More

    ನಾಗರಿಕ ವ್ಯವಸ್ಥೆ ಸುಸ್ಥಿರವಾಗಿರಲು ಪೊಲೀಸ್ ಅತ್ಯಗತ್ಯ

    ಶ್ರವಣಬೆಳಗೊಳ: ಸಮಾಜದಲ್ಲಿ ಪೊಲೀಸ್ ವ್ಯವಸ್ಥೆ ಇಲ್ಲದಿದ್ದರೆ ಸಾಮಾಜಿಕ ವ್ಯವಸ್ಥೆಯನ್ನು ಊಹಿಸಿಕೊಳ್ಳಲು ಅಸಾಧ್ಯ ಎಂದು ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಆಯುಧ ಪೂಜೆ ಅಂಗವಾಗಿ ಇಲ್ಲಿನ ಶ್ರೀಜೈನ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಅಭಿನಂದನಾ ಪೂರ್ವಕ ಆಶೀರ್ವಾದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

    ರೈತರಿಗೆ ಬೆಳೆ ಬೆಳೆಯಲು ನೇಗಿಲು, ಕುಂಟೆ, ಕುಡುಗೋಲು ಎಂಬ ಆಯುಧ ಹೇಗೆ ಮುಖ್ಯವೋ ನಾಗರಿಕ ವ್ಯವಸ್ಥೆ ಸುಸ್ಥಿರವಾಗಿರಲು ಪೊಲೀಸ್ ಎಂಬ ಆಯುಧ ಅತ್ಯವಶ್ಯ. ಹೀಗಾಗಿ ಪೊಲೀಸರನ್ನು ಸಮಾಜದ ಆಯುಧ ಎಂದು ಪರಿಗಣಿಸಿ ಅವರ ಸೇವೆಯನ್ನು ಗುರುತಿಸಿ 2005 ರಿಂದ ಅಭಿನಂದಿಸಲಾಗುತ್ತಿದ್ದು, ಆ ಪರಂಪರೆಯನ್ನು ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.

    ಶ್ರೀ ಕ್ಷೇತ್ರ ಶ್ರವಣಬೆಳಗೊಳ ಪ್ರವಾಸಿ ಕೇಂದ್ರ. ನಿತ್ಯ ಸಾವಿರಾರು ಯಾತ್ರಾರ್ಥಿಗಳು, ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ. 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವ 2030ಕ್ಕೆ ಜರುಗಲಿದ್ದು, ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರ ಅವಶ್ಯಕ ಎಂದು ಹೇಳಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಮಾತನಾಡಿ, ನಾನು ಐಪಿಎಸ್ ಅಧಿಕಾರಿ ಆಗಲು ಶ್ರವಣಬೆಳಗೊಳ ಕ್ಷೇತ್ರದ ಪಾತ್ರವಿದೆ. ಶಾಲಾ ದಿನಗಳಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬಂದಾಗ ಇಲ್ಲಿನ ವಾಸ್ತುಶಿಲ್ಪ, ಇತಿಹಾಸ, ಪರಂಪರೆ ತಿಳಿದು ಅಧ್ಯಯನ ಮಾಡಬೇಕೆಂಬ ಭಾವನೆ ಉಂಟಾಯಿತು. ಹೀಗಾಗಿಯೇ ನಾನು ಇತಿಹಾಸವನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿದೆ ಎಂದು ಹರ್ಷವ್ಯಕ್ತಪಡಿಸಿದರು.

    ದೇಶ, ವಿದೇಶಗಳಿಂದ ಇಲ್ಲಿಗೆ ನಿತ್ಯ ಸಾವಿರಾರು ಜನ ಆಗಮಿಸುತ್ತಾರೆ. ಶಾಂತಿ-ಸುವ್ಯವಸ್ಥೆ ಕಾಪಾಡುವುದು, ಅವರ ಸುರಕ್ಷತೆ ಹಾಗೂ ಸೂಕ್ತ ಭದ್ರತೆ ಒದಗಿಸುವುದು ನಮ್ಮ ಕರ್ತವ್ಯ. ಇದಕ್ಕೆ ಇಲಾಖೆ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

    ಚನ್ನರಾಯಪಟ್ಟಣ ವಿಭಾಗದ ಡಿವೈಎಸ್ಪಿ ರವಿಪ್ರಸಾದ್, ಹಿರಿಸಾವೆ ವೃತ್ತದ ಸಿಪಿಐ ಸಂತೋಷ್, ಶ್ರವಣಬೆಳಗೊಳ ಠಾಣೆ ಪಿಎಸೈ ಶಿವಶಂಕರ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಿ.ಆರ್.ಯುವರಾಜ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts