More

    ಸಂತೃಪ್ತ ಬದುಕಿನಲ್ಲಿ ಕವಿತೆ ಹುಟ್ಟದು: ಶ್ರೀಕೃಷ್ಣಯ್ಯ ಅನಂತಪುರ ವಿಶ್ಲೇಷಣೆ

    ಮಂಗಳೂರು: ಸಂತೃಪ್ತ ಬದುಕಿನಿಂದ ಕವಿತೆ ಹುಟ್ಟಲಾರದು. ಅತೃಪ್ತ ಬದುಕಿನ ನಡುವಿನ ತಾಕಲಾಟವೇ ಕವಿತೆ ಎಂದವರು ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ.

    ತುಳು ಭವನದಲ್ಲಿ ಭಾನುವಾರ ನಡೆದ ದ.. ಜಿಲ್ಲಾ 9ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು.

    ಸಾಹಿತ್ಯದ ಆರೋಗ್ಯವೂ ಇಂದು ಹದಗೆಟ್ಟಿದೆ. ಎಡ, ಬಲ, ಮಧ್ಯಮ ಎಂಬ ಮಗ್ಗುಲಿನತ್ತ ಹೊರಳುತ್ತಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಕಾವ್ಯದ ಮಾತನ್ನು ಆಲಿಸುವ ಮನಸ್ಸುಗಳು ಬೇಕಾಗಿದೆ ಎಂದರು. ಕಾವ್ಯ ಚುಟುಕಾದರೂ, ಕವಿ ಚುಟುಕಾಗಬಾರದು. ಅಧ್ಯಯನ ಅಗತ್ಯ. ಜೆನ್, ರುಬಾಯಿ, ರೆಮಿರಕ್, ಹಾಯ್ಕುಗಳು ಚುಟುಕಿನ ಪ್ರಕಾರಗಳೇ. ಚುಟುಕು, ಹನಿಗವಿತೆ ಎಲ್ಲವೂ ಕವಿತೆಗಳೇ, ಇವೇ ಮಾದರಿಯ ರಚನೆಗಳು ಶಿಲಾಶಾಸನ, ಜಾನಪದದಲ್ಲಿದೆ. ಸಶಕ್ತ ಸಂಘಟನೆಯಿಂದ ಇಂದು ಚುಟುಕಿನ ಮಾನ್ಯತೆ ಹೆಚ್ಚಿದೆ ಎಂದರು.

    ಕಾವ್ಯವನ್ನು ಕಟ್ಟಬಾರದು, ಅದು ಹುಟ್ಟಬೇಕು ಎಂದು ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷರಾಗಿದ್ದ ಗಣೇಶ ಪ್ರಸಾದ ಪಾಂಡೇಲು ಹೇಳಿದರು. ಸಮಾಜದ ತಪ್ಪುಗಳನ್ನು ಎತ್ತಿ ತೋರಿಸಿ, ತಿಳಿ ಹೇಳುವ ಕಾರ್ಯ ಚುಟುಕು ಸಾಹಿತ್ಯದಿಂದ ಆಗುತ್ತಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹೇಳಿದರು.

    ಸಾಧಕರು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ನೂರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಘಟಕ ಅಧ್ಯಕ್ಷ ಎಂ.ಜಿ ಅರಸ್, .. ಜಿಲ್ಲಾ ಘಟಕದ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು, ಮಂಗಳೂರು ತಾಲೂಕು ಅಧ್ಯಕ್ಷ ಕಾ.ವೀ ಕೃಷ್ಣದಾಸ್, ಚಂದ್ರಹಾಸ ಪಕ್ಷಿಕೆರೆ, ರಂಗ ನಿರ್ದೇಶಕ, ನಟ ವಿಜಯಕುಮಾರ್ ಕೊಡಿಯಾಲ್‌ಬೈಲ್, ನಟ ರಮೇಶ್ ರೈ ಕುಕ್ಕುವಳ್ಳಿ ಮೊದಲಾದವರಿದ್ದರು. ಡಾ.ಪ್ರಿಯಾ ಹರೀಶ್ ನಿರೂಪಿಸಿದರು.

     

    ಕವಿತೆಯನ್ನು ಗ್ರಹಿಸಬೇಕು. ಅದಕ್ಕೆ ಪ್ರತ್ಯಕ್ಷ ಶ್ರೋತೃಗಳು ಬೇಕು. ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಬರಹಗಳು, ಅದಕ್ಕೆ ಸಿಗುವ ಲೈಕ್, ಕಮೆಂಟ್‌ಗಳು ಪ್ರಮಾಣಪತ್ರ ಅಲ್ಲ. ಅವೆಲ್ಲ ನನ್ನ ಬೆನ್ನು ನೀನು ತಟ್ಟು, ನಿನ್ನ ಬೆನ್ನು ನಾನು ತಟ್ಟುವ ಅನುಕೂಲಶಾಸ್ತ್ರಗಳಷ್ಟೇ.

    ಶ್ರೀಕೃಷ್ಣಯ್ಯ ಅನಂತಪುರ, ಹಿರಿಯ ಕವಿ, ಸಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts