More

    ಚಿಂದಿ ಪ್ಲಾಸ್ಟಿಕ್‌ನಿಂದ ಮನೆ ನಿರ್ಮಾಣ

    ಮಂಗಳೂರು: ಕಸದ ತೊಟ್ಟಿಗೆ ಹಾಕಲಾಗುವ ತ್ಯಾಜ್ಯದಿಂದ ಆಯ್ದ ಮರು ಮೌಲ್ಯವಿಲ್ಲದ ಚಿಂದಿ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸಿ ನಗರದ ಪಚ್ಚನಾಡಿಯಲ್ಲಿ 350 ಚದರ ಅಡಿಯ ಪರಿಸರ ಸ್ನೇಹಿ ಮನೆಯೊಂದು ನಿರ್ಮಾಣವಾಗಿದೆ.

    ಮಂಗಳೂರು ಮಹಾನಗರ ಪಾಲಿಕೆಯ ನಿವೃತ್ತ ಪೌರ ಕಾರ್ಮಿಕರಾದ ಕಮಲಾ ಎಂಬುವರಿಗೆ ಪ್ಲಾಸ್ಟಿಕ್ ಫೋರ್ ಚೇಂಜ್ ಇಂಡಿಯಾ ಫೌಂಡೇಶನ್ ಉಚಿತವಾಗಿ ನಿರ್ಮಿಸಿಕೊಟ್ಟಿರುವ ಕಾಂಕ್ರೀಟ್ ಅಡಿಪಾಯದ ಮನೆಯ ಗೋಡೆಗೆ 1500 ಕೆ.ಜಿ ಪ್ಲಾಸ್ಟಿಕ್ ಬಳಕೆಯಾಗಿದೆ.
    ಮರುಬಳಕೆಯ ಪ್ಲಾಸ್ಟಿಕ್ ಉಪಯೋಗಿಸಿ ಮಾಡಲಾದ ಈ ಮನೆ ರಾಜ್ಯದಲ್ಲಿ ಪ್ರಥಮ ಪ್ರಯೋಗವಾಗಿದೆ. ಈ ಮನೆ ಗಾಳಿ, ಮಳೆ, ಅಗ್ನಿಯಿಂದ ಸುರಕ್ಷಿತವಾಗಿದ್ದು, 30 ವರ್ಷ ಬಾಳ್ವಿಕೆ ಹೊಂದಿದೆ ಎಂದು ಫೌಂಡೇಶನ್‌ನ ಯೋಜನಾ ನಿರ್ದೇಶಕ ಚಂದನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪಚ್ಚನಾಡಿ ಡಂಪಿಂಗ್ ಯಾರ್ಡ್ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿಂದಿ ಆಯುವವರಿಂದ, ಗುಜರಿ ಅಂಗಡಿಗಳಿಂದ ಮರುಮೌಲ್ಯವಿಲ್ಲದ ಪ್ಲಾಸ್ಟಿಕ್ ಸಂಗ್ರಹಿಸಲಾಗಿತ್ತು. ಫೌಂಡೇಶನ್ ಜತೆ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿರುವ ಹೈದರಾಬಾದ್‌ನ ಬಾಂಬೂ ಹೌಸ್ ಜತೆ ಸೇರಿ ಸಂಗ್ರಹಿಸಿದ ಪ್ಲಾಸ್ಟಿಕ್ ಅನ್ನು ಗುಜರಾತ್‌ಗೆ ಕಳುಹಿಸಿ ಕಂಪ್ರೆಸ್ ಮಾಡಿಸಲಾಗಿದೆ. 8 ಎಂಎಂನಿಂದ 20 ಎಂಎಂವರೆಗಿನ ಪ್ಯಾನೆಲ್‌ಗಳನ್ನು ತಯಾರಿಸಿ ಕಬ್ಬಿಣದ ಫ್ಯಾಬ್ರಿಕೇಶನ್ ವರ್ಕ್‌ನೊಂದಿಗೆ ಗೋಡೆ ನಿರ್ಮಿಸಲಾಗಿದೆ. ಇದಕ್ಕೆ 4.5 ಲಕ್ಷ ರೂ. ವೆಚ್ಚವಾಗಿದೆ ಎಂದು ಚಂದನ್ ಮಾಹಿತಿ ನೀಡಿದರು. ಫೌಂಡೇಶನ್‌ನ ಮುಖ್ಯ ಪರಿಣಾಮ ಅಧಿಕಾರಿ ಶಿಪ್ರಾ ಜೇಕಬ್ಸ್, ಅನುಷ್ಠಾನಾಧಿಕಾರಿ ಸುರೇಖಾ, ಯೋಜನಾ ಸಂಯೋಜಕಿ ಜಯಂತಿ ಉಪಸ್ಥಿತರಿದ್ದರು.

    ಫೌಂಡೇಶನ್‌ನಿಂದ ಪೈಲಟ್ ಯೋಜನೆಯಾಗಿ ಉಚಿತ ಮನೆ ನಿರ್ಮಿಸಲಾಗಿದೆ. ಜನವರಿಯಿಂದ ಆಗಸ್ಟ್‌ವರೆಗೆ 20 ಮನೆಗಳನ್ನು ವಸತಿ ರಹಿತ ಚಿಂದಿ ಆಯುವವರಿಗೆ ಉಚಿತವಾಗಿ ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ. ಸರ್ಕಾರ ಅವರಿಗೆ ಜಾಗ ಒದಗಿಸುವ ಕೆಲಸ ಮಾಡಬೇಕಿದೆ.
    ಚಂದನ್, ಯೋಜನಾ ನಿರ್ದೇಶಕರು, ಪ್ಲಾಸ್ಟಿಕ್ ಫೋರ್ ಚೇಂಜ್ ಇಂಡಿಯಾ ಫೌಂಡೇಶನ್

    15 ವರ್ಷಗಳಿಂದ ಪಚ್ಚನಾಡಿಯಲ್ಲಿ ವಾಸವಿದ್ದು, ನಿವೃತ್ತಿಗೊಂಡು 6 ತಿಂಗಳಾಗಿದೆ. ಕಳೆದ ಮಳೆಗಾಲದಲ್ಲಿ ನನ್ನ ಜೋಪಡಿ ಮುರಿದು ಬಿದ್ದಿದ್ದನ್ನು ಗಮನಿಸಿ ಉಚಿತ ಮನೆ ನಿರ್ಮಿಸುವ ಭರವಸೆ ನೀಡಿದ್ದರು. ಈಗ ಗಟ್ಟಿಮುಟ್ಟಾದ, ಗಾಳಿ ಬೆಳಕು ಹೊಂದಿರುವ ಒಳ್ಳೆಯ ಮನೆ ಕಟ್ಟಿ ಕೊಟ್ಟಿದ್ದಾರೆ. ತುಂಬಾ ಖುಷಿಯಾಗಿದೆ.
    ಕಮಲಾ, ಮರುಬಳಕೆಯ ಪ್ಲಾಸ್ಟಿಕ್ ಮನೆಯೊಡತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts