More

    ಕಡೂರು ಗಡಿಗಳಲ್ಲಿ ಪೊಲೀಸ್ ಕಣ್ಗಾವಲು, ಕಟ್ಟೆಚ್ಚರ

    ಕಡೂರು: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಗೊಂಡ ಬೆನ್ನಲ್ಲೇ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ತಾಲೂಕು ಆಡಳಿತ ಸಿದ್ಧತಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

    ಕಾಫಿನಾಡಿನಿಂದ ಬೇರ್ಪಟ್ಟಿರುವ ಕಡೂರು ಕ್ಷೇತ್ರ ಎಂಟು ವಿಧಾನಸಭೆಗಳ ಒಳಗೊಂಡ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ. ಚುನಾವಣೆ ಪೂರ್ವ ತಯಾರಿಗಾಗಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸದ್ದಿಲ್ಲದೆ ಕ್ಷೇತ್ರವಾರು ರಾಜಕೀಯ ಪ್ರಮುಖ ಮುಖಂಡರ ಭೇಟಿ ನಡೆಸಿ, ಕೃಪಾಕಟಾಕ್ಷ ಪಡೆದುಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನು ಅಧಿಕಾರಿ ವಲಯ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಕಟ್ಟೆಚ್ಚರ ವಹಿಸಿದೆ.
    ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು, ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುವ ಆತಂಕ ಎದುರಾಗಿದೆ. ಇತ್ತ ಅಧಿಕಾರಿಗಳು ಲೋಕಸಭಾ ಚುನಾವಣಾ ಕಾರ್ಯದಲ್ಲಿ ತಲ್ಲೀನರಾಗಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಸದ್ಯಕ್ಕೆ ಪರಿಹಾರ ಎಂಬುದು ದೂರದ ಮಾತು ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ. ಏಕೆಂದರೆ ಅಧಿಕಾರಿಗಳ ಭೇಟಿಗಾಗಿ ಬರುವ ಸಾರ್ವಜನಿಕರಿಗೆ ಆಯಾ ಕಚೇರಿಯ ಸಿಬ್ಬಂದಿಯಿಂದ ಎಲೆಕ್ಷನ್ ಮೀಟಿಂಗ್ ಎನ್ನುವ ಉತ್ತರಗಳು ಕೇಳಿಬರುತ್ತಿವೆ. ಇದರಿಂದ ಮುಂಬರುವ ದಿನಗಳಲ್ಲಿ ಎದುರಾಗುತ್ತಿರುವ ಚುನಾವಣೆ ಜತೆಗೆ ಬರಗಾಲ ನಿಭಾಯಿಸುವಲ್ಲಿ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.
    ತಾಪಂನಲ್ಲಿ ಸರಣಿ ಸಭೆ: ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಅಗತ್ಯ ಸಿದ್ಧತೆ ಕೈಗೊಳ್ಳಲು ತಾಪಂ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿ ಯೋಗಾನಂದ್ ನೇತೃತ್ವದಲ್ಲಿ ತಹಸೀಲ್ದಾರ್ ಮತ್ತು ತಾಪಂ ಇಒ ಒಳಗೊಂಡ ಸರಣಿ ಸಭೆಯಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಮತದಾನ ಪ್ರಮಾಣದ ಹೆಚ್ಚಳ, ಆಯೋಗದ ಸೂಚನೆಯಂತೆ ಅಗತ್ಯ ಎಚ್ಚರಿಕೆ ವಹಿಸುವುದು ಮತ್ತು ನೀತಿ ಸಂಹಿತೆ ಉಲ್ಲಂಘನೆ ತಡೆಗಟ್ಟಲು ವಹಿಸುವ ಕ್ರಮಗಳು ಸೇರಿದಂತೆ ನಾನಾ ವಿಚಾರಗಳ ಕುರಿತು ಭೌತಿಕವಾಗಿ ಹಾಗೂ ಆನ್‌ಲೈನ್ ಮೂಲಕವೂ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ.
    ಖಾಕಿ ಪಡೆ ಸನ್ನದ್ಧ: ಪಾರದರ್ಶಕವಾದ ಚುನಾವಣೆ ನಡೆಸಲು ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸ್ ಇಲಾಖೆಯಿಂದಲೂ ಚುನಾವಣೆಗೆ ತಯಾರಿ ನಡೆಸಲಾಗುತ್ತಿದೆ. ಕ್ಷೇತ್ರವಾರು ತೆರೆಯಬೇಕಾಗಿರುವ ಚೆಕ್‌ಪೋಸ್ಟ್, ಅಕ್ರಮ ಹಣ ಸಾಗಣೆ ತಡೆಗೆ ವಹಿಸಬೇಕಿರುವ ಎಚ್ಚರಿಕೆ ಕ್ರಮ, ಮತದಾನ ದಿನದಂದು ಮತಗಟ್ಟೆಗಳಿಗೆ ಅಗತ್ಯವಿರುವ ಭದ್ರತೆ ಸೇರಿದಂತೆ ಅನೇಕ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳುತ್ತಿದೆ. 253 ಮತಗಟ್ಟೆಗಳ ಕ್ಷೇತ್ರ ವ್ಯಾಪ್ತಿಯಲ್ಲಿನ ಗಡಿಭಾಗದಲ್ಲಿ 6 ಚೆಕ್‌ಪೋಸ್ಟ್‌ಗಳ ನಿರ್ಮಾಣ, 26 ಸ್ಪೆಕ್ಟರ್ ಆಫೀಸರ್ ಮತ್ತು ಐದು ತಂಡವಾಗಿ ಪ್ಲೇಯಿಂಗ್ ಸ್ಕ್ವಾಡ್‌ಗಳ ನೇಮಕವಾಗಿದೆ. ಅಕ್ರಮ ಮದ್ಯ ಸಾಗಣೆಗೆ ಕಡಿವಾಣ ಹಾಕಲು ಅಧಿಕಾರಿಗಳ ತಂಡ ನಿಯೋಜಿಸಲು ಕಾರ್ಯನಿರ್ವಹಿಸುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts