More

    ಪೊಲೀಸ್ ರಕ್ಷಣೆಯೊಂದಿಗೆ ಬೋರ್‌ವೆಲ್ ಸುಪರ್ದಿಗೆ ಪಡೆಯುವುದಾಗಿ ಹೇಳಿದ ಜಿಪಂ ಸಿಇಒ ಕೆ.ನಿತೀಶ

    ಬಳ್ಳಾರಿ: ಬೇಸಿಗೆಯಲ್ಲಿ ಜಿಲ್ಲೆಯ ಸಂಡೂರು ಹಾಗೂ ಕೂಡ್ಲಿಗಿ ತಾಲೂಕುಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಂಡು ಬರಲಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದೇನೆ ಎಂದು ಜಿಪಂ ಸಿಇಒ ಕೆ.ನಿತೀಶ ತಿಳಿಸಿದರು.

    ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ವಿಪತ್ತು ಪರಿಹಾರ ನಿಧಿಯಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲಾಗುವುದು. ಬೋರ್‌ವೆಲ್‌ಗಳನ್ನು ಬಾಡಿಗೆಗೆ ನೀಡಲು ಹಿಂಜರಿದರೆ ಪೊಲೀಸರ ರಕ್ಷಣೆಯೊಂದಿಗೆ ಸುಪರ್ದಿಗೆ ಪಡೆಯಲಾಗುವುದು. 14ನೇ ಹಣಕಾಸು ಯೋಜನೆಯಡಿ ಗ್ರಾಪಂ ಮೂಲಕ ಬೋರ್‌ವೆಲ್‌ಗಳನ್ನು ಕೊರೆಯಿಸಲಾಗುವುದು. ಗ್ರಾಮೀಣ ಕುಡಿವ ನೀರು ಸರಬರಾಜು ಅಧಿಕಾರಿಗಳ ವರದಿ ಆಧರಿಸಿ ಬೋರ್‌ವೆಲ್ ಕೊರೆಯಿಸಬೇಕು. ಇಲ್ಲದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸಿಇಒ ಎಚ್ಚರಿಸಿದರು. ಶಾಸಕರ ಅಧ್ಯಕ್ಷತೆಯ ಟಾಸ್ಕಫೋರ್ಸ್ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬೋರ್‌ವೆಲ್ ಕೊರೆಯಿಸಲು ಬಳಕೆ ಮಾಡಲಾಗುವುದು ಎಂದು ಸಿಇಒ ತಿಳಿಸಿದರು.

    ಕಠಿಣ ಕ್ರಮದ ಎಚ್ಚರಿಕೆ
    ಅಧಿಕಾರಿಗಳು ಸದಸ್ಯರ ಜತೆ ಚರ್ಚಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಪ್ರತಿ ಸಭೆಯಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ. ಆದರೂ ಸಮಸ್ಯೆ ಪುನರಾವರ್ತನೆ ಆಗುತ್ತಿದೆ. ಮುಂದಿನ ಬಾರಿ ಇದೇ ಸಮಸ್ಯೆ ಮರುಕಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಅಧಿಕಾರಿಗಳು ತಾಲೂಕುಗಳಿಗೆ ಭೇಟಿ ನೀಡಿದಾಗ ಜಿಪಂ ಸದಸ್ಯರ ಜತೆ ಚರ್ಚಿಸಿ ನನಗೆ ಹಾಗೂ ಸಿಇಒ ಅವರಿಗೆ ವರದಿ ಸಲ್ಲಿಸಬೇಕೆಂದು ಅಧ್ಯಕ್ಷೆ ಸಿ.ಭಾರತಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ನಾನೇ ವೆಚ್ಚ ಭರಿಸುವೆ
    ಗುಂಡುಮುಣುಗು ಕ್ಷೇತ್ರದ ರತ್ನಮ್ಮ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳು ಕಳಪೆಯಾಗಿವೆ. ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಬೇಕು. ಇದಕ್ಕೆ ತಗಲುವ ವೆಚ್ಚವನ್ನು ನಾನೇ ಭರಿಸುವೆ ಎಂದು ಹೇಳಿದರು. ನೀವು ಹಣ ಪಾವತಿಸುವ ಅಗತ್ಯ ಇಲ್ಲ. ಜಿಪಂದಿಂದ ಪರಿಶೀಲನೆ ನಡೆಸಲಾಗುವುದು ಎಂದು ಸಿಇಒ ತಿಳಿಸಿದರು.

    ಡಿಡಿಪಿಐಗೆ ನೋಟಿಸ್
    ಹಡಗಲಿ ತಾಲೂಕಿನ ಮೀರಾಕೊರನಹಳ್ಳಿಯಲ್ಲಿ ಕಾಲುವೆ ಬಸಿ ನೀರಿನಿಂದ ಸರ್ಕಾರಿ ಶಾಲೆಯ ಕೊಠಡಿಗಳು ತೇವಗೊಳ್ಳುತ್ತಿರುವ ಬಗ್ಗೆ ಉತ್ತರ ಒದಗಿಸದ ಬಗ್ಗೆ ಸೋಗಿ ಕ್ಷೇತ್ರದ ವಿಜಯಕುಮಾರ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಡಿಡಿಪಿಐ ಅವರಿಗೆ ಷೋಕಾಸ್ ನೋಟಿಸ್ ನೀಡುವಂತೆ ಸಿಇಒ ಸೂಚಿಸಿದರು. ಜಿಪಂ ಅಧ್ಯಕ್ಷೆ ಸಿ.ಭಾರತಿ ಆಗಮಿಸಿ, ಕರೊನಾ ಸಮಸ್ಯೆ ಕಾರಣಕ್ಕೆ ಜಿಲ್ಲಾಧಿಕಾರಿ ಅವರ ಅನುಮತಿ ಪಡೆದು ಸಾಮಾನ್ಯ ಸಭೆ ಕರೆಯಲಾಗಿದೆ. ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ಬಗೆಹರಿಸಬಹುದು ಎಂದು ಸಮಾಧಾನಪಡಿಸಿದ ಬಳಿಕ ಸಭೆ ಆರಂಭವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts