More

    ಭರವಸೆ ಈಡೇರಿಸಿ; ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು…

    ಸರ್ಕಾರಿ ಶಾಲೆಗಳು ಉಚಿತ ಶಿಕ್ಷಣ ನೀಡುತ್ತಿರುವುದು ಸರಿಯೇ. ಆದರೆ, ಸಮರ್ಪಕ ಸೌಲಭ್ಯಗಳು ಇಲ್ಲದೆ ಅವು ಜನರಿಂದ ದೂರವಾಗುತ್ತಿರುವುದು ಕಳವಳದ ವಿಷಯ. ನೂರಾರು ಶಾಲೆ, ಅಂಗನವಾಡಿಗಳಿಗಂತೂ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಶಿಥಿಲಗೊಂಡ ಕಟ್ಟಡಗಳು, ಛಾವಣಿ ಸೋರುವ ತರಗತಿ ಕೋಣೆಗಳು, ಅನೈರ್ಮಲ್ಯದಂಥ ಸಮಸ್ಯೆಗಳ ನಡುವೆಯೇ ಅಸಂಖ್ಯ ಮಕ್ಕಳ ಶೈಕ್ಷಣಿಕ ಯಾನ ಸಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮುಖ್ಯವಾಗಿ ಕಾಡುತ್ತಿರುವುದು ಶೌಚಗೃಹದ ಸಮಸ್ಯೆ, ಶುದ್ಧ ಕುಡಿಯುವ ನೀರಿನ ಕೊರತೆ. ಶೌಚಗೃಹ ಇಲ್ಲದ್ದರಿಂದ ಬಾಲಕಿಯರು ಶಾಲೆಗೆ ಬರಲು ಹಿಂದೇಟು ಹಾಕುತ್ತಾರೆ. ಪಾಲಕರು-ಶಿಕ್ಷಕರು ಮನವೊಲಿಸಿದ ಬಳಿಕ ಶಾಲೆಗೆ ಬಂದರೂ, ಮಧ್ಯದಲ್ಲೇ ಬಿಟ್ಟುಬಿಡುತ್ತಾರೆ. ತೀರಾ ಮುಜುಗರ ಅನುಭವಿಸುವ ಬಾಲಕಿಯರು ಇಂಥ ಸಮಸ್ಯೆ ಹೇಳಿಕೊಳ್ಳಲೂ ಆಗದೆ ಶಾಲೆಯ ಸಹವಾಸವೇ ಬೇಡವೆಂದು ದೂರವುಳಿದು ಬಿಡುತ್ತಾರೆ. ಕೆಲವೆಡೆ ಶೌಚಗೃಹವಿದ್ದರೂ, ನೀರಿನ ಸೌಕರ್ಯ ಇರುವುದಿಲ್ಲ. ಇಂಥ ಸಮಸ್ಯೆಗಳು ಗ್ರಾಮೀಣ ಭಾಗಕ್ಕಷ್ಟೇ ಸೀಮಿತವಾಗಿಲ್ಲ. ನಗರ ಹಾಗೂ ಪಟ್ಟಣ ಪ್ರದೇಶದ ಶಾಲೆ, ಅಂಗನವಾಡಿ ಕಟ್ಟಡಗಳ ಸ್ಥಿತಿಯೂ ಹೀಗೇ. ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಅಂಗನವಾಡಿ ಮುಖ್ಯಸ್ಥರು ಸಂಬಂಧಿತ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಸಮಸ್ಯೆ ಬಗೆಹರಿಯುವುದಿಲ್ಲ. ಪರಿಣಾಮ, ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತದೆ.

    ಈ ಗಂಭೀರ ಸಮಸ್ಯೆ ಬಗ್ಗೆ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆದಿದ್ದು, ಪ್ರತಿಪಕ್ಷ ಸದಸ್ಯರು ಹಲವು ವಾಸ್ತವಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ‘ರಾಜ್ಯದ ಗ್ರಾಮೀಣ ಭಾಗದ ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಆಶ್ರಮ ಶಾಲೆಗಳಿಗೆ ನಳದ ಮೂಲಕ ನೀರು ಪೂರೈಸಲಾಗುವುದು. ಕುಡಿಯಲು, ಅಡುಗೆಮನೆ ಬಳಕೆಗೆ, ಶೌಚಗೃಹ ಮತ್ತು ಕೈತೊಳೆಯಲು ನೀರು ಪೂರೈಕೆ ಮಾಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪರಿಷತ್ತಿನಲ್ಲಿ ಭರವಸೆ ನೀಡಿದ್ದಾರೆ. ಜಲ ಜೀವನ್ ಮಿಷನ್​ನ 100 ದಿನಗಳ ಅಭಿಯಾನದಡಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೌಚಗೃಹಗಳ ನಿರ್ವಣಕ್ಕೂ ಒತ್ತು ನೀಡಲಾಗಿದೆ ಎಂದಿದ್ದಾರೆ. ಹೀಗೆ ನಿಗದಿತ ಕಾಲಮಿತಿಯಲ್ಲಿ ಸೌಕರ್ಯಗಳನ್ನು ಒದಗಿಸುವ ಕ್ರಮ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಹೆಜ್ಜೆ ಎನಿಸಬಹುದು. ಈ ಕಾಮಗಾರಿಗಳು ಗುಣಮಟ್ಟದಿಂದ ನಡೆಯುವಂತೆಯೂ ಗಮನ ವಹಿಸಬೇಕು. ಎಷ್ಟೋ ಕಡೆ, ಅನುದಾನ ಬಿಡುಗಡೆಯಾಗಿದ್ದರೂ ಕಳಪೆ ಕಾಮಗಾರಿಗಳಿಂದ ಸರ್ಕಾರಿ ಶಾಲೆಗಳು, ಅಂಗನವಾಡಿಗಳು ಸಮಸ್ಯೆ ಅನುಭವಿಸುತ್ತಿವೆ. ನೀರು ಪೂರೈಕೆ ಮತ್ತು ಶೌಚಗೃಹದ ನಿರ್ವಣವಾದಲ್ಲಿ ಮಕ್ಕಳ ಹಾಜರಾತಿ ಹೆಚ್ಚಲು ಪೂರಕವಾಗುತ್ತದೆ. ನಗರ ಪ್ರದೇಶದ ಶಾಲೆಗಳನ್ನು ಶಾಸಕರ ಅನುದಾನದ ಮೂಲಕ ಅಭಿವೃದ್ಧಿ ಪಡಿಸಲು ಅವಕಾಶವಿದ್ದು, ಜನಪ್ರತಿನಿಧಿಗಳು ಈ ಬಗ್ಗೆಯೂ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಸಮುದಾಯದ ಸಹಭಾಗಿತ್ವದಿಂದಲೂ ಸರ್ಕಾರಿ ಶಾಲೆಗಳು ಹೊಸರೂಪ ಪಡೆದುಕೊಂಡಿದ್ದು, ಒಟ್ಟಾರೆ ಮಕ್ಕಳ ಮತ್ತು ಶೈಕ್ಷಣಿಕ ಕ್ಷೇತ್ರದ ಹಿತವನ್ನು ಗಮನದಲ್ಲಿ ಇರಿಸಿಕೊಂಡು, ಸುಧಾರಣೆಗಳನ್ನು ಕೈಗೊಳ್ಳುವುದು ಅಗತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts