More

    ದೇವಳಗಳಿಂದ ಧನಾತ್ಮಕ ಸಂದೇಶ: ಅಹವಾಲು ಸ್ವೀಕಾರ ಸಭೆಯಲ್ಲಿ ಸಚಿವ ಕೋಟ ಅಭಿಪ್ರಾಯ

    ಗುರುಪುರ: ದೇವಸ್ಥಾನಗಳಿಂದ ಸಮಾಜಕ್ಕೆ ಧನಾತ್ಮಕ ಸಂದೇಶ ಸಾರುವ ಕೆಲಸಗಳಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಜಿಲ್ಲೆಯ ದೇವಾಲಯಗಳ ಧಾರ್ಮಿಕ ದತ್ತಿ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಟ್ರಸ್ಟಿ, ಆಡಳಿತಾಧಿಕಾರಿ ಹಾಗೂ ಆಡಳಿತ ಮೊಕ್ತೇಸರರ ಅಹವಾಲು ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಾಲಯಗಳು ಸಮಾಜಮುಖಿ ಕೆಲಸದಲ್ಲಿ ನಿರತವಾಗಬೇಕು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಹಿತ 14 ಕಡೆ ಮಂಗಳವಾರ ಹಣ್ಣಿನ ಗಿಡ ನೆಡಲಾಗಿದೆ. ಇದೇ ರೀತಿ ಜಿಲ್ಲೆಯ ಎಲ್ಲ ದೇವಸ್ಥಾನಗಳ ಪರಿಸರದಲ್ಲಿ ಸಾಧ್ಯವಿರುವಷ್ಟು ಹಣ್ಣು, ಹೂವು, ಇತರ ಉಪಯುಕ್ತ ಗಿಡ ಬೆಳೆಸಲು ಪ್ರಯತ್ನಿಸಬೇಕು. ದೇವಾಲಯಗಳಿಗೆ ಸಂಬಂಧಿಸಿ ಗೋಶಾಲೆ ಸ್ಥಾಪನೆ ನಿಟ್ಟಿನಲ್ಲಿ ಚಿಂತಿಸಬೇಕು ಎಂದರು.

    ಅತ್ಯಾಧುನಿಕ ಕ್ಯಾಮರಾ ಅಳವಡಿಕೆ: ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾತನಾಡಿ ದೇವಸ್ಥಾನಗಳ ಸುರಕ್ಷತೆ ಹಾಗೂ ಆಸ್ತಿಗೆ (ಕಾಣಿಕೆ ಡಬ್ಬಿ) ಆದ್ಯತೆ ನೀಡಿ, ಅತ್ಯಾಧುನಿಕ ಕ್ಯಾಮರಾ ಅಳವಡಿಸಬೇಕು. ದೇವಸ್ಥಾನಗಳ ಆದಾಯ ಸದ್ಬಳಕೆಯಾಗಬೇಕು. ಗೋಶಾಲೆ ಸ್ಥಾಪಿಸುವುದರೊಂದಿಗೆ ಗೋವುಗಳ ಸಹಿತ ಇತರ ಪ್ರಾಣಿಗಳಿಗೆ ರಕ್ಷಣೆ ಒದಗಿಸಬೇಕು. ದೇವಸ್ಥಾನದ ಆಸ್ತಿ ಅತಿಕ್ರಮಣವಾಗದಂತೆ ಬೇಲಿ ನಿರ್ಮಿಸಬೇಕು. ಈ ನಿಯಮ ದೈವಸ್ಥಾನಗಳಿಗೂ ಅನ್ವಯವಾಗಬೇಕು ಎಂದರು.

    ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಮಾತನಾಡಿ, ದೇವಸ್ಥಾನಗಳ ಸಿಬ್ಬಂದಿ ಸಮಸ್ಯೆ ಪರಿಶೀಲಿಸಲಾಗುತ್ತಿದೆ. ದೇವಸ್ಥಾನಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ನಿರ್ವಹಣೆ ಸೂಕ್ತವಾಗಿ ಆಗಬೇಕು. ತ್ಯಾಜ್ಯ ನಿರ್ವಹಣೆಯಿಂದ ದೇವಸ್ಥಾನಕ್ಕೆ ಲಾಭ ಆಗಬೇಕು. ಪ್ರತಿಯೊಂದು ದೇವಸ್ಥಾನಗಳಲ್ಲಿ ಗೋಶಾಲೆ ಸ್ಥಾಪಿಸುವ ಬಗ್ಗೆ ಇಲಾಖೆ ಮತ್ತು ಸರ್ಕಾರ ಕಾರ್ಯ ರೂಪಿಸಲಿದೆ ಎಂದರು.

    ಸಭೆಯಲ್ಲಿ ಜಿಲ್ಲೆಯ ಬಹುತೇಕ ಎ, ಬಿ ಗ್ರೇಡ್ ದೇವಸ್ಥಾನಗಳ ಪ್ರಮುಖರು ಉಪಸ್ಥಿತರಿದ್ದರು. ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ಗೋವಿಂದ ಭಟ್, ದೇವಸ್ಥಾನ ಆನುವಂಶಿಕ ಮೊಕ್ತೇಸರರಾದ ಯು.ತಾರಾನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್, ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಮತ್ತು ಆಡಳಿತಾಧಿಕಾರಿ ಜಯಮ್ಮ, ಅರ್ಚಕರು ಮತ್ತು ಸಿಬ್ಬಂದಿ, ಬಂಟ್ವಾಳ ತಹಸೀಲ್ದಾರ್ ಎಸ್.ಆರ್ ರಶ್ಮಿ, ಕರಿಯಂಗಳ ಗ್ರಾಪಂ ಪಿಡಿಒ ನಯನಾ ಮತ್ತಿತರರು ಉಪಸ್ಥಿತರಿದ್ದರು. ಸುಬ್ರಾಯ ಕಾರಂತ ನಿರೂಪಿಸಿದರು.

    ಪೊಳಲಿಯಲ್ಲಿ ಗೋಶಾಲೆ: ಪೊಳಲಿ ದೇವಸ್ಥಾನದ ಪಕ್ಕ ಹರಿಯುವ ನದಿ ತಟಕ್ಕೆ ಹೊಂದಿಕೊಂಡಿರುವ ಸರ್ಕಾರಿ ಮತ್ತು ಖಾಸಗಿಯವರ ವಿಶಾಲ ಖಾಲಿ ಜಾಗದಲ್ಲಿ ಗೋಶಾಲೆ ಸ್ಥಾಪಿಸಲು ಸ್ಥಳ ಗುರುತಿಸಿದ್ದೇವೆ. ಇಲ್ಲಿ ಗೋಶಾಲೆ ಸ್ಥಾಪಿಸಬೇಕೆಂಬುದು ಬಹುದಿನಗಳ ಕನಸಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಹೇಳಿದರು. ಕೆಲವು ದೇವಸ್ಥಾನಗಳ ಪ್ರಮುಖರು ಕೆಲವು ಮಹತ್ವದ ವಿಷಯ, ಬೇಡಿಕೆಗಳ ಬಗ್ಗೆ ಪ್ರಸ್ತಾವಿಸಿದ್ದು, ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಬಹುತೇಕ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದು ಸಚಿವ ಕೋಟ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts