More

    ಅಧಿಕೃತ ಪರವಾನಗಿ ಇಲ್ಲದೇ ಅಧಿಕ ಬಡ್ಡಿ ವಸೂಲಿ ಮಾಡುವವರ ಮೇಲೆ ಪೊಲೀಸರು ದಾಳಿ ಮಾಡುವಂತಿಲ್ಲ ಎಂದ ಹೈಕೋರ್ಟ್..!

    ಬೆಂಗಳೂರು: ಅಧಿಕೃತ ಪರವಾನಗಿ ಇಲ್ಲದೆ ಸಾಲಗಾರರಿಂದ ಅಧಿಕ ಬಡ್ಡಿ ವಸೂಲಿ ಮಾಡುವವರ ಮೇಲೆ ದಾಳಿ ನಡೆಸಿ, ದಾಖಲೆ ವಶಪಡಿಸಿಕೊಳ್ಳುವ ಅಧಿಕಾರ ಪೊಲೀಸರಿಗಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ, ಈ ಮೂಲಕ ಇಬ್ಬರು ಲೇವಾದೇವಿದಾರರ ವಿರುದ್ಧದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಿದೆ.

    ವಾಹನಗಳನ್ನು ಅಡವಿರಿಸಿಕೊಂಡು ಸಾಲ ನೀಡಿ, ಸಾಲಗಾರರಿಂದ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ಬೆಳಗಾವಿಯ ಗೋಕಾಕ್ ಠಾಣೆ ಪೊಲೀಸರು ದಾಖಲಿಸಿರುವ ದೋಷಾರೋಪ ಪಟ್ಟಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಕೋರಿ ಗೋಕಾಕ್‌ನ ಬಸವರಾಜು ಮತ್ತು ಜಾಕೀರ್ ಹುಸೈನ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಮಾನ್ಯ ಮಾಡಿದೆ.

    ಹೈಕೋರ್ಟ್ ಆದೇಶವೇನು?

    ಕರ್ನಾಟಕ ಹಣ ಲೇವಾದೇವಿದಾರರ ಕಾಯ್ದೆಯ ಸೆಕ್ಷನ್ 15ರ ಪ್ರಕಾರ ರಿಜಿಸ್ಟ್ರಾರ್, ಸಹಾಯಕ ರಿಜಿಸ್ಟ್ರಾರ್ ಅಥವಾ ಸರ್ಕಾರ ನಿಯೋಜಿಸಿದ ನಿರ್ದಿಷ್ಟ ಅಧಿಕಾರಿ ಮಾತ್ರ ಅಧಿಕ ಬಡ್ಡಿ ವಸೂಲಿ ಮಾಡುವವರ ಮೇಲೆ ದಾಳಿ ನಡೆಸಿ, ಶೋಧ ನಡೆಸುವ ಹಾಗೂ ಜಪ್ತಿ ಮಾಡುವ ಅಧಿಕಾರ ಹೊಂದಿದ್ದಾರೆ. ಆದರೆ, ಪೊಲೀಸರಿಗೆ ಆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.

    ಜತೆಗೆ, ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ ಕಾಯ್ದೆಯ ಸೆಕ್ಷನ್ 5ರ ಪ್ರಕಾರ ಅಧಿಕ ಬಡ್ಡಿ ಹೊರೆಯಿಂದ ನೊಂದ ಸಾಲಗಾರರು ಸಂಬಂಧಪಟ್ಟ ನ್ಯಾಯಾಲಯದ ಮೊರೆ ಹೋಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದರೆ, ಈ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ ಪಾಲಿಸದೆ ಎಫ್‌ಐಆರ್ ಮತ್ತು ದೋಷಾರೋಪ ಪಟ್ಟಿ ದಾಖಲಿಸಿರುವ ಪೊಲೀಸರ ಕ್ರಮವನ್ನು ಅನುಮತಿಸಲಾಗದು ಎಂದಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಿ ಆದೇಶಿಸಿದೆ.

    ಆಗಿದ್ದೇನು?

    ಸರ್ಕಾರದಿಂದ ಪರವಾನಗಿ ಪಡೆಯದೆ ಸಾರ್ವಜನಿಕರ ವಾಹನಗಳನ್ನು ಅಡಮಾವಿಟ್ಟುಕೊಂಡು ಮಾಸಿಕ ಶೇ.10 ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದ ಆರೋಪದಲ್ಲಿ ಅರ್ಜಿದಾರರ ವಿರುದ್ಧ ಗೋಕಾಕ್ ಟೌನ್ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿದ ಪೊಲೀಸರು, ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ-2004ರ ಸೆಕ್ಷನ್ 3 ಮತ್ತು 4 ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಂತರ ಗೋಕಾಕ್‌ನ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಂಡು 2009ರ ಫೆ.4ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ತಮ್ಮ ವಿರುದ್ಧದ ಚಾರ್ಜ್‌ಶೀಟ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts