ್ಲಿದ್ದು, 7 ಲಕ್ಷ ಉದ್ಯೋಗಿಗಳಿದ್ದಾರೆ ಎಂದರು.

    ಮುಂದಿನ ವರ್ಷದಿಂದ ವಿಶ್ವ ಕೊಂಕಣಿ ಕೇಂದ್ರ ವಿದ್ಯಾರ್ಥಿವೇತನ ವಿದ್ಯಾರ್ಥಿಗಳಿಗೂ ಸಾಫ್ಟ್‌ವೇರ್ ಕೋಡಿಂಗ್ ತರಗತಿಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಇದು ಅವರಿಗೆ ಭವಿಷ್ಯದಲ್ಲಿ ಹೆಚ್ಚು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಕೆಲವು ಔದ್ಯೋಗಿಕ ವಿಚಾರಗಳ ಕುರಿತು ಹೆಚ್ಚು ಕುತೂಹಲ ಹೊಂದಿರಬೇಕು. ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಹೆಚ್ಚು ಓದುವ ಹವ್ಯಾಸ ಹೊಂದಿರಬೇಕು. ಪೊರ್ಟಲ್‌ಗಳಲ್ಲಿ ಸರ್ಚ್ ಮಾಡುವ ಮೂಲಕ ಎಲ್ಲಿ ಯಾವ ವಿಚಾರಗಳಿವೆ ಎಂದು ಗಮನಿಸಬೇಕು ಎಂದು ಸಲಹೆ ನೀಡಿದರು.
    ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕಾಧ್ಯಕ್ಷ ಬಸ್ತಿ ವಾಮನ್ ಶೆಣೈ ಸಮಾವೇಶ ಉದ್ಘಾಟಿಸಿದರು.

    ಬೆಂಗಳೂರು ಮೂಲದ ‘ಸೇತು’ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಸಾಹಿಲ್ ಕಿಣಿ, ಪ್ರಸಿದ್ಧ ಹಿನ್ನೆಲೆ ಧ್ವನಿ ಕಲಾವಿದ ಚೇತನ್ ಸಶಿತಲ್, ಮೆಡ್‌ವೆಲ್ ವೆಂಚರ್ ಸ್ಥಾಪಕ ಮತ್ತು ಸಿಇಒ ಲಲಿತ್ ಪೈ, ಡೊವ್ ಕೆಮಿಕಲ್ಸ್ ಸಂಸ್ಥೆ ಸಿಇಒ ಸುಧೀರ್ ಶೆಣೈ, ಭಾರತೀಯ ನೌಕಾದಳದ ಅಧಿಕಾರಿ ಕಮಾಂಡರ್ ಎನ್.ಪಿ.ಶೆಣೈ, ಕ್ವೆಸ್ಟ್ ಗ್ಲೋಬಲ್ ಸಂಸ್ಥೆಯ ಸಿಒಒ ಅಜಯ್ ಪ್ರಭು, ಜ್ಯೋತಿ ಲ್ಯಾಬೋರೇಟರೀಸ್ ಜಂಟಿ ಆಡಳಿತ ನಿರ್ದೇಶಕ ಉಲ್ಲಾಸ ಕಾಮತ್ ಪ್ರೇರಣಾತ್ಮಕ ಮಾತುಗಳನ್ನಾಡಿದರು.
    ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿ ಚೇರ‌್ಮನ್ ರಾಮ್‌ದಾಸ್ ಕಾಮತ್ ಯು, ಕಾರ್ಯದರ್ಶಿ ಪ್ರದೀಪ್ ಜಿ.ಪೈ, ಪ್ರೇರಣಾ ಮುಖ್ಯಗುರು ಸಂದೀಪ್ ಶೆಣೈ, ವಿಶ್ವ ಕೊಂಕಣಿ ಕೇಂದ್ರ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜ, ಕಾರ್ಯದರ್ಶಿ ನಂದಗೋಪಾಲ ಶೆಣೈ, ಖಜಾಂಚಿ ಬಿ.ಆರ್.ಭಟ್, ಪ್ರಭಾಕರ ಪ್ರಭು ಮೊದಲಾದವರಿದ್ದರು.
    ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಿರೋಶಾ ಕುಮಾರಿ ಸ್ವಾಗತಿಸಿದರು. ದಿವ್ಯಾ ಕಾಮತ್ ಮತ್ತು ಹೇಮಂತ್ ಕುಡ್ವ ಕಾರ್ಯಕ್ರಮ ನಿರೂಪಿಸಿದರು.

    ಕರೊನಾ ಮುನ್ನೆಚ್ಚರಿಕೆ: ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಕರೊನಾ ವೈರಸ್ ಮುನ್ನೆಚ್ಚರಿಕೆಯಾಗಿ ಎಲ್ಲರಿಗೂ ಮಾಸ್ಕ್ ವಿತರಿಸಲಾಯಿತು. ವಿದ್ಯಾರ್ಥಿ, ಅತಿಥಿಗಳು ಸೇರಿದಂತೆ ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸಿ ಸಮಾವೇಶದಲ್ಲಿ ಭಾಗವಹಿಸಿದ್ದರು. ವಿಶ್ವಕೊಂಕಣಿ ವಿದ್ಯಾರ್ಥಿ ವೇತನ ನಿಧಿ ಹಳೇ ವಿದ್ಯಾರ್ಥಿಗಳು ಕರೊನಾ ಹರಡದಂತೆ ಯಾವ ರೀತಿ ತಡೆಯಬಹುದು ಎಂಬುದನ್ನು ವಿವರಿಸಿದರು.

    ಸೋಲನ್ನೇ ಸವಾಲಾಗಿ ಸ್ವೀಕರಿಸುವ ಮನೋಭಾವವಿದ್ದಲ್ಲಿ ಗೆಲುವು ಸಿಗುತ್ತದೆ. ಐಐಟಿಯಲ್ಲಿ ಇಂಜಿನಿಯರಿಂಗ್‌ಗೆ ಸೇರಬೇಕು ಎನ್ನುವ ನನ್ನ ಕನಸು ಜೆಇಇ ಪರೀಕ್ಷೆಯಲ್ಲಿ ಫೇಲ್ ಆಗುವ ಮೂಲಕ ನುಚ್ಚು ನೂರಾಯಿತು. ಮರಳಿ ಯತ್ನಿಸಿ ಯಶಸ್ವಿಯಾದೆ. ಸ್ವಂತ ಉದ್ಯಮ ಆರಂಭಿಸಿ ಬೆಳೆಯಬೇಕೆನ್ನುವಷ್ಟರಲ್ಲಿ ಪಾಲುದಾರ ತೊರೆದು ಮುಚ್ಚಬೇಕಾಯಿತು. ಮತ್ತೆ ಸ್ವಂತ ಸಂಸ್ಥೆ ಆರಂಭಿಸಿ ಯಶಸ್ವಿಯಾಗಿದ್ದೇನೆ. ವಿದ್ಯಾರ್ಥಿಗಳು ತಾವಿರುವ ಸ್ಥಳದಿಂದ ಹೊರಬಂದು ವಿಶ್ವವನ್ನು ನೋಡಬೇಕು.
    – ಸಾಹಿಲ್ ಕಿಣಿ, ಬೆಂಗಳೂರಿನ ‘ಸೇತು’ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts