More

    ರಸ್ತೆ ಕುಸಿದು ಹೊಂಡ ಸೃಷ್ಟಿ

    ಸಿದ್ದಾಪುರ: ವಂಡಾರು ಮಾವಿನಕಟ್ಟೆ ಪೇಟೆ ಸರ್ಕಲ್ ಬಳಿ ಇತ್ತೀಚೆಗೆ ಪೈಪ್‌ಲೈನ್ ಅಳವಡಿಸಿದ ಪ್ರದೇಶದಲ್ಲಿ ರಸ್ತೆ ಕುಸಿದು ಭಾರಿ ಗಾತ್ರದ ಹೊಂಡ ಸೃಷ್ಟಿಯಾಗಿವೆ. ಇದರಿಂದ ನಿತ್ಯ ಸಂಚಾರಿಗಳು, ವಾಹನ ಸವಾರರು, ಪಾದಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ.
    ಮಂದಾರ್ತಿ, ಉಡುಪಿ, ಕೊಕ್ಕರ್ಣೆ, ನಂಚಾರು, ಮುದ್ದೂರು, ಗೋಳಿಯಂಗಡಿ, ಹೆಬ್ರಿ, ಹಾಲಾಡಿ, ಕುಂದಾಪುರ, ಕೊಲ್ಲೂರು, ಶಿವಮೊಗ್ಗ ಜಿಲ್ಲೆ ಸೇರಿದಂತೆ ಪ್ರಮುಖ ಸ್ಥಳಗಳಿಗೆ ತೆರಳುವವರು ವಂಡಾರು ಮಾವಿನಕಟ್ಟೆ ಪೇಟೆ ಮೂಲಕ ಸಾಗಬೇಕು. ಮಾರ್ವಿ, ರತ್ನಗಿರಿ, ಕಕ್ಕುಂಜೆ, ಹಾಲಾಡಿ, ಶಿರಿಯಾರ, ಬಿದ್ಕಲ್‌ಕಟ್ಟೆ ಸುತ್ತ ಮುತ್ತಲಿನ ಜನರು ನಿತ್ಯ ಜೀವನದ ಅವಶ್ಯತೆಗಳಿಗಾಗಿ ವಂಡಾರು ಮಾವಿನಕಟ್ಟೆ ಪೇಟೆಯನ್ನು ಅವಲಂಬಿಸಿದ್ದಾರೆ.

    ವಂಡಾರು ಮಾವಿನಕಟ್ಟೆ ಪೇಟೆ ಮೂಲಕ ಉಡುಪಿ ನಗರದ ಜನರಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಹಾಲಾಡಿ ಭರತ್ಕಲ್ ಬಳಿಯಿಂದ ವಾರಾಹಿ ನದಿ ನೀರು ಸಾಗಿಸಲು ದೊಡ್ಡ ಗಾತ್ರದ ಸಿಮೆಂಟ್ ಪೈಪುಗಳನ್ನು ರಸ್ತೆಯ ಮಧ್ಯ ಭಾಗದಲ್ಲಿ ಅಳವಡಿಸಲಾಗಿದೆ. ಪೈಪ್‌ಲೈನ್ ಅಳವಡಿಸಿದ ಸ್ಥಳದಲ್ಲಿ ಪ್ರಸಕ್ತ ವರ್ಷ ಡಾಂಬರು ಹಾಕಿದ್ದರೂ, ಮಳೆಗಾಲದಲ್ಲಿ ರಸ್ತೆ ಕುಸಿದು ಹೊಂಡ ಗುಂಡಿಗಳು ಸೃಷ್ಟಿಯಾಗಿವೆ. ಮಳೆ ನೀರು ತುಂಬಿಕೊಂಡು ಹಗಲು ರಾತ್ರಿ ಇನ್ನಷ್ಟು ಸಮಸ್ಯೆ ಉಂಟಾಗುತ್ತಿದ್ದರೂ ಸಂಬಂಧಿಸಿದವರು ಹೊಂಡ ಮುಚ್ಚಿಸಲು ಕ್ರಮ ಕೈಗೊಂಡಿಲ್ಲ..

    ಹಾಲಾಡಿ ಭರತ್ಕಲ್ ಬಳಿಯಿಂದ ವಾರಾಹಿ ನದಿ ನೀರನ್ನು ವಂಡಾರು ಮಾವಿನಕಟ್ಟೆ ಮೂಲಕ ಉಡುಪಿ ನಗರದ ಜನರಿಗೆ ಪೂರೈಸಲು ಸಿಮೆಂಟ್ ಪೈಪು ಅಳವಡಿಸಿದ ಭಾಗದಲ್ಲಿ ರಸ್ತೆ ಕುಸಿದು ಹೊಂಡ ಸೃಷ್ಟಿಯಾಗಿದೆ. ಸಮಸ್ಯೆ ಬಗ್ಗೆ ಸಂಬಂಧಿಸಿದವರಿಗೆ ತಿಳಿಸಿದ್ದೇನೆ. ಮಳೆ ಕಡಿಮೆಯಾದ ಬಳಿಕ ಹೊಂಡ ಗುಂಡಿಗಳನ್ನು ಮುಚ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು.
    ಎಚ್.ಪ್ರಮೋದ್ ಹೆಗ್ಡೆ ಹಿಲಿಯಾಣ ಆವರ್ಸೆ ಗ್ರಾ.ಪಂ. ನಿಕಟ ಪೂರ್ವ ಅಧ್ಯಕ್ಷರು

    ವಂಡಾರು ಮಾವಿನಕಟ್ಟೆ ರಸ್ತೆ ಬಳಿ ಅಳವಡಿಸಿದ ಪೈಪ್‌ಲೈನ್ ಭಾಗದಲ್ಲಿ ರಸ್ತೆ ಕುಸಿದು ಹೊಂಡ ಸೃಷ್ಟಿಯಾಗಿವೆ. ಇಲ್ಲಿ ನಿತ್ಯ ನೂರಾರೂ ವಾಹನಗಳು ಸಂಚರಿಸುತ್ತವೆ, ಮಳೆ ನೀರು ತುಂಬಿದಾಗ ವಾಹನ ಚಾಲನೆಗೆ ಬಹಳ ತೊಂದರೆಯಾಗುತ್ತಿದೆ. ಇಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರದ ಅಗತ್ಯವಿದೆ.
    -ಉದಯ ನಾಯ್ಕ ಮಾರ್ವಿ, ಅಟೋ ರಿಕ್ಷಾ ಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts