More

    ಚುನಾವಣೆ ಆಯೋಗದ ಸಭೆ ಮುಂದೂಡಿಕೆ

    ಹುಬ್ಬಳ್ಳಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿ ಅವಧಿ ಪೂರ್ಣಗೊಂಡಿರುವ ರಾಜ್ಯದಲ್ಲಿನ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಸಂಬಂಧ ಆಯಾ ಜಿಲ್ಲಾಧಿಕಾರಿಗಳೊಂದಿಗೆ ಸೋಮವಾರ ನಿಗದಿಪಡಿಸಿದ್ದ ಸಭೆಯನ್ನು (ವಿಡಿಯೋ ಸಂವಾದ) ರಾಜ್ಯ ಚುನಾವಣೆ ಆಯೋಗವು ಹಠಾತ್ತನೆ ಮುಂದೂಡಿದೆ.
    ಮಧ್ಯಾಹ್ನ 2 ಗಂಟೆಗೆ ವಿಡಿಯೋ ಸಂವಾದ ನಡೆಯಬೇಕಿತ್ತು. ಚುನಾವಣೆಗೆ ದಿನಾಂಕ ನಿಗದಿ ಪಡಿಸುವ ಸಂಬಂಧ ಈ ಸಭೆ ಮಹತ್ವದ್ದಾಗಿತ್ತು. ಈ ಕಾರಣಕ್ಕೆ ಹು-ಧಾ ಅವಳಿ ನಗರದ ರಾಜಕೀಯ ಪಕ್ಷಗಳು, ಟಿಕೆಟ್ ಆಕಾಂಕ್ಷಿಗಳು ಹಾಗೂ ಸಾರ್ವಜನಿಕರ ಚಿತ್ತ ಆಯೋಗದ ಸಭೆಯ ಮೇಲೆ ಕೇಂದ್ರೀಕೃತಗೊಂಡಿತ್ತು.
    ‘ಯಾವ ಕಾರಣಕ್ಕೆ ವಿಡಿಯೋ ಸಂವಾದ ಮುಂದೂಡಲಾಗಿದೆ ಎಂಬುದನ್ನು ಆಯೋಗ ತಿಳಿಸಿಲ್ಲ. ಮುಂದಿನ ದಿನಾಂಕವನ್ನು ಸೂಚಿಸಿಲ್ಲ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
    ಹು-ಧಾ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳು, ದೊಡ್ಡಬಳ್ಳಾಪುರ ನಗರ ಸಭೆ ಹಾಗೂ ತರೀಕೆರೆ ಪುರಸಭೆಗೆ ಚುನಾವಣೆ ನಡೆಸಲು ಅವಶ್ಯವಾಗಿರುವ ಪೂರ್ವ ಸಿದ್ಧತೆಗಳ ಬಗ್ಗೆ ಆಯಾ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಗತ್ಯ ಮಾಹಿತಿಗಳನ್ನು ಪಡೆಯುವ ಉದ್ದೇಶದಿಂದ ಆಯೋಗದ ಆಯುಕ್ತರು ವಿಡಿಯೋ ಸಂವಾದ ನಿಗದಿಪಡಿಸಿದ್ದರು.
    ಹು-ಧಾ ಮಹಾನಗರ ಪಾಲಿಕೆಯ ವಾರ್ಡ್​ವಾರು ಕ್ಷೇತ್ರ ಮರು ವಿಂಗಡಣೆ, ಮೀಸಲಾತಿ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಕೆಲವರು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿರುವುದು ಆಯೋಗದ ಸಭೆ ಮುಂದೂಡಿಕೆಗೆ ಒಂದು ಕಾರಣ ಎಂದು ರ್ತಸಲಾಗುತ್ತಿದೆ. ಹು-ಧಾ ಮಹಾನಗರ ಪಾಲಿಕೆಗೆ ಕಳೆದ 28 ತಿಂಗಳಿಂದ ಚುನಾವಣೆ ನಡೆದಿಲ್ಲ. ಅಧಿಕಾರಿಗಳ ಆಡಳಿತ ನಡೆದಿದೆ.
    ನಗರಾಭಿವೃದ್ಧಿ ಇಲಾಖೆ, ಆಯೋಗಕ್ಕೆ ನೋಟಿಸ್: ಹು-ಧಾ ಮಹಾನಗರ ಪಾಲಿಕೆಯ ವಾರ್ಡ್​ವಾರು ಮೀಸಲಾತಿ ನಿಗದಿಯನ್ನು ಪ್ರಶ್ನಿಸಿ ಪಾಲಿಕೆಯ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಅಲ್ತಾಫ್ ಕಿತ್ತೂರ ಅವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಗೊಂಡ ಧಾರವಾಡ ಹೈಕೋರ್ಟ್ ಪೀಠವು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಚುನಾವಣೆ ಆಯೋಗದ ಆಯುಕ್ತರು ಹಾಗೂ ಧಾರವಾಡ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿ ಜು. 27ಕ್ಕೆ ವಿಚಾರಣೆ ಮುಂದೂಡಿದೆ.
    ಪಾಲಿಕೆ ವ್ಯಾಪ್ತಿಯ 4 ವಿಧಾನಸಭೆ ಕ್ಷೇತ್ರಗಳಲ್ಲಿ ಬರುವ ವಾರ್ಡ್​ಗಳಲ್ಲಿ ಮಹಿಳಾ ಮೀಸಲಾತಿಯನ್ನು ಸರಿಯಾಗಿ ನಿಗದಿಪಡಿಸಿಲ್ಲ. ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಾರ್ಡ್​ಗಳಲ್ಲಿ ಮಹಿಳೆಯರಿಗೆ ಶೇ. 50ಕ್ಕಿಂತ ಹೆಚ್ಚು ಸ್ಥಾನ, ಉಳಿದ ಮೂರು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ವಾರ್ಡ್​ಗಳಲ್ಲಿ ಮಹಿಳೆಯರಿಗೆ ಶೇ. 50ಕ್ಕಿಂತ ಕಡಿಮೆ ಸ್ಥಾನ ಹಂಚಿಕೆ ಮಾಡಿ ತಾರತಮ್ಯ ಮಾಡಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನವಾಗಿ ಶೇ. 50 ರಷ್ಟು ವಾರ್ಡ್​ಗಳನ್ನು ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಅಲ್ತಾಫ್ ಕಿತ್ತೂರ ಅವರು ವಕೀಲ ವಿಜಯ ಚಿನಿವಾರ ಅವರ ಮೂಲಕ ನ್ಯಾಯಾಲಯಕ್ಕೆ ರಿಟ್ ಸಲ್ಲಿಸಿದ್ದಾರೆ.
    ಇದಲ್ಲದೇ, ಮೀಸಲಾತಿ ಹಾಗೂ ವಾರ್ಡ್ ಪುನರ್ ವಿಂಗಡಣೆ ಸರಿಯಾಗಿಲ್ಲವೆಂದು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಅವರು ಪ್ರತ್ಯೇಕವಾಗಿ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ಪೀಠ ಜು. 22ಕ್ಕೆ ನಿಗದಿ ಪಡಿಸಿದೆ.
    ಮೀಸಲಾತಿ ನಿಗದಿಯಲ್ಲಿ ಪರಿಶಿಷ್ಟರಿಗೆ ಅನ್ಯಾಯವಾಗಿದೆಯೆಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ತೇರದಾಳ ಸಲ್ಲಿಸಿರುವ ರಿಟ್ ಅರ್ಜಿಗೆ ಧಾರವಾಡ ಹೈಕೋರ್ಟ್ ಪೀಠವು ಕಳೆದ ವಾರವೇ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಚುನಾವಣೆ ಆಯೋಗದ ಆಯುಕ್ತರು ಹಾಗೂ ಧಾರವಾಡ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts