More

    ಪೊಲೀಸ್ ಕೊಲೆ ಯತ್ನ ‘ಮಾಯಾ ಗ್ಯಾಂಗ್’ ಕೃತ್ಯ, ಮತ್ತೆ ಆರು ಮಂದಿ ಬಂಧನ

    ಮಂಗಳೂರು: ನಗರದ ನ್ಯೂಚಿತ್ರಾ ಟಾಕೀಸು ಸಮೀಪ 2020ರ ಡಿ.16ರಂದು ನಡೆದ ಬಂದರು ಠಾಣೆಯ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಗಣೇಶ್ ಕಾಮತ್ ಅವರ ಕೊಲೆ ಯತ್ನ 2019ರ ಡಿ.19ರ ಪೊಲೀಸ್ ಗೋಲಿಬಾರ್‌ಗೆ ಪ್ರತೀಕಾರವಾಗಿ ನಡೆದಿದ್ದು, ಈ ಸಂಬಂಧ ‘ಮಾಯಾ ಗ್ಯಾಂಗ್’ನ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ಬಂಧಿತರ ಸಂಖ್ಯೆ 8ಕ್ಕೆ ಏರಿದೆ.

    ಕುದ್ರೋಳಿ ನಿವಾಸಿಗಳಾದ ಅನೀಶ್ ಅಶ್ರಫ್(22), ಅಬ್ದುಲ್ ಖಾದರ್ ಫಹದ್(23), ರಾಹಿಲ್ ಯಾನೆ ಚೋಟು ರಾಹಿಲ್(18), ಬಜ್ಪೆಯ ಶೇಕ್ ಮುಹಮ್ಮದ್ ಹ್ಯಾರಿಸ್(31), ತಣ್ಣೀರುಬಾವಿಯ ಮುಹಮ್ಮದ್ ಖಾಯಿಸ್(24) ಹಾಗೂ ಬಿ.ಸಿ.ರೋಡ್‌ನ ಮುಹಮ್ಮದ್ ನವಾಝ್(30) ಬಂಧಿತರು. ಕುದ್ರೋಳಿ ನವಾಝ್ ಮತ್ತು ಕಾನೂನಿನೊಡನೆ ಸಂಘರ್ಷಕ್ಕಿಳಿದವನನ್ನು (ಅಪ್ರಾಪ್ತ ವಯಸ್ಸಿನವ) ಈ ಹಿಂದೆಯೇ ಬಂಧಿಸಲಾಗಿದೆ. ನವಾಝ್ ಮತ್ತು ಫಯಾಜ್ ಇನ್ನೊಂದು ತಂಡದ ಜತೆ ಸಂಪರ್ಕ ಹೊಂದಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    * ಗೋಲಿಬಾರ್‌ಗೆ ಪ್ರತೀಕಾರ: ಅನೀಶ್ ಅಶ್ರಫ್ ಹಾಗೂ ಅಬ್ದುಲ್ ಖಾದರ್ ಧಕ್ಕೆಯಲ್ಲಿ ಮೀನುಗಾರಿಕೆ ಕೆಲಸದಲ್ಲಿದ್ದು, ಮುಹಮ್ಮದ್ ನವಾಝ್ ನಗರದ ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ.

    ಗೋಲಿಬಾರ್ ಸಂದರ್ಭ ಸಂಬಂಧಿಕರಿಗೆ ತೊಂದರೆ ಆಗಿರುವುದಕ್ಕೆ ಪ್ರತೀಕಾರಕ್ಕಾಗಿ ಸ್ಥಳೀಯ ಎರಡು ಗ್ಯಾಂಗ್‌ಗಳು ಸೇರಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆಗೆ ಸಂಚು ರೂಪಿಸಿದ್ದು, ಡಿ.19ರಂದೇ ಕೃತ್ಯ ನಡೆಸಲು ಮುಂದಾಗಿದ್ದರು. ಆ ದಿನ ಹೆಚ್ಚಿನ ಬಂದೋಬಸ್ತ್ ಇರುವುದರಿಂದ ಪೊಲೀಸರ ಸಿಲುಕಿ ಹಾಕಿಕೊಳ್ಳಬಹುದೆಂದು ಎರಡು ದಿನ ಮೊದಲೇ ಕೃತ್ಯ ಎಸಗಲು ಸಂಚು ರೂಪಿಸಲಾಗಿತ್ತು. ಅಪರಾಧ ಪ್ರಕರಣಗಳ ಹಿನ್ನೆಲೆ ಇರುವ ಅನೀಶ್ ದಾಳಿ ಮಾಡಬೇಕಿತ್ತಾದರೂ, ಪೊಲೀಸರಿಗೆ ಅನುಮಾನ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ಅಪ್ರಾಪ್ತ ವಯಸ್ಸಿನವನ ಮೂಲಕ ಕೃತ್ಯ ನಡೆಸಲಾಗಿದೆ. ಸಂದರ್ಭಕ್ಕೆ ಅನುಸಾರವಾಗಿ ಚೂರಿಯಿಂದ ಇರಿಯಲು ಆತನಿಗೆ ತಿಳಿಸಲಾಗಿತ್ತು. ಅದೃಷ್ಟವಶಾತ್ ಹೆಡ್‌ಕಾನ್‌ಸ್ಟೆಬಲ್ ಅವರ ಕೈಗೆ ತಾಗಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಯುಕ್ತರು ತಿಳಿಸಿದರು.
    ಪ್ರಕರಣ ನಡೆದ ಬಳಿಕ ವಿಚಾರಣೆ ಸಂದರ್ಭ ಆರೋಪಿ ನವಾಝ್ ಪೊಲೀಸರ ದಾರಿ ತಪ್ಪಿಸುವ ನಿಟ್ಟಿನಲ್ಲಿ ಮಾಹಿತಿ ನೀಡಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಹೇಳಿದರು.

    ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ನಿರ್ದೇಶನದಲ್ಲಿ ಎಸಿಪಿ ಜಗದೀಶ್, ಕದ್ರಿ ಇನ್‌ಸ್ಪೆಕ್ಟರ್ ಸವಿತ್ರತೇಜ ಹಾಗೂ ಸಿಬ್ಬಂದಿ, ಬಂದರು ಠಾಣೆ ಇನ್‌ಸ್ಪೆಕ್ಟರ್ ಗೋವಿಂದರಾಜು ಹಾಗೂ ಸಿಬ್ಬಂದಿ, ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಅಮಲು ಟ್ಯಾಬ್ಲೆಟ್ ಸೇವಿಸಿ ಕೃತ್ಯ: ಅಮಲು ಬರುವ ಮಾತ್ರೆ ಸೇವಿಸಿ ಕೃತ್ಯ ನಡೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಕಾನೂನಿನೊಡನೆ ಸಂಘರ್ಷಕ್ಕಿಳಿದವನಿಗೆ ಅಮಲು ಮಾತ್ರೆ ನೀಡಿ ಪ್ರಚೋದನೆ ನೀಡಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಮಾತ್ರ ಮೆಡಿಕಲ್‌ನಲ್ಲಿ ನೀಡುವ (ಶೆಡ್ಯೂಲ್ ಎಚ್) ಉಪಯೋಗಿಸಿದ್ದರು. ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸಕ್ಕಿದ್ದ ಮುಹಮ್ಮದ್ ನವಾಝ್ ಸ್ಟ್ರಿಪ್ ಒಂದಕ್ಕೆ 600 ರೂ.ಗಳಿಗೆ ಮಾರಾಟ ಮಾಡುತ್ತಿದ್ದುದೂ ಸಾಬೀತಾಗಿದೆ. ಮೆಡಿಕಲ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

    ಬಂಧನ ಇನ್ನೂ ಬಾಕಿ: ಕೃತ್ಯದಲ್ಲಿ ಸ್ಥಳೀಯವಾಗಿ ‘ಮಾಯಾ ಗ್ಯಾಂಗ್’ ಎಂದು ಗುರುತಿಸಿಕೊಂಡಿರುವ ತಂಡದ ಜತೆಗೆ ಇನ್ನೊಂದು ತಂಡ ಸೇರಿ ಅತ್ಯಂತ ವ್ಯವಸ್ಥಿತವಾಗಿ ಪಿತೂರಿ ನಡೆಸಿದೆ. ಇನ್ನೊಂದು ತಂಡದ ಬಗ್ಗೆ ಸಾಕಷ್ಟು ಮಾಹಿತಿ ಲಭಿಸಿದ್ದು, ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಶಿಕುಮಾರ್ ತಿಳಿಸಿದರು.

    ಯಾರ ಕೈವಾಡ ಹೇಳಲಾಗದು: ಈ ಪ್ರಕರಣದಲ್ಲಿ ಯಾವುದಾದರೂ ಸಂಘಟನೆಗಳು, ಪಕ್ಷಗಳು ಭಾಗಿಯಾಗಿವೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಆಯುಕ್ತರು, ಇದನ್ನು ನಾವು ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮೇಲಿನ ಅಪರಾಧ ಪ್ರಕರಣವಾಗಿ ಮಾತ್ರವೇ ಪರಿಗಣಿಸಿದ್ದೇವೆ. ತನಿಖೆಯಲ್ಲಿ ಪೊಲೀಸರ ಮೇಲೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಕೃತ್ಯ ನಡೆಸಿರುವುದು ತಿಳಿದಿದೆ. ಹಾಗಾಗಿ ಆರೋಪಿಗಳು ಯಾವ ಪಕ್ಷ, ಸಂಘಟನೆಗೆ ಸೇರಿದ್ದಾರೆ ಎಂಬುದನ್ನು ಹೇಳಲಾಗದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts