More

    1,053 ರೌಡಿಗಳಿಗೆ ಖಾಕಿ ಅಂಕುಶ!

    ಕೇಶವಮೂರ್ತಿ ವಿ.ಬಿ. ಹಾವೇರಿ

    ಚುನಾವಣೆ ಸಮೀಪಿಸುತ್ತಿದ್ದಂತೆ ರೌಡಿ ಪಡೆಗಳು ಬಾಲ ಬಿಚ್ಚುವುದು ಸಾಮಾನ್ಯ. ಅಟ್ಟಹಾಸ ಮೆರೆವ ರೌಡಿಗಳನ್ನು ಮಟ್ಟ ಹಾಕಲೆಂದು ಜಿಲ್ಲಾ ಪೊಲೀಸರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.

    ರೌಡಿಗಳು ಮತದಾರರಿಗೆ ಆಮಿಷ, ಇತರ ಪಕ್ಷಗಳ ಮುಖಂಡರಿಗೆ ಬೆದರಿಕೆ, ಧಮ್ಕಿ, ಮತ್ತಿತರ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಾರೆ. ಈ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಾರೆ. ಹೀಗೆ ಕಾನೂನು ಮುರಿಯಲು ಮುಂದಾಗುವ ರೌಡಿಗಳಿಗೆ ಮೊದಲೇ ಅಂಕುಶ ಹಾಕಿದರೆ, ಚುನಾವಣೆಯನ್ನು ಶಾಂತಿಯುತವಾಗಿ ನಡೆಸಬಹುದು ಎಂಬ ಲೆಕ್ಕಾಚಾರದಲ್ಲಿ ಜಿಲ್ಲಾ ಪೊಲೀಸರು ಹಲವು ಮಹತ್ವದ ಕ್ರಮ ಕೈಗೊಂಡಿದ್ದಾರೆ.

    ಜಿಲ್ಲೆಯಲ್ಲಿ 1,053 ರೌಡಿಶೀಟರ್​ಗಳಿದ್ದಾರೆ. ಈ ಎಲ್ಲ ರೌಡಿಗಳ ಜಾತಕ ಜಾಲಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ ಅವರು, ರೌಡಿಗಳಿಂದ ಪ್ರಿವೆಂಟಿವ್ ಸೆಕ್ಷನ್ ಅಡಿ ಬಾಂಡ್ ಪಡೆದುಕೊಂಡಿದ್ದಾರೆ. ಪೊಲೀಸ್ ಇಲಾಖೆ ಮನವಿ ಮೇರೆಗೆ ಆಯಾ ತಾಲೂಕಿನ ತಹಸೀಲ್ದಾರರು ರೌಡಿಗಳಿಂದ 1 ಲಕ್ಷ ರೂ. ನಿಂದ 5 ಲಕ್ಷ ರೂ. ಮೌಲ್ಯದ ಬಾಂಡ್​ನಲ್ಲಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಚುನಾವಣಾ ಅಕ್ರಮದಲ್ಲಿ ಭಾಗಿಯಾದರೆ, ಈ ಬಾಂಡ್ ಮುಟ್ಟುಗೋಲು ಹಾಕುವ ಎಚ್ಚರಿಕೆ ನೀಡಿದ್ದಾರೆ.

    ಮತ್ತೊಂದು ಪ್ರಮುಖ ಅಂಶವೆಂದರೆ ಪದೇಪದೆ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಮೂವರು ರೌಡಿಗಳನ್ನು ಎಸ್​ಪಿ ಗಡಿಪಾರು ಮಾಡಿದ್ದಾರೆ. ಇನ್ನೂ 7 ರೌಡಿಗಳ ಗಡಿಪಾರಿಗೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ. ಜಿಲ್ಲಾಧಿಕಾರಿ ಅವರು ಈ ಕುರಿತು ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ. ಜಿಲ್ಲಾಧಿಕಾರಿ ಸೂಚಿಸಿದರೆ ಮತ್ತೆ ಹಲವರು ಗಡಿಪಾರಾಗಲಿದ್ದಾರೆ ಎನ್ನುತ್ತವೆ ಪೊಲೀಸ್ ಮೂಲಗಳು.

    ಆಸ್ತಿ ಮುಟ್ಟುಗೋಲು ಎಚ್ಚರಿಕೆ: ಜಿಲ್ಲೆಯಲ್ಲಿ ಸುಮಾರು 20 ಕುಖ್ಯಾತ ರೌಡಿಗಳಿದ್ದಾರೆ. ಇವರ ಮೇಲೆ ಪೊಲೀಸ್ ಇಲಾಖೆ ಎಲ್ಲ ರೀತಿಯಿಂದಲೂ ನಿಗಾ ವಹಿಸಿದೆ. ಮುನ್ನೆಚ್ಚರಿಕೆ ನೀಡಿದ ಬಳಿಕವೂ ಪದೇಪದೆ ಚುನಾವಣಾ ಅಕ್ರಮದಲ್ಲಿ ಭಾಗಿಯಾದಲ್ಲಿ ಅಂಥವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಸ್​ಪಿ ಗುಣಾರೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ರೌಡಿ ಪರೇಡ್, ಮನೆ ಶೋಧ: ಈಗಾಗಲೇ ಪೊಲೀಸರು ರೌಡಿ ಪರೇಡ್ ನಡೆಸುವ ಮೂಲಕ ಪ್ರತಿಯೊಬ್ಬ ರೌಡಿಯ ವೈಯಕ್ತಿಕ ಮಾಹಿತಿ ಸಂಗ್ರಹಿಸಿದ್ದಾರೆ. ಎಸ್​ಪಿ, ಎಎಸ್​ಪಿ, ಡಿವೈಎಸ್​ಪಿ ಮಟ್ಟದ ಅಧಿಕಾರಿಗಳು ಒಬ್ಬೊಬ್ಬರನ್ನೇ ಕರೆಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಬೆಳ್ಳಂಬೆಳಗ್ಗೆ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ ಕೆಲ ಆಯುಧಗಳನ್ನೂ ವಶಪಡಿಸಿಕೊಂಡಿದ್ದಾರೆ.

    ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ರೌಡಿ ಚಟುವಟಿಕೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಮೀರಿ ಯಾರಾದರೂ ಅಪರಾಧ ಕೃತ್ಯದಲ್ಲಿ ಭಾಗಿಯಾದರೆ, ಕಾನೂನು ರೀತಿ ಶಿಸ್ತು ಕ್ರಮ ಜರುಗಿಸಲಾಗುವುದು.

    | ಡಾ.ಶಿವಕುಮಾರ ಗುಣಾರೆ, ಎಸ್​ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts