More

    ಹಣದ ವ್ಯಾಮೋಹದಿಂದ ಜೆಡಿಎಸ್ ಪಕ್ಷಕ್ಕೆ ದ್ರೋಹ: ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

    ಮಂಡ್ಯ: ಹಲವು ಬಾರಿ ಶಾಸಕರಾಗಲು ಅವಕಾಶ ಕಲ್ಪಿಸಿದ ಜೆಡಿಎಸ್‌ಗೆ ನಿಷ್ಠೆ ತೋರದೆ ಹಣದ ವ್ಯಾಮೋಹಕ್ಕಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ರಮೇಶ ಬಂಡಿಸಿದ್ದೇಗೌಡ ಅವರು ದೇವೇಗೌಡರಿಗೆ ಅನ್ಯಾಯ ಮಾಡಿದ್ದು ಸರಿಯೇ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.
    ತಾಲೂಕಿನ ಭೂತನಹೊಸೂರಿನಲ್ಲಿ ಆಯೋಜಿಸಿದ್ದ ಶ್ರೀರಂಗಪಟ್ಟಣ ಕ್ಷೇತ್ರದ ಕೊತ್ತತ್ತಿ 2ನೇ ವೃತ್ತದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್ ಬಿಟ್ಟ ರಮೇಶ ಬಂಡಿಸಿದ್ದೇಗೌಡ ಇದೀಗ ಕಾಂಗ್ರೆಸ್ ದರಿದ್ರದ ಪಕ್ಷ. ಯಾಕಾದರೂ ಈ ಪಕ್ಷಕ್ಕೆ ಬಂದೆನೋ ಎಂದು ಗೋಳಾಡುತ್ತಿದ್ದಾರೆ. ನನ್ನ ತಪ್ಪನ್ನು ಮನ್ನಿಸಿ ಒಮ್ಮೆ ಅವಕಾಶ ಕೊಡಿ ಎಂದು ಮತದಾರರ ಬಳಿ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಅವರ ನಾಟಕ ಜನರಿಗೆ ತಿಳಿದಿದೆ ಎಂದು ವ್ಯಂಗ್ಯವಾಡಿದರು.
    ಬಂಡಿಸಿದ್ದೇಗೌಡರು ನಿಧನರಾದ ಬಳಿಕ ಎಚ್.ಡಿ.ದೇವೇಗೌಡರು ಅರಕೆರೆಗೆ ಬಂದು ವಿಜಯಲಕ್ಷ್ಮೀ ಹಾಗೂ ರಮೇಶ ಬಂಡಿಸಿದ್ದೇಗೌಡ ಅವರನ್ನು ಮಗಳೆಂಬ ಪ್ರೀತಿಯಿಂದ ರಾಜಕೀಯವಾಗಿ ಪ್ರಬಲರಾಗಿಸುತ್ತಾರೆ. ಅಂತಹವರಿಗೆ ದ್ರೋಹ ಮಾಡಲಾಯಿತು. ಹಣದ ವ್ಯಾಮೋಹಕ್ಕೆ ಬಲಿಯಾಗಿ ಚಲುವರಾಯಸ್ವಾಮಿ ಜತೆ ಸೇರಿ ನಿಮ್ಮ ಕುಟುಂಬ ದೇವೇಗೌಡರಿಗೆ ಮಾಡಿದ ಅನ್ಯಾಯದ ಬಗ್ಗೆ ಇಡೀ ರಾಜ್ಯದ ಜನರೇ ಮಾತನಾಡುತ್ತಾರೆ. ಜಿಲ್ಲೆಯ ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ಪ್ರಸ್ತುತ ಕಾಂಗ್ರೆಸ್‌ನಲ್ಲಿರುವ ನೀವು ಆ ಪಕ್ಷಕ್ಕಾದರೂ ನಿಯತ್ತಾಗಿ ಇರಲು ಪ್ರಯತ್ನಿಸಿ. ಆ ಪಕ್ಷಕ್ಕೆ ನ್ಯಾಯ ಸಲ್ಲಿಸಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲು ಡಿ.ಕೆ.ಶಿವಕುಮಾರ್ ಅವರ ಸಲಹೆ ಧಿಕ್ಕರಿಸಿ ಸಂಚು ರೂಪಿಸಿದ್ದನ್ನು ಜಿಲ್ಲೆಯ ಜನ ಮರೆಯುವುದಿಲ್ಲ ಎಂದು ಛೇಡಿಸಿದರು.
    ನಿಖಿಲ್ ಸೋಲಿಗಾಗಿ ಸಂಚು ರೂಪಿಸಿ ಸುಮಲತಾ ಅವರನ್ನು ಬೆಂಬಲಿಸಿದ ಜಿಲ್ಲೆಯ ಕಾಂಗ್ರೆಸ್ಸಿಗರನ್ನು ಕ್ಯಾರೆ ಎನ್ನದೆ ಸಂಸದೆ ಇದೀಗ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಮುಖಂಡರು ನನ್ನ ನಾಯಕರಲ್ಲ ಎಂದು ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ ಎಂದು ಲೇವಡಿ ಮಾಡಿದ ಅವರು, ನನ್ನ ನಾಲ್ಕೂವರೆ ವರ್ಷದ ಅಧಿಕಾರಾವಧಿಯಲ್ಲಿ ಎರಡು ವರ್ಷ ಕೋವಿಡ್ ಸಂಕಷ್ಟ ಎದುರಾಯಿತು. ಆ ಸಂದರ್ಭದಲ್ಲಿಯೂ ಕ್ಷೇತ್ರದ 55 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿ ಜನರೊಂದಿಗೆ ಸದಾ ಇದ್ದೆ. ಆದರೆ, ಮಾಜಿ ಶಾಸಕರಾಗಲಿ ಅಥವಾ ಇಂದು ಹಳ್ಳಿಗಳಿಗೆ ತೆರಳಿ ಸೀರೆ, ತಟ್ಟೆ ವಿತರಿಸುತ್ತಿರುವ ಬಿಜೆಪಿ ಮುಖಂಡರಾಗಲಿ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
    ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೈಲಾದ ಪ್ರಯತ್ನ ನಡೆಸಿದ್ದೇನೆ. ಮುಂದಿನ ಬಾರಿ ಅಧಿಕಾರ ದೊರೆತರೆ ಜನತೆ ಎದೆ ತಟ್ಟಿ ಹೇಳಿಕೊಳ್ಳುವಂತೆ ಮಾಜಿ ಸಚಿವ ಎಸ್.ಡಿ.ಜಯರಾಂ ಆಶಯಗಳು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಕಟಿಬದ್ಧನಾಗುತ್ತೇನೆ. ಕೆಆರ್‌ಎಸ್ ಡ್ಯಾಂ ನಿರ್ಮಿಸಿದ ಶ್ರಮಿಕರಿಗೆ ಕಂದಾಯ ಗ್ರಾಮವೆಂದು ಘೋಷಿಸಿ ಸಾವಿರಾರು ಬಡವರಿಗೆ ಹಕ್ಕುಪತ್ರ ವಿತರಿಸಿರುವುದು ನನ್ನ ಹೆಮ್ಮೆಯ ಕಾರ್ಯ. ಆದರೆ ಕ್ಷೇತ್ರದ ಅಭಿವೃದ್ಧಿಯನ್ನು ಮುಂದೆ ಮಾಡಿ ಮತ ಯಾಚಿಸುವುದನ್ನು ಬಿಟ್ಟು ಸಂಚಿನ ರಾಜಕಾರಣಕ್ಕೆ ಮುಂದಾಗಿರುವುದು ಮಾಜಿ ಶಾಸಕರಿಗೆ ಶೋಭೆ ತರುವುದಿಲ್ಲ. ನಿಮಗೆ ಅಭಿವೃದ್ಧಿ ಮುಂದೆ ಮಾಡಿ ಮತ ಕೇಳುವ ನೈತಿಕತೆಯೇ ಇಲ್ಲ. ನಿಮ್ಮ ಒಳಸಂಚಿನ ಸತ್ಯ ಚುನಾವಣೆ ಹತ್ತಿರದಲ್ಲಿ ಜನರಿಗೆ ತಿಳಿಯಲಿದೆ ಎಂದರು.
    ಶ್ರೀರಂಗಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷ ಪೈಲ್ವಾನ್ ಮುಕುಂದ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ವೆಂಕಟೇಗೌಡ, ತಾಪಂ ಮಾಜಿ ಸದಸ್ಯ ಪ್ರಕಾಶ್, ಮಾಜಿ ಪ್ರಧಾನ ಶಂಕರೇಗೌಡ, ಮುಖಂಡರಾದ ಸುರೇಶ್, ಮಂಗಲ ಸಣ್ಣೇಗೌಡ, ತಗ್ಗಹಳ್ಳಿ ಪ್ರಸನ್ನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts