More

    ಪೊಲೀಸ್ ಠಾಣೆಯಲ್ಲಿ ಅಕ್ರಮ ಚಟುವಟಿಕೆ?

    ಪಾಳು ಬಿದ್ದ ಅರಿಶಿಣಕುಂಟೆ ಸಮೀಪದ ಕಟ್ಟಡ

    ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

    ಜಿ.ಕೆ.ಸುಗ್ಗರಾಜು ನೆಲಮಂಗಲ
    ನಗರದ ಅರಿಶಿಣಕುಂಟೆ ಸಮೀಪದ ಗ್ರಾಮಾಂತರ ಪೊಲೀಸ್ ಠಾಣೆಯ ಹಳೇ ಕಟ್ಟಡವನ್ನು ಸದ್ಬಳಕೆ ಮಾಡಿಕೊಳ್ಳಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ.
    ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಟ್ಟಣ, ಕಸಬಾ, ತ್ಯಾಮಗೊಂಡ್ಲು, ದಾಬಸ್‌ಪೇಟೆ ಸೇರಿ ದಾಸನಪುರ ಹೋಬಳಿಗೂ ಒಂದೇ ಠಾಣೆ ಕರ್ತವ್ಯ ನಿರ್ವಹಿಸುತ್ತಿತ್ತು. ಅಂದಿನ ಶಾಸಕ ಎಂ.ವಿ.ನಾಗರಾಜು ಅವರು 2010ರಲ್ಲಿ ಗೃಹ ಸಚಿವರಾಗಿದ್ದ ಆರ್.ಆಶೋಕ್ ಅವರ ಮೂಲಕ ತಾಲೂಕಿನಲ್ಲಿ 5 ಪೊಲೀಸ್ ಠಾಣೆಯನ್ನು ಆರಂಭ ಮಾಡಲು ಅನುಮತಿ ಕೊಡಿಸಿದ್ದರು. ಅದರಂತೆ ನೆಲಮಂಗಲ ನಗರ, ಗ್ರಾಮಾಂತರ, ತ್ಯಾಮಗೊಂಡ್ಲು, ದಾಬಸ್‌ಪೇಟೆ, ಮಾದನಾಯಕನಹಳ್ಳಿಯಲ್ಲ್ಲಿ ನೂತನ ಠಾಣೆ ಸ್ಥಾಪಿಸಲಾಗಿತ್ತು.

    ಕಟ್ಟಡ ಹಿನ್ನೆಲೆ: ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ಅರಿಶಿನಕುಂಟೆ ಸಮೀಪದಲ್ಲಿ 1997ರ ಮಾರ್ಚ್ 31ರಂದು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತುಮಕೂರು ರಸ್ತೆ ತನಿಖಾ ಠಾಣೆಯನ್ನು ಉದ್ಘಾಟನೆ ಮಾಡಿದ್ದು, ವಾಣಿಜ್ಯ ತೆರಿಗೆಗಳ ಇಲಾಖೆ ಅಧಿಕಾರಿಗಳು ಬಳಸಿಕೊಳ್ಳುತ್ತಿದ್ದರು.
    2010ರಲ್ಲಿ ಗ್ರಾಮಾಂತರ ಠಾಣೆ, ನಗರ ಚನ್ನಪ್ಪ ಬಡಾವಣೆಯ ಖಾಸಗಿ ಕಟ್ಟಡವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿತ್ತು. 2013ರಲ್ಲಿ ವಾಣಿಜ್ಯ ತೆರಿಗೆಗಳ ಇಲಾಖೆ ಅಧಿಕಾರಿಗಳ ತನಿಖಾ ಠಾಣೆ ಬೆಂಗಳೂರಿಗೆ ಸ್ಥಳಾಂತರವಾದ ಹಿನ್ನೆಲೆಯಲ್ಲಿ ಕಟ್ಟಡ ಖಾಲಿ ಬಿದ್ದಿತ್ತು. ಬಳಿಕ ವಾಣಿಜ್ಯ ತೆರಿಗೆಗಳ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಅರಿಶಿನಕುಂಟೆ ಸಮೀಪದ ಗ್ರಾಮಾಂತರ ಠಾಣೆಯನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗಿತ್ತು. ಅದರಂತೆ ಕಳೆದ 10 ವರ್ಷದಿಂದ ಪೊಲೀಸ್ ಠಾಣೆ ಇದೇ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿತ್ತು.
    ನೂತನ ಪೊಲೀಸ್ ಠಾಣೆ: ತಾಲೂಕಿನ ಬೊಮ್ಮನಹಳ್ಳಿಯಲ್ಲಿ ರಾಜ್ಯ ಪೊಲೀಸ್ ಗೃಹ ಮಂಡಳಿಯಿಂದ ಗ್ರಾಮಾಂತರ ಠಾಣೆ ಕಟ್ಟಡ ನಿರ್ಮಿಸಿದ್ದು, ಇತ್ತೀಚೆಗೆ ಅರಿಶಿಣಕುಂಟೆಯಿಂದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

    ಅಕ್ರಮ ಚಟುವಟಿಕೆಗಳ ತಾಣ: ಈ ಹಿಂದೆ ಗ್ರಾಮಾಂತರ ಠಾಣೆ ಕರ್ತವ್ಯ ನಿರ್ವಹಿಸುತ್ತಿದ್ದ ಕಟ್ಟಡವನ್ನು ಕೆಲ ಪುಂಡರು ಮದ್ಯ ಸೇವನೆಯ ಅಡ್ಡೆಯಾಗಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
    ಇತ್ತೀಚೆಗೆ ಹಳೆಯ ಗ್ರಾಮಾಂತರ ಠಾಣೆ ಕಟ್ಟಡ ಪಾಳು ಬಿದ್ದಿದ್ದು, ಸದ್ಬಳಕೆ ಮಾಡಿಕೊಳ್ಳಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತ್ತಿದ್ದು, ಬೇಸರದ ಸಂಗತಿ. ಕೂಡಲೇ ಪೊಲೀಸ್ ಇಲಾಖೆ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಪಾಳು ಬಿದ್ದ ಕಟ್ಟಡದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಕೆ.ಕೆಂಪಲಿಂಗನಹಳ್ಳಿ ಮುನಿರಾಜು ತಿಳಿಸಿದರು.

    ನಗರದಲ್ಲಿ ಸರ್ಕಾರದ ಅನೇಕ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದು, ಲಕ್ಷಾಂತರ ರೂ.ಬಾಡಿಗೆ ಕಟ್ಟಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಸರ್ಕಾರದ ಕಟ್ಟಡವನ್ನು ಪಾಳು ಬೀಳಲು ಬಿಡದೆ ಸದ್ಬಳಕೆ ಮಾಡಿಕೊಳ್ಳಬೇಕು.
    ಅರಣ್‌ಕುಮಾರ್, ಬಹುಜನ ಚಳವಳಿ ಸಂಘಟನೆ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts