More

    ಗುಜ್ಜರಕೆರೆ ನೀರು ಕಲುಷಿತ

    ಮಂಗಳೂರು: ಗುಜ್ಜರಕೆರೆಗೆ ಅಭಿವೃದ್ಧಿ ಭಾಗ್ಯ ಲಭಿಸಿದರೂ, ನೀರಿನಲ್ಲಿ ಇನ್ನೂ ಬ್ಯಾಕ್ಟೀರಿಯಾ ಅಂಶಗಳು ಪೂರ್ಣ ಪ್ರಮಾಣದಲ್ಲಿ ನಿವಾರಣೆಯಾಗಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ.

    ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ವತಿಯಿಂದ ನೀರಿನ ಶುದ್ಧತೆ ಕುರಿತಂತೆ ಪರೀಕ್ಷಿಸಲು ಇತ್ತೀಚೆಗೆ ಫಿಶರೀಸ್ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಿದ ನೀರಿನ ಸ್ಯಾಂಪಲ್‌ನಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿದ್ದು, ‘ನೇರ ಸೇವನೆಗೆ ಯೋಗ್ಯವಲ್ಲ’ (ನಾಟ್ ಸೇಫ್ ಫಾರ್ ಡೈರೆಕ್ಟ್ ಡ್ರಿಂಕಿಂಗ್) ಎಂದು ವರದಿ ಬಂದಿದೆ. ಈ ಹಿಂದೆಯೂ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿದ್ದು, ಡ್ರೆಜ್ಜಿಂಗ್ ಬಳಿಕ ಮತ್ತೆ ಪತ್ತೆಯಾಗಿರುವುದು ಆತಂಕಕಾರಿಯಾಗಿದೆ.

    ಪ್ರಯೋಗಾಲಯಕ್ಕೆ ನೀರಿನ ಮಾದರಿ ಕಳುಹಿಸುವ ಮೊದಲೇ, ಮಾಹಿತಿ ಹಕ್ಕು ಕಾಯ್ದೆಯಡಿ ಗುಜ್ಜರಕೆರೆಗೆ ಯುಜಿಡಿ ನೀರು ಸೇರುತ್ತಿದೆಯೇ ಎಂದು ಮಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರಲ್ಲಿ ಮಾಹಿತಿ ಕೇಳಲಾಗಿತ್ತು. ಇದಕ್ಕೆ ‘ಗುಜ್ಜರಕೆರೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ನಿರ್ವಹಿಸಲಾಗಿದ್ದು, ಪ್ರಸ್ತುತ ಯುಜಿಡಿ ನೀರಿನ ಅಂಶ ಕಂಡು ಬಂದಿಲ್ಲ’ ಎಂದು ಅಕ್ಟೋಬರ್ 8ರಂದು ಉತ್ತರ ಬಂದಿತ್ತು. ಈ ಉತ್ತರ ಆಧರಿಸಿ ನೀರಿನ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎರಡು ಮಾಹಿತಿಗಳು ತಾಳೆಯಾಗದ ಹಿನ್ನೆಲೆಯಲ್ಲಿ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಗುಜ್ಜರಕೆರೆ ಸಂರಕ್ಷಣೆ ಬಗ್ಗೆ ಮನವಿ ಮಾಡಿದೆ.

    ಗುಜ್ಜರಕೆರೆಯಲ್ಲಿ ಡ್ರೆಜ್ಜಿಂಗ್ ಕಾಮಗಾರಿ ಮುಗಿದಿದೆ. ಇನ್ನಾದರೂ ನೀರು ಶುದ್ಧವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ನೀರಿನಲ್ಲಿ ಮತ್ತೆ ವಿಷಕಾರಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿದ್ದು, ತೀರ್ಥ ಕುಡಿಯಲು ಯೋಗ್ಯವಾಗಿಲ್ಲ. ಮಂಗಳಾದೇವಿಯ ಮುಂದಿನ ಅವಭೃತ ಸ್ನಾನದ ವೇಳೆಗಾದರೂ, ಗುಜ್ಜರಕೆರೆ ನೀರು ತೀರ್ಥ ರೂಪದಲ್ಲಿ ಸೇವನೆಗೆ ಯೋಗ್ಯವಾಗುವಂತೆ ಮಾಡಬೇಕು.
    ನೇಮು ಕೊಟ್ಟಾರಿ ಪ್ರಧಾನ ಕಾರ್ಯದರ್ಶಿ, ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ

    ಕುಡಿಯಲು ಯೋಗ್ಯವಿಲ್ಲ: ಗುಜ್ಜರಕೆರೆಯ ನಾಲ್ಕು ದಿಕ್ಕುಗಳಿಂದ ಬೇರೆ ಬೇರೆ ದಿನ ತಲಾ 100 ಮಿ.ಲೀ. ನೀರು ಸಂಗ್ರಹಿಸಿ ಟೋಟಲ್ ಕಾಲಿಫಾರ್ಮ್ (ಎಲ್ಲ ರೀತಿಯ ಬ್ಯಾಕ್ಟೀರಿಯಾ) ಮತ್ತು ಫೀಕಲ್ ಕಾಲಿಫಾರ್ಮ್ (ಒಳಚರಂಡಿ ಶೌಚಗೃಹ ತ್ಯಾಜ್ಯ) ಪರೀಕ್ಷೆಗೆ ಒಳಪಡಿಸಲಾಗಿದೆ. ನೀರಿನಲ್ಲಿ ಇವುಗಳ ಒಂದಂಶವೂ ಇರಬಾರದು, ಆಗ ಮಾತ್ರ ಕುಡಿಯಲು ಯೋಗ್ಯವಾಗುತ್ತದೆ. ಆದರೆ ನ.2ರಂದು ಸಂಗ್ರಹಿಸಲಾದ ನೀರಿನ ಮಾದರಿಯಲ್ಲಿ ಟೋಟಲ್ ಕಾಲಿಫಾರ್ಮ್ 1600ಕ್ಕೂ ಅಧಿಕ ಮತ್ತು ಫೀಕಲ್ ಕಾಲಿಫಾರ್ಮ್ 30ರಷ್ಟಿತ್ತು. ನ.7ರಂದು ಸಂಗ್ರಹಿಸಿದ ಮಾದರಿಯಲ್ಲಿ ಟೋಟಲ್ ಕಾಲಿಫಾರ್ಮ್ ಸಂಖ್ಯೆ 1600 ಮತ್ತು ಫೀಕಲ್ ಕಾಲಿಫಾರ್ಮ್ ಸಂಖ್ಯೆ 60 ಇತ್ತು. ನ.12ರಂದು ತೆಗೆದ ಮಾದರಿಯಲ್ಲಿ ಟೋಟಲ್ ಕಾಲಿಫಾರ್ಮ್ 300 ಮತ್ತು ಫೀಕಲ್ ಕಾಲಿಫಾರ್ಮ್ 6 ಪತ್ತೆಯಾಗಿದೆ.

    ಗುಜ್ಜರಕೆರೆ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ನೀರನ್ನು ಯಾವ ರೀತಿ ಶುದ್ಧೀಕರಿಸುವುದು ಮತ್ತು ಕಾಮಗಾರಿಯ ಹೊರತಾಗಿಯೂ ಒಳಚರಂಡಿ ನೀರು ಕೆರೆಗೆ ಸೇರುತ್ತಿದೆಯೇ ಎನ್ನುವುದನ್ನು ಪರಿಶೀಲಿಸಲಾಗುವುದು.
    ದಿವಾಕರ್ ಪಾಂಡೇಶ್ವರ ಮಂಗಳೂರುಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts