More

    ವ್ಯಾಪಾರಕ್ಕೆ ಮತ್ತೆ ನಿರ್ಬಂಧ, ಸೆಂಟ್ರಲ್ ಮಾರ್ಕೆಟ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

    ಮಂಗಳೂರು: ಸೆಂಟ್ರಲ್ ಮಾರುಕಟ್ಟೆಯಲ್ಲಿ ಮಂಗಳವಾರ ವ್ಯಾಪಾರಕ್ಕೆ ಮುಂದಾದ ವರ್ತಕರಿಗೆ ಮಹಾನಗರ ಪಾಲಿಕೆ ಪೊಲೀಸರ ಮೂಲಕ ನಿರ್ಬಂಧ ಹೇರಿದ್ದು, ಅಧಿಕಾರಿಗಳು ಮತ್ತು ವ್ಯಾಪಾರಸ್ಥರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಗಿ ಬಿಗುವಿನ ವಾತಾವರಣ ಉಂಟಾಯಿತು.

    ಲಾಕ್‌ಡೌನ್ ಆದ ಸಂದರ್ಭ ದೈಹಿಕ ಅಂತರ ಕಾಯ್ದುಕೊಳ್ಳಲು ಸಗಟು ವ್ಯಾಪಾರಿಗಳನ್ನು ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ಹೊಸ ಕಟ್ಟಡ ಕಟ್ಟುವುದಕ್ಕಾಗಿ ಶಿಥಿಲಗೊಂಡಿರುವ ಸೆಂಟ್ರಲ್ ಮಾರುಕಟ್ಟೆ ಕಟ್ಟಡ ಕೆಡವಲು ಎಲ್ಲ ರೀತಿಯ ವ್ಯಾಪಾರ ಸ್ಥಗಿತ ಮಾಡುವಂತೆ ಮಹಾನಗರ ಪಾಲಿಕೆ ಏ.7ರಂದು ಆದೇಶ ಹೊರಡಿಸಿತ್ತು. ಆ ಬಳಿಕ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು.

    ಪಾಲಿಕೆ ಆದೇಶ ಹೊರಡಿಸುವುದಕ್ಕಿಂತ ಕೆಲವು ದಿನಗಳ ಹಿಂದೆ ಟ್ರೇಡ್ ಲೈಸೆನ್ಸ್ ನೀಡಿದ್ದು, ಸೆಂಟ್ರಲ್ ಮಾರುಕಟ್ಟೆ ಕಟ್ಟಡ ನೆಲಸಮ ಮಾಡುವ ಉದ್ದೇಶವಿದ್ದರೆ ಲೈಸೆನ್ಸ್ ನವೀಕರಣ ಮಾಡಿರುವುದು ಏಕೆ? ಪರ್ಯಾಯ ವ್ಯವಸ್ಥೆ ಮಾಡದೆ ವ್ಯಾಪಾರಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ವ್ಯಾಪಾರಸ್ಥರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಪಾಲಿಕೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಮಂಗಳವಾರದಿಂದ ವ್ಯಾಪಾರ ವಹಿವಾಟು ಆರಂಭಿಸಲು ಮುಂದಾಗಿದ್ದರು.

    ಪೊಲೀಸರಿಂದ ತಡೆ: ವ್ಯಾಪಾರಸ್ಥರು ಬೆಳಗ್ಗೆ ಸೆಂಟ್ರಲ್ ಮಾರುಕಟ್ಟೆಗೆ ಬರುವ ಮುನ್ನವೇ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಒಳಹೋಗುವುದಕ್ಕೆ ತಡೆಯೊಡ್ಡಿದರು. ನ್ಯಾಯ ದೊರಕಿಸಿ ಕೊಡಿ ಎಂದು 300ಕ್ಕಿಂತಲೂ ಅಧಿಕ ವ್ಯಾಪಾರಸ್ಥರು ಪ್ರತಿಭಟನೆಗೆ ಮುಂದಾದರು. ಪಾಲಿಕೆ ಉಪ ಆಯುಕ್ತ ಸಂತೋಷ್ ಕುಮಾರ್ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರ್ಯಾಯ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿ ವ್ಯಾಪಾರಸ್ಥರನ್ನು ಸಮಾಧಾನ ಮಾಡಲು ಯತ್ನಿಸಿದರು.

    ಮಾರುಕಟ್ಟೆ ವಿವಾದ ನ್ಯಾಯಾಲಯದಲ್ಲಿರುವ ಕಾರಣ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಎಲ್ಲ ವ್ಯಾಪಾರಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೊಪ್ಪದ ವ್ಯಾಪಾರಸ್ಥರು ಪಾಲಿಕೆ ಆದೇಶಕ್ಕೆ ತಡೆಯಾಜ್ಞೆ ಇರುವುದರಿಂದ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು. ಈ ಸಂದರ್ಭ ಮಾತಿನ ಚಕಮಕಿ ನಡೆದು, ಪೊಲೀಸರು ವ್ಯಾಪಾರಸ್ಥರನ್ನು ಹಿಂದಕ್ಕೆ ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದರು.

    ಮನಪಾ ಅಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸದೆ ನ್ಯಾಯಾಂಗ ನಿಂದನೆ ಎಸಗಿದ್ದಾರೆ. ಪೊಲೀಸರು ಕೂಡ ಅಧಿಕಾರ ದುರುಪಯೋಗ ಮಾಡಿದ್ದಾರೆ. ಹಾಗಾಗಿ ಮನಪಾ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅರ್ಜಿದಾರರ ಪರ ವಕೀಲರು ನಿರ್ಧರಿಸಿದ್ದಾರೆ.

    ಬೈಕಂಪಾಡಿ ಖಾಲಿ ಖಾಲಿ: ಹಲವು ಸಮಸ್ಯೆಗಳ ನಡುವೆಯೂ ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಮಾಡುತ್ತಿದ್ದ ಸಗಟು ವ್ಯಾಪಾರಿಗಳು ಮಂಗಳವಾರ ಸೆಂಟ್ರಲ್ ಮಾರುಕಟ್ಟೆ ಪ್ರವೇಶಿಸಿ ವ್ಯಾಪಾರಕ್ಕೆ ಪ್ರಯತ್ನಿಸಿದ್ದರಿಂದ ಎಪಿಎಂಸಿ ಪ್ರಾಂಗಣವು ವ್ಯಾಪಾರಿಗಳಿಲ್ಲದೆ ಖಾಲಿಯಾಗಿತ್ತು.

    ತರಕಾರಿ ದರ ಏರಿಕೆ: ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ತರಕಾರಿ, ಹಣ್ಣುಗಳ ಸಗಟು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರು ಮಂಗಳವಾರದಿಂದ ತಾತ್ಕಾಲಿಕವಾಗಿ ವ್ಯಾಪಾರ ಸ್ಥಗಿತಗೊಳಿಸಿದ್ದು ಇಲ್ಲಿಂದ ಪೂರೈಕೆಯಾಗುತ್ತಿದ್ದ ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ ತರಕಾರಿ ದರ ಹೆಚ್ಚಳವಾಗಿದೆ.

    ಟೊಮ್ಯಾಟೊ 20 ರೂ.ನಿಂದ 25, ತೊಂಡೆಕಾಯಿ 40 ರೂ.ನಿಂದ 45, ಬೀಟ್‌ರೋಟ್ 25 ರೂ.ನಿಂದ 30, ಕ್ಯಾಬೇಜ್ 25 ರೂ.ನಿಂದ 30, ಕ್ಯಾರೆಟ್ 50 ರೂ.ನಿಂದ 60, ಸೋರೆಕಾಯಿ 25 ರೂ.ನಿಂದ 30, ಆಲೂಗಡ್ಡೆ 35 ರೂ.ನಿಂದ 40, ಹೀರೆಕಾಯಿ 50 ರೂ.ನಿಂದ 55, ಕಾಯಿಮೆಣಸು 60ರಿಂದ 70, ಸೌತೆ 15 ರೂ.ನಿಂದ 20., ಅಲಸಂಡೆ 50 ರೂ.ನಿಂದ 55, ಕಿತ್ತಳೆ 90 ರೂ.ನಿಂದ 100 ರೂ., ನೇಂದ್ರ ಬಾಳೆ 40 ರೂ. ನಿಂದ 50 ರೂ. ಗೆ ದರ ಹೆಚ್ಚಿಸಿ ಚಿಲ್ಲರೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ.

    ತರಕಾರಿ ಆರ್ಡರ್ ಮಾಡಿಲ್ಲ: ಗೊಂದಲದ ಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಬಗ್ಗೆ ಮುನ್ಸೂಚನೆ ಇದ್ದುದರಿಂದ ಮಂಗಳವಾರ ತರಕಾರಿ ಮಾರಾಟ ಅಸಾಧ್ಯ ಎಂದು ಮನಗಂಡು ವ್ಯಾಪಾರಿಗಳು ತರಕಾರಿ ಆರ್ಡರ್ ಮಾಡಿಲ್ಲ. ಹಾಗಾಗಿ ತರಕಾರಿ, ಹಣ್ಣುಗಳನ್ನು ಹೇರಿಕೊಂಡು ಲಾರಿಗಳು ಮಾರುಕಟ್ಟೆಗೆ ಬಂದಿಲ್ಲ. ಇನ್ನೂ ಎರಡು ದಿನ ಸಗಟು ವ್ಯಾಪಾರಸ್ಥರು ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ವ್ಯಾಪಾರಕ್ಕೆ ಹೋಗುವ ಸಾಧ್ಯತೆ ಕಡಿಮೆ. ಸಂಘದ ಸಭೆ ನಡೆಸಿ ಅದರಲ್ಲಿ ನಿರ್ಧಾರ ಕೈಗೊಳ್ಳುವ ತನಕ ತಾತ್ಕಾಲಿಕ ಮುಷ್ಕರದಂತೆ ಇರುತ್ತದೆ ಎಂದು ಸಗಟು ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಜನಾರ್ದನ ಸಾಲ್ಯಾನ್ ತಿಳಿಸಿದ್ದಾರೆ.

    ನ್ಯಾಯಾಲಯದ ಅಂತಿಮ ಆದೇಶ ಬಾರದ ಹೊರತು ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ವ್ಯಾಪಾರಿಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಈಗಾಗಲೆ ಲೋಕೋಪಯೋಗಿ ಇಲಾಖೆ ಮತ್ತು ಎನ್‌ಐಟಿಕೆಯ ತಜ್ಞರು ಕೂಡ ಈ ಮಾರುಕಟ್ಟೆಯ ಕಟ್ಟಡವನ್ನು ಕೆಡಹುವುದು ಸೂಕ್ತ ಎಂದು ತಿಳಿಸಿದ್ದಾರೆ. ಅದರಂತೆ ಇದನ್ನು ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸುವ ಸಲುವಾಗಿಯೇ ಇಲ್ಲಿನ ವ್ಯಾಪಾರಿಗಳನ್ನು ಬೈಕಂಪಾಡಿಗೆ ಸ್ಥಳಾಂತರಿಸಿದ್ದೇವೆ. ಪಾಲಿಕೆ ಆದೇಶ ಉಲ್ಲಂಘಿಸಿ ಮತ್ತೆ ಕೇಂದ್ರ ಮಾರುಕಟ್ಟೆ ತೆರೆದು ಕಾನೂನು ಮೀರಿ ವ್ಯಾಪಾರಕ್ಕೆ ಮುಂದಾದರೆ, ಅಂಥ ವ್ಯಾಪಾರಿಗಳ ಲೈಸೆನ್ಸ್ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. 

    – ಸಂತೋಷ್ ಕುಮಾರ್, ಜಂಟಿ ಆಯುಕ್ತ, ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts