More

    ವಿದ್ಯುತ್ ಬೆಳಕಿಗೆ ಬೇಕಾಯ್ತು 4 ದಶಕ

    ಧನಂಜಯ ಗುರುಪುರ
    ಸರ್ಕಾರದ ಯೋಜನೆಗಳು ಹಲವಾರಿದ್ದರೂ ಕಾರಣಾಂತರಗಳಿಂದ ವಿದ್ಯುತ್ ಸಂಪರ್ಕ ಕಾಣದೆ ಕತ್ತಲಲ್ಲಿರುವ ಅನೇಕ ಮನೆಗಳು ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಗುರುಪುರದಿಂದ ಅನತಿ ದೂರದಲ್ಲಿರುವ ನೂಯಿ ಇಂದಿರಾನಗರದಲ್ಲಿ 40 ವರ್ಷಗಳಿಂದ ವಿದ್ಯುತ್ ಬೆಳಕಿಲ್ಲದ ಮನೆಯೊಂದಿದ್ದು, ಅಲ್ಲಿಗೆ ಬಿಜೆಪಿ ಕಾರ್ಯಕರ್ತರು, ಶಾಸಕ ಡಾ.ಭರತ್ ಶೆಟ್ಟಿ ಗಮನ ಹರಿಸಿ, ವಿದ್ಯುತ್ ಸಂಪರ್ಕ ಹೊಂದುವಂತೆ ಮಾಡಿದ್ದಾರೆ.

    ನೂಯಿ ನಿವಾಸಿ ಯೋಗಿನಿ, ಅವರ ಮೂವರು ಮಕ್ಕಳು, ಪತಿ ಹಾಗೂ ಮಾವ ಇರುವ ಮನೆ ವಿದ್ಯುತ್ ಬೆಳಕು ಕಾಣಲಿದೆ. ಯೋಗಿನಿಯವರ ಹಿರಿಯ ಮಗ ಯತಿರಾಜ್ ಮತ್ತು ಮಗಳು ಪಲ್ಲವಿ ಈಗ ಪದವಿ ತರಗತಿ ಸೇರ್ಪಡೆಯಾಗಿದ್ದು, ಕಲಿಕೆಯಲ್ಲಿ ಮುಂದಿರುವ ಇವರ ವ್ಯಾಸಂಗಕ್ಕೆ ಸಹಕಾರಿಯಾಗಲೆಂದು ಕಳೆದ ವರ್ಷ ಪೊಳಲಿ ಸರ್ಕಾರಿ ಶಾಲೆಯ ಶಿಕ್ಷಕಿ ರಂಜಿತಾ ಶ್ರಮದಿಂದ ಬಂಟ್ವಾಳ ರೋಟರಿ ಕ್ಲಬ್‌ನವರು ಉಚಿತವಾಗಿ ಸೀಮಿತ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು.

    ಅನಿರೀಕ್ಷಿತ ವಿದ್ಯುತ್: ಯತಿರಾಜ್ ಮತ್ತು ಪಲ್ಲವಿ ಪಿಯುಸಿ ಪರೀಕ್ಷೆಯಲ್ಲಿ ಕ್ರಮವಾಗಿ ಶೇ.94 ಮತ್ತು ಶೇ.92 ಅಂಕ ಗಳಿಸಿದ್ದರು. ಇದನ್ನು ಗಮನಿಸಿದ್ದ ಉತ್ತರ ಮಂಡಲ ಬಿಜೆಪಿ ಕಾರ್ಯದರ್ಶಿ ಹರೀಶ್ ಬಳ್ಳಿ ಹಾಗೂ ಅವರ ಬಳಗ(ನಿಶಾಂತ್ ಬರ್ಕೆ, ಯಶವಂತ್ ಕುಲಾಲ್, ತಿಲಕ್‌ರಾಜ್(ನೂಯಿ ಬಿಜೆಪಿ ಬೂತ್ ಅಧ್ಯಕ್ಷ), ಸಂದೀಪ್ ಪೊಳಲಿ(ಅಡ್ಡೂರು ಶಕ್ತಿಕೇಂದ್ರ ಪ್ರಮುಖ್) ಇವರ ಮುಂದಿನ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲೆಂದು ಮನೆಗೆ ಹೋದಾಗ, ಹಳೇ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ವೇಳೆ ಮನೆಗೆ ವಿದ್ಯುತ್ ಬೆಳಕು ಹರಿಸಿದರೆ ಹೇಗೆಂಬ ಯೋಚನೆ ಹರೀಶ್ ಮತ್ತು ಬಳಗದಲ್ಲಿ ಮೂಡಿದ್ದು ಮನೆಯವರೂ ಇದಕ್ಕೆ ಸಮ್ಮತಿಸಿದ್ದರು.
    ಬಿಜೆಪಿ ಕಾರ್ಯಕರ್ತರ ಈ ಯೋಚನೆ, ಯೋಜನೆಗೆ ಮೆಸ್ಕಾಂ ಗುತ್ತಿಗೆದಾರ ನಿತೀನ್ ಎ.ಬಂಗೇರ ಸಾಥ್ ನೀಡಿ, ಉಚಿತ ವಿದ್ಯುತ್ ಸಂಪರ್ಕ ನೀಡಲು ಕೆಲಸ ಆರಂಭಿಸಿದ್ದಾರೆ. ಶಾಸಕ ಡಾ.ಭರತ್ ಶೆಟ್ಟಿಯವರ ಸಮಯೋಚಿತ ಕೆಲಸದಿಂದ ವಿದ್ಯುತ್ ಸಂಪರ್ಕಕ್ಕೆ ಈವರೆಗಿದ್ದ ಅಡಚಣೆ ನಿವಾರಣೆಯಾಗಿದೆ. ಮೆಸ್ಕಾಂ ಸಹಕಾರವೂ ಸಿಕ್ಕಿದೆ.

    ಬೆಳಕಿಲ್ಲದೆ ಬಡತನದಲ್ಲೇ ಬದುಕಿ, ಮೂವರು ಮಕ್ಕಳಿಗೆ ಶಿಕ್ಷಣ ನೀಡಿರುವ ನನ್ನ ವರ್ಷಗಳ ಕನಸು ನನಸಾಗುತ್ತಿದೆ. ಇದಕ್ಕೆ ಸಹಕರಿಸಿದ ಶಾಸಕ ಡಾ.ಭರತ್ ಶೆಟ್ಟಿ, ಹರೀಶ್ ಬಳ್ಳಿ, ನಿತಿನ್ ಬಂಗೇರ ಹಾಗೂ ಬಿಜೆಪಿಯ ಇತರರಿಗೆ ಅಭಿನಂದನೆಗಳು. ತಾವೆಲ್ಲರೂ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೂ ಇದೇ ರೀತಿಯ ಸಹಕಾರ ನೀಡುತ್ತೀರಿ ಎಂದು ಆಶಿಸಿದ್ದೇನೆ.
    ಯೋಗಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts