ಹೊಳೆನರಸೀಪುರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಅವರ ಹೃದಯ ಶ್ರೀಮಂತಿಕೆಗೆ ಮತ ನೀಡುವ ಮೂಲಕ ಗೌರವಿಸಬೇಕಾದದ್ದು ನಮ್ಮ ಕರ್ತವ್ಯ ಎಂದು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಯುವಕರ ಸಂಘದ ಅಧ್ಯಕ್ಷ ದಯಾನಂದ ಅಭಿಪ್ರಾಯಪಟ್ಟರು.
ಪ್ರಜ್ವಲ್ ರೇವಣ್ಣ ಮತ್ತೊಮ್ಮೆ ಸಂಸದರಾಗಲಿ ಮತ್ತು ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಆಡಳಿತ ನಡೆಸಲಿ ಎಂದು ಹಾರೈಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಪ್ರಾರಂಭಿಸಿದ್ದು, ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಮುಂಭಾಗ ಶನಿವಾರ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಯುವ ಶಕ್ತಿಗೆ ಭವಿಷ್ಯ ರೂಪಿಸುವ ಸಲುವಾಗಿ ಗೌಡರು ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ, ಇಂಜಿನಿಯರಿಂಗ್, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಕಾಲೇಜುಗಳು ಹಾಗೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ವರ್ಣಿಸಲು ಆಗುವುದಿಲ್ಲ. ಈ ವಿಷಯವನ್ನು ಯುವ ಜನತೆ ಅರ್ಥೈಸಿಕೊಳ್ಳಬೇಕಿದೆ ಎಂದರು.
ಸಂಘದ ಸದಸ್ಯರಾದ ರಾಜು, ಬಿ.ಎಸ್.ರಾಘವೇಂದ್ರ, ಎಚ್.ಆರ್.ರವಿಕುಮಾರ್, ಚಂದ್ರು, ನವೀನ್, ರವಿಕುಮಾರ್ ಇತರರು ಪಾದಯಾತ್ರಿಗಳನ್ನು ಬೀಳ್ಕೊಟ್ಟರು.