More

    ನಿಯಮ ಉಲ್ಲಂಘಿಸಿದವರ ನೀರಿಳಿಸಿದ ಖಾಕಿ

    ರಾಣೆಬೆನ್ನೂರ: ಸಾರ್ವಜನಿಕ ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ನೇತೃತ್ವದ ಜಿಲ್ಲಾ ಪೊಲೀಸ್ ಪಡೆ ಮಂಗಳವಾರ ಸಂಜೆ ನಗರದಲ್ಲಿ ಕಾರ್ಯಾಚರಣೆ ನಡೆಸಿತು.

    ಇಲ್ಲಿಯ ಸಿದ್ಧೇಶ್ವರ ನಗರ, ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್, ಬಸ್ ನಿಲ್ದಾಣ ವೃತ್ತ, ಬಸ್ ನಿಲ್ದಾಣ, ಕೋರ್ಟ್ ವೃತ್ತ, ಕೆಇಬಿ ಗಣೇಶ ದೇವಸ್ಥಾನ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರು, ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವವರು, ಬೈಕ್​ನಲ್ಲಿ ಮೂವರು ಸಂಚರಿಸುತ್ತಿರುವವರನ್ನು ತಡೆದು ದಂಡ ವಿಧಿಸಿದರು.

    ಪುಟ್​ಪಾತ್ ಅತಿಕ್ರಮಣ: ಅಶೋಕ ನಗರ ಹಾಗೂ ಹಳೇ ಪಿ.ಬಿ. ರಸ್ತೆಯಲ್ಲಿ ಪುಟ್​ಪಾತ್ ಅತಿಕ್ರಮಣ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದ 15ಕ್ಕೂ ಅಧಿಕ ಅಂಗಡಿಗಳ ಮಾಲೀಕರಿಗೆ ಎಸ್ಪಿ ಹನುಮಂತರಾಯ ಸೂಚನೆ ಮೇರೆಗೆ ಪೊಲೀಸರು ಸಾರ್ವಜನಿಕ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿ ದಂಡ ವಿಧಿಸಿದರು.

    ಯಾವುದೇ ಕಾರಣಕ್ಕೂ ಇನ್ಮುಂದೆ ಪುಟ್​ಪಾತ್ ಅತಿಕ್ರಮಿಸಿ ವ್ಯಾಪಾರ ಮಾಡುವಂತಿಲ್ಲ. ಮುಂದಿನ ದಿನದಲ್ಲಿ ಮಾಡಿದರೆ ಅಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಸ್ಪಿ ಎಚ್ಚರಿಕೆ ನೀಡಿದರು.

    ನಗರದ ಹಲಗೇರಿ ವೃತ್ತದಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್ ಎದುರು ರಸ್ತೆಯಲ್ಲಿ ಮನಬಂದಂತೆ ಇಟ್ಟಿದ್ದ ಬೈಕ್​ಗಳನ್ನು ಸಂಚಾರ ಠಾಣೆಗೆ ತೆಗೆದುಕೊಂಡು ಹೋಗಲು ಸಿಬ್ಬಂದಿಗೆ ಸೂಚಿಸಿದರು. ಅಲ್ಲದೆ ಬಾರ್ ಎದುರಿನ ದೃಶ್ಯಾವಳಿ ಸ್ಪಷ್ಟವಾಗಿ ಕಾಣುವಂತೆ ಸಿಸಿ ಕ್ಯಾಮರಾ ಅಳವಡಿಸಬೇಕು. ಈ ಭಾಗದಲ್ಲಿ ಏನಾದರೂ ಅನಾಹುತ ನಡೆದರೆ, ಅದರ ದೃಶ್ಯಾವಳಿ ಕೊಡುವ ಜವಾಬ್ದಾರಿ ನಿಮ್ಮದು ಎಂದು ಬಾರ್​ಗಳ ಮಾಲೀಕರಿಗೆ ಸೂಚಿಸಿದರು.

    ಎಎಸ್ಪಿ ವಿಜಯಕುಮಾರ ಸಂತೋಷ, ಡಿವೈಎಸ್ಪಿ ಕೆ.ವಿ. ಶ್ರೀಧರ, ಸಿಪಿಐ ಎಂ.ಐ. ಗೌಡಪ್ಪಗೌಡ್ರ, ಪಿಐಎಸ್​ಗಳಾದ ಸುನೀಲ ತೇಲಿ, ಮಹಾದೇವಿ ಪಳೋಟಿ, ವಸಂತ, ಮೇಘರಾಜ ಹಾಗೂ ಜಿಲ್ಲೆಯ ಎಲ್ಲ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

    ಕಠಿಣ ಕ್ರಮದ ಎಚ್ಚರಿಕೆ: ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹಾಗೂ ಪೊಲೀಸ್ ಕಾರ್ಯಾಚರಣೆ ಕುರಿತು ತಿಳಿಯಪಡಿಸುವ ಉದ್ದೇಶದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನು ಜಿಲ್ಲೆಯ ಹಾವೇರಿ, ಸವಣೂರ, ಶಿಗ್ಗಾಂವಿ, ಹಾನಗಲ್ಲ ಸೇರಿ ಎಲ್ಲ ನಗರ ಹಾಗೂ ಪಟ್ಟಣಗಳಲ್ಲಿ ಮುಂದುವರಿಸಲಿದ್ದೇವೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು. ಮೊದಲಿಗೆ ರಾಣೆಬೆನ್ನೂರ ಆಯ್ಕೆ ಮಾಡಿಕೊಂಡು ಕಾರ್ಯಾಚರಣೆ ಮಾಡಿದ್ದೇವೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಕೂಡ ಕಾನೂನು ಬಗ್ಗೆ ತಿಳಿದುಕೊಂಡು ಪಾಲನೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ನಡೆಯುವ ನಿರಂತರ ಕಾರ್ಯಾಚರಣೆಯಲ್ಲಿ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ದಂಡ ವಸೂಲಿ: ಸಂಚಾರ ನಿಯಮ ಉಲ್ಲಂಘಿಸಿದ 73 ಜನರಿಂದ 24,500 ರೂ. ವಸೂಲಿ ಮಾಡಲಾಯಿತು. ಸಾರ್ವಜನಿಕರ ಸ್ಥಳದಲ್ಲಿ ಧೂಮಪಾನ ಮಾಡಿದ 16 ಜನರ ವಿರುದ್ಧ ಪ್ರಕರಣ ದಾಖಲಿಸಿ 2,700 ರೂ. ದಂಡ ವಸೂಲಿ ಮಾಡಲಾಯಿತು. ಸಾರ್ವಜನಿಕ ನಿಯಮ ಉಲ್ಲಂಘಿಸಿದ 10 ಜನರ ವಿರುದ್ಧ ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ದಂಡ ತುಂಬಲು ಸೂಚಿಸಲಾಯಿತು. ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts