More

    ಕ್ಲಬ್​ಗಳಲ್ಲಿನ ಕ್ರೀಡಾ ಚಟುವಟಿಕೆಗೆ ಪೊಲೀಸರ ಅನುಮತಿ ಬೇಕಾಗಿಲ್ಲ ಎಂದ ಹೈಕೋರ್ಟ್; ಆದರೆ ಈ ಷರತ್ತು ಅನ್ವಯ

    ಬೆಂಗಳೂರು: ಸದಸ್ಯರಿಗಷ್ಟೇ ಪ್ರವೇಶ ಇರುವ ರಿಕ್ರಿಯೇಷನ್ ಕ್ಲಬ್‌ಗಳಲ್ಲಿ ಕೇರಂ, ರಮ್ಮಿ, ಚೆಸ್, ಸ್ನೂಕರ್ ಮತ್ತಿತರ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಚಟುವಟಿಕೆಗೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

    ಮನರಂಜನಾ ಚಟುವಟಿಕೆ ನಡೆಸಲು ಅನುಮತಿ ಪಡೆಯುವಂತೆ ಒತ್ತಾಯಿಸಿದ ಪೊಲೀಸರ ಕ್ರಮ ಪ್ರಶ್ನಿಸಿ ಮೈಸೂರಿನ ತಿ.ನರಸಿಪುರದ ಸೀರಗಳ್ಳಿ ಲಕ್ಷ್ಮೀದೇವಿ ರಿಕ್ರಿಯೇಷನ್ ಕ್ಲಬ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಪೀಠ ಈ ಆದೇಶ ಮಾಡಿದೆ.

    ಕ್ಲಬ್ ತನ್ನ ಸದಸ್ಯರಿಗೆ ಮನರಂಜನೆ ಒದಗಿಸುವ ಒಂದು ಸಂಸ್ಥೆಯಾಗಿದೆ. ಅಲ್ಲಿ ಉಚಿತವಾಗಿ ಅಥವಾ ಯಾವುದೇ ಮೊತ್ತ ಪಾವತಿಸಿ ಸಾರ್ವಜನಿಕರು ಪ್ರವೇಶ ಕೋರಲು ಸಾಧ್ಯವಿಲ್ಲ. ಕ್ಲಬ್‌ನ ಸದಸ್ಯರಿಗೆ ಮಾತ್ರ ಪ್ರವೇಶವಿರಲಿದೆ. ಆದ್ದರಿಂದ, ಯಾವುದೇ ಕ್ಲಬ್ ಅಥವಾ ಸಂಘ ಮನರಂಜನಾ ಚಟುವಟಿಕೆ ಆಯೋಜಿಸಲು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಯಾವುದೇ ಅನುಮತಿ ಅಥವಾ ಪರವಾನಗಿ ಪಡೆಯುವ ಅಗತ್ಯವಿಲ್ಲ. ಸಾರ್ವಜನಿಕ ಮನರಂಜನಾ ಸ್ಥಳಗಳಿಗೆ ಮಾತ್ರ ಕಾಯ್ದೆಯ ನಿಯಮಗಳು ಅನ್ವಯಿಸುತ್ತವೆ. ಕರ್ನಾಟಕ ಪೊಲೀಸ್ ಕಾಯ್ದೆಯಡಿ ಅನುಮತಿ ಪಡೆಯುವಂತೆ ಅರ್ಜಿದಾರರಿಗೆ ಪೊಲೀಸರು ಒತ್ತಾಯ ಮಾಡುತ್ತಿರುವುದು ಏಕಪಕ್ಷೀಯ ಮತ್ತು ತರ್ಕಹೀನ ಕ್ರಮವಾಗಿದೆ ಎಂದು ಹೈಕೋರ್ಟ್ ಹೇಳಿದೆ.

    ಪರಿಶೀಲನೆ ನಡೆಸಬಹುದು: ಕ್ಲಬ್ ಎಂದು ನೋಂದಾಯಿಸಿಕೊಂಡ ಸಂಘ, ಸೊಸೈಟಿ ಎಲ್ಲವೂ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿವೆ ಎಂದು ಪೊಲೀಸರು ಊಹಿಸಿಕೊಳ್ಳಬಾರದು. ಪೊಲೀಸ್ ಕಾಯ್ದೆಯ ನಿಯಮಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಪೊಲೀಸರು ತಮ್ಮ ಅಧಿಕಾರ ಬಳಸಬೇಕು. ಆದರೆ, ಕ್ಲಬ್ ಆವರಣದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಸಬಾರದು. ಈ ವಿಚಾರದಲ್ಲಿ ಅಗತ್ಯವಿದ್ದರೆ ಪರಿಶೀಲನೆ ನಡೆಸಿ ಕ್ಲಬ್ ಚಟುವಟಿಕೆಯ ಸ್ವರೂಪ ತಿಳಿಯಲು ಪೊಲೀಸ್ ಪ್ರಾಧಿಕಾರಗಳು ಮುಕ್ತವಾಗಿವೆ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಅರ್ಜಿದಾರ ಕಬ್ಲ್‌ನ ಕಾನೂನಾತ್ಮಕ ಚಟುವಟಿಕೆಗೆ ಪೊಲೀಸರು ಅಡ್ಡಿಪಡಿಸಬಾರದು ಎಂದು ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ.

    ಪ್ರಕರಣವೇನು?: 2022ರ ಏ.13ರಂದು ಸೀರಗಳ್ಳಿ ಲಕ್ಷ್ಮಿದೇವಿ ರಿಕ್ರಿಯೇಷನ್ ಕ್ಲಬ್ ನೋಂದಣಿಯಾಗಿತ್ತು. ಸದಸ್ಯರಿಗಾಗಿ ಚೆಸ್, ರಮ್ಮಿ, ಕೇರಂ, ಸ್ನೂಕರ್ ಸೇರಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆ ನಡೆಸುವುದಕ್ಕೆ ಅನುಮತಿ ಕೋರಿ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ, ಉಪ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ತಲಕಾಡು ಪೊಲೀಸ್ ಠಾಣಾಧಿಕಾರಿಗೆ ಮನವಿ ಸಲ್ಲಿಸಿತ್ತು. ಆದರೆ, ಮನರಂಜನಾ ಕ್ರೀಡೆ ನಡೆಸಲು ಅನುಮತಿ ನೀಡುವುದಕ್ಕೆ ನಿರಾಕರಿಸಿದ್ದ ಪೊಲೀಸರು, ಈ ಚಟುವಟಿಕೆ ನಡೆಸಲು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪರವಾನಗಿ ಪಡೆಯಬೇಕಿದೆ ಎಂದು ತಿಳಿಸಿದ್ದರು.

    ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಕ್ಲಬ್, ಸದಸ್ಯರ ಅನುಕೂಲಕ್ಕಾಗಿ ಕ್ರೀಡಾ ಚಟುವಟಿಕೆ ನಡೆಸುವುದಕ್ಕೆ ಸಾರ್ವಜನಿಕ ಮನರಂಜನಾ ಸ್ಥಳಗಳ ಪರವಾನಗಿ ಮತ್ತು ನಿಯಂತ್ರಣ ನಿಯಮಗಳ ಅಡಿಯಲ್ಲಿ ಪರವಾನಗಿ ಅಥವಾ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಘೋಷಿಸಬೇಕು. ಮನರಂಜನಾ ಚಟುವಟಿಕೆಗೆ ಅನುಮತಿ ಪಡೆಯುವಂತೆ ಒತ್ತಾಯಿಸದಂತೆ ಪೊಲೀಸ್ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿತ್ತು.

    ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

    ಹಳೇ ಪಿಂಚಣಿ ಪದ್ಧತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ; ಚುನಾವಣಾ ಪ್ರಣಾಳಿಕೆಯಲ್ಲಿ ಒಪಿಎಸ್​​ ಭರವಸೆಗೆ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts