More

    ಬಲವಂತವಾಗಿ ಆಸ್ತಿ ಬರೆಸಿಕೊಂಡ ಆರೋಪದ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದ ಎಚ್.ಡಿ.ರೇವಣ್ಣ

    ಹಾಸನ: ಬರುವ ಜನವರಿಯ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ರಾಜ್ಯದಲ್ಲಿ ಕೊಬ್ಬರಿ ಖರೀದಿ ಮಾಡುವುದಾಗಿ ಕೇಂದ್ರದವರು ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.

    ನಗರದ ಸಂಸದರ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 5.91 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದೆ. ಈ ವರ್ಷ ಬರದಿಂದ ತೆಂಗು ಬೆಳೆ ಭಾಗಶಃ ಹಾನಿಯಾಗಿದೆ. ಶೇ.30ರಷ್ಟು ಬೆಳೆಗೆ ರೋಗ ತಗುಲಿ ನಾಶವಾಗಿದೆ. ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ನೇತೃತ್ವದಲ್ಲಿ ಇತ್ತೀಚೆಗೆ ಪ್ರಧಾನಿ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ ನೀಡಿರುವ ಭರವಸೆವಂತೆ ಕೊಬ್ಬರಿ ಖರೀದಿಗೆ ಮುಂದಾಗದೇ ಇದ್ದರೆ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಾದಯಾತ್ರೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ನಮ್ಮ ರೈತರನ್ನು ಉಳಿಸಿಕೊಳ್ಳಲು ಬೇರೆ ದಾರಿ ಇಲ್ಲ, ಪಾದಯಾತ್ರೆ ಮಾಡುತ್ತೇವೆ. ರಾಜ್ಯದಲ್ಲಿ 220 ತಾಲೂಕುಗಳಲ್ಲಿ ಬರಗಾಲ ಇದೆ. ರೈತರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಆಗಬೇಕು. ತೆಂಗು ಬೆಳೆಗಾರರಿಗೆ ಪರಿಹಾರ ಹಾಗೂ ಬೆಂಬಲ ಬೆಲೆ ನೀಡುವುದಾಗಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಹಾಲಿ ಡಿಸಿಎಂ ಹೇಳಿದ್ದಾರೆ. ಎಲ್ಲಾ ಗ್ಯಾರಂಟಿ ಜಾರಿ ಆಯ್ತು. ಆರನೇ ಗ್ಯಾರಂಟಿಯಾಗಿ ತೆಂಗು ಬೆಳೆಗೆ ಪರಿಹಾರ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆರನೇ ಗ್ಯಾರಂಟಿ ಜಾರಿ ಮಾಡಲಿ. ಕೇಂದ್ರ ಸರ್ಕಾರವಾದರೂ ಸರಿ, ಇಲ್ಲ ರಾಜ್ಯ ಸರ್ಕಾರವಾದರೂ ಸರಿ. ಒಟ್ಟಿನಲ್ಲಿ ಪರಿಹಾರ ನೀಡಲಿ ಎಂದರು.

    ಕಳೆದ ವಾರ ದೇವೇಗೌಡರ ನೇತೃತ್ವದಲ್ಲಿ ಪ್ರಧಾನಿ ಅವರನ್ನು ಭೇಟಿ ಮಾಡಿದ್ದೆವು. ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರನ್ನೂ ಭೇಟಿಯಾಗಿದ್ದೆವು. ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿ ಸಮುದಾಯದಕ್ಕೆ ಸೇರಿಸಬೇಕು ಅನ್ನೋದು ಸ್ವಾತಂತ್ರ್ಯ ಪೂರ್ವದ ಬೇಡಿಕೆ. ಈ ಸಮುದಾಯದ 6.52 ಲಕ್ಷ ಜನರು ನಮ್ಮ ರಾಜ್ಯದಲ್ಲಿದ್ದಾರೆ. ಈ ಸಮುದಾಯವನ್ನು ಎಸ್‌ಟಿ ವ್ಯಾಪ್ತಿಗೆ ಸೇರಿಸುವಂತೆ ವಿಧಾನಸಭೆ ಚುನಾವಣೆಗೂ ಮೊದಲೇ ದೇವೇಗೌಡರು ಪತ್ರ ಬರೆದಿದ್ದರು. ಈ ಸಮುದಾಯ ಇನ್ನೂ ಶಿಕ್ಷಣ, ರಾಜಕೀಯ ಎಲ್ಲ ಅವಕಾಶಗಳಿಂದ ವಂಚಿತವಾಗಿದೆ. ಹಾಸನ ಜಿಲ್ಲೆಯಲ್ಲೇ ಸುಮಾರು 40 ಸಾವಿರ ಕಾಡುಗೊಲ್ಲ ಸಮುದಾಯದವರಿದ್ದಾರೆ. ಈ ಹಿಂದೆ ನಾಯಕ ಸಮುದಾಯವನ್ನು ದೇವೇಗೌಡರು ಎಸ್‌ಟಿ ಸಮುದಾಯಕ್ಕೆ ಸೇರಿಸಿದ್ದರು. ಈಗ ಕಾಡುಗೊಲ್ಲರನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಬೇಕೆಂದು ಮನವಿ ಮಾಡಲಾಗಿದೆ ಎಂದರು.

    ಮಾಜಿ ಸಚಿವ ಎಚ್.ಡಿ. ರೇವಣ್ಣ ಕುಟುಂಬ ಬಲವಂತವಾಗಿ ಆಸ್ತಿ ಬರೆಸಿಕೊಂಡ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಲೋಕಸಭಾ ಚುನಾವಣೆ ಹತ್ತಿರ ಇರುವುದರಿಂದ ಈ ರೀತಿ ಆರೋಪ ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಘಟನೆ ನಡೆದು ಎಷ್ಟು ದಿನ ಆಗಿದೆ. ಈಗ ಏಕೆ ಆರೋಪ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಇನ್ನು ಮೂರು ತಿಂಗಳು ಮಾತ್ರ ಇದೆ. ಇಂತಹ ಸಮಯದಲ್ಲಿ ಯಾಕೆ ಆರೋಪ ಬರುತ್ತಿದೆ ಎಂದು ಪ್ರಶ್ನಿಸಿದರು.

    ಭವಾನಿ ಹೊಡೆದಿದ್ದರಿಂದ ಗರ್ಭಪಾತ ಆಗಿದೆ ಎಂಬ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಭವಾನಿ ಹಲ್ಲೆ ಮಾಡುತ್ತಾರೆ ಎಂದರೆ ಏನು ಹೇಳೋದು. ಭವಾನಿ ಯಾರಿಗೆ ಸಹಾಯ ಮಾಡಿದ್ದಾರೆ ಅನ್ನೋದು ದೇವರಿಗೆ ಗೊತ್ತು. ಆ ಹುಡುಗಿಯನ್ನು ಮನೆಯಲ್ಲಿ ಇರಿಸಿಕೊಂಡು ಡಿಗ್ರಿ ಮಾಡಿಸಿದ್ದು ನಾವು. ನಮ್ಮ ಮನೆಯಲ್ಲಿ ಆಕೆಯನ್ನು ಕೆಲಸಕ್ಕೆ ಇಟ್ಟುಕೊಂಡಿರಲಿಲ್ಲ ಎಂದು ಹೇಳಿದರು.

    ಚುನಾವಣೆ ಸಂದರ್ಭದಲ್ಲಿ ಇನ್ನೂ ಕೆಲವು ಅರೋಪ ಮಾಡುತ್ತಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಯಾವ್ಯಾವ ಇಲಾಖೆಗೆ ಪತ್ರ ಬರೆದಿದ್ದಾರೆ. ಪ್ರಜ್ವಲ್ ಆಗಿರುವುದಕ್ಕೆ ಎಲ್ಲವನ್ನೂ ತಡೆದಿದ್ದಾನೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್‌ನವರು ಅವಕಾಶವಾದಿಗಳೆಂದ ರೇವಣ್ಣ

    ಕಾಂಗ್ರೆಸ್‌ನವರು ತಮಗೆ ಅವಶ್ಯಕತೆ ಇದ್ದಾಗ ದೇವೇಗೌಡರ ಮನೆ ಬಳಿ ಬರುತ್ತಾರೆ. ಅಧಿಕಾರಕ್ಕೆ ಬಂದಾಗ ದೂರ ಇಡುತ್ತಾರೆ. ಈ ಪರಿಸ್ಥಿತಿಗೆ ಬರಲು ಇದೇ ಕಾಂಗ್ರೆಸ್ ಕಾರಣ. ಅಂದೇ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ನಂಬಲು ಹೋಗಬೇಡಿ. ಕಾಂಗ್ರೆಸ್ ಜತೆ ಮೈತ್ರಿ ಬಿಟ್ಟು ಬನ್ನಿ. ನಾವು ಬೆಂಬಲ ಕೊಡುತ್ತೇವೆ ಎಂದು ಕುಮಾರಸ್ವಾಮಿಗೆ ಹೇಳಿದ್ದರು. ಕಾಂಗ್ರೆಸ್ ಜತೆ ಹೋದ ಎಲ್ಲರಿಗೂ ಇದೇ ಪರಿಸ್ಥಿತಿ ಬಂದಿದೆ ಎಂದು ರೇವಣ್ಣ ಆರೋಪಿಸಿದರು.
    ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎನ್ನುವುದೇ ನಮ್ಮ ಗುರಿ. ದೇವೇಗೌಡರು, ಕುಮಾರಸ್ವಾಮಿ ಎಲ್ಲರದ್ದೂ ಇದೆ ಗುರಿ. ನಮಗೆ ಎಷ್ಟು ಸ್ಥಾನ ಸೇರಿದಂತೆ ಯಾವುದರ ಬಗ್ಗೆಯೂ ನಮಗೆ ಚಿಂತೆ ಇಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts