More

    ಹೆಚ್ಚುತ್ತಿರುವ ಕಳ್ಳತನ ಪ್ರಕರಣ ಹಿನ್ನೆಲೆ ಪೊಲೀಸ್ ಇಲಾಖೆ ಮನವಿ, ಅಡಕೆ ಬೆಳೆಗಾರರಲ್ಲಿ ಸೂಕ್ತ ಮುನ್ನೆಚ್ಚರಿಕೆ

    ವಿಟ್ಲ/ ಬೆಳ್ತಂಗಡಿ: ರೈತಾಪಿ ವರ್ಗದ ಬೆಳೆಗಳತ್ತ ಕಳ್ಳರ ಚಿತ್ತ ನೆಟ್ಟಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಹಳ್ಳಿಗಳಲ್ಲಿ ಕೃಷಿಕರು ತಮ್ಮ ಬೆಳೆಗಳನ್ನು ಯಾವುದೇ ಭದ್ರತೆ ಇಲ್ಲದೆ ಅಂಗಳದ ಒಂದು ಕಡೆ ಒಣಗಲು ಹಾಕಿ, ರಾತ್ರಿ ಮನೆಯಿಂದ ಹೊರಗೆ ಬಾರದೆ ನಿದ್ರಿಸುವುದು ಬೆಳೆ ಕಳ್ಳತನ ಪ್ರಕರಣಗಳು ಹೆಚ್ಚುವಂತೆ ಮಾಡಿದೆ. ಇದರಿಂದ ಇಲಾಖೆಗೆ ಕೆಲಸದ ಒತ್ತಡವೂ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೃಷಿಕರಿಗೂ ಸ್ವಲ್ಪ ಜವಾಬ್ದಾರಿ ಹಂಚುವ ಕಾರ್ಯಕ್ಕೆ ಮುಂದಾಗಿದೆ.

    ರೈತರು ಏನು ಮಾಡಬೇಕು: ಅಡಕೆ ಒಣಗಿಸುವ ಸ್ಥಳಕ್ಕೆ ಸಿಸಿ ಕ್ಯಾಮರಾ ಅಥವಾ ಮನೆಯವರು/ ಕಾವಲುಗಾರರಿಂದ ರಾತ್ರಿ ಪಹರೆ, ಅಡಕೆ ಒಣಗಿಸುವ ಸ್ಥಳಕ್ಕೆ ರಾತ್ರಿ ಪೂರ್ಣ ಸೂಕ್ತ ಬೆಳಕಿನ ವ್ಯವಸ್ಥೆ, ಅಡಕೆ ವ್ಯಾಪಾರಿಯ ಸೋಗಿನಲ್ಲಿ ಮನೆಗೆ ಬರುವ ವ್ಯಕ್ತಿಗಳಲ್ಲಿ ಹೆಚ್ಚು ಮಾತುಕತೆಗೆ ಬರುವವರಿಗೆ ಮಾಹಿತಿ ನೀಡುವ ಮೊದಲು ಖಾತ್ರಿ ಪಡಿಸಿಕೊಳ್ಳುವುದು, ಅಡಕೆ ಬೆಳೆಗಾರರ ಮನೆಯ ಪಕ್ಕ ಅನುಮಾನಾಸ್ಪದವಾಗಿ ವಾಹನ ಅಥವಾ ವ್ಯಕ್ತಿ ಕಂಡುಬಂದಲ್ಲಿ ಠಾಣೆಗೆ ಮಾಹಿತಿ ನೀಡುವ ಕಾರ್ಯವನ್ನು ರೈತರು ಮಾಡಬೇಕಾಗಿದೆ.

    ವ್ಯಾಪಾರಿಗಳ ಪಾತ್ರವೂ ಇದೆ: ಅಡಕೆ ವ್ಯಾಪಾರಸ್ಥರು ಅಡಕೆಯನ್ನು ಮಾರಾಟಕ್ಕೆ ಬರುವ ವ್ಯಕ್ತಿ ನಿಜವಾದ ಬೆಳೆಗಾರ ಎಂಬ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ವ್ಯಾಪಾರಸ್ಥರು ಅಂಗಡಿಯ ಒಳಗೆ ಮತ್ತು ಹೊರಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಅಡಕೆ ತರುವ ವ್ಯಕ್ತಿ ಮಾರಾಟ ಕೇಂದ್ರದ ಆಸುಪಾಸಿನ ವ್ಯಕ್ತಿ ಅಲ್ಲದೇ ಹೋದಲ್ಲಿ ಆತನ ಸಮಗ್ರ ದಾಖಲೆಗಳನ್ನು ಪಡೆದುಕೊಂಡು ವ್ಯವಹರಿಸಬೇಕು. ಅಡಕೆ ವ್ಯಾಪಾರಿಗಳು ಕಡಿಮೆ ಬೆಲೆಗೆ ಅಧಿಕ ಅಡಕೆ ಸಿಗುತ್ತದೆ ಎಂದು ಕಳ್ಳರ ಜತೆಗೆ ವ್ಯವಹರಿಸಿದರೆ ಬಳಿಕ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

    ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಜೀವನ ನಡೆಸಬೇಕಾಗಿದೆ. ಭದ್ರತೆಯ ದೃಷ್ಟಿಯಿಂದ ಮತ್ತು ವ್ಯಕ್ತಿಗಳನ್ನು ಪತ್ತೆ ಹಚ್ಚುವ ರೀತಿಯಲ್ಲಿ ಸಿಸಿ ಕ್ಯಾಮರಾಗಳು ಹೆಚ್ಚು ಉತ್ತಮ. ಹಾಗೆಂದು ಇಲಾಖೆಯಿಂದ ರೈತರ ಮೇಲೆ ಒತ್ತಡ ಹೇರುವ ರೀತಿಯ ಪ್ರಕಟಣೆಗಳನ್ನು ಹೊರಡಿಸಿಲ್ಲ.
    -ವೆಲೆಂಟೈನ್ ಡಿಸೋಜ ಪೊಲೀಸ್ ಸಹಾಯಕ ಅಧೀಕ್ಷಕ, ಬಂಟ್ವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts