More

    ಒಂದೇ ಪಕ್ಷ ಐದು ಬಾಗಿಲು: ಮಂಡ್ಯ ‘ಕೈ’ನಲ್ಲಿ ಕಾಣದ ಒಗ್ಗಟ್ಟು, ನಾಯಕರಿಗೆ ಬಿ ಫಾರ್ಮ್ ಹಂಚಿಕೆ ಬಿಕ್ಕಟ್ಟು

    ಮಂಡ್ಯ: ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು ಎನ್ನುವ ಗಾಧೆ ಮಾತಿನಂತಾಗಿದೆ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಪರಿಸ್ಥಿತಿ.
    ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲವೆನ್ನುವ ನಾಯಕರ ಮಾತಿಗೆ ವಿರೋಧವಾದ ಬೆಳವಣಿಗೆ ಕ್ಷೇತ್ರದಲ್ಲಿ ನಡೆಯುತ್ತಿದೆ. ಮಂಡ್ಯದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿರುವ ಆಕಾಂಕ್ಷಿತರ ನಡುವೆ ಹೊಂದಾಣಿಕೆ ಇಲ್ಲದಾಗಿದೆ. ಪರಿಣಾಮ ಒಂದೇ ಪಕ್ಷದಲ್ಲಿ ಐದು ಬಾಗಿಲು ತೆರೆದುಕೊಂಡಿರುವುದು ಇರಿಸು ಮುರಿಸಿಗೆ ಕಾರಣವಾಗಿದೆ.
    ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ತಪ್ಪನ್ನು ಸರಿಪಡಿಸಿಕೊಂಡು ಸಂಘಟನೆಗೆ ಬಗ್ಗೆ ಹೆಚ್ಚಿನ ಗಮನಹರಿಸಿದ ಪರಿಣಾಮ ಎಂಎಲ್‌ಸಿ ಚುನಾವಣೆ ಗೆದ್ದು ಬೀಗುವಂತಾಗಿದೆ. ಮಾತ್ರವಲ್ಲದೆ ಭಾರತ್ ಜೋಡೋ ಯಶಸ್ಸು ಕೂಡ ಇದಕ್ಕೆ ಸೇರ್ಪಡೆಯಾಗಿತ್ತು. ಇದರಿಂದಾಗಿ ನಿರೀಕ್ಷೆಯಂತೆ ಆಕಾಂಕ್ಷಿತರ ಸಂಖ್ಯೆಯೂ ಹೆಚ್ಚಾಯಿತು. ಪರಿಣಾಮ ಮಂಡ್ಯ ಕ್ಷೇತ್ರಕ್ಕೆ 16 ಜನರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಈ ಪೈಕಿ ಮೂವರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೂ ರವಾನಿಸಲಾಗಿದೆ. ಆದರೂ ಬಿ ಫಾರ್ಮ್ ಪಡೆಯುವ ವ್ಯಾಮೋಹ ಮಾತ್ರ ಬಹುತೇಕರಿಗೆ ಕಡಿಮೆಯಾಗಿಲ್ಲ. ಅದರಂತೆ ದಿನಕ್ಕೊಂದರಂತೆ ದಾಳ ಉರುಳಿಸುತ್ತಿದ್ದಾರೆ.
    ಪಕ್ಷದೊಳಗೆ ಐದು ಬಣ: ಬಿ ಫಾರ್ಮ್ ಬಯಸಿರುವವರಲ್ಲೇ ಐದು ಬಣವಾಗಿದೆ. ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮತ್ತು ಮಾಜಿ ಶಾಸಕ ಎಚ್.ಬಿ.ರಾಮು ನೇತೃತ್ವದಲ್ಲಿ ಹಿರಿಯ ಮುಖಂಡರೆಲ್ಲರೂ ಒಂದು ಬಣ, ಇತ್ತೀಚೆಗಷ್ಟೇ ದಳ ಬಿಟ್ಟು ಕೈ ಹಿಡಿದಿರುವ ಕೆ.ಕೆ.ರಾಧಾಕೃಷ್ಣ ಮತ್ತು ಡಾ.ಕೃಷ್ಣ ಪ್ರತ್ಯೇಕ ಬಣ, ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ರವಿಕುಮಾರ್‌ಗೌಡ ಗಣಿಗ ಮತ್ತು ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ ಒಂದು ತಂಡ ಹಾಗೂ ಪಕ್ಷದ ವಿರುದ್ಧವಾಗಿ ನಡೆದುಕೊಳ್ಳುವುದೇ ಬೇಡವೆಂದು ಆಟಕ್ಕುಂಟು ಲೆಕ್ಕಕ್ಕೆ ಬಾರದಂತೆ ತಟಸ್ಥವಾಗಿರುವವರು ಇನ್ನೊಂದು ಬಣವಾಗಿದ್ದಾರೆ.
    ಇನ್ನು ಇವರೆಲ್ಲರ ಪೈಕಿ ರವಿಕುಮಾರ್‌ಗೌಡ ಗಣಿಗ ಹೆಸರೇ ಮುಂಚೂಣಿಯಲ್ಲಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಲವು ವರ್ಷದಿಂದ ಪಕ್ಷ ಸಂಘಟನೆ ಮಾಡುತ್ತಿರುವುದರ ಜತೆಗೆ ಕಳೆದ ಚುನಾವಣೆಯ ಸೋಲಿನ ಅನುಕಂಪವಿದೆ. ಆದ್ದರಿಂದ ಅವಕಾಶ ಕೊಡುವುದು ಉತ್ತಮವೆನ್ನುವ ಮಾತು ಪಕ್ಷದೊಳಗಿದೆ. ಇವರೊಟ್ಟಿಗೆ ಕೆ.ಕೆ.ರಾಧಾಕೃಷ್ಣ ಮತ್ತು ಉಮ್ಮಡಹಳ್ಳಿ ಶಿವಪ್ಪ ಕೂಡ ರೇಸ್‌ನಲ್ಲಿ ಪ್ರಬಲ ಪೈಪೋಟಿ ಕೊಡುತ್ತಿದ್ದಾರೆ. ಉಳಿದವರ ಹೆಸರುಗಳು ಗಟ್ಟಿಯಾಗಿ ಕೇಳಿಬರುತ್ತಲೇ ಇಲ್ಲ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಆದರೂ ಈ ಬಾರಿಯ ಚುನಾವಣೆಯಲ್ಲಿ ಪಕ್ಷಕ್ಕೆ ಪೂರಕವಾದ ವಾತಾವರಣವಿರುವುದರಿಂದ ನಮ್ಮದು ಒಂದಿರಲೆಂದು ಬಿ ಫಾರ್ಮ್‌ಗಾಗಿ ಟವೆಲ್ ಹಾಕಲಾಗುತ್ತಿದೆ. ಹಲವು ತಿಂಗಳಿಂದ ಕಂಡುಬಂದಿದ್ದ ಒಗಟ್ಟು ಇದೀಗ ಛಿದ್ರಗೊಂಡಿದ್ದು, ಇವರೆಲ್ಲರನ್ನೂ ಸಮಾಧಾನಪಡಿಸಿ ಚುನಾವಣೆ ಮಾಡಬೇಕಾದ ಸವಾಲಿದೆ.
    ಸ್ಪರ್ಧೆ ಬಯಸಿ ಅರ್ಜಿ ಹಾಕಿದವರೇ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲ್ಲ ಎನ್ನುವುದು ಪಕ್ಷದಲ್ಲಿರುವ ಎಲ್ಲರಿಗೂ ಗೊತ್ತಿದೆ. ಅರ್ಜಿ ಸಲ್ಲಿಸದೆಯೂ ಹೈಕಮಾಂಡ್ ಸೂಚನೆ ಮೇರೆಗೆ ಅಭ್ಯರ್ಥಿಗಳು ಕಣಕ್ಕಿಳಿಯಬಹುದು. ಈ ಹಿನ್ನೆಲೆಯಲ್ಲಿ ಅರ್ಜಿ ಹಾಕುವುದು ಒಂದು ಸಾಮಾನ್ಯ ಪ್ರಕ್ರಿಯೆ ಅಷ್ಟೇ. ಇನ್ನು ಗಮನಾರ್ಹ ಸಂಗತಿ ಎಂದರೆ ಬಿ ಫಾರ್ಮ್ ಗಿಟ್ಟಿಸಿಕೊಂಡವರು, ಉಳಿದವರು ಅರ್ಜಿ ಸಲ್ಲಿಸುವಾಗ ಪಾವತಿಸಿರುವ ಶುಲ್ಕವನ್ನು ವಾಪಸ್ ಕೊಡುತ್ತಾರೆನ್ನುವುದು ಇದೆ.
    ದೆಹಲಿ ತಲುಪಿದ ಬಂಡಾಯ
    ಸದ್ಯಕ್ಕೆ ಮೂವರ ಹೆಸರು ಪ್ರಚಲಿತದಲ್ಲಿರುವುದರಿಂದ ಹಾಗೂ ಪಕ್ಷದಲ್ಲಿ ಮೂಲೆಗುಂಪಾಗುತ್ತಿರುವುದರಿಂದ ರೊಚ್ಚಿಗೆದ್ದಿರುವ ಹಿರಿಯರು ತಮ್ಮ ಬಂಡಾಯವನ್ನು ಪ್ರದರ್ಶನ ಮಾಡಲು ದೆಹಲಿಗೆ ಹೋಗಿದ್ದಾರೆ. ಈಗಾಗಲೇ ಮೂಲ ವರ್ಸಸ್ ವಲಸಿಗ ಎನ್ನುವ ದಾಳವನ್ನು ಉರುಳಿಸಿರುವ ಮುಖಂಡರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
    ಬಿ ಫಾರ್ಮ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೂ ಪಕ್ಷದ ಕಾರ್ಯಕ್ರಮ ನಿಮಿತ್ತ ಈಗಾಗಲೇ ಕೆಪಿಸಿಸಿ ಪದಾಧಿಕಾರಿಗಳು ಜಿಲ್ಲೆಗೆ ಬಂದಿದ್ದರು. ಮಾತ್ರವಲ್ಲದೆ ಮಂಡ್ಯ ಕ್ಷೇತ್ರದ ಗೊಂದಲ ನಿವಾರಣೆಗೆಂದು ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮೈಸೂರಿನಲ್ಲಿ ಸಭೆ ಮಾಡಿಯೂ ಚರ್ಚೆ ನಡೆಸಲಾಗಿದೆ. ಅಂದು ತಮ್ಮ ಸ್ಪಷ್ಟ ನಿಲುವಿನ ಜತೆಗೆ ಹಕ್ಕೊತ್ತಾಯ ಪ್ರಕಟಿಸದ ಹಿರಿಯರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಲು ಮಾ.15ರಂದು ದೆಹಲಿಗೆ ಹೋಗಿದ್ದು ವಿಶೇಷ. ಅಲ್ಲಿಯೂ ಕೂಡ ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದರೆ ಖರ್ಗೆ ಅವರು ಕೂಡ ಬಿ ಫಾರ್ಮ್ ಬಗ್ಗೆ ಖಚಿತತೆ ಕೊಟ್ಟಿಲ್ಲ. ಪರಿಣಾಮ ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ವಾಪಸ್ ಬಂದಿದ್ದಾರೆ. ಇನ್ನು ಕ್ಷೇತ್ರದಲ್ಲಿ ಇರಿಸು ಮುರಿಸು ಆಗಬಾರದೆಂದು ಅಭ್ಯರ್ಥಿ ಘೋಷಣೆ ಸಮಯದಲ್ಲಿ ತಮ್ಮ ನಿರ್ಧಾರ ತಿಳಿಸುವುದಾಗಿ ಭರವಸೆ ನೀಡಿದ್ದಾರೆನ್ನುವ ಸಮಾಧಾನ ಮಾತುಗಳನ್ನು ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರೆ.
    ಈ ನಡುವೆ ಮುಖಂಡರು ತಮ್ಮ ‘ಹಿರಿತನ’ದ ದೂರು ಮಂಡಿಸಲು ಖರ್ಗೆ ಅವರ ಬಳಿ ಹೋಗಿರುವುದಾದರೂ ಏಕೆ ಎನ್ನುವ ವಿಷಯ ಬಹಿರಂಗ ಸತ್ಯ. ಅದೆಂದರೆ ಎಐಸಿಸಿ ಅಧ್ಯಕ್ಷರೊಂದಿಗೆ ಪಕ್ಷದಲ್ಲಿ ಪ್ರಾರಂಭದಿಂದಲೂ ಜತೆಗಿರುವ ಹಿನ್ನೆಲೆಯಲ್ಲಿ ಒಂದು ಅವಕಾಶ ಗಿಟ್ಟಿಸಿಕೊಳ್ಳಬಹುದೆಂಬ ಆಶಾಭಾವನೆ ಇದೆ. ಇನ್ನು ಇವರೆಲ್ಲರ ಟಾರ್ಗೆಟ್ ಕೆ.ಕೆ.ರಾಧಾಕೃಷ್ಣ ಹಾಗೂ ಡಾ.ಕೃಷ್ಣ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಅಂತೆಯೇ ಈಗಾಗಲೇ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ಕೊಟ್ಟು ಡಾ.ಕೃಷ್ಣ ಅವರನ್ನು ರೇಸ್‌ಗೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಉಳಿದಂತೆ ಪಕ್ಷದೊಳಗೆ ಪ್ರಾಬಲ್ಯ ಹೆಚ್ಚಿಸಿಕೊಂಡಿರುವ ಕೆಕೆಆರ್ ಬಗ್ಗೆ ತಲೆಕೆಡಿಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಪಕ್ಷಕ್ಕೆ ಬಂದವರಿಗೆ ಆದ್ಯತೆ ಕೊಟ್ಟರೆ ಮುಂದಿನ ದಿನದಲ್ಲಿ ತಮ್ಮ ಅಸ್ಥಿತ್ವಕ್ಕೆ ಧಕ್ಕೆಯಾಗುವ ಆತಂಕ ಹಿರಿಯರಿಗೆ ಎದುರಾಗಿರುವುದು ಸುಳ್ಳಲ್ಲ. ಆದರೆ ಹಿರಿಯರ ಈ ತಂತ್ರಕ್ಕೆ ಪ್ರತಿಫಲ ಸಿಗಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.
    ದರ್ಶನ್ ಬೆಂಬಲಿಸುವುದು ಸ್ಪಷ್ಟ?
    ಮಂಡ್ಯದಂತೆ ಮೇಲುಕೋಟೆ ಕ್ಷೇತ್ರದಲ್ಲಿಯೂ ಗೊಂದಲವಿದೆ. ಪ್ರತಿ ಬಾರಿಯಂತೆ ಈ ಸಲವೂ ರೈತ ಸಂಘಕ್ಕೆ ಬೆಂಬಲ ಕೊಡುವ ಬಗ್ಗೆ ಆಕ್ಷೇಪವಿದೆ. ಆದರೂ ಅವಕಾಶ ಕೋರಿ ಆರು ಜನರು ಅರ್ಜಿ ಸಲ್ಲಿಸಿದ್ದರೂ, ಡಾ.ಎಚ್.ಎನ್.ರವೀಂದ್ರ ರೇಸ್‌ನಿಂದ ಹಿಂದೆ ಸರಿದಿದ್ದಾರೆ. ಉಳಿದಂತೆ ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮಿಗಾ, ಜಿಪಂ ಮಾಜಿ ಸದಸ್ಯ ಎಚ್.ತ್ಯಾಗರಾಜ್, ನಿವೃತ್ತ ನ್ಯಾಯಾಧೀಶ ಶಿವಪ್ಪ ಅವರ ಸಹೋದರ ನಾಗಭೂಷಣ್, ಉದ್ಯಮಿ ಕಾಗೇಪುರ ಆನಂದಕುಮಾರ್, ಕೆಪಿಸಿಸಿ ಮಾಜಿ ಸದಸ್ಯ ಎಲ್.ಡಿ.ರವಿ ಹೆಸರಿದ್ದರೂ ಕ್ಷೇತ್ರದಲ್ಲಿ ಪಕ್ಷ ಸಧೃಡವಾಗಿಲ್ಲ ಎನ್ನುವುದು ನಾಯಕರಿಗೂ ಗೊತ್ತಿದೆ.
    ಈ ಹಿನ್ನೆಲೆಯಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಚರ್ಚಿಸಲು ಮಾ.15ರಂದು ರಾತ್ರಿ ನಾಗಮಂಗಲ ಪಟ್ಟಣದ ಹೊರವಲಯದಲ್ಲಿ ಸಭೆ ಮಾಡಲಾಗಿದೆ. ಅದರಂತೆ ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ನಿರ್ಧಾರದಂತೆ ನಡೆದುಕೊಳ್ಳಲು ಅಭಿಪ್ರಾಯ ವ್ಯಕ್ತವಾಗಿದೆ. ಸಭೆಯಲ್ಲಿ ನಡೆದಿರುವ ಬೆಳವಣಿಗೆಯಂತೆ ಈ ಬಾರಿಯೂ ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡುವ ಸಾಧ್ಯತೆ ನಿಚ್ಚಳವಾಗಿದೆ. ಕಾರಣ ಮೇಲುಕೋಟೆಯಲ್ಲಿ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಸೋಲಿಸುವುದೇ ಕಾಂಗ್ರೆಸ್‌ನ ಗುರಿ ಎನ್ನುವುದನ್ನು ವಿವರಿಸಬೇಕಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts