More

    ನನ್ನ ಸಂಕಲ್ಪ ಶಕ್ತಿಯ ಮೂಲವೇ ನೀವು…!

    ಪ್ರಧಾನಿ ನರೇಂದ್ರ ಮೋದಿ ತಮ್ಮ 2.0 ಸರ್ಕಾರದ ಮೊದಲ ವರ್ಷಾಚರಣೆ ಸಂಭ್ರಮವನ್ನು ದೇಶವಾಸಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಂಪೂರ್ಣ ಬಹುಮತದೊಂದಿಗೆ ಸತತ 2ನೇ ಅವಧಿಗೆ ಅಧಿಕಾರ ನೀಡಿರುವ 130 ಕೋಟಿ ಭಾರತೀಯರಿಗೆ ಪ್ರಧಾನಿ ಬರೆದಿರುವ ಪತ್ರದ ಯಥಾವತ್ ರೂಪ ಇಲ್ಲಿದೆ.

    ನನ್ನ ಸಹ ಭಾರತೀಯ,
    ಕಳೆದ ವರ್ಷ ಈ ದಿನ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ ಪ್ರಾರಂಭವಾಗಿತ್ತು. ಹಲವು ದಶಕಗಳ ಬಳಿಕ ದೇಶದ ಜನರು ಪೂರ್ಣಾವಧಿಯ ಬಹುಮತದೊಂದಿಗೆ ಪೂರ್ಣಾವಧಿಯ ಸರ್ಕಾರಕ್ಕಾಗಿ ಮತ ಚಲಾಯಿಸಿದರು. ಈ ನಿಟ್ಟಿನಲ್ಲಿ ನಾನು ಮತ್ತೊಮ್ಮೆ, ಈ ಹೆಮ್ಮೆಯ ದೇಶದ 130 ಕೋಟಿ ಜನರಿಗೆ ಮತ್ತು ನಮ್ಮ ಪ್ರಜಾಪ್ರಭುತ್ವದ ನೀತಿಗೆ ನಮಸ್ಕರಿಸುತ್ತೇನೆ. ಸಾಮಾನ್ಯ ದಿನಗಳಲ್ಲಿ, ನಾನು ನಿಮ್ಮ ಮಧ್ಯೆಯೇ ಇರುತ್ತಿದ್ದೆ. ಪ್ರಸ್ತುತ ಸಂದರ್ಭಗಳು ಅದಕ್ಕೆ ಅನುಮತಿಸುತ್ತಿಲ್ಲ. ಹಾಗಾಗಿಯೇ, ಈ ಪತ್ರದ ಮೂಲಕ ನಾನು ನಿಮ್ಮ ಆಶೀರ್ವಾದ ಬೇಡುತ್ತಿದ್ದೇನೆ.

    ನನ್ನ ಸಂಕಲ್ಪ ಶಕ್ತಿಯ ಮೂಲವೇ ನೀವು...!ನಿಮ್ಮ ವಾತ್ಸಲ್ಯ, ಸದ್ಭಾವನೆ ಮತ್ತು ಸಕ್ರಿಯ ಸಹಕಾರವು ಹೊಸ ಶಕ್ತಿ-ಸ್ಪೂರ್ತಿ ತುಂಬಿದೆ. ಪ್ರಜಾಪ್ರಭುತ್ವದ ಸಾಮೂಹಿಕ ಶಕ್ತಿಯನ್ನು ನೀವು ಪ್ರದರ್ಶಿಸಿದ ಪರಿ ಇಡೀ ಜಗತ್ತಿಗೆ ಮಾರ್ಗದರ್ಶಕ ಬೆಳಕೆನಿಸಿಕೊಂಡಿದೆ. 2014ರಲ್ಲಿ, ದೇಶದ ಮತದಾರ ಆಮೂಲಾಗ್ರ ಪರಿವರ್ತನೆಗಾಗಿ ಮತ ಚಲಾಯಿಸಿದ. ಕಳೆದೈದು ವರ್ಷಗಳಲ್ಲಿ ಆಡಳಿತ ಯಂತ್ರ ಹೇಗೆ ಪರಿಣಾಮಕಾರಿಯಾಗಿದೆ ಮತ್ತು ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಹೊರಬಂದಿದೆ ಎಂಬುದನ್ನು ಇಡೀ ದೇಶವೇ ನೋಡಿದೆ. ಹಾಗೆಯೇ, ಲಕ್ಷಾಂತರ ಜನರ ಜೀವನ ರೂಪಾಂತರಗೊಂಡಿದೆ. 2014ರಿಂದ 2019ರವರೆಗೆ ಭಾರತದ ವರ್ಚಸ್ಸು ಗಮನಾರ್ಹವಾಗಿ ಹಿಗ್ಗಿದೆ. ಬಡವರ ಘನತೆಗೆ ಹೆಚ್ಚಿದೆ. ಆರ್ಥಿಕತೆಯ ಒಳಗೊಳ್ಳುವಿಕೆ, ಉಚಿತ ಅನಿಲ ಮತ್ತು ವಿದ್ಯುತ್ ಸಂಪರ್ಕ, ನೈರ್ಮಲ್ಯತೆಯ ವಿಸ್ತರಣೆ ಮತ್ತು ಎಲ್ಲರಿಗೂ ವಸತಿಯನ್ನು ಖಾತರಿಪಡಿಸುವ ಪ್ರಗತಿ ಸಾಧಿಸಿದ್ದೇವೆ.

    ಸರ್ಜಿಕಲ್ ಮತ್ತು ವಾಯು ದಾಳಿ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ಪ್ರದರ್ಶಿಸಿದೆ. ಅದೇ ಸಮಯದಲ್ಲಿ, ಏಕ ಪಿಂಚಣಿ ಏಕ ಶ್ರೇಣಿ, ಒಂದು ದೇಶ ಒಂದು ತೆರಿಗೆ- ಜಿಎಸ್​ಟಿ, ರೈತರಿಗೆ ಉತ್ತಮ ಎಂಎಸ್​ಪಿ ನೀಡಬೇಕೆಂಬ ದಶಕಗಳ ಹಿಂದಿನ ಹಲವು ಬೇಡಿಕೆಗಳು ಈಡೇರಿದವು. 2019ರಲ್ಲಿ, ಜನ ಮತ ಚಲಾಯಿಸಿದ್ದು ಕೇವಲ ನಮ್ಮ ಆಡಳಿತದ ಮುಂದುವರಿಕೆಗಾಗಿ ಮಾತ್ರವಲ್ಲ. ಈ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಕನಸನ್ನಿಟ್ಟುಕೊಂಡು ಮತ ಹಾಕಿದ್ದಾರೆ. ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಬೇಕೆಂಬ ಕನಸದು. ಕಳೆದೊಂದು ವರ್ಷದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಈ ಕನಸನ್ನು ಈಡೇರಿಸುವತ್ತ ನಿರ್ದೇಶಿಸಲ್ಪಟ್ಟಿವೆ.

    ಇಂದು, 130 ಕೋಟಿ ಜನರು ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಭಾಗಿಯಾಗಿದ್ದಾರೆ. ಜನ ಶಕ್ತಿ ಮತ್ತು ರಾಷ್ಟ್ರಶಕ್ತಿಯ ಬೆಳಕು ದೇಶವನ್ನು ಹುರಿದುಂಬಿಸುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಮಂತ್ರದಿಂದ ಮುನ್ನಡೆಯುತ್ತಿರುವ ಭಾರತವು ಎಲ್ಲ ಕ್ಷೇತ್ರಗಳಲ್ಲಿಯೂ ಗಮನಾರ್ಹ ಸಾಧನೆ ಮಾಡುತ್ತಿದೆ.

    ***

    ಆತ್ಮೀಯ ಸ್ನೇಹಿತರೆ,                                            ಭಾರತ ಸೇರಿ ವಿವಿಧ ದೇಶಗಳ ಆರ್ಥಿಕತೆಗಳು ಹೇಗೆ ಚೇತರಿಸಿಕೊಳ್ಳುತ್ತವೆ ಎಂಬ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಭಾರತವು ತನ್ನ ಏಕತೆ ಮತ್ತು ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಜಗತ್ತನ್ನು ಅಚ್ಚರಿಗೊಳಿಸಿದ ರೀತಿಯನ್ನು ಗಮನಿಸಿದರೆ, ಆರ್ಥಿಕ ಪುನರುಜ್ಜೀವನದಲ್ಲೂ ನಾವು ಇತರರಿಗೆ ಮಾದರಿಯಾಗಲಿದ್ದೇವೆ ಎಂಬ ನಂಬಿಕೆ ಇದೆ. ನಾವು ಸ್ವಾವಲಂಬಿಗಳಾಗುವುದು ಈಗಿನ ಅಗತ್ಯ. ನಮ್ಮದೇ ಆದ ಸಾಮರ್ಥ್ಯಗಳನ್ನಾಧರಿಸಿ ಮುಂದುವರಿಯಬೇಕು. ಅದನ್ನು ಸಾಧಿಸಲು ಇರುವ ಒಂದೇ ಮಾರ್ಗ- ಆತ್ಮನಿರ್ಭರ್ ಭಾರತ್ ಅಥವಾ ಸ್ವಾವಲಂಬಿ ಭಾರತ. ಆತ್ಮನಿರ್ಭರ್ ಭಾರತ್ ಅಭಿಯಾನಕ್ಕೆ ಈಚೆಗೆ 20 ಲಕ್ಷ ಕೋಟಿ ರೂ. ನೆರವನ್ನು ನೀಡಲಾಗಿದೆ. ಈ ಉಪಕ್ರಮವು ಪ್ರತಿಯೊಬ್ಬ ಭಾರತೀಯರಿಗೂ ಹೊಸ ಅವಕಾಶವನ್ನೊದಗಿಸಲಿದೆ. ನಮ್ಮ ರೈತರು, ಕಾರ್ವಿುಕರು, ಸಣ್ಣ ಉದ್ಯಮಿಗಳು ಅಥವಾ ಸ್ಟಾರ್ಟ್​ಅಪ್​ಗಳಿಗೆ ಸಂಬಂಧಿಸಿದ ಯುವಕರನ್ನು ಉತ್ತೇಜಿಸುವುದೇ ಇದರ ಮುಖ್ಯ ಗುರಿ. ನಮ್ಮ ಕಾರ್ವಿುಕರ ಬೆವರು, ಕಠಿಣ ಪರಿಶ್ರಮ ಮತ್ತು ಪ್ರತಿಭೆಯೊಂದಿಗೆ ದೇಶವು ನವನವೀನ ಉತ್ಪನ್ನಗಳನ್ನು ತಯಾರಿಸಬಲ್ಲದು. ಇದರಿಂದ ಆಮದಿನ ಮೇಲಿನ ಭಾರತದ ಅವಲಂಬನೆ ಕಡಿಮೆಯಾಗಿ, ಸ್ವಾವಲಂಬನೆಯತ್ತ ಸಾಗಬಹುದು.

    ಕಳೆದೊಂದು ವರ್ಷದಲ್ಲಿ ಕೆಲವು ನಿರ್ಧಾರಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. 370ನೇ ವಿಧಿ ರಾಷ್ಟ್ರೀಯ ಏಕತೆ ಮತ್ತು ಏಕೀಕರಣದ ಮನೋಭಾವ ಹೆಚ್ಚಿಸಿತು. ಸುಪ್ರೀಂಕೋರ್ಟ್ ಸರ್ವಾನುಮತದಿಂದ ನೀಡಿದ ರಾಮ ಮಂದಿರ ತೀರ್ಪು ಶತಮಾನಗಳಿಂದಲೂ ವಿವಾದಕ್ಕೆ ಗುರಿಯಾಗಿದ್ದ ವಿಷಯಕ್ಕೆ ಸೌಹಾರ್ದಯುತವಾದ ಅಂತ್ಯ ಹಾಡಿತು. ತ್ರಿವಳಿ ತಲಾಖ್ ಎಂಬ ಆಕ್ಷೇಪಾರ್ಹ ಪದ್ಧತಿ ಇತಿಹಾಸದ ಪುಟ ಸೇರಿದೆ. ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವುದು ಭಾರತದ ಸಹಾನುಭೂತಿ ಮತ್ತು ಅಂತರ್ಗತ ಮನೋಭಾವದ ಅಭಿವ್ಯಕ್ತಿಯಾಗಿದೆ. ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ವೇಗವನ್ನು ಹೆಚ್ಚಿಸಿರುವ ಇನ್ನೂ ಅನೇಕ ನಿರ್ಧಾರಗಳಿವೆ. ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ನೇಮಕ ಮಾಡಿ ಸುದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಸುಧಾರಣಾ ಕ್ರಮಕ್ಕೊಂದು ಮುನ್ನಡಿ ಬರೆಯಲಾಗಿದೆ. ಇದು ಸಶಸ್ತ್ರ ಪಡೆಗಳ ನಡುವೆ ಸಮನ್ವಯವನ್ನು ಸುಧಾರಿಸಿದೆ. ಇದೇವೇಳೆ, ಭಾರತವು ಮಿಷನ್ ಗಗನ ಯಾನಕ್ಕೆ ಸಿದ್ಧಗೊಳ್ಳುತ್ತಿದೆ.

    ಬಡವರು, ರೈತರು, ಮಹಿಳೆಯರು, ಯುವಕರ ಸಬಲೀಕರಣ ನಮ್ಮ ಆದ್ಯತೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಈಗ ಎಲ್ಲ ರೈತರನ್ನೂ ಸೇರಿಸಿಕೊಂಡಿದೆ. ಒಂದು ವರ್ಷದಲ್ಲಿ 9 ಕೋಟಿ 50 ಲಕ್ಷ ರೈತರ ಖಾತೆಗಳಲ್ಲಿ 72,000 ಕೋಟಿ ರೂ ಜಮೆಯಾಗಿದೆ. ಜಲ ಜೀವನ್ ಮಿಷನ್ 15 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ಪೈಪ್ ಸಂಪರ್ಕದ ಮೂಲಕ ಕುಡಿಯುವ ನೀರನ್ನು ಖಚಿತಪಡಿಸುತ್ತದೆ. 50 ಕೋಟಿ ಜಾನುವಾರುಗಳ ಉತ್ತಮ ಆರೋಗ್ಯಕ್ಕಾಗಿ ಉಚಿತ ವ್ಯಾಕ್ಸಿನೇಷನ್ ನಡೆಸುವ ಬೃಹತ್ ಅಭಿಯಾನ ನಡೆಸಲಾಗುತ್ತಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ, ರೈತರು, ಕೃಷಿ ಕಾರ್ವಿುಕರು, ಸಣ್ಣ ಅಂಗಡಿಯವರು ಮತ್ತು ಅಸಂಘಟಿತ ವಲಯದ ಕಾರ್ವಿುಕರಿಗೆ ಮಾಸಿಕ ಪಿಂಚಣಿ 3000 ರೂ. ನೀಡಲಾಗುತ್ತಿದೆ.

    ಬ್ಯಾಂಕ್ ಸಾಲ ಪಡೆಯುವ ಸೌಲಭ್ಯದ ಜತೆಗೆ ಮೀನುಗಾರರಿಗಾಗಿ ಪ್ರತ್ಯೇಕ ಇಲಾಖೆ ರಚಿಸಲಾಗಿದೆ. ಅಂತೆಯೇ, ವ್ಯಾಪಾರಿಗಳ ಸಮಸ್ಯೆ ಗಳನ್ನು ಸಮಯೋಚಿತವಾಗಿ ಪರಿಹರಿಸಲು ವ್ಯಾಪಾರಿ ಕಲ್ಯಾಣ್ ಮಂಡಳಿ ರಚಿಸಲು ನಿರ್ಧರಿಸಲಾಗಿದೆ. ಸ್ವಸಹಾಯ ಗುಂಪುಗಳಲ್ಲಿ ನೋಂದಾಯಿಸಿಕೊಂಡಿರುವ 7 ಕೋಟಿಗೂ ಅಧಿಕ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದ ಆರ್ಥಿಕ ನೆರವು ನೀಡಲಾಗುತ್ತಿದೆ. ಸ್ವಸಹಾಯ ಗುಂಪುಗಳಿಗೆ ಖಾತರಿ ರಹಿತ ಸಾಲ 10ರಿಂದ 20 ಲಕ್ಷ ರೂ.ಗೆ ಏರಿಸಲಾಗಿದೆ. ಬುಡಕಟ್ಟು ಮಕ್ಕಳ ಶಿಕ್ಷಣವನ್ನು ಗಮನದಲ್ಲಿಟ್ಟು ಕೊಂಡು 400ಕ್ಕೂ ಹೆಚ್ಚು ಹೊಸ ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದೇವೆ. ಸರ್ಕಾರದ ನೀತಿಗಳ ಪರಿಣಾಮವಾಗಿ ಗ್ರಾಮೀಣ-ನಗರ ಅಂತರ ಕುಗ್ಗುತ್ತಿದೆ. ಮೊದಲ ಬಾರಿಗೆ, ಅಂತರ್ಜಾಲವನ್ನು ಬಳಸುವ ಗ್ರಾಮೀಣ ಭಾರತೀಯರ ಸಂಖ್ಯೆ ನಗರ ಭಾರತೀಯರ ಸಂಖ್ಯೆಗಿಂತ ಶೇ.10 ಹೆಚ್ಚಾಗಿದೆ. ಇಂತಹ ಹಲವು ಐತಿಹಾಸಿಕ ಕ್ರಮಗಳಿದ್ದು, ಎಲ್ಲವನ್ನೂ ಈ ಪತ್ರದಲ್ಲಿ ಹೇಳಲಸಾಧ್ಯ. ಆದರೆ, ನನ್ನ ಸರ್ಕಾರವು ಈ ನಿರ್ಧಾರಗಳನ್ನು ಕಾರ್ಯಗತಗೊಳಿಸುತ್ತಿದೆ ಎಂದು ನಾನು ಹೇಳಲೇಬೇಕು.

    ***

    ದೇಶವಾಸಿಗಳ ಭರವಸೆ ಮತ್ತು ಆಕಾಂಕ್ಷೆ ಈಡೇರಿಸುವಲ್ಲಿ ಸಾಗುತ್ತಿರುವಾಗ, ಕೊರೊನಾ ವೈರಸ್ ಎಂಬ ಜಾಗತಿಕ ಮಹಾಮಾರಿ ನಮ್ಮ ದೇಶವನ್ನೂ ಆವರಿಸಿದೆ. ಕರೋನಾ ದೇಶಕ್ಕೆ ಆವರಿಸಿದಾಗ ಭಾರತ ಜಗತ್ತಿಗೆ ಸಮಸ್ಯೆಯಾಗಲಿದೆ ಎಂದು ಹಲವರು ಭಯಪಟ್ಟರು. ಆದರೆ ಇಂದು, ಸಂಪೂರ್ಣ ವಿಶ್ವಾಸ ಹಾಗೂ ಪ್ರತಿರೋಧ ಗುಣದಿಂದಾಗಿ ಇಡೀ ಜಗತ್ತು ನಮ್ಮನ್ನು ಹುಬ್ಬೇರಿಸಿ ನೋಡುವಂತೆ ನೀವು ಮಾಡಿದ್ದೀರಿ. ವಿಶ್ವದ ಪ್ರಬಲ ಮತ್ತು ಸಮೃದ್ಧ ದೇಶಗಳಿಗೆ ಹೋಲಿಸಿದರೆ ಭಾರತೀಯರ ಸಾಮೂಹಿಕ ಶಕ್ತಿ-ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದ್ದೀರಿ. ಭಾರತದ ಸಶಸ್ತ್ರ ಪಡೆಗಳು, ಜನತಾ ಕರ್ಫ್ಯೂ, ಲಾಕ್​ಡೌನ್ ಸಮಯದಲ್ಲಿ ನಿಯಮಗಳನ್ನು ನಿಷ್ಠೆಯಿಂದ ಪಾಲಿಸಿದ್ದಲ್ಲದೆ, ಕರೊನಾ ವಾರಿಯರ್​ಗಳನ್ನು ಗೌರವಿಸುವುದಕ್ಕಾಗಿ ಚಪ್ಪಾಳೆ ತಟ್ಟಿ, ದೀಪವನ್ನು ಬೆಳಗಿಸಿ, ಪ್ರತಿ ಸಂದರ್ಭದಲ್ಲೂ ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬುದನ್ನು ದೃಢಪಡಿಸಿದ್ದೀರಿ.

    ಇಂದಿನ ಆರೋಗ್ಯ ಬಿಕ್ಕಟ್ಟಿನ ಮಧ್ಯೆ, ಯಾರಿಗೂ ಯಾವುದೇ ಅನಾನುಕೂಲತೆ ಅಥವಾ ಅಸ್ವಸ್ಥತೆ ಆಗಲಿಲ್ಲ ಎಂದು ಖಂಡಿತಾ ಹೇಳಲಾಗದು. ಕಾರ್ವಿುಕರು, ವಲಸಿಗರು, ಸಣ್ಣ ಪ್ರಮಾಣದ ಕೈಗಾರಿಕೆಗಳ ಕುಶಲಕರ್ವಿುಗಳು, ವ್ಯಾಪಾರಿಗಳು ಸೇರಿ ಅನೇಕ ದೇಶವಾಸಿಗಳು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ತೊಂದರೆಗಳನ್ನು ನಿವಾರಿಸಲು ನಾವು ಒಗ್ಗಟ್ಟಿನಿಂದ ಮತ್ತು ದೃಢ ನಿಶ್ಚಯದಿಂದ ಕೆಲಸ ಮಾಡುತ್ತಿದ್ದೇವೆ. ನಾವು ಎದುರಿಸುತ್ತಿರುವ ಅನಾನುಕೂಲತೆಗಳು ವಿಪತ್ತುಗಳಾಗಿ ಬದಲಾಗದಂತೆ ಕಾಳಜಿ ವಹಿಸಬೇಕು. ಆದ್ದರಿಂದ, ಪ್ರತಿಯೊಬ್ಬ ಭಾರತೀಯನು ಎಲ್ಲ ನಿಯಮ ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವುದು ಬಹಳ ಮುಖ್ಯ. ಇಲ್ಲಿಯವರೆಗೆ ತಾಳ್ಮೆ ಪ್ರದರ್ಶಿಸಿದ್ದೇವೆ. ಅದನ್ನು ಮುಂದುವರಿಸುವುದು ಅನಿವಾರ್ಯ. ದೇಶ ಸುರಕ್ಷಿತವಾಗಿರಲು ಮತ್ತು ಇತರ ಹಲವು ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿರಲು ಇದು ಪೂರಕ. ಇದೊಂದು ಸುದೀರ್ಘ ಯುದ್ಧ. ನಾವು ವಿಜಯದ ಹಾದಿಯಲ್ಲಿ ಸಾಗಲು ಪ್ರಾರಂಭಿಸಿದ್ದೇವೆ ಮತ್ತು ಗೆಲುವು ನಮ್ಮ ಸಾಮೂಹಿಕ ಸಂಕಲ್ಪವಾಗಿದೆ.

    ಚಂಡಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಹಾನಿಯಾಗಿದೆ. ಈ ರಾಜ್ಯಗಳ ಜನರ ಹೋರಾಟ ಮನಸ್ಥಿತಿಯೂ ಗಮನಾರ್ಹ. ಅವರ ಧೈರ್ಯ ಭಾರತೀಯರಲ್ಲಿ ಸ್ಪೂರ್ತಿ ತುಂಬಿದೆ.

    ***

    ಕಳೆದ ಆರು ವರ್ಷಗಳ ಪಯಣದಲ್ಲಿ ನೀವು ನನ್ನ ಮೇಲೆ ನಿರಂತರವಾಗಿ ಪ್ರೀತಿ ಮತ್ತು ಆಶೀರ್ವಾದ ತೋರಿದ್ದೀರಿ. ನಿಮ್ಮ ಆಶೀರ್ವಾದದ ಬಲದಿಂದಲೇ ಕಳೆದೊಂದು ವರ್ಷದಲ್ಲಿ ರಾಷ್ಟ್ರವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ ಮತ್ತು ವೇಗವಾಗಿ ಪ್ರಗತಿ ಸಾಧಿಸಿದೆ. ನಾನು ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ. ನನ್ನಲ್ಲಿ ನ್ಯೂನತೆಗಳು ಇರಬಹುದು. ಆದರೆ ನಮ್ಮ ದೇಶದಲ್ಲಿ ಅಂಥಾ ಕೊರತೆಗಳಿಲ್ಲ. ಆದ್ದರಿಂದ, ನಾನು ನಿಮ್ಮನ್ನು ನಂಬುತ್ತೇನೆ. ನನ್ನನ್ನು ನಾನು ನಂಬುವುದಕ್ಕಿಂತ ನಿಮ್ಮ ಶಕ್ತಿ ಸಾಮರ್ಥ್ಯಗಳ ಮೇಲೆ ಹೆಚ್ಚು ವಿಶ್ವಾಸವಿರಿಸಿದ್ದೇನೆ. ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲ ನೀವು, ನಿಮ್ಮ ಬೆಂಬಲ, ಆಶೀರ್ವಾದ ಮತ್ತು ವಾತ್ಸಲ್ಯ.

    ಕರೊನಾದಿಂದಾಗಿ ಇದು ಬಿಕ್ಕಟ್ಟಿನ ಸಮಯ. ಆದರೆ ಭಾರತೀಯರಾದ ನಮಗೆ ಇದು ದೃಢ ಸಂಕಲ್ಪ ಹೊಂದುವ ಸಮಯ. 130 ಕೋಟಿ ಜನರ ವರ್ತಮಾನ ಮತ್ತು ಭವಿಷ್ಯವನ್ನು ಎಂದಿಗೂ ಪ್ರತಿಕೂಲ ಪರಿಸ್ಥಿತಿಯೊಂದು ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಸದಾ ನೆನಪಿನಲ್ಲಿಡಬೇಕು. ನಮ್ಮ ವರ್ತಮಾನ ಮತ್ತು ಭವಿಷ್ಯವನ್ನು ನಾವು ನಿರ್ಧರಿಸುತ್ತೇವೆ. ನಾವು ಪ್ರಗತಿಯ ಹಾದಿಯಲ್ಲಿ ಮುಂದುವರಿಯುತ್ತೇವೆ ಮತ್ತು ಗೆಲುವು ನಮ್ಮದಾಗಲಿದೆ. ಕೃತಮ್ಮೇದಾಕ್ಷಿಣೇಹಸ್ತೇ ಜಯೋಮೇಸವ್ಯ ಆಹಿತಃ ಎಂಬ ಮಾತಿದೆ. ಉದ್ದೇಶಿತ ಕೆಲಸ ಮತ್ತು ಕರ್ತವ್ಯ ಒಂದೆಡೆ ಇದ್ದರೆ, ಮತ್ತೊಂದೆಡೆ ಯಶಸ್ಸು ಖಚಿತವಾಗುತ್ತದೆ ಎಂಬುದು ಇದರರ್ಥ.

    ನಮ್ಮ ದೇಶದ ಯಶಸ್ಸಿನ ಪ್ರಾರ್ಥನೆಯೊಂದಿಗೆ, ನಾನು ಮತ್ತೊಮ್ಮೆ ನಿಮಗೆ ನಮಸ್ಕರಿಸುತ್ತೇನೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು.

    ಆರೋಗ್ಯವಾಗಿರಿ, ಸುರಕ್ಷಿತವಾಗಿರಿ!!!
    ಜಾಗರೂಕರಾಗಿರಿ, ತಿಳುವಳಿಕೆಯಿಂದಿರಿ !!!

    ನಿಮ್ಮ ಪ್ರಧಾನ ಸೇವಕ
    | ನರೇಂದ್ರ ಮೋದಿ

    ಸಾಧನೆಗಳ ಅಮೋಘವರ್ಷ: ನಮೋ ಪರ್ವ 2.0

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts