More

    ಇಂದು ಬಿಗು ಪೊಲೀಸ್ ಬಂದೋಬಸ್ತ್, ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಹಿನ್ನೆಲೆಯಲ್ಲಿ ಮುಂಜಾಗ್ರತೆ

    ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಬುಧವಾರ ಶಿಲಾನ್ಯಾಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದ.ಕ ಜಿಲ್ಲೆಯಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಆ.4ರ ಸಂಜೆ 6ರಿಂದ ಆ.6ರ ಬೆಳಗ್ಗೆ 9ಗಂಟೆಯವರೆಗೆ ಮದ್ಯ ನಿಷೇಧಿಸಲಾಗಿದೆ. 5 ಕೆಎಸ್‌ಆರ್‌ಪಿ, 5 ಸಿಎಆರ್ ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ವಿಕಾಸ್ ತಿಳಿಸಿದ್ದಾರೆ.

    ಮಂಗಳವಾರ ರಾತ್ರಿಯಿಂದಲೇ ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಸ್ತು ಆರಂಭಿಸಲಾಗಿದೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು 400ಕ್ಕೂ ಅಧಿಕ ಪೊಲೀಸರು ಈ ಕರ್ತವ್ಯ ನಿರ್ವಹಿಸಲಿದ್ದಾರೆ. ನಗರದ ನಾನಾ ಜಂಕ್ಷನ್‌ಗಳಲ್ಲಿ ಒಟ್ಟು 27 ಚೆಕ್ ಪಾಯಿಂಟ್ ಮಾಡಲಾಗಿದ್ದು, ತಪಾಸಣೆ ನಡೆಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.

    ಮಂಗಳೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸುವಂತೆ ಎಲ್ಲ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಾಥನಾ ಮಂದಿರ, ದೇವಸ್ಥಾನಗಳ ಬಳಿ ಸಿಬ್ಬಂದಿ ನಿಯೋಜಿಸಲಾಗಿದೆ.

    ಸಾಮಾಜಿಕ ಜಾಲತಾಣ ಮೇಲೆ ನಿಗಾ: ಶಿಲಾನ್ಯಾಸ ಸಂದರ್ಭ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಕದಡುವ ಸಂದೇಶಗಳನ್ನು ಹಾಕುವ ಸಾಧ್ಯತೆ ಇದ್ದು, ಸಾಮಾಜಿಕ ಜಾಲತಾಣ ಮೇಲೆಯೂ ನಿಗಾಯಿಟ್ಟು ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಇಂದು ಮದ್ಯ ಸಿಗದು: ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಆ.4 ಸಂಜೆ 6ರಿಂದ ಆ.6 ಬೆಳಗ್ಗೆ 9ಗಂಟೆ ತನಕ ಬಾರ್, ವೈನ್‌ಶಾಪ್, ಸರ್ಕಾರಿ ಮದ್ಯ ಮಾರಾಟದ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶ ಹೊರಡಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅ.4ರ ರಾತ್ರಿ 8 ಗಂಟೆಯಿಂದ 6ರ ಬೆಳಗ್ಗೆ 6 ಗಂಟೆವರೆಗೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದು, ಈ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts