More

    ಅಂತಿಮ ಅನುಮೋದನೆಯತ್ತ ಪ್ಲಾಸ್ಟಿಕ್ ಪಾರ್ಕ್

    ವೇಣುವಿನೋದ್ ಕೆ.ಎಸ್.ಮಂಗಳೂರು

    ಕಳೆದ ಜನವರಿಯಲ್ಲಿ ತಾತ್ವಿಕ ಒಪ್ಪಿಗೆ ಪಡೆದುಕೊಂಡಿದ್ದ ಮಂಗಳೂರು ಪ್ಲಾಸ್ಟಿಕ್ ಪಾರ್ಕ್ ಯೋಜನೆ ಅಂತಿಮ ಅನುಮೋದನೆಯತ್ತ ಸಾಗುವ ಲಕ್ಷಣಗಳು ಗೋಚರಿಸಿವೆ.
    ಕೊನೆಯ ಹಂತದ ಕೆಲವು ಪ್ರಕ್ರಿಯೆಗಳು ಬಾಕಿ ಉಳಿದಿದ್ದು, ಅಂತಿಮ ಡಿಪಿಆರ್ ಸಲ್ಲಿಕೆಯಾಗಿ ಯೋಜನೆಗೆ ಅಂತಿಮ ಮುದ್ರೆ ಬೀಳುವ ನಿರೀಕ್ಷೆಯಿದೆ. ಕಳೆದ ತಿಂಗಳು ಆಗಮಿಸಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ತಮ್ಮನ್ನು ಭೇಟಿಯಾದ ಅಧಿಕಾರಿಗಳಿಗೆ ಯೋಜನೆಗೆ ತ್ವರಿತ ಅನುಮೋದನೆ ನೀಡುವ ಭರವಸೆ ನೀಡಿದ್ದರು.

    ಜನವರಿ ಪ್ರಾರಂಭದಲ್ಲಿ ಕೇಂದ್ರ ಸರ್ಕಾರ ಮಂಗಳೂರು ಹೊರವಲಯದ ಗಂಜಿಮಠದಲ್ಲಿರುವ ಪ್ಲಾಸ್ಟಿಕ್ ಪಾರ್ಕ್‌ಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಇದಾದ ಆರು ತಿಂಗಳೊಳಗೆ ಡಿಪಿಆರ್ ನೀಡಬೇಕು, ಬಳಿಕ ಅನುಮೋದನೆಯಾಗಿ ಅಂತಿಮ ಒಪ್ಪಿಗೆ ಪಡೆಯಬಹುದು ಎಂದು ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಇಲಾಖೆ ನಿರ್ದೇಶನ ನೀಡಿತ್ತು. ಅದರಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಇಂಜಿನಿಯರಿಂಗ್ ವಿಭಾಗ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಿತ್ತು.

    ಬಳಿಕ ರಾಸಾಯನಿಕ, ಪಟ್ರೋ ರಾಸಾಯನಿಕ ವಿಭಾಗದ ಮೂವರು ಹಿರಿಯ ಅಧಿಕಾರಿಗಳು ಕಳೆದ ತಿಂಗಳು ಮಂಗಳೂರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಬಳಿಕ ಡಿಪಿಆರ್‌ನಲ್ಲಿರುವ ಕೆಲವೊಂದು ಅಂಶಗಳನ್ನು ತಿದ್ದುಪಡಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

    ಕೆನರಾ ಸಣ್ಣ ಕೈಗಾರಿಕಾ ಸಂಘ ಹಾಗೂ ಜಿಲ್ಲಾ ಪ್ಲಾಸ್ಟಿಕ್ ಉತ್ಪಾದಕ ಸಂಘದ ಪದಾಧಿಕಾರಿಗಳೊಂದಿಗೆ ಅಧಿಕಾರಿಗಳು ಸಭೆ ನಡೆಸಿದ್ದಾರೆ, ಎರಡು ದಿನ ಇಲ್ಲಿದ್ದು ಪ್ಲಾಸ್ಟಿಕ್ ಪಾರ್ಕ್ ಜಾಗದ ಪರಿಶೀಲನೆಯನ್ನೂ ನಡೆಸಿ ತೆರಳಿದ್ದಾರೆ. ಬೇಗ ಡಿಪಿಆರ್‌ಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಸಂಘದ ಗೌರವ್ ಹೆಗ್ಡೆ ‘ವಿಜಯವಾಣಿ’ಗೆ ತಿಳಿಸಿದರು.

    ಎಸ್‌ಪಿವಿ ರಚನೆ: ಕೇಂದ್ರದ ಅಧಿಕಾರಿಗಳು ತಿಳಿಸಿರುವಂತೆಯೇ ಡಿಪಿಆರ್‌ನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಶೀಘ್ರ ಅದನ್ನು ನಮ್ಮ ಪ್ರಧಾನ ಕಚೇರಿಗೆ ಸಲ್ಲಿಸಿ, ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಕೆಐಎಡಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರದಲ್ಲಿ ಅಂತಿಮ ಅನುಮೋದನೆ ಸಿಕ್ಕಿದ ಬಳಿಕ ಪ್ಲಾಸ್ಟಿಕ್ ಪಾರ್ಕ್‌ಗೆ ವಿಶೇಷ ಉದ್ದೇಶ ವಾಹಿನಿ(ಎಸ್‌ಪಿವಿ) ರಚನೆಯಾಗಿ ಬಳಿಕ ಭೂ ಅಭಿವೃದ್ಧಿಗೆ ಟೆಂಡರ್ ಮತ್ತಿತರ ಪ್ರಕ್ರಿಯೆಗಳು ನಡೆಯಬೇಕಿದೆ.

    104 ಎಕರೆ ಜಾಗ: ಗಂಜಿಮಠದಲ್ಲಿ 104 ಎಕರೆ ಜಾಗವನ್ನು ಪ್ಲಾಸ್ಟಿಕ್ ಪಾರ್ಕ್‌ಗೆ ಮೀಸಲಿರಿಸಲಾಗಿದೆ. ಇದನ್ನು ಅಭಿವೃದ್ಧಿಪಡಿಸಿ ರಸ್ತೆ ಮತ್ತಿತರ ಕಡ್ಡಾಯ ಶೀರ್ಷಿಕೆಗಳಿಗೆ ಮೀಸಲಿರಿಸಿದ ಬಳಿಕ 60 ಎಕರೆ ಉಳಿಯಲಿದೆ. ಸದ್ಯ 80 ಮಂದಿ ಹೂಡಿಕೆಗೆ ಆಸಕ್ತಿ ತೋರಿಸಿದ್ದಾರೆ, 90 ಎಕರೆವರೆಗೂ ಬೇಡಿಕೆ ಇದೆ. 1 ಎಕರೆ, 50 ಸೆಂಟ್ಸ್,್ 25 ಸೆಂಟ್ಸ್‌ಗಳ ನಿವೇಶನ ಸಿದ್ಧಪಡಿಸುವ ಕೆಲಸವನ್ನು ಕೆಐಎಡಿಬಿ ಮಾಡಲಿದೆ. ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 40 ಕೋಟಿ ರೂ(ಶೇ.50) ಮಂಜೂರು ಮಾಡಿದೆ, ಉಳಿದ ಮೊತ್ತವನ್ನು ರಾಜ್ಯ ಸರ್ಕಾರ/ಕೆಐಎಡಿಬಿ ನೀಡಲಿದೆ.

    ಪ್ಲಾಸ್ಟಿಕ್ ಪಾರ್ಕ್‌ಗೆ ಪರಿಷ್ಕೃತ ಡಿಪಿಆರ್ ಸಲ್ಲಿಕೆಯಾಗಿ ಕೂಡಲೇ ಅನುಮೋದನೆ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಕೇಂದ್ರ ರಸಗೊಬ್ಬರ, ರಾಸಾಯನಿಕ ಸಚಿವರೂ ಇದಕ್ಕೆ ಸಹಕಾರದ ಭರವಸೆ ನೀಡಿದ್ದಾರೆ. ಮಂಜೂರಾದ 40 ಕೋಟಿ ರೂ.ಬಿಡುಗಡೆಯಾಗಬಹುದು.

    ವಿಠಲದಾಸ ನಾಯಕ್
    ಜೆಡಿ, ಕೈಗಾರಿಕಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts