More

    ಜಿಮ್ಸ್​ನ 23 ಸಿಬ್ಬಂದಿಗೆ ಪಾಸಿಟಿವ್

    ಗದಗ: ಜಿಲ್ಲೆಯಲ್ಲಿ ಕರೊನಾ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್್ಸ) ವೈದ್ಯ, ನರ್ಸ್ ಸೇರಿ 23ಕ್ಕೂ ಹೆಚ್ಚು ಸಿಬ್ಬಂದಿಗೆ ಪಾಸಿಟಿವ್ ದೃಢಪಟ್ಟಿರುವುದು ಆತಂಕ ಹುಟ್ಟಿಸಿದೆ.
    ಜಿಮ್ಸ್​ನ ನಾಲ್ವರು ವೈದ್ಯರು, ನರ್ಸ್, ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು, ಇಂಟರ್ನ್​ಶಿಪ್ ಮಾಡುವವರಿಗೆ ಸೋಂಕು ತಗುಲಿದೆ. ಬಡವರ ಪಾಲಿನ ಸಂಜೀವಿನಿ ಎನಿಸಿರುವ ಜಿಮ್್ಸ ವೈದ್ಯರು ಹಾಗೂ ಇತರೆ ಸಿಬ್ಬಂದಿಗೆ ಸೋಂಕು ತಗುಲಿರುವುದು ಜನಸಾಮಾನ್ಯರಿಗಂತೂ ಬರಸಿಡಿಲು ಬಡಿದಂತಾಗಿದೆ. ಜಿಮ್ಸ್​ನಲ್ಲಿ ವೈದ್ಯರ ಸಂಖ್ಯೆ ಮೊದಲೇ ಕಡಿಮೆ ಇದೆ. ಜಿಮ್್ಸ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ರೋಗಿಗಳ ಪ್ರಾಣ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ನಿರಂತರವಾಗಿ ದಾಖಲಾಗುತ್ತಿರುವ ರೋಗಿಗಳ ತಪಾಸಣೆ ಹಾಗೂ ಪ್ರಾಣ ರಕ್ಷಣೆಗೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರಿಗೆ ಸೋಂಕು ತಗುಲಿರುವುದರಿಂದ ರೋಗಿಗಳಿಗೆ ಚಿಕಿತ್ಸೆ ನೀಡುವುದು ಜಿಮ್ಸ್​ಗೆ ಸವಾಲಾಗಿ ಪರಿಣಮಿಸಿದೆ.
    ಬೆಡ್​ಗಳು ಭರ್ತಿ:ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಮಾಣ ಏರುಗತಿಯಲ್ಲಿದ್ದು, ಕಳೆದ ಹತ್ತು ದಿನಗಳ ಹಿಂದೆ ಸೋಂಕಿತರ ಸಂಖ್ಯೆ ಕೇವಲ 73 ಇತ್ತು. 10 ದಿನಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ ಬುಧವಾರಕ್ಕೆ 468ಕ್ಕೆ ಏರಿಕೆಯಾಗಿದೆ. ಒಂದು ಕಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ವೆಂಟಿಲೇಟರ್ ಬೆಡ್​ಗಳ ಕೊರತೆಯಿಂದ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣದಿಂದ ಅನೇಕ ಸೋಂಕಿತರು ಮೃತಪಟ್ಟಿದ್ದಾರೆ. ಇನ್ನೂ ಹಲವಾರು ರೋಗಿಗಳ ಆರೋಗ್ಯ ಸ್ಥಿತಿ ಡೋಲಾಯಮಾನವಾಗಿದೆ. ಇಂತಹ ಎಲ್ಲ ಸವಾಲು ಮತ್ತು ಒತ್ತಡದ ಮಧ್ಯೆ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿಗೆ ಸೋಂಕು ತಗುಲಿದರೆ ರೋಗಿಗಳ ಸ್ಥಿತಿ ಊಹಿಸಿಕೊಳ್ಳುವುದು ಕಷ್ಟ.
    ಸದ್ಯ ಜಿಮ್ಸ್​ನಲ್ಲಿರುವ 58 ವೆಂಟಿಲೇಟರ್ ಬೆಡ್​ಗಳು, 350 ಆಕ್ಸಿಜನ್ ಬೆಡ್​ಗಳು ಕೂಡಾ ಭರ್ತಿಯಾಗಿವೆ. ಹೀಗಾಗಿ ಆಸ್ಪತ್ರೆಗೆ ಕರೊನಾ ಸೋಂಕಿತರು ಬಂದರೆ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ದಟ್ಟವಾಗಿದೆ. ಗದಗ ತಾಲೂಕಿನ ಬಳಗಾನೂರ ಗ್ರಾಮದ ವ್ಯಕ್ತಿಗೆ ಬುಧವಾರ ಕರೊನಾ ಸೋಂಕು ದೃಢಪಟ್ಟಿತ್ತು. ಜಿಮ್್ಸ ಆಸ್ಪತ್ರೆ ಮುಂದೆ ಗಂಟೆಗಟ್ಟಲೇ ಕಾದ ಬಳಿಕ ಬೆಡ್ ಸಿಕ್ಕಿತು. ಈ ವಿಷಯದಲ್ಲಿ ವೈದ್ಯರು ಅಸಹಾಯಕರಾಗಿದ್ದಾರೆ. ಬೆಡ್​ಗಳಿದ್ದರೆ ಕೂಡಲೆ ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸುತ್ತಾರೆ. ಬೆಡ್​ಗಳೆ ಇಲ್ಲದಿದ್ದರೆ ರೋಗಿಗಳನ್ನು ದಾಖಲು ಮಾಡಿಕೊಳ್ಳುವುದಾದರೂ ಹೇಗೆ ಎಂದು ವೈದ್ಯರು ಪ್ರಶ್ನಿಸುತ್ತಾರೆ.
    ಬೇಕಿದೆ 200 ಹೆಚ್ಚುವರಿ ಬೆಡ್​ಗಳು: ಗದಗ ಜಿಮ್್ಸ ಆಸ್ಪತ್ರೆಯಲ್ಲಿ ಬೆಡ್​ಗಳು ಸಂಪೂರ್ಣವಾಗಿ ಭರ್ತಿಯಾಗಿದೆ. ಹೀಗಾಗಿ ಇನ್ನೂ 200 ಹೆಚ್ಚುವರಿ ಬೆಡ್​ಗಳನ್ನು ಸಿದ್ಧ್ದಡಿಸಲಾಗುತ್ತಿದೆ. ಗದಗ ಪಶು ವೖದ್ಯಕೀಯ ಆಸ್ಪತ್ರೆ, ಹಾಗೂ ಮಲ್ಲಸಮುದ್ರದ ಕೋವಿಡ್ ಸೆಂಟರ್​ನಲ್ಲಿ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ ಹೇಳಿಕೆ ನೀಡಿದ್ದಾರೆ. ಈ ಕೆಲಸ ಬೇಗನೆ ಆಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಜಿಮ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಕರೊನಾ ಪಾಸಿಟಿವ್ ಬಂದಿರುವುದರಿಂದ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಉಂಟಾಗುವ ಸಾಧ್ಯತೆಗಳಿವೆ. ಹೀಗಾಗಿಯೇ ನಿವೃತ್ತ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕೆಂಬ ಆಗ್ರಹವೂ ಜಿಲ್ಲೆಯಲ್ಲಿ ಕೇಳಿಬರುತ್ತಿದೆ.

    ಜಿಮ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಇತರೆ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂತಹ ಕ್ಲಿಷ್ಟಕರ ಸಮಯದಲ್ಲೂ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಜನರ ಪ್ರಾಣ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ನೀಡಲು ಜಿಮ್್ಸ ಸಿದ್ಧ್ದದೆ. ಆದರೆ, ಜನರು ಸಹಕಾರ ನೀಡಬೇಕು.
    | ಡಾ. ಪಿ.ಎಸ್. ಭೂಸರಡ್ಡಿ ನಿರ್ದೇಶಕ, ಜಿಮ್್ಸ ಗದಗ

    ಬಯೋ ದೃಢೀಕರಣಕ್ಕೆ ಒತ್ತಾಯಿಸಬೇಡಿ
    ಕೋವಿಡ್-19 ಎರಡನೇ ಅಲೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ಆರೋಗ್ಯದ ರಕ್ಷಣೆ ದೃಷ್ಟಿಯಿಂದ ಮೇ ತಿಂಗಳ ಪಡಿತರವನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ಅರ್ಹ ಪಡಿತರ ಚೀಟಿದಾರರಿಗೆ ಆಧಾರ್ ಒಟಿಪಿ ಮೂಲಕ ವಿತರಿಸಬೇಕು. ಪಡಿತರ ಚೀಟಿದಾರರನ್ನು ಬಯೋ ದೃಢೀಕರಣಕ್ಕಾಗಿ ಒತ್ತಾಯಿಸಬಾರದು ಎಂದು ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ತಿಳಿಸಲಾಗಿದೆ. ಒಂದು ವೇಳೆ ಈ ಕುರಿತು ದೂರು ಬಂದಲ್ಲಿ ನ್ಯಾಯಬೆಲೆ ಅಂಗಡಿಯವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಅರ್ಹ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಆಧಾರ್ ಒಟಿಪಿ ಮೂಲಕ ಪಡೆಯಬೇಕೆಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆ ತಿಳಿಸಿದೆ.
    ರಿಯಾಯಿತಿ ಕಾಲಾವಕಾಶ ವಿಸ್ತರಣೆ
    ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು ಜೂನ್ 30ರೊಳಗಾಗಿ ಆಸ್ತಿ ತೆರಿಗೆ ಭರಣಾ ಮಾಡಿದರೆ ಶೇ. 5ರಷ್ಟು ರಿಯಾಯಿತಿ ನೀಡುವ ಕಾಲಾವಕಾಶ ವಿಸ್ತರಿಸಲಾಗಿದೆ. ಆಸ್ತಿ ಮಾಲೀಕರು ಈ ಸೌಲಭ್ಯ ಪಡೆದುಕೊಳ್ಳಬೇಕು. ಕಾರ್ಯಾಲಯಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕು ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts