More

    ಗ್ರಾಮಸ್ಥರಿಗೆ ವಂಚಿಸಿ ಪೋಸ್ಟ್​ ಮಾಸ್ಟರ್ ಪರಾರಿ! ಅಂಚೆ ಕಚೇರಿಗೆಂದು ಹಣ ಕಟ್ಟಿದ್ದವರು ಈಗ ಬೀದಿ ಪಾಲು

    ಆನೇಕಲ್​: ಅಂಚೆ ಕಚೇರಿ ಗ್ರಾಹಕರ ಹಾಗೂ ಗ್ರಾಮೀಣ ಭಾಗದ ಬಡ ಜನರ ನಂಬಿಕೆಯ ಸಂಸ್ಥೆ. ತಮ್ಮ ಹಣಕ್ಕೆ ಗ್ಯಾರಂಟಿ ನೀಡುವ ತಿಜೋರಿಯಾಗಿತ್ತು. ಆದರೆ ಇದೀಗ ಅಂಚೆ ಕಚೇರಿಯ ಕೆಲ ಸಿಬ್ಬಂದಿ ಮಾಡುವ ಮೋಸದ ಕೆಲಸಕ್ಕೆ ಜನರು ನಂಬಿಕೆ ಕಳೆದುಕೊಳ್ಳುವಂತಾಗಿದೆ. ಅಷ್ಟಕ್ಕೂ ಈ ಭಾಗದ ಜನರು ಅಂಚೆ ಕಚೇರಿ ಮೇಲಿನ ವಿಶ್ವಾಸ ಕಳೆದುಕೊಳ್ಳಲು ಕಾರಣವಾದರೂ ಏನೂ ಎನ್ನುವುದಕ್ಕೆ ಇಲ್ಲಿದೆ ಉತ್ತರ.

    ಸೋಮವಾರ ಗ್ರಾಮದ ಪೋಸ್ಟ್ ಆಫೀಸ್ ಕಚೇರಿ ಮುಂಭಾಗ ಜನರು ಜಮಾಯಿಸಿ ತಮಗಾಗಿರುವ ಅನ್ಯಾಯವನ್ನು ತೋರ್ಪಡಿಸುತ್ತ ವಂಚಿಸಿ ಪರಾರಿಯಾಗಿರುವ ಪೋಸ್ಟ್ ಮಾಸ್ಟರ್​ಗೆ ಹಿಡಿಶಾಪ ಹಾಕುತ್ತಿರುವ ದೃಶ್ಯ ಕಂಡುಬಂದಿತು.

    ಆನೇಕಲ್ ತಾಲೂಕಿನ ಹಂದೇನಹಳ್ಳಿ ಗ್ರಾಮದಲ್ಲಿ. ಹಣಕಾಸಿನ ವ್ಯವಹಾರದಲ್ಲಿ ಹಳ್ಳಿಗಾಡಿನ ಜನರ ನಂಬಿಕೆಯ ಪ್ರತೀಕವಾಗಿದ್ದ ಅಂಚೆ ಇಲಾಖೆಗೆ ಮಸಿ ಬಳಿದು ಪೋಸ್ಟ್​ ಮಾಸ್ಟರ್​ ಮಂಜುನಾಥ್ ಎನ್ನುವ ವ್ಯಕ್ತಿ ಊರು ಬಿಟ್ಟು ಪರಾರಿಯಾಗಿದ್ದಾನೆ. ಆನೇಕಲ್ ತಾಲೂಕಿನ ಮಾಯಸಂದ್ರ ನಿವಾಸಿಯಾದ ಈತ ಕಳೆದ ಹನ್ನೆರಡು ವರ್ಷಗಳಿಂದ ಸರ್ಜಾಪುರ ಸಮೀಪದ ಹಂದೇನಹಳ್ಳಿ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ನಾಲ್ಕೈದು ಊರುಗಳ ಸಾವಿರಾರು ಜನರ ವಿಶ್ವಾಸ ಗಳಿಸಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಅಸಾಮಿ ಅಮಾಯಕ ಬಡಜನರು ಕೂಡಿಟ್ಟಿದ್ದ ಹಣವನ್ನು ವಂಚಿಸಲು ಮಾಸ್ಟರ್ ಪ್ಲಾನ್ ರೂಪಿಸಿ ನೂರಾರು ಜನರ ಬಳಿ ಹಣ ಕಲೆಕ್ಷನ್ ಮಾಡಿ ಅಂಚೆ ಕಚೇರಿಯ ಅವರ ಖಾತೆಗೆ ಕಟ್ಟದೆ ಕೋಟ್ಯಾಂತರ ರೂಪಾಯಿ ಹಣವನ್ನ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ.

    ಪೋಸ್ಟ್ ಮಾಸ್ಟರ್ ಮಂಜುನಾಥ್ ಪ್ರಾರಂಭದಲ್ಲಿ ಹಂದೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿ ಜನಕ್ಕೆ ಉತ್ತಮ ಸೇವೆ ನೀಡುವ ಮೂಲಕ ನಂಬಿಕೆ ಗಳಿಸಿಕೊಂಡಿದ್ದ. ಹಾಗಾಗಿ ಗ್ರಾಹಕರು ಸರ್ಜಾಪುರದ ಪೋಸ್ಟ್ ಆಫೀಸ್ ಕಚೇರಿಗೆ ಹೋಗದೆ ಈತನನ್ನ ನಂಬಿ ಲಕ್ಷಾಂತರ ರೂಪಾಯಿ ಹಣ ಕಟ್ಟಿದ್ದಾರೆ. ಇದನ್ನೇ ದುರುಪಯೋಗ ಮಾಡಿಕೊಂಡ ಪೋಸ್ಟ್ ಮಾಸ್ಟರ್ ಅಮಾಯಕ ಜನರಿಗೆ ನಕಲಿ ಖಾತೆ ಬುಕ್​ ನೀಡಿ ಅದರಲ್ಲಿ ಎಂಟ್ರಿ ಮಾಡಿ ಅಂಚೆ ಕಚೇರಿಯ ಸೀಲ್ ದುರುಪಯೋಗ ಮಾಡಿಕೊಂಡಿದ್ದಾನೆ.

    ಜನರು ಸಹ ಕಟ್ಟಿದ ಹಣವು ನಮ್ಮ ಖಾತೆಯಲ್ಲಿ ಇದೇ ಎಂದು ಕೊಂಡಿದ್ದರು, ಅದೇ ವಿಶ್ವಾಸದೊಂದಿಗೆ ಸರ್ಜಾಪುರದಲ್ಲಿನ ಅಂಚೆ ಕಚೇರಿಗೆ ತೆರಳಿ ಖಾತೆ ಪರಿಶೀಲನೆ ಮಾಡಿದಾಗ ನಿಮ್ಮ ಖಾತೆಯೇ ನಕಲಿಯಾಗಿದೆ ಎಂದಾಗ ಹಳ್ಳಿಗಾಡಿನ ಜನರು ಶಾಕ್ ಆಗಿದ್ದಾರೆ‌. ಮೋಸ ಹೋದ ಜನರು ಮಂಜುನಾಥನಿಗೆ ಪ್ರಶ್ನಿಸಿದಾಗ ತಬ್ಬಿಬ್ಬಾಗಿದ್ದು, ಎಲ್ಲರೂ ಒಟ್ಟಿಗೆ ಸೇರಿ ಅಂಚೆ ಕಚೇರಿಯ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ನಡುವೆ ಪೋಸ್ಟ್ ಮಾಸ್ಟರ್ ದೋಖಾ ವಿಚಾರ ಅಂಚೆ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಹಂದೇನಹಳ್ಳಿ ಅಂಚೆ ಕಚೇರಿಗೆ ಆಗಮಿಸಿ ದಾಖಲೆಯನ್ನು ಪರಿಶೀಲನೆ ನಡೆಸಿದ್ದು, ಒಂದು ಕೋಟಿಗೂ ಹೆಚ್ಚು ಮೊತ್ತದ ಹಣ ಗ್ರಾಹಕರಿಗೆ ವಂಚನೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಗ್ರಾಹಕರ ಪಾಸ್ ಬುಕ್, ಲೆಡ್ಜರ್ ಸೇರಿದಂತೆ ಎಲ್ಲಾ ದಾಖಲೆಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮೋಸ ಮಾಡಿದ ಪೋಸ್ಟ್ ಮಾಸ್ಟರ್ ವಿರುದ್ಧ ಕ್ರಮ ಜರುಗಿಸಿ ಗ್ರಾಹಕರಿಗೆ ಆತನ ಬಳಿಯಿಂದ ಹಣವನ್ನ ಹಿಂತಿರುಗಿಸುವ ಭರವಸೆಯನ್ನ ನೀಡಿದ್ದಾರೆ.ಇನ್ನೂ ಪೋಸ್ಟ್ ಮಾಸ್ಟರ್ ಪಂಗನಾಮ ಪುರಾಣ ಬಟಾ ಬಯಲಾಗುತ್ತಿದ್ದಂತೆ ಪರಾರಿಯಾಗಿದ್ದು, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದೆ. ಕಷ್ಟ ಕಾಲಕ್ಕೆಂದು ಲಕ್ಷಾಂತರ ರೂಪಾಯಿ ಹಣವನ್ನ ಕೂಡಿಟ್ಟಿದ್ದ ಜನರು ಕಂಗಾಲಾಗಿದ್ದು, ನಂಬಿಕೆಯನ್ನ ದುರುಪಯೋಗ ಮಾಡಿಕೊಂಡು ವಂಚಿಸಿ ಪರಾರಿಯಾಗಿರುವ ಪೋಸ್ಟ್​ ಮಾಸ್ಟರ್​ ವಿರುದ್ಧ ಕಠಿಣ ಕ್ರಮವಾಗಬೇಕೆಂದು ಜನರು ಒತ್ತಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ರಾಜ್ಯದಲ್ಲಿ ಜು.27ರಿಂದ ಮತ್ತೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts