More

    ಶಿರಹಟ್ಟಿ ತಾಲೂಕು ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಎಚ್.ಕೆ.ಪಾಟೀಲ

    ಗದಗ: ಬಡವರ ಶೋಷಣೆ ನಿಲ್ಲಬೇಕು. ಭ್ರಷ್ಟಾಚಾರಮುಕ್ತ ಆಡಳಿತಕ್ಕೆ ಒತ್ತು ,ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಶಿಸ್ತುಬದ್ಧ ಕಾರ್ಯನಿರ್ವಹಣೆಗೆ ಮುಂದಾಗುವಂತೆ ಅಧಿಕಾರಿಗಳಿಗೆ  ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಸೂಚಿಸಿದರು.  

    ಜಿಲ್ಲೆಯ ಶಿರಹಟ್ಟಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರುಗಿದ ತಾಲೂಕಾ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.  ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಬಡವರ ಕಲ್ಯಾಣಕ್ಕೆ ಬದ್ಧ ಸರ್ಕಾರವಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಕಾರ್ಯನಿರ್ವಹಿಸಬೇಕು. ಅಪ್ರಾಮಾಣಿಕ ಆಡಳಿತವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸಚಿವರು ಸಭೆಯಲ್ಲಿ ಎಚ್ಚರಿಸಿದರು.

    ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಟಾನದಿಂದ ಬಡವರ ಬದುಕಲ್ಲಿ ಅಗಾಧ ಬದಲಾವಣೆ ತರುವ ಕಾರ್ಯ ಮಾಡಿದೆ. ಪಂಚ ಗ್ಯಾರಂಟಿಗಳಲ್ಲಿ ಈಗಾಗಲೇ ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮೀ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ. ಈ ಎಲ್ಲ ಯೋಜನೆಗಳು ತಾಲೂಕಿನ ಪ್ರತಿ ಅರ್ಹ ಫಲಾನುಭವಿಗಳಿಗೆ ಪೂರ್ಣಪ್ರಮಾಣದಲ್ಲಿ ತಲುಪಬೇಕು. ಈ ನಿಟ್ಟಿನಲ್ಲಿ ಆಡಳಿತ ವರ್ಗ ನಿರಂತರ ಕಾರ್ಯದ ಮೂಲಕ ಶ್ರಮಿಸಬೇಕು ಎಂದರು.
    ಗ್ಯಾರಂಟಿ ಯೋಜನೆಗಳ ಕುರಿತು ಪ್ರಗತಿ ವರದಿಯನ್ನು ಸಂಬಂಧಿಸಿದ ಇಲಾಖಾ ಮುಖ್ಯಸ್ಥರು ಈ ಕೆಳಗಿನಂತೆ ಸಭೆಗೆ ಮಾಹಿತಿ ಒದಗಿಸಿದರು.  

    ಶಕ್ತಿ ಯೋಜನೆಯು ಮಹಿಳೆಯರ ಉಚಿತ ಸಾರಿಗೆ ಕಲ್ಪಿಸುವ ಯೋಜನೆಯಾಗಿದ್ದು ತಾಲೂಕಿನಲ್ಲಿ ದಿನಂಪ್ರತಿ ಸರಾಸರಿ 6043 ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಇದರ ಟಿಕೇಟ್ ಮೌಲ್ಯ 1.30 ಲಕ್ಷ ಆಗಲಿದೆ. ಜೂನ್ ಮಾಹೆಯಲ್ಲಿ 1,00,789 , ಜುಲೈ ಮಾಹೆಯಲ್ಲಿ 1.82 ಲಕ್ಷ, ಅಗಸ್ಟ ಮಾಹೆಯಲ್ಲಿ 1.78 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಒಟ್ಟಾರೆ 4.61 ಲಕ್ಷ ಮಹಿಳೆಯರು ಈವರೆಗೂ ಪ್ರಯಾಣಿಸಿದ್ದು ಶೂನ್ಯ ಟಿಕೇಟ್ ನೀಡಿದ ಒಟ್ಟು ಮೊತ್ತ 1.05 ಕೋಟಿ ರೂ.ಗಳಾಗಿದೆ  ಎಂದರು.  

    ಗೃಹಜ್ಯೋತಿ  ಯೋಜನೆಯಡಿ ತಾಲೂಕಿನಲ್ಲಿ 22,041 ಅರ್ಹ ಫಲಾನುಭವಿಗಳಿದ್ದು 20,498 ಫಲಾನುಭವಿಗಳು ನೋಂದಣಿ ಮಾಡಿಕೊಂಡು ಯೋಜನೆಯ ಸೌಲಭ್ಯ ಪಡೆದಿರುತ್ತಾರೆ. 1543 ಅರ್ಹ ಫಲಾನುಭವಿಗಳ  ನೋಂದಣಿ ಕಾರ್ಯ ನಡೆದಿದ್ದು ಅವರೂ ಸಹ ಸೆಪ್ಟೆಂಬರ್ ಮಾಹೆಯಲ್ಲಿ ಯೋಜನೆಯ ಸೌಲಭ್ಯ ಪಡೆಯಲಿದ್ದಾರೆ.

    ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ 23,314 ಪಡಿತರ ಚೀಟಿಯ ಅರ್ಹ ಫಲಾನುಭವಿಗಳಿದ್ದಾರೆ. ಇದರಲ್ಲಿ 2,999 ಅಂತ್ಯೋದಯ ಹಾಗೂ 20,415 ಬಿಪಿಎಲ್ ಪಡಿತರದಾರರನ್ನು ಒಳಗೊಂಡಿದೆ. 18,281 ಪಡಿತರ ಚೀಟಿದಾರರ 62,579 ಫಲಾನುಭವಿಗಳು ಡಿಬಿಟಿ ಮೂಲಕ ಹಣ ವರ್ಗಾವಣೆಗೆ ಅರ್ಹರಾಗಿದ್ದಾರೆ.

     ಅವರೆಲ್ಲರಿಗೂ ಜುಲೈ ಮಾಹೆಯಲ್ಲಿ 1.39 ಕೋಟಿ , ಅಗಸ್ಟ ಮಾಹೆಯಲ್ಲಿ 1.41 ಕೋಟಿ ರೂ. ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. 3114 ಪಡಿತರದಾರರಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲು ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಸಾಧ್ಯವಾಗಿಲ್ಲ. ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದ್ದು ಈಗಾಗಲೇ 1800 ಪಡಿತರ ದಾರರಿಗೆ ಇರುವ ತಾಂತ್ರಿಕ ಸಮಸ್ಯೆ ಪರಿಹರಿಸಲಾಗಿದ್ದು ಸೆಪ್ಟೆಂಬರ್ ಮಾಹೆಯ ಸಹಾಯಧನ ನೀಡಲಾಗುವುದು ಎಂದರು.

    ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಒಡತಿಗೆ ಪ್ರತಿ ತಿಂಗಳು 2000 ನಗದು ನೀಡುವ ಯೋಜನೆಯಾಗಿದೆ.ತಾಲೂಕಿನಲ್ಲಿ 25124 ಪಡಿತರ ಚೀಟಿದಾರರಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ 22,436 ಪಡಿತರದಾರರು ಅರ್ಜಿ ಸ್ವೀಕೃತಿಯಾಗಿದ್ದು ಈ ಪೈಕಿ 22,367 ಪಡಿತರದಾರರಿಗೆ ಗೃಹ ಲಕ್ಷ್ಮೀ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಅವರೆಲ್ಲರಿಗೂ ತಲಾ 2000 ರಂತೆ 4.47 ಕೋಟಿ ರೂ. ಪಾವತಿಸಲಾಗಿದೆ. ಇನ್ನೂ 2500 ಪಡಿತರ ಚೀಟಿದಾರರಿಗೆ ಯೋಜನೆಯ ಸೌಲಭ್ಯ ತಲುಪಬೇಕಿದ್ದು ಈ ಕಾರ್ಯವನ್ನು ಸೆಪ್ಟೆಂಬರ್ 20 ರೊಳಗಾಗಿ ಪೂರ್ಣಗೊಳಿಸಲಾಗುವುದು.

    ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಚಿವ ಎಚ್.ಕೆ.ಪಾಟೀಲ ಅವರು ಗೃಹಜ್ಯೋತಿ ಯೋಜನೆಯು ಅರ್ಹರೆಲ್ಲರಿಗೂ ತಲುಪಬೇಕು. ಅಧಿಕಾರಿಗಳು ಶೇ 100 ರಷ್ಟು ಗುರಿ ಸಾಧಿಸಬೇಕು. ತಾಲೂಕಿನಲ್ಲಿ,  ಸೋಲಾರ್, ವಿಂಡ ಪಾವರ್ ಜನರೇಟ್‍ಗೆ ವಿಫುಲ ಅವಕಾಶಗಳಿವೆ. ಇಲ್ಲಿನ ರೈತರಿಗೆ ಈ ಬಗ್ಗೆ ಸರಿಯಾದ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು. ಪಡಿತರ ಅಂಗಡಿಗಳ ಕುರಿತಂತೆ ತಾಲೂಕಿನಲ್ಲಿರುವ 49 ಹಳ್ಳಿಗಳಲ್ಲಿಯೂ ಸಹ ಸರ್ಕಾರದ ನಿಯಮಾನುಸಾರ ಪಡಿತರ ಅಂಗಡಿಗಳಾಗಬೇಕು. ಅಕ್ಟೋಬರ್ 2 ರೊಳಗಾಗಿ ಪಡಿತರ ಅಂಗಡಿ ತೆರೆಯಲು ಸೂಚಿಸಿದರು. ಸೆಪ್ಟೆಂಬರ್ 20 ರೊಳಗಾಗಿ ಗೃಹ ಲಕ್ಷ್ಮೀ ಹಾಗೂ ಅನ್ನಭಾಗ್ಯದ ಯೋಜನೆಯ ಉಳಿದ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಆಗಿರುವ ಅಡಚಣೆ ನಿವಾರಿಸಿ ವರದಿ ಸಲ್ಲಿಸುವಂತೆ ತಿಳಿಸಿದರು.  

    ಸಭೆಯಲ್ಲಿ ಬಿತ್ತನೆ ಬೀಜ, ಗೊಬ್ಬರಗಳ ಸರಬರಾಜು , ವಿದ್ಯುತ್ ಸರಬರಾಜು, ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಲಾಯಿತು. ಆಡಳಿತ ವ್ಯವಸ್ಥೆ ಶಿಸ್ತುಬದ್ಧ ಹಾಗೂ ಬಿಗಿಯಾಗಿರಬೇಕು. ಜನರ ಸಮಸ್ಯೆಗೆ ಸ್ಪಂದಿಸುವ ಮನೋಭಾವನೆಯನ್ನು ಅಧಿಕಾರಿಗಳು ಹೊಂದಬೇಕು ಎಂದು ಹೇಳಿದರು.

    ಸಿಸಿ ಟಿವಿ, ಬಯೋಮೆಟ್ರಿಕ್ : ಶಿರಹಟ್ಟಿ ತಾಲೂಕಿನ ಎಲ್ಲ ತಾಲೂಕಾ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಹಾಗೂ ಬಯೋಮೆಟ್ರಿಕ್ ಹಾಜರಾಗಿ ವ್ಯವಸ್ಥೆ ಜಾರಿಯಾಗಬೇಕು. ಈಮೂಲಕ ಜನಸಾಮಾನ್ಯರಿಗೆ ಪಾರದರ್ಶಕ ಆಡಳಿತ ಹಾಗೂ ಬೃಷ್ಟಾಚಾರಮುಕ್ತ ಆಡಳಿತ ತಲುಪಬೇಕು. ಜನಸಾಮಾನ್ಯರು ವಿನಾಕಾರಣ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಸಿಸಿ ಟಿವಿ ಹಾಗೂ ಬಯೋಮೆಟ್ರಿಕ್ ಉಪಕರಣಗಳು ಅಗತ್ಯವಾಗಿವೆ ಎಂದರು.

    ಸಂಪದ್ಭರಿತ ಶಿರಹಟ್ಟಿ: ಶಿರಹಟ್ಟಿ ತಾಲೂಕು ನೈಸರ್ಗಿಕವಾಗಿ, ಐತಿಹಾಸಿಕವಾಗಿ, ಧಾರ್ಮಿಕವಾಗಿ ಸಂಪದ್ಭರಿತವಾಗಿದೆ.  ವರವಿಯ ಮೌನೇಶ, ಹೊಳಲಮ್ಮ ದೇವಸ್ಥಾನ, ಶ್ರೀಮಂತಗಡ, ಕೋಮುಸೌಹಾರ್ದತೆ ಪ್ರತೀಕ ಫಕೀರೇಶ್ವರ ಮಠ, ಅಗಾಧ ಸಸ್ಯ ಸಂಪದ್ಭರಿತ ನೈಸರ್ಗಿಕ ಪ್ರಕೃತಿಯನ್ನು ಶಿರಹಟ್ಟಿ ತಾಲೂಕು ತನ್ನ ಒಡಲಲ್ಲಿ ಅಡಗಿದೆ. ತಾಲೂಕು ವ್ಯಾಪ್ತಿ ಚಿಕ್ಕದಾಗಿದ್ದು ಅದನ್ನು ಸಮರ್ಪಕವಾಗಿ ಸರಿಯಾಗಿ ಅಭಿವೃದ್ಧಿಪಡಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.  

    ಶಾಸಕ ಡಾ.ಚಂದ್ರು ಲಮಾಣಿ ಅವರು ಮಾತನಾಡಿ ಕುಡಿಯುವ ನೀರಿನ ವ್ಯವಸ್ಥೆ ಬಟ್ಟೂರು ಕೆರೆಗೆ ನೀರು ತುಂಬಿಸುವುದು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಚಿವರ ಗಮನಕ್ಕೆ ತರುವ ಮೂಲಕ ಪರಿಹಾರಕ್ಕೆ ಮುಂದಾದರು.  

    ಸಭೆಯಲ್ಲಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಎ.ಎ.ಕಂಬಾಳಿಮಠ,ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಜಿಲ್ಲಾ ಪಂಚಾಯತ್ ಅಧಿಕಾರಿ ಚಳಗೇರಿ ಸೇರಿದಂತೆ ತಹಶೀಲ್ದಾರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಮುಖ್ಯಸ್ಥರು , ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts